ಜೈಪುರ ಲಿಟ್‌ಫೆಸ್ಟ್ ಜಗತ್ತು ಹುಟ್ಟಿಸುವ ಭರವಸೆಯನ್ನು ಲೇಖಕ ಹುಸಿಯೆಂದು ಭಾವಿಸಬಾರದು. ಪ್ರಾದೇಶಿಕ ಭಾಷೆಯಲ್ಲಿ ಸೊರಗಿದಂತೆ ಕಾಣುವ ಸಾಹಿತ್ಯದ ನದಿ, ಇಂಗ್ಲಿಷ್‌ಗೆ ಅನುವಾದಗೊಂಡ ತಕ್ಷಣ, ತುಂಬಿ ಹರಿಯುತ್ತದೆ. ಸಾವಿರಾರು ಪುಸ್ತಕಗಳು ಕಣ್ಮುಚ್ಚಿ ತೆಗೆಯುವುದರೊಳಗೆ ಸಾಹಿತ್ಯೋತ್ಸವಗಳಲ್ಲಿ ಮಾರಾಟವಾಗುತ್ತವೆ.
ಜೋಗಿ
ಹಬ್ಬಿದ ಚಳಿಯನ್ನು ಹಿಮ್ಮೆಟ್ಟಿಸುವಂತೆ ಭಾಷಣಗಳ ಸರಮಾಲೆ, ದಿನಕ್ಕೆ ಐವತ್ತಕ್ಕೂ ಹೆಚ್ಚು ಸಂವಾದಗಳು, ವೇದಿಕೆ ಮೇಲೆ ಕೂತವರ ತೊಳ್ಳೆ ನಡುಗುವಂತೆ ಪ್ರಶ್ನೆಗಳನ್ನು ಎಸೆಯುವ ಕೇಳುಗರು, ಪುಸ್ತಕದ ಮೇಲೆ ಲೇಖಕರ ಸಹಿ ಪಡೆಯಲು ಬಿಸಿಲಲ್ಲಿ ಸಾಲುಗಟ್ಟಿ ನಿಂತವರು, ಗಂಟೆಗಟ್ಟಲೆ ಸಹಿಮಾಡುವ ಲೇಖಕರ ಹಣೆಯ ಬೆವರು ಒರೆಸುವುದಕ್ಕೆಂದೇ ಹಿಂದೆ ನಿಂತ ಕಾರ್ಯಕರ್ತರು, ಪುಸ್ತಕದಂಗಡಿಯಲ್ಲಿ ಕಿಕ್ಕಿರಿದ ಜನ, ಲೇಖಕರ ಸಂದರ್ಶನಕ್ಕೆ ಹೆಸರು ಕೊಟ್ಟು ಕಾಯುತ್ತಿರುವ ಪತ್ರಕರ್ತರು.
ಜೈಪುರ ಲಿಟ್‌ಫೆಸ್ಟ್ ಜಗತ್ತು ಹುಟ್ಟಿಸುವ ಭರವಸೆಯನ್ನು ಲೇಖಕ ಹುಸಿಯೆಂದು ಭಾವಿಸಬಾರದು. ಪ್ರಾದೇಶಿಕ ಭಾಷೆಯಲ್ಲಿ ಸೊರಗಿದಂತೆ ಕಾಣುವ ಸಾಹಿತ್ಯದ ನದಿ, ಇಂಗ್ಲಿಷ್‌ಗೆ ಅನುವಾದಗೊಂಡ ತಕ್ಷಣ, ತುಂಬಿ ಹರಿಯುತ್ತದೆ. ಸಾವಿರಾರು ಪುಸ್ತಕಗಳು ಕಣ್ಮುಚ್ಚಿ ತೆಗೆಯುವುದರೊಳಗೆ ಸಾಹಿತ್ಯೋತ್ಸವಗಳಲ್ಲಿ ಮಾರಾಟವಾಗುತ್ತವೆ.
ಹೊಸ ಹೊಸ ಸಾಹಿತ್ಯೋತ್ಸವಗಳು ಹುಟ್ಟುತ್ತಿವೆ. ಜೈಪುರ್ ಲಿಟ್‌ಫೆಸ್ಟ್ ನಡೆಸುತ್ತಿರುವ ಟೀಮ್‌ವರ್ಕ್ ಸಂಸ್ಥೆ ಈ ವರ್ಷ ನಾಲ್ಕು ಹೊಸ ಲಿಟ್‌ಫೆಸ್ಟ್‌ಗಳನ್ನು ಕೊಲ್ಲಿ ರಾಷ್ಟ್ರಗಳಲ್ಲಿ ಆಯೋಜಿಸುತ್ತಿದೆ.
ಓದುಗರ ಭಾಷೆ ಬದಲಾಗಿದೆ. ಅವರೆಲ್ಲ ಇಂಗ್ಲಿಷಿನಲ್ಲಿ ಓದುತ್ತಿದ್ದಾರೆ. ಯಾಕೆಂದರೆ ಅವರಿಗೆ ಬೇರೆ ಭಾಷೆ ಗೊತ್ತಿಲ್ಲ. ಮರಾಠಿ, ತೆಲುಗು, ತಮಿಳು, ಕನ್ನಡ, ಗುಜರಾತಿ, ಪಂಜಾಬಿ ಮಾತಾಡುವ ತರುಣ ತರುಣಿಯರು ಓದುವ ಭಾಷೆ ಇಂಗ್ಲಿಷ್. ಅವರೆಲ್ಲ ಯಾರನ್ನು ಓದುತ್ತಾರೆ ಎಂದು ಕೇಳಿದರೆ, ಪ್ರಕಾಶಕರು ಪ್ರಶಸ್ತಿಗಳತ್ತ ಬೆರಳು ತೋರುತ್ತಾರೆ.
ಜೈಪುರ ಲಿಟ್‌ಫೆಸ್ಟ್‌ನ ಸಾಹಿತ್ಯ ಗೋಷ್ಠಿ
ಜೈಪುರ ಲಿಟ್‌ಫೆಸ್ಟ್‌ನ ಸಾಹಿತ್ಯ ಗೋಷ್ಠಿಗಳನ್ನು ಕೇಳಿಸಿಕೊಂಡು, ಅನೇಕ ಓದುಗರ ಜತೆ ಮಾತಾಡಿ, ಪ್ರಕಾಶಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ, ಈಗಿನ ಸಾಹಿತ್ಯದ ಟ್ರೆಂಡ್ ಹೀಗಿದೆ ಅಂತ ಪಟ್ಟಿ ಮಾಡಬಹುದು. ಇದು ಹೊಸ ಓದುಗರಿಗೂ ಪ್ರಕಾಶಕರಿಗೂ ಸಹಾಯ ಆಗಬಹುದು ಎಂಬ ಕಾರಣಕ್ಕೆ ಕುತೂಹಲಕಾರಿ.
1. ಅರ್ಥವಾಗದಂತೆ ಬರೆಯಬೇಡಿ. ಈಗ ಓದುತ್ತಿರುವವರೆಲ್ಲ ಈಗಷ್ಟೇ ಭಾಷೆ ಕಲಿತವರು. ಅವರ ಇಂಗ್ಲಿಷ್ ಭಾಷೆಯ ಸಹಚರ್ಯ ಸುಮಾರು ಹತ್ತು ಹನ್ನೆರಡು ವರ್ಷಗಳದ್ದು ಮಾತ್ರ. ಅವರಿಗೆ ಶೇಕ್ಸ್‌ಪಿಯರ್ ಇಂಗ್ಲಿಷ್ ಬೇಡ, ಜೇಮ್ಸ್ ಜಾಯ್ಸ್ ವಾಕ್ಯಸರಣಿ ಬೇಕಾಗಿಲ್ಲ. ಘನವಾದ ವಿಮರ್ಶೆ ತಲೆಗೆ ಹೋಗುವುದಿಲ್ಲ. ಅವರಿಗೆ ಸರಳವಾದ ಯೂನಿವರ್ಸಲ್ ಇಂಗ್ಲಿಷ್‌ನಲ್ಲಿ ಬರೆಯಿರಿ. ಅವರು ಓದುತ್ತಾರೆ.
2. ಪಾಂಡಿತ್ಯ ಪ್ರದರ್ಶನ ಮಾಡಬೇಡಿ. ಈ ಜೆನ್‌ಝೀ ಓದುಗರಿಗೆ ಪರಂಪರೆಯ ಪರಿಚಯ ಇಲ್ಲ. ಕಾಳಿದಾಸ, ಕುಮಾರವ್ಯಾಸ, ಭಾಸರಂಥ ಪೂರ್ವಸೂರಿಗಳನ್ನು ಬಿಡಿ, ಕಳೆದ ಶತಮಾನದಲ್ಲಿ ಬರೆಯುತ್ತಿದ್ದವರು ಕೂಡ ಗೊತ್ತಿಲ್ಲ. ನೀವು ಬರೆಯುತ್ತಿರುವುದು ಈಗಷ್ಟೇ ಓದಲು ಶುರುಮಾಡಿರುವ, ಇದೀಗ ಮೊದಲ ಪುಸ್ತಕ ಓದುತ್ತಿರುವ, ತಾಜಾ ತಾಜಾ ಓದುಗನಿಗೆ ಎಂಬುದು ನೆನಪಿರಲಿ. ನಿಮ್ಮ ಪಾಂಡಿತ್ಯವನ್ನು ಮ್ಯೂಸಿಯಮ್ಮಿನಲ್ಲಿ ಇಡಿ. ಅಡುಗೆ ಮನೆಯಲ್ಲಿ ಪಾಸ್ತಾ, ಬ್ರೂಸ್ಕೆಟಾ ಹೊಗೆಯಾಡುತ್ತಿರಲಿ.
3. ಸೈದ್ಧಾಂತಿಕತೆ, ಪ್ರಾಪಗಂಡ, ಪ್ರನಾಳಿಕೆಗಳು ಬೇಕಾಗಿಲ್ಲ. ನೇರವಾಗಿ ನಿಮಗೆ ಅನ್ನಿಸಿದ್ದನ್ನು ಹೇಳಿ. ರಾಜಕೀಯ ಪಕ್ಷದ ನೀತಿಯನ್ನು ಬೆಂಬಲಿಸಲು ಬರೆಯುವ ಪುಸ್ತಕಗಳಿಗೆ ಆಯಾ ರಾಜಕೀಯ ಪಕ್ಷಗಳು ಅಕಾಡೆಮಿ ಪುರಸ್ಕಾರ ನೀಡಬಹುದು. ಆದರೆ ಓದುಗ ಅದನ್ನು ಕಸದ ಬುಟ್ಟಿಗೆ ಎಸೆಯುತ್ತಾನೆ. ಜೆನ್ ಝೀಗಳಿಗೆ ರಾಜಕಾರಣವೆಂದರೆ ಅಲರ್ಜಿ. ಸಾಮಾಜಿಕ ಬದ್ಧತೆ ಅನ್ನುವುದು ಓದುಗರನ್ನು ವಂಚಿಸುವ ಹಳೆಯ ಉಪಾಯ.
ಕಿರಣ್ ದೇಸಾಯಿ ಹೇಳಿದ್ದಿಷ್ಟು
ಕಿರಣ್ ದೇಸಾಯಿ ಹೇಳಿದ್ದಿಷ್ಟು ಸಿಟ್ಟಿನಿಂದ ಕುದಿಯುವ ರಾಜಕೀಯ ಕಾದಂಬರಿ ಬರೆಯುವುದು ಸುಲಭ. ಇಬ್ಬರ ನಡುವೆ ಖಾಸಗಿತನವನ್ನು ಹಿಡಿದಿಡುವುದು ಕಷ್ಟ. ಯಾರೂ ಕೂಡ ರಾಜಕಾರಣದ ಬಗ್ಗೆ ತಿಳಿಯಲು ಕಾದಂಬರಿ ಓದುವುದಿಲ್ಲ. ಇಬ್ಬರು ಗುಟ್ಟಾಗಿ ಏನು ಮಾತಾಡಿಕೊಳ್ಳುತ್ತಾರೆ ಅನ್ನುವುದು ಹೆಚ್ಚು ಕುತೂಹಲಕಾರಿ. ಓದುಗರ ಭಾವನಾತ್ಮಕ ಪದಕೋಶವನ್ನು ವಿಸ್ತರಿಸುವುದು ಲೇಖಕನ ಕೆಲಸ.
4. ಇವತ್ತು ನಾವು ಒಬ್ಬರನ್ನೊಬ್ಬರು ಬೆಸೆಯುವುದಕ್ಕೆ ನೂರೆಂಟು ಉಪಕರಣಗಳಿವೆ. ಹಾಗಿದ್ದರೂ ಮನುಷ್ಯ ಅತ್ಯಂತ ಒಂಟಿಯಾಗಿದ್ದಾನೆ. ಈ ಒಂಟಿತನವನ್ನು ಮೀರುವ ಉಪಾಯಗಳನ್ನು ಅವನು ಹುಡುಕುತ್ತಿದ್ದಾನೆ. ಇನ್ನೊಬ್ಬರು ಜತೆಗಿದ್ದರೆ ಒಂಟಿತನ ಕಳೆಯುತ್ತದೆ ಅನ್ನುವ ನಂಬಿಕೆ ಯಾರಿಗೂ ಇಲ್ಲ. ಕಿರಣ್ ದೇಸಾಯಿ ಹೇಳಿದರು- ನಾನು ಒಂಟಿ ಅಂತ ಯಾರೋ ಒಬ್ಬ ಅಪರಿಚಿತನ ಹತ್ತಿರ ಯಾರೂ ಹೇಳಿಕೊಳ್ಳಲಾರರು. ನನ್ನ ಬಳಿ ಪುಸ್ತಕ ಸಹಿ ಮಾಡಿಸಲು ಬಂದ ಅನೇಕರು ಪಿಸುಮಾತಲ್ಲಿ ನಾನು ಏಕಾಕಿ ಅಂತ ಹೇಳಿದರು. ಲೇಖಕ ಅಷ್ಟು ಮಾಡಿದರೆ ಸಾಕು.
5. ಏಕಾಂತ ಅಂದರೆ ಸಂಗಾತಿ ಇಲ್ಲದೇ ಇರುವುದಲ್ಲ. ಜಿಯೋಪಾಲಿಟಿಕ್ಸ್ ಮತ್ತು ಚರಿತ್ರೆಯ ಪುಟಗಳ ತನಕ ಅದು ವಿಸ್ತರಿಸಿದೆ. ರಾಷ್ಟ್ರಗಳ, ವರ್ಗಗಳ, ಜನಾಂಗಳ ನಡುವೆ ಅಪನಂಬಿಕೆಯ ಕಂದರಗಳಿವೆ. ಹಳೆಯ ಜಗತ್ತು ಮಾಸುತ್ತಿದೆ. ಭೂತಕಾಲ ಕರಗುತ್ತಿದೆ. ಇಂಥ ಹೊತ್ತಲ್ಲಿ ಹುಟ್ಟಿಕೊಳ್ಳುವ ಏಕಾಂತ ಕೂಡ ಗಾಢವಾದದ್ದು. ಅದರಲ್ಲೂ ಒಂದು ಘನತೆಯಿದೆ.
6. ಬ್ರಿಟಿಶ್ ನಟ, ಲೇಖಕ ಸ್ಟೀಫನ್ ಫ್ರೈ ಮಾತಲ್ಲೂ ಇವೆಲ್ಲ ಅನುರಣಿಸಿದವು. ಇವತ್ತು ಒಂದೇ ಮನೆಯಲ್ಲಿ ಐದು ದೇಶಗಳು ವಾಸಿಸುತ್ತವೆ. ಅಪ್ಪ ಅಮೆರಿಕಾದ ರಾಜಕೀಯ ಗಮನಿಸುತ್ತಿರುತ್ತಾನೆ. ಮಗ ಕೊರಿಯಾದ ಸಿನಿಮಾ ನೋಡುತ್ತಾನೆ. ಮಗಳು ಚೈನೀಸ್ ತಿಂಡಿ ತಿನ್ನುತ್ತಾಳೆ, ಅಜ್ಜಿ ಭಾರತೀಯ ದೇವರುಗಳ ಧ್ಯಾನ ಮಾಡುತ್ತಾಳೆ, ಅಮ್ಮ ಆಸ್ಟ್ರೇಲಿಯಾದಲ್ಲಿರುವ ಮಗಳ ಚಿಂತೆಯಲ್ಲಿರುತ್ತಾಳೆ. ಈ ಐವರು ಒಬ್ಬರಿಗೊಬ್ಬರು ಮಾತಾಡುವ ಸಂದರ್ಭವೂ ಕಡಿಮೆಯಾಗಿದೆ. ಜತೆಗೆ ಊಟ ಮಾಡುವುದಿಲ್ಲ, ಟೆಲಿವಿಷನ್ ನೋಡುವುದಿಲ್ಲ. ಇದು ಒಂಟಿತನವೋ ಇನ್ನೊಂದು ರೀತಿಯ ಸ್ನೇಹಸಂಕುಲವೋ ಅರ್ಥವೇ ಆಗುವುದಿಲ್ಲ.
7. ಪ್ರಕಾಶಕರು ಎಂದಿನಂತೆ ದುಃಖದಲ್ಲಿದ್ದಾರೆ. ಪುಸ್ತಕಗಳ ಸಂಖ್ಯೆ ಹೆಚ್ಚುತ್ತಿದೆ. ಲೇಖಕರು ಹೆಚ್ಚಾಗುತ್ತಿದ್ದಾರೆ. ಆದರೆ ಪುಸ್ತಕಗಳ ಮಾರಾಟ ತೃಪ್ತಿಕರವಾಗಿಲ್ಲ. ನಾವು ಪ್ರಕಾಶಕರು ಪುಸ್ತಕ ತಯಾರಾಗುವ ಮೊದಲೇ ಮುದ್ರಕರಿಗೆ, ಲೇಖಕರಿಗೆ, ಮಾರಾಟಗಾರರಿಗೆ, ಮುಖಪುಟ ರಚನೆ ಮಾಡುವವರಿಗೆ, ಏಜಂಟುಗಳಿಗೆ, ಹಂಚಿಕೆದಾರರಿಗೆ ಹಣ ಕೊಡಬೇಕು. ನಂತರ ಪುಸ್ತಕ ಮಾರಾಟವಾದ ನಂತರ ಬರುವ ಹಣ ಅಮೆಜಾನ್‌ಗೆ ಹೋಗುತ್ತದೆ. ಅವರಿಂದ ನಮಗೆ ಬಂದು ನಮ್ಮ ಬಂಡವಾಳ ವಾಪಸ್ಸು ಬರಲು ಮೂರು ವರ್ಷ ಬೇಕು. ನಾವು ಕೂಡ ಲೇಖಕರನ್ನು ಬಿಟ್ಟು ಮಿಕ್ಕವರಿಗೆಲ್ಲ ಪುಸ್ತಕ ಮಾರಾಟದ ನಂತರವೇ ಹಣ ಕೊಡುವ ಪದ್ಧತಿ ಜಾರಿಗೆ ಬರಬೇಕು ಎಂದು ಪ್ರಕಾಶಕರ ಸಮೀರ್ ಪಾಟೀಲ್ ಹೇಳಿದರು.
8. ಈಗ ಮಾರಾಟ ಆಗುತ್ತಿರುವುದು ಪ್ರೇಮಕತೆ, ಥ್ರಿಲ್ಲರ್, ಪತ್ತೇದಾರಿ ಕತೆಗಳು. ಇವೆಲ್ಲ ಐವತ್ತು ವರ್ಷಗಳ ಹಿಂದೆ ಜನಪ್ರಿಯವಾಗಿದ್ದ ಪ್ರಕಾರಗಳು. ಆಮೇಲೆ ಮಾಡರ್ನ್ ಲಿಟರೇಚರ್ ಬೆನ್ನಿಗೆ ಬಿದ್ದು ಲೇಖಕರು ಅರ್ಥವಾಗದ್ದೆಲ್ಲ ಬರೆಯಲು ಆರಂಭಿಸಿದರು. ಈಗ ಆ ಅರ್ಥವಾಗದ ಸಾಹಿತ್ಯ ಕೈಗೆ ಸಿಕ್ಕರೆ ಓದುಗರು ಕಸದಬುಟ್ಟಿಗೆ ಎಸೆಯುತ್ತಾರೆ. ಅದರ ಬಗ್ಗೆ ಮೂರು ನಾಲ್ಕು ವೃದ್ಧ ವಿಮರ್ಶಕರು ಮತ್ತು ಅವರಿಂದ ಪ್ರಭಾವಿತರಾದ ನಡುವಯಸ್ಸಿನ ಮೂಲೋದ್ಧಾರಕರು ಬಿಟ್ಟರೆ ಮತ್ಯಾರೂ ಮಾತಾಡುವುದಿಲ್ಲ. ಒಂದೊಳ್ಳೆಯ ಪತ್ತೇದಾರಿ ಕಾದಂಬರಿ ಬರೆಯಿರಿ ಅಂತ ಪ್ರಕಾಶಕರ ಮಾತುಕತೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ಕೇಳಿಕೊಂಡರು.
9.ಸ್ಟಾಟ್‌ಬುಕ್ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಒಬ್ಬ ಲೇಖಕ ತನ್ನ ಪುಸ್ತಕದ ಪಿಡಿಎಫ್ ಅದರಲ್ಲಿ ಅಪ್‌ಲೋಡ್ ಮಾಡಿದರೆ, ಜಗತ್ತಿನ ಯಾವುದೇ ಪ್ರದೇಶದಲ್ಲಿರುವ, ದೇಶದಲ್ಲಿರುವ ಓದುಗ ಆ ಪುಸ್ತಕವನ್ನು ಆರ್ಡರ್ ಮಾಡಬಹುದು. ಆರ್ಡರ್ ಬಂದ ತಕ್ಷಣ ಆ ಪುಸ್ತಕ ಆಯಾ ದೇಶದಲ್ಲಿಯೇ ಪ್ರಿಂಟಾಗಿ ಓದುಗನ ಕೈ ಸೇರುತ್ತದೆ. ಇದರಿಂದಾಗಿ ಅನೇಕ ಲೇಖಕರಿಗೆ ಲಾಭವಾಗಿದೆ. ಅನೇಕರು ಸಾವಿರಾರು ಡಾಲರ್ ಗಳಿಸುತ್ತಿದ್ದಾರೆ.
10. ಪುಸ್ತಕ ಮಾರಾಟ ಆಗಬೇಕಿದ್ದರೆ ಓದುಗನಿಗೆ ಆ ಪುಸ್ತಕದ ಬಗ್ಗೆ ಗೊತ್ತಾಗಬೇಕು. ಈಗ ಹಾಗೆ ಗೊತ್ತು ಮಾಡುವುದು ಪ್ರಶಸ್ತಿಗಳು. ಬುಕರ್, ನೊಬೆಲ್ ಮುಂತಾದ ವಿದೇಶಿ ಪ್ರಶಸ್ತಿಗಳ ಜತೆಗೇ ಸಾಕಷ್ಟು ದೇಶೀಯ ಪ್ರಶಸ್ತಿಗಳೂ ಸ್ಥಾಪನೆ ಆಗಬೇಕು. ಅವುಗಳಿಗೆ ಮಹತ್ವ ಬರಬೇಕು. ಆಗ ಪುಸ್ತಕಗಳ ಮಾರಾಟ ಹೆಚ್ಚುತ್ತದೆ. ಇನ್‌ಸ್ಟಾಗ್ರಾಮ್ ಮುಂತಾದ ಸೋಷಲ್ ಮೀಡಿಯಾದಲ್ಲಿ ಇಲ್ಲದ ಲೇಖಕರಿಗೆ ಇನ್ನು ಮೇಲೆ ಭವಿಷ್ಯ ಇಲ್ಲ. ಅವರು ಓದುಗರನ್ನು ತಲುಪಬೇಕಿದ್ದರೆ ಪ್ರಶಸ್ತಿ ಬರಬೇಕು, ಬಿಟ್ಟರೆ ಬೇರೆ ದಾರಿಯಿಲ್ಲ.
11. ಜನಪ್ರಿಯತೆಗೂ ಪುಸ್ತಕ ಬರೆಯುವುದಕ್ಕೂ ಸಂಬಂಧವಿದೆ ಅನ್ನುವುದು ಮತ್ತೊಮ್ಮೆ ಸಾಬೀತಾಯಿತು. ಪುಸ್ತಕ ಬಿಡುಗಡೆಗೆ ಬಂದಿದ್ದ ಜೀನತ್ ಅಮಾನ್ ಹತ್ತಿರ ನೀವೂ ಪುಸ್ತಕ ಬರೆಯಿರಿ ಅಂತ ಯಾರೋ ಕೇಳಿಕೊಂಡರು. ನನ್ನ ಜೀವನದ ಕತೆ ಎಲ್ಲರಿಗೂ ಗೊತ್ತಿದೆ. ಸಾರ್ವಜನಿಕ ಬದುಕಲ್ಲಿ ಇರುವವರ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ನಾನೇನು ಬರೆದರೂ ಅದರಲ್ಲಿ ಹೊಸತನ ಇರುವುದಿಲ್ಲ. ಆದರೆ ನನ್ನ ಅಂತರಂಗದ ಸತ್ಯಗಳನ್ನು ನನ್ನ ಆತ್ಮಕತೆಯಲ್ಲಿ ಬರೆಯಬೇಕು ಅಂತಿದ್ದೇನೆ ಎಂದು ಜೀನತ್ ಅಮಾನ್ ಹೇಳುತ್ತಿದ್ದಂತೆ, ಆ ಪುಸ್ತಕಕ್ಕಾಗಿ ಕಾಯುವುದಾಗಿ ಅಲ್ಲಿ ಸೇರಿದ್ದವರೆಲ್ಲ ಕೂಗಿದರು.
12. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕುರಿತು ಚರ್ಚೆಯಾಯಿತು. ಅದರ ಲಾಭ ನಷ್ಟಗಳ ಮಾತಾಯಿತು. ಅದು ಯಾವತ್ತಿದ್ದರೂ ಒಂದು ಸಲಕರಣೆ ಮಾತ್ರ, ಕ್ರಿಯೇಟರ್ ಆಗಲಾರದು ಎಂದು ಎಲ್ಲರೂ ಅಭಿಪ್ರಾಯಪಟ್ಟರು. ಎಐಗೆ ಬುದ್ಧಿಯಿದೆ, ಆದರೆ ಬರೆಯುವುದಕ್ಕೆ ಯಾವುದೇ ಸಕಾರಣಗಳಿಲ್ಲ, ಉದ್ದೇಶಗಳಿಲ್ಲ. ಹೀಗಾಗಿ ಅದು ಬರೆಯುವುದು ಯಾರನ್ನೂ ತಲುಪುವುದಿಲ್ಲ ಅನ್ನುವ ಅಭಿಪ್ರಾಯವೂ ವ್ಯಕ್ತವಾಯಿತು.
13. ಆ್ಯನ್ ಬಿಯಟೆ ಹೋವಿಂದ್ ಎಂಬಾಕೆ ಭವಿಷ್ಯದ ಲೈಬ್ರರಿ ಎಂಬ ಹೊಸ ಯೋಜನೆಯನ್ನು ಸಾದರಪಡಿಸಿದರು. ನೂರು ಲೇಖಕರ ನೂರು ಕೃತಿಗಳ ಹಸ್ತಪ್ರತಿಯನ್ನು ವರ್ಷಕ್ಕೆ ಒಬ್ಬರಂತೆ ಪಡೆದುಕೊಂಡು ಅವನ್ನು ನೂರು ವರ್ಷಗಳ ನಂತರ ಪ್ರಕಟಿಸುವುದು. ಈ ನೂರು ವರ್ಷಗಳ ಕಾಲ ಅವು ಕತ್ತಲಲ್ಲಿರುತ್ತವೆ. ಇದಕ್ಕೆ ಮುಖ್ಯ ಕಾರಣ, ಒಂದು ಕೃತಿಯ ಬರವಣಿಗೆ ಮತ್ತು ಪ್ರಕಟಣೆಯಲ್ಲಿ ಕಾಣುವ ಆತುರ ಮತ್ತು ತುರ್ತು- ಎಂಬ ಎರಡು ಅಂಶಗಳನ್ನು ತೆಗೆದುಹಾಕುವುದು. ಈಗಾಗಲೇ ಈ ಸಂಸ್ಥೆ 2014ರಲ್ಲಿ ಮಾರ್ಗರೆಟ್ ಅಟ್‌ವುಡ್ ಮತ್ತು 2025ರಲ್ಲಿ ಅಮಿತವ್ ಘೋಷ್ ಕೃತಿಗಳ ಹಸ್ತಪ್ರತಿಯನ್ನು ಪಡೆದುಕೊಂಡು 12 ಪುಸ್ತಕಗಳನ್ನು ಸಂಗ್ರಹಿಸಿದೆ. ಇದನ್ನು ಕೇಳಿದ ಲೇಖಕರೊಬ್ಬರು ಕನ್ನಡದ ಲೇಖಕರ ಪುಸ್ತಕಗಳನ್ನೂ ಹೀಗೆ ಸಂಗ್ರಹಿಸಿ ನೂರು ವರ್ಷಗಳ ನಂತರ ಪ್ರಿಂಟು ಮಾಡಿ ಕನ್ನಡ ಓದುಗರನ್ನು ಕಾಪಾಡಬೇಕೆಂದು ವಿನಂತಿ ಮಾಡಿಕೊಂಡರು.


