ಸಾರಿಗೆ ಬಸ್ ಗಳಿಗೆ ಆಟ,ಪ್ರಯಾಣಿಕರಿಗೆ ಪ್ರಾಣ ಸಂಕಟ..!

| Published : Nov 25 2023, 01:15 AM IST

ಸಾರಾಂಶ

ನಿಗದಿತ ಸ್ಥಳದಲ್ಲಿ ಸಾರಿಗೆ ಬಸ್ ನಿಲುಗಡೆಯಾಗದೆ ವಿದ್ಯಾರ್ಥಿಗಳು ಬಸ್ ಹತ್ತಲು ಪರದಾಟ ನಡೆಸುತ್ತಿದ್ದು, ಅವಘಡಗಳು ಸಂಭವಿಸಿದರೆ ಹೊಣೆಯಾರು? ಎಂಬ ಆತಂಕ ಎದುರಾಗಿದೆ.ಭಾರತೀನಗರದ ಮದ್ದೂರು - ಮಳವಳ್ಳಿ ಹೆದ್ದಾರಿಯಲ್ಲಿ ಸಾರಿಗೆ ಬಸ್‌ ನಿಲ್ದಾಣದಲ್ಲಿ ನಾಮಫಲಕ ಹಾಕಿದ್ದರೂ ಆ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸದೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ನಿಲ್ಲಿಸಲಾಗುತ್ತಿದೆ. ಇದು ಅಪಘಾತಗಳು ನಡೆಯಲು ಎಡೆ ಮಾಡಿಕೊಟ್ಟಿದೆ. ನಿತ್ಯ ಆಸ್ಪತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಓಡಾಡುವುದರಿಂದ ಸಾರಿಗೆ ಬಸ್‌ಗಳು ನಿಗಧಿತ ಸ್ಥಳದಲ್ಲಿ ನಿಲ್ಲುತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸಿಕೊಳ್ಳುತ್ತಿಲ್ಲ. ಅಡ್ಡಾದಿಡ್ಡಿ ಬಸ್‌ಗಳ ಸಂಚಾರವಾಗುತ್ತಿದೆ.

ಬಸ್ ಹತ್ತಲು ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ । ಸಾರ್ವಜನಿಕರು, ವಿದ್ಯಾರ್ಥಿಗಳ ಪ್ರಾಣದ ಜೊತೆ ಚೆಲ್ಲಾಟ । ಮೌನ ವಹಿಸಿರುವ ಸಾರಿಗೆ ಇಲಾಖೆ

ಅಣ್ಣೂರು ಸತೀಶ್

ಕನ್ನಡಪ್ರಭ ವಾರ್ತೆ ಭಾರತೀನಗರ

ನಿಗದಿತ ಸ್ಥಳದಲ್ಲಿ ಸಾರಿಗೆ ಬಸ್ ನಿಲುಗಡೆಯಾಗದೆ ವಿದ್ಯಾರ್ಥಿಗಳು ಬಸ್ ಹತ್ತಲು ಪರದಾಟ ನಡೆಸುತ್ತಿದ್ದು, ಅವಘಡಗಳು ಸಂಭವಿಸಿದರೆ ಹೊಣೆಯಾರು? ಎಂಬ ಆತಂಕ ಎದುರಾಗಿದೆ.

ಭಾರತೀನಗರದ ಮದ್ದೂರು - ಮಳವಳ್ಳಿ ಹೆದ್ದಾರಿಯಲ್ಲಿ ಸಾರಿಗೆ ಬಸ್‌ ನಿಲ್ದಾಣದಲ್ಲಿ ನಾಮಫಲಕ ಹಾಕಿದ್ದರೂ ಆ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸದೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ನಿಲ್ಲಿಸಲಾಗುತ್ತಿದೆ. ಇದು ಅಪಘಾತಗಳು ನಡೆಯಲು ಎಡೆ ಮಾಡಿಕೊಟ್ಟಿದೆ. ನಿತ್ಯ ಆಸ್ಪತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಓಡಾಡುವುದರಿಂದ ಸಾರಿಗೆ ಬಸ್‌ಗಳು ನಿಗಧಿತ ಸ್ಥಳದಲ್ಲಿ ನಿಲ್ಲುತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸಿಕೊಳ್ಳುತ್ತಿಲ್ಲ. ಅಡ್ಡಾದಿಡ್ಡಿ ಬಸ್‌ಗಳ ಸಂಚಾರವಾಗುತ್ತಿದೆ.

ಸರ್ಕಾರ ಘೋಷಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದಿನ ನಿತ್ಯ ಪ್ರಯಾಣಿಸುತ್ತಾರೆ. ಬಸ್ ಗಳ ಕೊರತೆ ಇರುವ ಕಾರಣ ಚಾಲಕರು ನಿಗಧಿತ ಸ್ಥಳಗಳಲ್ಲಿ ಸಾರಿಗೆ ಬಸ್ ನಿಲ್ಲಿಸುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇತ್ತ ಪೊಲೀಸರು ಸಹ ನಿಗಧಿತ ಸ್ಥಳಗಳಲ್ಲಿ ಬಸ್‌ ನಿಲ್ಲಿಸುವಂತೆ ಸೂಚನೆ ನೀಡುತ್ತಿಲ್ಲ.

ಯಾವುದಾದರೂ ಒಂದು ಸಾರಿಗೆ ಬಸ್ ಬಂದ ತಕ್ಷಣ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮಹಿಳೆಯರು ಓಡಿ ಹೋಗಿ ಬಸ್ ಸೀಟಿಗಾಗಿ ಕಿಟಕಿ, ಡೋರ್ ಮೂಲಕ ಪೈಪೋಟಿಗಿಳಿಯುತ್ತಿದ್ದಾರೆ. ಈ ವೇಳೆ ಅಪಘಾತ ಸಂಭವಿಸಿದರೆ ಹೊಣೆಯಾರು? ಎಂಬುವುದು ಸಾರ್ವಜನಿಕರಲ್ಲಿ ಯಕ್ಷ ಪ್ರಶ್ನೆಯಾಗಿದೆ.

ಭಾರತೀನಗರ ಬಹುದೊಡ್ಡ ವಿದ್ಯಾಕೇಂದ್ರದ ಪಟ್ಟಣವಾಗಿದೆ. ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳಿಗೆ ಹೋಗಲು ಆತುರದಲ್ಲಿರುತ್ತಾರೆ. ಈ ವೇಳೆ ಬಸ್‌ಗಳು ಅಡ್ಡಾದಿಡ್ಡಿ ಚಲಾಯಿಸುವುದರ ಜೊತೆಗೆ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ.

ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸಿಕೊಳ್ಳಲು ಸಾರಿಗೆ ಬಸ್ ಚಾಲಕರು ಮತ್ತು ನಿರ್ವಾಹಕರು ಮೀನಾಮೇಷ ಏಣಿಸುತ್ತಾರೆ. ಸಾರ್ವಜನಿಕರು ಬಸ್ ಅನ್ನು ಆಸ್ಪತ್ರೆ ಮುಂಭಾಗ ನಿಲ್ಲಿಸಬೇಡಿ. ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸಿಕೊಳ್ಳಿ ಎಂದು ಪ್ರಶ್ನಿಸಿದರೆ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ದೂರಿದ್ದಾರೆ.

ಬಸ್ ಚಾಲಕರು, ನಿರ್ವಾಹಕರ ಧೋರಣೆ ಖಂಡಿಸಿ ಸಾರ್ವಜನಿಕರು ಸಾರಿಗೆ ಬಸ್‌ಗಳನ್ನು ತಡೆದರೆ ನಮ್ಮ ವಿರುದ್ಧ ದೂರು ನೀಡಲು ಮುಂದಾಗುತ್ತಾರೆ. ಅವಘಡಗಳು ಸಂಭವಿಸುವುದಕ್ಕೂ ಮುನ್ನ ಪ್ರಯಾಣಿಕರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿರುವ ಸಾರಿಗೆ ಬಸ್ ಚಾಲಕರಿಗೆ ತಿಳುವಳಿಕೆ ನೀಡಬೇಕಿದೆ.

---

ಕೋಟ್...

ಸಾರಿಗೆ ಬಸ್‌ಗಳು ನಿಗಧಿತ ಸ್ಥಳಗಳಲ್ಲಿ ನಿಲ್ಲಿಸದೆ ಸರ್ಕಾರಿ ಆಸ್ಪತ್ರೆ ಮುಂಭಾಗ ನಿಲ್ಲಿಸುವುದರಿಂದ ಆಸ್ಪತ್ರೆಯಿಂದ ಹೊರಗೆ ಹೋಗುವವರಿಗೆ ಮದ್ದೂರು - ಮಳವಳ್ಳಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಕಾಣುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.

-ಗಂಗಾಧರ್, ನಂದಿನಿ ಮಿಲ್ಕ್ ಪಾರ್ಲರ್ ಮಾಲೀಕ, ಕೆ.ಎಂ.ದೊಡ್ಡಿ.

---

ಕೋಟ್...

ಬಸ್ ನಿಲುಗಡೆ ವಿಚಾರವಾಗಿ ಸಾರ್ವಜನಿಕರಿಂದ ಈಗಾಗಲೇ ದೂರು ಬಂದಿದೆ. ಚಾಲಕರಿಗೆ ನಿಗಧಿತ ಸ್ಥಳಗಳಲ್ಲಿ ಬಸ್‌ಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಯಾವುದೇ ಅವಘಡಗಳಿಗೆ ದಾರಿ ಮಾಡಿಕೊಡಬೇಡಿ ಎಂದು ಎಚ್ಚರಿಕೆ ನೀಡಿದ್ದೇನೆ.

ಪಿ.ನಾಗರಾಜು, ನಿಯಂತ್ರಣಾಧಿಕಾರಿ, ಸಾರಿಗೆ ವಿಭಾಗ ಮಂಡ್ಯ.

---

24ಕೆಎಂಎನ್ ಡಿ15,16,17

ಭಾರತೀನಗರದ ಮದ್ದೂರಿನಲ್ಲಿ ಸಾರಿಗೆ ಬಸ್ ನಿಗಧಿತ ಸ್ಥಳದಲ್ಲಿ ನಿಲ್ಲದೆ ಎಲ್ಲೆಂದರಲ್ಲಿ ನಿಂತಿರುವುದು.

---ಬಸ್ ಹತ್ತಲು ಪರದಾಟ ನಡೆಸುತ್ತಿರುವ ವಿದ್ಯಾರ್ಥಿಗಳು.

---