ಸಾರಾಂಶ
ಬೆಂಗಳೂರು : ನಮ್ಮ ಮೆಟ್ರೊ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಅನುಕೂಲ ಮಾಡಿಕೊಡುವ ನೇಮಕಾತಿ ಆದೇಶವನ್ನು ಹಿಂಪಡೆಯದಿದ್ದರೆ ಹೋರಾಟ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
‘ಮೆಟ್ರೋ ಹುದ್ದೆಯಲ್ಲಿ ಅನ್ಯ ಭಾಷಿಕರಿಗೆ ಪ್ರಾಶಸ್ತ್ಯ?’ ಶೀರ್ಷಿಕೆಯಡಿ ‘ಕನ್ನಡಪ್ರಭ’ ಪ್ರಕಟಿಸಿದ ಬೆನ್ನಲ್ಲೇ ಮೆಟ್ರೋ ನಿಗಮದ ಧೋರಣೆ ಬಗ್ಗೆ ಕನ್ನಡ ಪರ ಸಂಘಟನೆಗಳು, ನೌಕರರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಈ ಬಗ್ಗೆ ‘ಎಕ್ಸ್’ ಮಾಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗಿರುವುದು ಎದ್ದು ಕಾಣಿಸುತ್ತಿದೆ, ಬ್ಯಾಂಕ್ ಮತ್ತು ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೊಗದಿಂದ ದೂರವಿಡಲು ನಿರಂತರವಾಗಿ ಕ್ರಮಕೈಗೊಳ್ಳಲಾಗುತ್ತಿದೆ, ಇದೀಗ ರಾಜ್ಯ ಸರಕಾರದ ಸಂಸ್ಥೆಯಲ್ಲೂ ಕನ್ನಡಿಗರನ್ನು ಕಡೆಗಣಿಸಲು ಕ್ರಮಕೈಗೊಳ್ಳುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮ ಮೆಟ್ರೋದಲ್ಲಿ ಅನ್ಯಭಾಷಿಕರಿಗೆ ಮಣೆ ಹಾಕಿ ಕನ್ನಡಿಗರನ್ನು ಕಡೆಗಣಿಸುತ್ತಿರುವುದನ್ನು ಕರವೇ ಗಂಭೀರವಾಗಿ ಪರಿಗಣಿಸಲಿದೆ ಮತ್ತು ನಮ್ಮ ಮೆಟ್ರೋ ಸಂಸ್ಥೆ ಈಗ ಹೊರಡಿಸಿರುವ ಅಧಿಸೂಚನೆ ಹಿಂಪಡೆದು ಕನ್ನಡಿಗರು ಮಾತ್ರ ಆಯ್ಕೆಯಾಗುವಂತೆ ಅಧಿಸೂಚನೆ ಹೊರಡಿಸದಿದ್ದರೆ ಉಗ್ರ ಸ್ವರೂಪದ ಚಳವಳಿ ಹಮ್ಮಿಕೊಳ್ಳಲಾಗುವುದು. ಕನ್ನಡಿಗರ ವಿರೋಧ ಕಟ್ಟಿಕೊಂಡರೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಡುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
‘ನಮ್ಮ ಮೆಟ್ರೋ‘ಗೆ ಹೊರರಾಜ್ಯದವರು ಏಕೆ?:
ಸಂಘಬೆಂಗಳೂರು ಮೆಟ್ರೋ ನೌಕರರ ಸಂಘ ಇದನ್ನು ವಿರೋಧಿಸಿದೆ. ರಾಜ್ಯದಲ್ಲಿ ‘ನಮ್ಮ ಮೆಟ್ರೋ’ ಮಾತ್ರ ಇದೆ. ಮೂರು ವರ್ಷ ಅನುಭವವುಳ್ಳ ಟ್ರೈನ್ ಆಪರೇಟರ್ ಹೇಗೆ ಸಿಗುವುದಕ್ಕೆ ಸಾಧ್ಯ? ಉತ್ತರ ಭಾರತೀಯರು ಹಾಗೂ ಚೆನ್ನೈ, ಹೈದ್ರಾಬಾದ್, ಕೊಚ್ಚಿನ್‌ನವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ನಿಬಂಧನೆ ವಿಧಿಸಲಾಗಿದೆ. ಅವರಿಗೆ ಕನ್ನಡ ಕಲಿಯಲು ಒಂದು ವರ್ಷ ಅವಕಾಶ ನೀಡುವ ಬದಲು ಕನ್ನಡಿಗರಿಗೆ ಟ್ರೈನ್ ಆಪರೇಟರ್ ಹುದ್ದೆಯ ತರಬೇತು ನೀಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ನಮ್ಮ ಮೆಟ್ರೋ ಕಟ್ಟಲು ಕನ್ನಡಿಗರು ತೆರಿಗೆ ನೀಡಿದ್ದೇವೆ. ಹೀಗಿರುವಾಗ ಕನ್ನಡಿಗರ ಉದ್ಯೋಗವನ್ನು ಕಸಿಯುವ ಮೆಟ್ರೋ ನಿಗಮದ ಇಂತಹ ಧೋರಣೆಯನ್ನು ಒಪ್ಪಲು ಸಾದ್ಯವಿಲ್ಲ. ತಕ್ಷಣ ಈ ಸುತ್ತೋಲೆ ಹಿಂಪಡೆಯಬೇಕು ಹಾಗೂ ಇಂತಹ ಸುತ್ತೋಲೆ ಹೊರಡಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.