ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಮುಂದಿನ 2026ರ ಡಿಸೆಂಬರ್ 24 ರಿಂದ 27ರವರೆಗೆ ನಡೆಯಲಿರುವ ಜಾಗತಿಕ ಆರ್ಯವೈಶ್ಯ ಶೃಂಗಸಭೆಯ ಲಾಂಛನ, ಧ್ಯೇಯೋದ್ದೇಶವನ್ನು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.

 ಬೆಂಗಳೂರು : ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಮುಂದಿನ 2026ರ ಡಿಸೆಂಬರ್ 24 ರಿಂದ 27ರವರೆಗೆ ನಡೆಯಲಿರುವ ಜಾಗತಿಕ ಆರ್ಯವೈಶ್ಯ ಶೃಂಗಸಭೆಯ ಲಾಂಛನ, ಧ್ಯೇಯೋದ್ದೇಶವನ್ನು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. 

ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಬಯಸಿದ ಸಮಾಜ

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಬಯಸಿದ ಸಮಾಜ ನಮ್ಮದು. ರಾಜ್ಯಾದ್ಯಂತ 90ಕ್ಕೂ ಮೀರಿದ ಸಹಕಾರ ಸಂಘ, 9 ಸಹಕಾರ ಬ್ಯಾಂಕು, 97 ಶಾಲೆ, 287 ಶ್ರೀ ವಾಸವಿ ದೇವಾಲಯ, 252 ಕಲ್ಯಾಣ ಮಂಟಪ, ಸರಿಸುಮಾರು 1800 ಸಂಘ ಸಂಸ್ಥೆಗಳ ಮೂಲಕ ಸಮಾಜದ ಸಂಘಟನೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ವಿಶ್ವ ಆರ್ಯವೈಶ್ಯ ಸಮಾವೇಶವು ಯುವ ಜನತೆಯ ಭವ್ಯ ಭವಿಷ್ಯಕ್ಕಾಗಿ ಮತ್ತು ಯುವ ಜನತೆಯನ್ನು ಹೊಸ ಉದ್ಯಮಗಳತ್ತ ಸೆಳೆಯುವ ಗುರಿ ಹೊಂದಿದೆ. ಉದ್ಯಮಶೀಲರಾಗಿ ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆಯಲು ಸಹಕಾರಿಯಾಗುವ ಮಾರ್ಗದರ್ಶನ, ತಾಂತ್ರಿಕ, ಆರ್ಥಿಕ ಸಲಹೆ-ಸಹಕಾರಗಳನ್ನು ನೀಡಲಿದ್ದೇವೆ ಎಂದರು.ಮುಂದಿನ 10 ವರ್ಷಗಳಲ್ಲಿ ಸುಮಾರು 5000 ನವೋದ್ಯಮ ಆರಂಭಿಸುವ ಮತ್ತು 2 ಲಕ್ಷಕ್ಕೂ ಮೀರಿದ ಉದ್ಯೋಗ ಸೃಷ್ಟಿಸುವ ಮುಂದಡಿ ಇಟ್ಟಿದೆ. 

ಒಂದೂವರೆ ಲಕ್ಷ ಜನ ಬರುವರೆಂಬ ನಿರೀಕ್ಷೆ

ವಿಶ್ವ ಆರ್ಯವೈಶ್ಯ ಸಮಾವೇಶಕ್ಕೆ ವಿಶ್ವದ ನಾನಾ ಭಾಗಗಳಿಂದ ಸುಮಾರು ಒಂದೂವರೆ ಲಕ್ಷ ಜನ ಬರುವರೆಂಬ ನಿರೀಕ್ಷೆಯನ್ನು ಹೊಂದಿದ್ದೇವೆ. ಈ ಶೃಂಗಸಭೆಯನ್ನು ಉದ್ಯಮಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಟಿ.ಜಿ. ವೆಂಕಟೇಶ್‌ ಸಮಾವೇಶ ಉದ್ಘಾಟಿಸುವರು ಎಂದು ಹೇಳಿದರು.ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್ ವಿಶ್ವ ಆರ್ಯವೈಶ್ಯ ಸಮಾವೇಶದ ಲಾಂಛನವನ್ನು, ಮತ್ತು ಉದ್ಯಮಿ ಶ್ರೀನಿವಾಸ್‌ ಸಮಾವೇಶದ ಧೈಯೋದ್ದೇಶಗಳನ್ನು,ಎಂ.ವಿ.ಗ್ರೂಪ್ ಅಧ್ಯಕ್ಷ ಡಿ.ವಿ. ಮಂಜುನಾಥ್‌ ಸಮಾವೇಶದ ವೆಬ್‌ ಸೈಟ್ ಲೋಕಾರ್ಪಣೆ ಮಾಡಿದರು.