ಜಿಎಸ್‌ಟಿ: 3-4 ವರ್ಷದ ಲೆಕ್ಕ ತರುವುದೆಲ್ಲಿಂದ?

| N/A | Published : Jul 19 2025, 12:12 PM IST

Understanding GST

ಸಾರಾಂಶ

ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಗದಿಪಡಿಸಿ, ಭಾರಿ ಮೊತ್ತದ ಬಡ್ಡಿ ಮತ್ತು ದಂಡ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದು ಬಡ ವ್ಯಾಪಾರಿಗಳಿಗೆ ಭಾರಿ ಹೊರೆ

  ಬೆಂಗಳೂರು :  ಚಹಾ, ಹಾಲು-ಮೊಸಲು, ಹಣ್ಣು-ತರಕಾರಿ, ಬೇಕರಿ ಉತ್ಪನ್ನಗಳು ಸೇರಿ ಬೇರೆ ಬೇರೆ ಜಿಎಸ್ಟಿ ತೆರಿಗೆ ಸ್ಲ್ಯಾಬ್ ಹೊಂದಿರುವ ವಸ್ತುಗಳನ್ನು ಮಾರಾಟ ಮಾಡಿರುವ ವ್ಯಾಪಾರಿಗಳನ್ನು ಒಂದೇ ತಕ್ಕಡಿಯಲ್ಲಿ ನೋಡುವ ಮೂಲಕ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಗದಿಪಡಿಸಿ, ಭಾರಿ ಮೊತ್ತದ ಬಡ್ಡಿ ಮತ್ತು ದಂಡ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದು ಬಡ ವ್ಯಾಪಾರಿಗಳಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಈ ಕ್ರಮವನ್ನು ಅವೈಜ್ಞಾನಿಕ ಮತ್ತು ವಿವೇಚನರಹಿತ ಎಂದು ಟೀಕಿಸಿರುವ ಹೆಸರಾಂತ ಆರ್ಥಿಕ ಸಲಹೆಗಾರ ವಿಜಯ್ ರಾಜೇಶ್, ಸಣ್ಣ ಬೇಕರಿಯಲ್ಲಿ ಜಿಎಸ್ಟಿ ವಿನಾಯಿತಿ ಇರುವ ಮತ್ತು ಜಿಎಸ್ಟಿ ವ್ಯಾಪ್ತಿಗೆ ಬರುವ ವಸ್ತುಗಳನ್ನೂ ಮಾರಾಟ ಮಾಡಲಾಗುತ್ತದೆ. ಈ ಎಲ್ಲವನ್ನು ಒಂದೇ ರೀತಿಯ ಜಿಎಸ್ಟಿಗೆ ಪರಿಗಣಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಇನ್ನು ವಹಿವಾಟಿಗೆ ಸಂಬಂಧಿಸಿದ ವಿವರಣೆ ನೀಡಿ ಎಂದು ಕೇಳಲಾಗಿದೆ. ಆದರೆ, ಮೂರ್ನಾಲ್ಕು ವರ್ಷಗಳ ಹಿಂದೆ ಮಾಡಿರುವ ವ್ಯಾಪಾರದ ಲೆಕ್ಕದ ವಿವರಣೆಯನ್ನು ಈಗ ಏಕಾಏಕಿ ನೀಡುವಂತೆ ಕೇಳಿದರೆ ಅವರು ಕೊಡುವುದು ಹೇಗೆ? ಇಡೀ ವರ್ಷದಲ್ಲಿ ನಡೆದಿರುವ ಬ್ಯಾಂಕ್ ಟ್ರಾನ್ಸ್ಯಾಕ್ಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ವಿಶ್ಲೇಷಣೆ ಮಾಡಲು ಸಾಧ್ಯವೇ? ಅವುಗಳಿಗೆ ಸಂಬಂಧಿಸಿದ ಚೀಟಿ, ಸ್ವೀಕೃತಿಗಳನ್ನು ವರ್ಷಗಳವರೆಗೆ ಇಟ್ಟುಕೊಂಡಿರುತ್ತಾರೆಯೇ? ಎಂದು ವಿಜಯ್ ರಾಜೇಶ್ ಕೇಳಿದರು.

ಕೇವಲ ಬ್ಯಾಂಕ್ ಖಾತೆಯಲ್ಲಿ ನಡೆದಿರುವ ಟ್ರಾನ್ಸ್ಯಾಕ್ಷನ್ ಆಧಾರದ ಮೇಲೆ ನೋಟಿಸ್ ನೀಡಿರುವುದು ಅವೈಜ್ಞಾನಿಕ ಕ್ರಮ. ಹಣ ಸ್ವೀಕರಿಸಿದವರಲ್ಲಿ ಅನೇಕರು ಕೈಸಾಲ, ಸಂಬಂಧಿಕರು, ಸ್ನೇಹಿತರಿಂದಲೂ ಹಣ ಪಡೆದುಕೊಂಡಿರುತ್ತಾರೆ. ಅಲ್ಲದೆ, ತುರ್ತಾಗಿ ಪೇಮೆಂಟ್ ಮಾಡಲು ಗೊತ್ತಿರುವವರಿಂದ ಹಣವನ್ನು ಯುಪಿಐನಲ್ಲಿ ಪಡೆದಿರುತ್ತಾರೆ. ಹೀಗೆ ಪಡೆದಿರುವ ಎಲ್ಲಾ ಹಣವನ್ನು ವ್ಯಾಪಾರದಿಂದ ಬಂದ ಹಣವೆಂದು ಪರಿಗಣಿಸಿ ನೋಟಿಸ್ ನೀಡಿದರೆ ಸಣ್ಣ ವ್ಯಾಪಾರಿಗಳು ಆ ಲೆಕ್ಕ ಕೊಡಲು ಸಾಧ್ಯವೇ? ಕೈ ಸಾಲಕ್ಕೆ ರಸೀದಿಗಳನ್ನು ಎಲ್ಲಿಂದ ತರುವುದು ಎಂದು ವಿಜಯ್ ರಾಜೇಶ್ ಪ್ರಶ್ನಿಸಿದರು.

ನೋಟಿಸ್ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ವಿವೇಚನೆ ಬಳಸಬೇಕಿತ್ತು. ಬ್ಯಾಂಕ್ ವಹಿವಾಟು ಆಧಾರದ ಮೇಲೆಯೇ ಎಲ್ಲವನ್ನು ನಿಗದಿಪಡಿಸುವ ಬದಲು ವಿಶ್ಲೇಷಣೆ ಮಾಡುವ ಮುಖಾಂತರ ಸಣ್ಣ ವ್ಯಾಪಾರಿಗಳಿಗೆ, ಅವರು ಮಾಡುವ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗದ ರೀತಿಯಲ್ಲಿ ಹೆಜ್ಜೆಗಳನ್ನು ಇಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ವಿಜಯ್ ರಾಜೇಶ್ ಅಭಿಪ್ರಾಯಪಟ್ಟರು.

Read more Articles on