ಸಾರಾಂಶ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ.
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ದೊಡ್ಡಮಟ್ಟದ ಪರ- ವಿರೋಧ ಅಭಿಪ್ರಾಯಗಳು, ಚರ್ಚೆಗಳನ್ನೂ ಹುಟ್ಟುಹಾಕಿದೆ.
‘ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ತನಗೆ ಜೀವ ಬೆದರಿಕೆ ಒಡ್ಡಿ, ಮೃತದೇಹಗಳನ್ನು ತನ್ನ ಮೂಲಕ ರಹಸ್ಯವಾಗಿ ವಿಲೇವಾರಿ ಮಾಡಿಸಿರುತ್ತಾರೆ. ಈ ರೀತಿ ಹಲವಾರು ಮೃತದೇಹಗಳನ್ನು ತಾನು ವಿಲೇವಾರಿ ಮಾಡಿದ್ದು, ಅದರಿಂದ ಪಾಪಪ್ರಜ್ಞೆ ಕಾಡುತ್ತಿರುವುದರಿಂದ ತನಗೆ ಹಾಗೂ ತನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೆ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿ ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ಧನಿರುವುದಾಗಿ’ ಆ ಅಜ್ಞಾತ ವ್ಯಕ್ತಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಬಗ್ಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಜು.4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 39/2025, ಕಲಂ: 211(ಎ) ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ದೂರುದಾರ ವ್ಯಕ್ತಿಯು ದೂರಿನಲ್ಲಿ ತನ್ನ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡುವಂತೆ ವಿನಂತಿಸಿಕೊಂಡ ಮೇರೆಗೆ ದೂರುದಾರರ ಮಾಹಿತಿಯನ್ನು ಪೊಲೀಸ್ ಇಲಾಖೆ ಇದುವರೆಗೂ ಬಹಿರಂಗಪಡಿಸಿಲ್ಲ. ದೂರುದಾರರ ಪರ ವಕೀಲರು ಬಹಿರಂಗಗೊಳಿಸಿದ ದೂರಿನ ಪ್ರತಿಯ ಅನ್ವಯ ಈ ವ್ಯಕ್ತಿ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಅನೇಕ ವರ್ಷಗಳ ಕಾಲ ದುಡಿಯುತ್ತಿದ್ದುದಾಗಿ ತಿಳಿದು ಬಂದಿದೆ.
ಅಸ್ಥಿಪಂಜರ ಅವಶೇಷ ಸ್ವಾಧೀನ:
ದೂರುದಾರ ವ್ಯಕ್ತಿಯು ಸ್ವತಃ ತಾನೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ತಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದು, ಅವುಗಳನ್ನು ದೂರುದಾರರ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ದೂರುದೂರರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ವಿವರವಾದ ಹೇಳಿಕೆಯನ್ನೂ ನೀಡಿದ್ದಾರೆ.
ಸಮೀರ್ ವಿರುದ್ಧ ಎಫ್‌ಐಆರ್:
ಪ್ರಕರಣ ನಡೆದ ಬೆನ್ನಲ್ಲೇ ಸಮೀರ್ ಎಂ.ಡಿ. ಎಂಬ ಯೂಟ್ಯೂಬರ್ ಪೋಸ್ಟ್‌ವೊಂದನ್ನು ಅಪ್‌ಲೋಡ್ ಮಾಡಿದ್ದು, ಸಾಕ್ಷಿ ದೂರುದಾರ ವ್ಯಕ್ತಿಯು ನ್ಯಾಯಾಲಯದ ಎದುರು ಬಹಿರಂಗಗೊಳಿಸಿರುವ ಮಾಹಿತಿಗಳನ್ನು ಹೊರತುಪಡಿಸಿ ಅವರ ಬಗ್ಗೆ ಹಾಗೂ ಪ್ರಕರಣದ ಬಗ್ಗೆ ಎಐ ಮೂಲಕ ಕಾಲ್ಪನಿಕವಾಗಿ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನೊಳಗೊಂಡ ವಿಡಿಯೋವನ್ನು ಪ್ರಸಾರ ಮಾಡಿದ್ದಕ್ಕಾಗಿ ಸಮೀರ್ ಎಂ.ಡಿ.ವಿರುದ್ಧ ಪ್ರಕರಣ ದಾಖಲಾಗಿದೆ.
ಅನನ್ಯಾ ಭಟ್ ತಾಯಿಯಿಂದ ದೂರು:
ಇಷ್ಟೆಲ್ಲ ಘಟನೆಗಳ ಕಾರಣದಿಂದ ಪ್ರಕರಣವು ಸಮಾಜ ಮತ್ತು ಜಾಲತಾಣದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ, 2003ರಲ್ಲಿ ಧರ್ಮಸ್ಥಳ ದೇವಾಲಯ ವಠಾರದಿಂದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಕಣ್ಮರೆಯಾಗಿದ್ದು, ಈ ಕುರಿತು ವಿಚಾರಣೆ ನಡೆಸುವಂತೆ ಅನನ್ಯಾ ಭಟ್ ತಾಯಿ ಜು.15ರಂದು ಧರ್ಮಸ್ಥಳ ಠಾಣೆಗೆ ಹೋಗಿ ಅಧಿಕೃತವಾಗಿ ದೂರು ನೀಡಿದ್ದಾರೆ.
ಪೊಲೀಸ್ ಸ್ಪಷ್ಟನೆ:
ಅಜ್ಞಾತ ವ್ಯಕ್ತಿಯ ಸಾಕ್ಷಿ ರಕ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ, ಸಾಕ್ಷಿದಾರನ ಇರುವಿಕೆಯ ಬಗ್ಗೆ ಅವರ ಪರ ವಕೀಲರು ಯಾವುದೇ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿಲ್ಲ. ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದಾಗ, ಅಂತಹ ಸಾಕ್ಷಿದಾರನಿಗೆ ಸಾಕ್ಷಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಪೊಲೀಸ್ ಉಪಾಧೀಕ್ಷಕರು ಸಕ್ಷಮ ಪ್ರಾಧಿಕಾರಕಕ್ಕೆ ವರದಿ ಸಲ್ಲಿಸಿದ್ದಾರೆ.
ಈ ನಡುವೆ ಜು.16ರಂದು ಸಾಕ್ಷಿ ದೂರುದಾರ ವ್ಯಕ್ತಿ ತನ್ನ ವಕೀಲರೊಂದಿಗೆ ತಾನು ಹೂತುಹಾಕಿದ್ದ ಮೃತದೇಹಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಧರ್ಮಸ್ಥಳದ ನೇತ್ರಾವತಿ ಸೇತುವೆ ಸಮೀಪ 1 ಗಂಟೆ ಕಾದು ವಾಪಸ್ ಹೋಗಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸ್ ಇಲಾಖೆ, ತನಿಖಾಧಿಕಾರಿಯು ತನಿಖೆಯ ಯಾವ ಹಂತದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ಸೂಕ್ತವೆಂದು ನಿರ್ಧರಿಸುತ್ತಾರೋ ಆಗ ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸಿಕೊಂಡು ಸಮಾಧಿ ಅಗೆಯುವ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಎಸ್‌ಐಟಿ ತನಿಖೆಗೆ ಆಗ್ರಹ, ಸಹಿ ಸಂಗ್ರಹ:
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕೊಲೆಗಳು, ಶವಗಳನ್ನು ಹೂತುಹಾಕಿದ ಪ್ರಕರಣಗಳ ಎಸ್‌ಐಟಿ ತನಿಖೆಗೆ ಆಗ್ರಹ ಹೆಚ್ಚಾಗಿದ್ದು, ಹಿರಿಯ ನ್ಯಾಯವಾದಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ತನಿಖೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ವಿಚಾರಣೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೊ ದಾಖಲೆ ಮಾಡಬೇಕು ಎಂಬ ಬೇಡಿಕೆಯನ್ನೂ ಸಲ್ಲಿಸಿದ್ದಾರೆ. ಇದೇ ವೇಳೆ ದಶಕಗಳಿಂದ ನಡೆದಿದೆ ಎನ್ನಲಾದ ನಿಗೂಢ ಸಾವುಗಳ ಬಗ್ಗೆ ಎಸ್‌ಐಟಿ ತನಿಖೆಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನವೂ ಆರಂಭಗೊಂಡಿದೆ.
ಕೇರಳ ಸರ್ಕಾರಕ್ಕೆ ಮನವಿ:
ಇನ್ನೊಂದೆಡೆ ಸುಪ್ರೀಂಕೋರ್ಟ್ ವಕೀಲರೊಬ್ಬರು ‘ಧರ್ಮಸ್ಥಳದಲ್ಲಿ ಮೃತಪಟ್ಟವರು, ಹೂತು ಹಾಕಲ್ಪಟ್ಟವರ ಪೈಕಿ ಕೇರಳದವರೂ ಇರಬಹುದು. ಆದ್ದರಿಂದ ಈಗ ನಡೆಯುವ ತನಿಖೆಯಲ್ಲಿ ಕೇರಳ ಸರ್ಕಾರ ಭಾಗಿಯಾಗಬೇಕು’ ಎಂದು ಕೇರಳ ಸರ್ಕಾರಕ್ಕೂ ಪತ್ರ ಬರೆದಿದ್ದಾರೆ.
ಕೊನೆಯದಾಗಿ, ಸಾಕ್ಷಿ ದೂರುದಾರರು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ತನ್ನ ಸುರಕ್ಷತೆಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸೌಜನ್ಯಾ ಕೊಲೆ ಕೇಸ್ ಹೋರಾಟಗಾರರು ಮುಂಚೂಣಿಯಲ್ಲಿ:
ಧರ್ಮಸ್ಥಳದಲ್ಲಿ ಹೊಸದಾಗಿ ದಾಖಲಾದ ಪ್ರಕರಣದ ಬೆನ್ನಲ್ಲೇ, 2012ರಲ್ಲಿ ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಸೌಜನ್ಯಾ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣವನ್ನು ಬಳಿಕ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಸಂತೋಷ್ ರಾವ್ ಎಂಬಾತನನ್ನು ದೋಷಿ ಎಂದು ಪರಿಗಣಿಸಿತ್ತು. ಕೊನೆಗೆ ಹೈಕೋರ್ಟ್ ಸಿಬಿಐ ತೀರ್ಪನ್ನು ತಿರಸ್ಕರಿಸಿ ಸಂತೋಷ್ ರಾವ್‌ನನ್ನು ಖುಲಾಸೆಗೊಳಿಸಿತ್ತು. ಈ ಪ್ರಕರಣದ ನ್ಯಾಯಕ್ಕಾಗಿಯೂ ಈಗ ಧ್ವನಿ ಎದ್ದಿದೆ. ಸೌಜನ್ಯಾ ಪ್ರಕರಣದಲ್ಲಿ ಹೋರಾಟ ನಡೆಸಿದ್ದವರು ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲೂ ಮುಂಚೂಣಿಯಲ್ಲಿದ್ದಾರೆ.
ಸರ್ಕಾರದ ಎಚ್ಚರಿಕೆಯ ನಡೆ:
ಧರ್ಮಸ್ಥಳ ಪುಣ್ಯಕ್ಷೇತ್ರವಾಗಿದ್ದು, ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಆರೋಪ ಬಂದಿದೆ ಎಂದು ತರಾತುರಿಯಲ್ಲಿ ಕಠಿಣ ಕ್ರಮ ಕೈಗೊಂಡರೆ ಭಕ್ತರ ಭಾವನೆಗೆ ಘಾಸಿಯಾಗಲಿದೆ ಎಂಬ ಕಾರಣ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದೆ.