ಗುಂಡಿನ ಚಕಮಕಿ<bha>;</bha> ಬೇಟೆಗಾರ ಗುಂಡಿಗೆ ಬಲಿ

| Published : Nov 06 2023, 12:49 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಹಾಗು ಕಾಡು ಪ್ರಾಣಿ ಬೇಟೆಗಾರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಬೇಟೆಗಾರ ಬಲಿಯಾಗಿದ್ದು, 8 ಕ್ಕೂ ಹೆಚ್ಚು ಜನರು ಪರಾರಿಯಾದ ಘಟನೆ ಮದ್ದೂರು ವಲಯದಲ್ಲಿ ಮುಂಜಾನೆ ನಡೆದಿದೆ.

ಬಂಡೀಪುರ ಅರಣ್ಯದಲ್ಲಿ ಘಟನೆ | 8 ಕ್ಕೂ ಹೆಚ್ಚು ಬೇಟೆಗಾರರು ಪರಾರಿ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಹಾಗು ಕಾಡು ಪ್ರಾಣಿ ಬೇಟೆಗಾರರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಬೇಟೆಗಾರ ಬಲಿಯಾಗಿದ್ದು, 8 ಕ್ಕೂ ಹೆಚ್ಚು ಜನರು ಪರಾರಿಯಾದ ಘಟನೆ ಮದ್ದೂರು ವಲಯದಲ್ಲಿ ಮುಂಜಾನೆ ನಡೆದಿದೆ.

ತಾಲೂಕಿನ ಭೀಮನಬೀಡು ಗ್ರಾಮದ ನಿವಾಸಿ ಮನು(26) ಗುಂಡಿಗೆ ಬಲಿಯಾದ ಯುವಕ. ಬೇಟೆಗೆ ತೆರಳಿದ್ದ ಮನುವಿನ ಜೊತೆಗಿದ್ದ 8 ಕ್ಕೂ ಹೆಚ್ಚು ಜನ ಬೇಟೆಗಾರರು ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಯುವಕ ಸಾವನ್ನಪ್ಪಿದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ್‌, ಡಿವೈಎಸ್ಪಿ ಲಕ್ಷ್ಮಯ್ಯ, ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಎಸಿಎಫ್‌ ರವೀಂದ್ರ, ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಕ್ರಂಧನ:

ಬೇಟೆಗೆ ತೆರಳಿ ಗುಂಡಿಗೆ ಬಲಿಯಾದ ಮನುವಿನ ಸಂಬಂಧಿಕರು ಹಾಗೂ ಗ್ರಾಮಸ್ಥರು ದೋಣಿಗೆರೆ ಕಳ್ಳಬೇಟೆ ಶಿಬಿರದ ಬಳಿ ಜಮಾಯಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ಜನರ ಆಕ್ರೋಶ ಕಂಡ ಪೊಲೀಸರು ಮೃತನ ಸಂಬಂಧಿಕರು ಹಾಗೂ ಗ್ರಾಮದ ಕೆಲ ಮುಖಂಡರನ್ನು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ನೂರಾರು ಜನ ಬೈಕ್‌ಗಳಲ್ಲಿ ಜಮಾಯಿಸುತ್ತಿದ್ದರು. ಇದನ್ನು ಅರಿತ ಅರಣ್ಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಜೀಪಿನಲ್ಲಿ ಮತ್ತೊಂದು ರಸ್ತೆಯ ಮೂಲಕ ಶವವನ್ನು ಚಾಮರಾಜನಗರ ಆಸ್ಪತ್ರೆ ಸಾಗಿಸಿದರು.

ಘಟನೆ ನಡೆದದ್ದು ಹೀಗೆ:

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಂಜಿಕಟ್ಟೆಯ ಬಳಿ ಶನಿವಾರ 12 ಗಂಟೆ ಬಳಿಕ ಗುಂಡಿನ ಶಬ್ದ ಬಂದಿದೆ ಎಂದು ಡಿಆರ್‌ಎಫ್‌ಒ ರವಿಕುಮಾರ್‌ ಮದ್ದೂರು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತ ಆರ್‌ಎಫ್‌ಒ ಬಿ.ಎಂ.ಮಲ್ಲೇಶ್‌, ಬೇರಂಬಾಡಿ ಗಸ್ತಿನಲ್ಲಿದ್ದ ವನಪಾಲಕ ನವೀನ್‌, ಮಂಜುನಾಥ ಮಡ್ಡಿ, ಕೃಷ್ಣರಾಜು, ಮಣಿಕಂಠ ನಂಜೇಗೌಡನ ಕಟ್ಟೆ ಬಳಿ ಗಸ್ತು ಕಾಯಲು ಹೇಳಿದ್ದಾರೆ.

ಗುಂಡಿನ ಶಬ್ದದ ಬಳಿಕ ಎಚ್ಚೆತ್ತ ಸಿಬ್ಬಂದಿಗಳು ಬ್ಯಾಟರಿ ಬೆಳಕಿನಲ್ಲಿ ಎಂಟತ್ತು ಜನ ಚೀಲ, ಪೊಟ್ಟ ಹಾಗೂ ಬಂದೂಕು ಹೊತ್ತುಕೊಂಡು ಬರುತ್ತಿದ್ದುದ್ದನ್ನು ಗಮನಿಸಿದರು. ಅರಣ್ಯ ಸಿಬ್ಬಂದಿ ಯಾರು ನಿಲ್ಲಿ ಎಂದು ಪ್ರಶ್ನಿಸಿದಾಗ, ಒಬ್ಬ ಬೇಟೆಗಾರ ತಾನು ಹಿಡಿದ ಬಂದೂಕು ತೋರಿಸಿ ನಮ್ಮನ್ನು ತಡೆಯಬೇಡಿ, ತಡೆದರೆ ಫೈರ್‌ ಮಾಡುತ್ತೇನೆ ಎಂದು ಗುಂಡು ಹಾರಿಸಿದ. ಗಸ್ತಿನ ಸಿಬ್ಬಂದಿಯೆಂದು ಅರಿತ ಬೇಟೆಗಾರರು ಅವರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದಾಗ, ಸಿಬ್ಬಂದಿಗಳು ಆತ್ಮ ರಕ್ಷಣೆಗಾಗಿ ಬೇಟೆಗಾರರ ಮೇಲೆ ಗುಂಡು ಹಾರಿಸಿದರು. ಓರ್ವ ನೆಲಕ್ಕೆ ಬಿದ್ದ. ಉಳಿದವರು ತಮ್ಮ ಬಳಿಯಿದ್ದ ಕಡವೆ ಮಾಂಸದ ಚೀಲ ಹಾಗೂ ಬಂದೂಕು ಬೀಸಾಕಿ ಪರಾರಿಯಾಗಿದ್ದಾರೆ.ಗುಂಡೇಟು ತಗುಲಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದ. ಚೀಲ ಪರಿಶೀಲಿಸಿದಾಗ 5 ಪ್ಲಾಸ್ಟಿಕ್‌ ಮತ್ತು ಕಡವೆಯ ಮೃತ ದೇಹದ ಮಾಂಸ ಹಾಗೂ ನಾಡ ಬಂದೂಕು ಸಿಕ್ಕಿದೆ. ಮೀಸಲು ಅರಣ್ಯಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಕಡವೆ ಬೇಟೆಯಾಡಿ ಮಾಂಸ ಸಾಗಾಣಿಕೆ ಮಾಡುತ್ತಿದ್ದವರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೊಲೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಗುಂಡ್ಲುಪೇಟೆ ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡೇಟಿಗೆ ಬಲಿಯಾದ ಭೀಮನಬೀಡು ಗ್ರಾಮದ ಮನು ಸೇರಿದಂತೆ 8 ರಿಂದ 10 ಮಂದಿಯ ಮೇಲೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅರಣ್ಯ ಇಲಾಖೆಯ ನವೀನ್‌ ನೀಡಿದ ಆಧಾರದ ಮೇಲೆ ಆರೋಪಿಗಳ ಮೇಲೆ ಐಪಿಸಿ 1980 (u/s-‌143,147,307,353,149);arms act,1959((u/s-3,25);wild life(protection) act 1972(u/s-9,27,31,51) ರಿತ್ಯಾ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

--------------

5ಜಿಪಿಟಿ2ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಬೇಟೆಗಾರರು ಕಡವೆಯನ್ನು ಕೊಂದು ಮೂರು ಭಾಗ ಮಾಡಿರುವುದು.

-----------

5ಜಿಪಿಟಿ3

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಗುಂಡಿಗೆ ಬಲಿಯಾದ ಮನು. 5ಜಿಪಿಟಿ4

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಅರಣ್ಯ ಸಿಬ್ಬಂದಿ ಗುಂಡಿಗೆ ಬಲಿಯಾದ ಸ್ಥಳದಲ್ಲಿ ಎಸ್ಪಿ ಪದ್ಮಿನಿ ಸಾಹು,ಎಎಸ್ಪಿ ಉದೇಶ್‌ ಇದ್ದಾರೆ.