ಸಾರಾಂಶ
ಓವರ್ ಲೋಡ್ ಟಿಪ್ಪರ್ ಸಂಚಾರ ಗುಂಡಿ ಬೀಳಲು ಪ್ರಮುಖ ಕಾರಣ । ಅಮಾಯಕರ ಪ್ರಾಣ ಹೋಗುವ ಮುನ್ನ ಎಚ್ಚೆತ್ತುಕೊಳ್ಳುವುದೇ ತಾಲೂಕು ಆಡಳಿತ?
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಹಿರೀಕಾಟಿ ಗೇಟ್ ಅಪಘಾತದ ತಾಣವಾಗಿದ್ದು, ಮತ್ತಷ್ಟು ಅವಘಡಗಳು ಸಂಭವಿಸುವ ಮುನ್ನ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ಅಮಾಯಕರ ಪ್ರಾಣ ಹೋಗುವುದು ಖಚಿತ. ಮೈಸೂರು-ಊಟಿ ಹೆದ್ದಾರಿಯ ಹಿರೀಕಾಟಿ ಗೇಟ್‌ನ ಬಳಿ ಮಳೆ ಬಂದಾಗ, ಕಬಿನಿ ನೀರಿನ ಪೈಪ್ ಒಡೆದು ಹೋದಾಗ ಹಾಗೂ ಗೇಟ್ ಬಳಿಯ ಕ್ರಷರ್ ನ ವೇಸ್ಟ್ ನೀರು ಹೆದ್ದಾರಿಯಲ್ಲಿ ನಿಂತು ಗುಂಡಿಗಳ ತಾಣವಾಗಿದೆ.
ಗುಂಡಿ ಬೀಳಲು ಮೇಲ್ಕಂಡ ಸಮಸ್ಯೆಗಳ ಜೊತೆಗೆ ಹಿರೀಕಾಟಿಯ ಕ್ರಷರ್‌ನಿಂದ ಎಂ.ಸ್ಯಾಂಡ್, ಜಲ್ಲಿಕಲ್ಲುಗಳನ್ನು ತುಂಬಿ ಮಿತಿಮೀರಿದ ಬಾರ ಹೊತ್ತು ಬರುವ ಟಿಪ್ಪರ್ ಗಳೂ ಕಾರಣವಾಗಿವೆ. ಹೆದ್ದಾರಿಯಲ್ಲಿ ಟಿಪ್ಪರ್‌ಗಳ ಈ ಓವರ್ ಲೋಡ್ ಓಡಾಟದಿಂದ ರಸ್ತೆಗೆ ಬಿದ್ದ ಜಲ್ಲಿ ಕಲ್ಲುಗಳಿಂದ ಬೈಕ್‌ಗಳು ಜಾರಿ ಬಿದ್ದು ಸವಾರರು ಗಾಯಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ , ರಸ್ತೆಯಲ್ಲಾ ಧೂಳುಮಯವಾಗಿ ಪ್ರಯಾಣಿಕರಿಗೆ ಓಡಾಡಲೂ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.ಕೇಳಿದ್ರೆ ಅವಾಜ್:
ಓವರ್ ಲೋಡ್ ಆದ ಟಿಪ್ಪರ್‌ಗಳು ಅತಿ ವೇಗವಾಗಿ ತೆರಳುವಾಗ ಸಣ್ಣ, ಪುಟ್ಟ ಕಲ್ಲು ಬಿದ್ದು ಕಾರಿನ ಗಾಜುಗಳು ಒಡೆದಿವೆ. ಟಿಪ್ಪರ್ ಅನ್ನು ತಡೆದು ಕೇಳಿದರೆ ಚಾಲಕರು ಅವಾಜ್ ಹಾಕುತ್ತಿದ್ದಾರೆ ಎಂದು ಪ್ರವಾಸಿಗ ಮೈಸೂರಿನ ಸಂಜಯ್ ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಹಿರೀಕಾಟಿ ಗೇಟ್ ಬಳಿ ಗುಂಡಿ ಬಿದ್ದು ಕಾರುಗಳು ಪೊಲೀಸ್ ಇಲಾಖೆ ಹಾಕಿರುವ ಬ್ಯಾರಿಕೇಡ್ ಗಳಿಗೆ ಗುದ್ದಿವೆ. ಬೈಕ್ ಸವಾರರು ಗುಂಡಿ ತಪ್ಪಿಸಲು ಹೋಗಿ ಬಿದ್ದು ಪೆಟ್ಟು ತಿಂದಿದ್ದಾರೆ. ಕೆಲವು ಕಾರುಗಳು ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ವಾಹನಕ್ಕೆ ಗುದ್ದಿರುವ ಉದಾಹರಣೆಗಳೂ ಇವೆ. ಗುಂಡಿಯಲ್ಲಿ ನೀರು ನಿಂತಾಗ ಹಾಗೂ ಮಳೆ ಬೀಳುವ ಸಮಯದಲ್ಲಂತೂ ವಾಹನಗಳ ಸವಾರರ ಕಷ್ಟ ಹೇಳತೀರದು ಎಂದು ಸವಾರ ಪುನೀತ್ ಹೇಳಿದ್ದಾರೆ. ಹಿರೀಕಾಟಿ ಗೇಟ್‌ನಲ್ಲಿ ಗುಂಡಿಗಳಾಗಲು ಕಾರಣ ಹುಡುಕಿ ಎಚ್ಚರಿಕೆ ಕೊಡುವ ಕೆಲಸ ಬೇಗೂರು ಪೊಲೀಸರು ಮಾಡಬೇಕಿತ್ತು, ಮಾಡಿಲ್ಲ. ಅಪಘಾತವಾದಾಗ ಕೂಗಾಡಿ ಹೋಗುತ್ತಾರೆ ಅಷ್ಟೆ! ಎಂದು ಹಿರೀಕಾಟಿ ಗ್ರಾಮದ ಯುವಕನೊಬ್ಬ ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.--------------------
ʼಹಿರೀಕಾಟಿ ಗೇಟ್ ಬಳಿ ಗುಂಡಿಗಳು ಬಿದ್ದು, ಸಂಚಾರಕ್ಕೆ ಅಡಚಣೆ ಆಗುತ್ತಿರುವ ಬಗ್ಗೆ ಎನ್‌ಎಚ್‌ಎಐ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಎನ್‌ಎಚ್‌ಎಐ ಅಧಿಕಾರಿಗಳು ವಿಸಿಟ್ ಕೂಡ ಮಾಡಿದ್ದಾರೆ. ಗುಂಡಿ ಮುಚ್ಚುವುದಾಗಿ ಹೇಳಿದ್ದಾರೆ. ಮತ್ತೊಮ್ಮೆ ಮಾತನಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.-ವಿ.ಸಿ. ವನರಾಜು, ಬೇಗೂರು ಸರ್ಕಲ್ ಇನ್ಸ್‌ಪೆಕ್ಟರ್
--------------------ʼಹಿರೀಕಾಟಿ ಗೇಟ್ ಬಳಿ ಓವರ್ ಲೋಡ್ ಟಿಪ್ಪರ್‌ಗಳಿಗೆ ಕಡಿವಾಣ ಹಾಕಬೇಕು. ಕ್ರಷರ್ ವೇಸ್ಟ್ ನೀರು/ಸ್ಲರಿ ಬಸ್ ಶೆಲ್ಟರ್ ಹಿಂಬದಿ ಬರುವುದನ್ನು ನಿಲ್ಲಿಸಬೇಕು. ಓವರ್ ಲೋಡ್ ಸಂಚಾರಕ್ಕೆ ಬ್ರೇಕ್ ಹಾಕುವ ತನಕ ಗುಂಡಿ ಬೀಳುವುದನ್ನು ತಡೆಯಲು ಸಾಧ್ಯವಿಲ್ಲ. ಪೊಲೀಸರು ಆ ಕೆಲಸ ಮಾಡುವವರೆಗೂ ಹಿರೀಕಾಟಿ ಗೇಟ್ ಅಪಘಾತ ವಲಯವಾಗಿಯೇ ಉಳಿಯಲಿದೆ’
-ಹಿರೀಕಾಟಿ, ದೊಡ್ಡಹುಂಡಿ, ವಿದ್ಯಾರ್ಥಿಗಳು-
೧೦ಜಿಪಿಟಿ೩ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್(ಮೈಸೂರು-ಊಟಿ ಹೆದ್ದಾರಿ) ಮುಂದೆ ಗುಂಡಿಗಳು ಬಿದ್ದಿರುವುದು.
೧೦ಜಿಪಿಟಿ೪ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್ ಮುಂದಿನ ಹೆದ್ದಾರಿಯಲ್ಲಿ ಬ್ಯಾರಿಕ್ಯಾಡ್ ರಸ್ತೆಯ ಮಧ್ಯೆ ಇರುವುದು.