ಕಾಂತರಾಜು ಸಮೀಕ್ಷಾ ವರದಿ ಬಗ್ಗೆ ಬೇಡ ಆತಂಕ - ಶೋಷಿತರು, ವಂಚಿತ ಸಮುದಾಯಗಳಿಗೆ ಅವಕಾಶ, ಅನುಕೂಲಗಳು ಹಂಚಿಕೆ ಅಗತ್ಯ

| N/A | Published : Apr 17 2025, 11:19 AM IST

HM revanna
ಕಾಂತರಾಜು ಸಮೀಕ್ಷಾ ವರದಿ ಬಗ್ಗೆ ಬೇಡ ಆತಂಕ - ಶೋಷಿತರು, ವಂಚಿತ ಸಮುದಾಯಗಳಿಗೆ ಅವಕಾಶ, ಅನುಕೂಲಗಳು ಹಂಚಿಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

 ನಾಡಿನ ಎಲ್ಲ ಸಮುದಾಯಗಳ ಜನರಿಗೂ ಸಾಮಾಜಿಕ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ 165 ಕೋಟಿ ರುಪಾಯಿ ವೆಚ್ಚದಲ್ಲಿ 1.60 ಲಕ್ಷ ಅಧಿಕಾರಿ ಮತ್ತು ಸಿಬ್ಬಂದಿ 5,98,14,942 ಜನರನ್ನು ಸಂದರ್ಶಿಸಿ ಸಿದ್ಧಪಡಿಸಿರುವ ವರದಿಯು ಸಾರ್ಥಕತೆ ಆಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ.

-ಎಚ್.ಎಂ.ರೇವಣ್ಣ ಅಧ್ಯಕ್ಷರು: ಕರ್ನಾಟಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ.

ರಾಜಕೀಯವಾಗಿ ಏನೇ ಆರೋಪ-ಪ್ರತ್ಯಾರೋಪಗಳಿರಬಹುದು. ಆದರೆ ನಾಡಿನ ಎಲ್ಲ ಸಮುದಾಯಗಳ ಜನರಿಗೂ ಸಾಮಾಜಿಕ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ 165 ಕೋಟಿ ರುಪಾಯಿ ವೆಚ್ಚದಲ್ಲಿ 1.60 ಲಕ್ಷ ಅಧಿಕಾರಿ ಮತ್ತು ಸಿಬ್ಬಂದಿ 5,98,14,942 ಜನರನ್ನು ಸಂದರ್ಶಿಸಿ ಸಿದ್ಧಪಡಿಸಿರುವ ವರದಿಯು ಸಾರ್ಥಕತೆ ಆಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಕಾಂತರಾಜ ಆಯೋಗ ವರದಿ’ಯನ್ನು ಸಚಿವ ಸಂಪುಟದ ಮುಂದೆ ಇಡಲಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಾಗಿದ್ದ ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಮಾಡಿಸಿತ್ತು. ಆದರೆ ಸಮೀಕ್ಷೆ ಮುಗಿದು ವರದಿ ಸಲ್ಲಿಕೆ ಆಗುವುದರೊಳಗೆ ಭಾಜಪ ನೇತೃತ್ವದ ಸರ್ಕಾರ ಬಂದಿತ್ತು. ನಂತರ ಬಂದ ಸರ್ಕಾರ ಕಾಂತರಾಜ ಆಯೋಗದ ಸಮೀಕ್ಷಾ ವರದಿಯನ್ನು ನಿರ್ಲಕ್ಷಿಸಿದವು. ಮತ್ತೆ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು. ಆದಾಗ ಜಯಪ್ರಕಾಶ್ ಹೆಗ್ಗಡೆ ನೇತೃತ್ವದ ಆಯೋಗ ವರದಿ ಮಂಡಿಸಿತು. ಹೀಗಾಗಿ ಕಾಂತರಾಜ ಆಯೋಗದ ಸಮೀಕ್ಷಾ ವರದಿಗೆ ಮತ್ತೆ ಜೀವ ಬಂದಿದೆ.

ತಪ್ಪು ಮಾಹಿತಿಯ ಸೋರಿಕೆ

ಸಮೀಕ್ಷೆ ಇನ್ನೂ ಬಿಡುಗಡೆಗೊಂಡಿಲ್ಲ, ಅದಾಗಲೇ ಸೋರಿಕೆಯಾಗಿರುವ ಮಾಹಿತಿ ಆಧರಿಸಿ ವಿರೋಧಗಳು ವ್ಯಕ್ತವಾಗುತ್ತಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿರುವ ಕೆಲ ಜಾತಿಗಳು ‘ಜಾತಿಗಣತಿಯ ಬಗ್ಗೆ ‘ಚ’ಕಾರವೆತ್ತಿವೆ. ಸೋರಿಕೆ ಆಗಿರುವ ಅಂಕಿ-ಅಂಶಗಳ ಪ್ರಕಾರ ದಲಿತರು ಈ ರಾಜ್ಯದಲ್ಲಿ ಅತಿ ದೊಡ್ಡ ಜನಸಂಖ್ಯೆಯಾಗಿದ್ದಾರೆ ಎನ್ನುವುದನ್ನು ಹೇಳಲಾಗುತ್ತಿದೆ. ಕೆಲವರು ‘ಮುಸ್ಲಿವರು ನಂ.1’ ಎಂದು ದಾರಿ ತಪ್ಪಿಸುತ್ತಿದ್ದಾರೆ. ಇವೆಲ್ಲವೂ, ಜಾತಿ ಆಧಾರಿತ ಸಮೀಕ್ಷಾ ವರದಿಯ ವಿರುದ್ಧ ಜನರನ್ನು ಪ್ರಚೋದಿಸಲು ನಡೆಸುತ್ತಿರುವ ಸಂಚು ಎಂಬುದನ್ನು ನಾಡಿನ ಜನ ಅರಿಯಬೇಕಿದೆ.

ಮುಸ್ಲಿಂ ಸಮುದಾಯದಲ್ಲಿಯೇ ಮುಖ್ಯವಾಗಿ ಸುನ್ನಿ, ಶಿಯಾ, ಅಹ್ಮದೀಯ ಎನ್ನುವ ಪಂಗಡಗಳಿವೆ. ಅದರಲ್ಲಿ ಮತ್ತೆ ಶೇಖ್, ಮುಘಲ್, ಸೈಯದ್, ಪಠಾಣ್, ಖಾನ್, ಖಾದ್ರಿ, ಫರಾಸ್, ಮಿರ್ಜಾ, ಅಹ್ಮದಿ, ನಕ್ಷಬಂದಿ, ಹೀಗೆ 90ಕ್ಕೂ ಹೆಚ್ಚು ಜಾತಿಗಳು ಬರುತ್ತವೆ. ಅವರಲ್ಲೂ ಸಾಕಷ್ಟು ಜನರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ, ಅದೆಲ್ಲಾ ಹೋಗಲಿ... ಶಿಕ್ಷಣದಿಂದ ಸಾಕಷ್ಟು ಮುಸ್ಲಿಮರು ವಂಚಿತರಾಗಿದ್ದಾರೆ. ಸಾಕಷ್ಟು ಜನರು ಇಂದಿಗೂ ಸಣ್ಣಪುಟ್ಟ ಕೆಲಸ, ಭಿಕ್ಷಾಟನೆ ಮಾಡಿ ತಮ್ಮ ಒಂದ್ದೊತ್ತಿನ ತುತ್ತಿಗಾಗಿ ಹೆಣಗಾಡುತ್ತಿದ್ದಾರೆ. ಇದನ್ನು ಕೂಡ ತಳ್ಳಿ ಹಾಕುವಂತಿಲ್ಲ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಇದೀಗ ‘ಜಾತಿ ಜನಗಣತಿ’ಯಾಗಿ ಗುರುತಿಸಿಕೊಂಡಿದೆ. ರಾಜ್ಯದಲ್ಲಿರುವ ವಿವಿಧ ಜಾತಿಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಸಮೀಕ್ಷೆ ವರದಿ ಇನ್ನೂ ಅಧಿಕೃತವಾಗಿ ಹೊರಬೀಳಬೇಕಿದೆ. ವರದಿಯ ಬಗ್ಗೆ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರಿಂದ ರಾಜಕೀಯವಾಗಿ ಯಾರಿಗೆ ಲಾಭ ಎನ್ನುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.

ದಯವಿಟ್ಟು ವರದಿ ಅಭ್ಯಸಿಸಿ

ಜಾತಿ ವಿನಾಶ ಆಗಬೇಕೆಂಬುದು ಅಂಬೇಡ್ಕರ್‌ ಅವರ ಹಾಗೂ ಸಂವಿಧಾನದ ಆಶಯ. ಹೀಗಿರುವಾಗ ಜಾತಿಗಣತಿ ಯಾಕೆ ಬೇಕು? ಎಂಬುದು ಕೆಲವರ ಪ್ರಶ್ನೆ. ಆದರೆ ಈ ದೇಶದಲ್ಲಿ ಜಾತಿ ಎಂಬುದು ನಿರಾಕರಿಸಲಾಗದ ಸತ್ಯ. ಎಲ್ಲಿಯವರೆಗೂ ಜಾತಿವಿನಾಶ ಆಗಿ ‘ಮನುಜ ಕುಲಂ ಒಂದೇ ವಲಂ’ ಆಗುವುದಿಲ್ಲವೋ ಅಲ್ಲಿಯವರೆಗೂ ಶೋಷಿತ ಜಾತಿ, ದುರ್ಬಲ ವರ್ಗ ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ, ಅನುಕೂಲಗಳು ಹಂಚಿಕೆಯಾಗಬೇಕು. ಇದೇ ಸಾಮಾಜಿಕ ನ್ಯಾಯ. ಆದರೆ ಜಾತಿಗ್ರಸ್ಥ ಬಲಾಢ್ಯ ವರ್ಗದವರು ಈಗ ಬಳಸಿಕೊಳ್ಳುತ್ತಿರುವ ಸರಕಾರಿ ಸವಲತ್ತುಗಳು ಹಾಗೂ ಯೋಜನೆಗಳ ಪ್ರಯೋಜನೆಗಳನ್ನು ಶೋಷಿತ ಜಾತಿ ಸಮುದಾಯಗಳಿಗೆ ಬಿಟ್ಟು ಕೊಡಲು ಸಿದ್ಧರಿಲ್ಲ ಅನಿಸುತ್ತದೆ. ಹೀಗಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಪ್ರಬಲವಾಗಿರುವ ಜಾತಿ ಜನಾಂಗದ ನಾಯಕರು, ಮಠ ಪೀಠಗಳ ಸ್ವಾಮಿಗಳು, ಜಾತಿವಾದಿಗಳಾಗಿ ಕಾಂತರಾಜ ಆಯೋಗ ಮತ್ತು ಜಯಪ್ರಕಾಶ್ ಹೆಗ್ಗಡೆ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯನ್ನು ಅಧ್ಯಯನಿಸದೆ ವಿರೋಧಿಸಬಾರದೆಂಬ ವಿನಮ್ರ ಮನವಿ ನನ್ನದಾಗಿದೆ.

ಕೆಲವು ಪಟ್ಟಭದ್ರ ಹಿತಾಸಕ್ತಿ ಉಳ್ಳವರು ನೇರವಾಗಿ ವಿರೋಧಿಸಿದರೆ ದಲಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಹೊಂದಿದ್ದಾರೆ. ಇದರ ಪರಿಣಾಮವನ್ನು ಚುನಾವಣೆಗಳಲ್ಲಿ ಅನುಭವಿಸಬೇಕಾಗುತ್ತದೆ ಎನ್ನುವ ಆತಂಕವನ್ನು ಹೊಂದಿದಂತೆ ಕಾಣುತ್ತಿದೆ. ಹೀಗಾಗಿ ಬಹಿರಂಗವಾಗಿ ಕಾಂತರಾಜ ಆಯೋಗದ ವರದಿ ಬೇಡವೇ ಬೇಡ ಎಂದು ಹೇಳಲಾಗದೆ ವೈಜ್ಞಾನಿಕವಾಗಿ ಗಣತಿ ಮಾಡಲಾಗಿಲ್ಲ, ದತ್ತಾಂಶಗಳು ಸರಿಯಾಗಿಲ್ಲ ಎಂಬ ನೆಪವನ್ನು ಬೆದರಿಕೆ ರೂಪದಲ್ಲಿ ಹೂಡುತ್ತಿದ್ದಾರೆ. ಇಂತಹವರಿಗೆ ಹೇಗಾದರೂ ಮಾಡಿ ಆಯೋಗದ ವರದಿ ಮಂಡನೆ ಆಗದಂತೆ ನೋಡಿಕೊಳ್ಳುವ ಪ್ರಯತ್ನಗಳು ಕೆಲವು ನಾಯಕರುಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಇದೆ.

ನಮ್ಮ ನಾಡು ಹಿಂದುಳಿದಿದೆಯೆಂದರೆ, ಇಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಜಾತಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ. ಅವರು ಮುಂದೆ ಬರುವುದನ್ನು ಇಷ್ಟಪಡದ ಶಕ್ತಿಗಳು, ಹಿಂದುಳಿದ ವರ್ಗಗಳ ಆಯೋಗದ ವರದಿಯ ವಿರುದ್ಧ ಸಂಘಟಿತವಾಗಿ ನಿಂತಿದೆ. ‘ಸಮೀಕ್ಷೆಯೇ ಸರಿಯಿಲ್ಲ’ ಎಂದು ಹೇಳುತ್ತಿರುವ ಜನರು ಕೂಡ, ಭವಿಷ್ಯದಲ್ಲಿ ಯಾವುದೇ ಹೊಸ ವರದಿಯನ್ನು ಒಪ್ಪಲಾರರು ಎನಿಸುತ್ತದೆ. ನಮ್ಮ ನಾಡಿನಲ್ಲಿ ಜಾತಿ ಅಸಮಾನತೆ ಶಾಶ್ವತವಾಗಿ ಉಳಿಯಬೇಕೆಂಬ ಅಪೇಕ್ಷೆಯೂ ಇದ್ದಂತಿದೆ.

ವರದಿಯ ಉದ್ದೇಶ ಸೌಲಭ್ಯ ಹಂಚಿಕೆ ಅಷ್ಟೇ

ರಾಜಕೀಯವಾಗಿ ಏನೇ ಆರೋಪ-ಪ್ರತ್ಯಾರೋಪಗಳಿರಬಹುದು. ಆದರೆ ನಾಡಿನ ಎಲ್ಲ ಸಮುದಾಯಗಳ ಜನರಿಗೂ ಸಾಮಾಜಿಕ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ 165 ಕೋಟಿ ರುಪಾಯಿ ವೆಚ್ಚದಲ್ಲಿ 1.60 ಲಕ್ಷ ಅಧಿಕಾರಿ ಮತ್ತು ಸಿಬ್ಬಂದಿ 5,98,14,942 ಜನರನ್ನು ಸಂದರ್ಶಿಸಿ ಸಿದ್ಧಪಡಿಸಿರುವ ವರದಿಯು ಸಾರ್ಥಕತೆ ಆಗಬೇಕು ಎನ್ನುವುದೇ ನಮ್ಮ ಆಶಯವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿ-ಗತಿಗಳನ್ನು ಅರಿಯಲು ಇರುವ ಪ್ರಮುಖ ಮಾನದಂಡವೆಂದರೆ ಅದು ಸಮೀಕ್ಷಾ ವರದಿ ಮಾತ್ರ. ಇದರಿಂದಾಗಿ ಯೋಜನೆಗಳ ಸೌಲಭ್ಯಗಳನ್ನು ಹಂಚಿಕೆ ಮಾಡುವುದು ಸುಲಭವಾಗುತ್ತದೆ. ಸಾಮಾಜಿಕ ನ್ಯಾಯದ ಜಾರಿಗೆ ಸಹಕಾರಿಯಾಗುತ್ತದೆ. ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯ ಉದ್ದೇಶವೇ ಹಿಂದುಳಿದ ಜಾತಿ ಸಮುದಾಯಗಳ ಜನಸಂಖ್ಯೆ ಆಧರಿಸಿ ಸೂಕ್ತ ಮೀಸಲಾತಿ ಹಂಚಿಕೆ ಮಾಡುವುದಾಗಿದೆ. 

ಹಾಗೆಯೇ ಸರ್ಕಾರಿ ಸೌಲಭ್ಯಗಳನ್ನು ಶೋಷಿತ ಸಮುದಾಯಗಳಿಗೆ ಹಂಚಿಕೆ ಮಾಡುವುದಾಗಿದೆ. ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗಗಳಲ್ಲಿ ಪಾಲು ನೀಡುವುದಾಗಿದೆ. ದುರ್ಬಲ ವರ್ಗದವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದಾಗಿದೆ. ಸಾಮಾಜಿಕ ರಚನೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದಾಗಿದೆ. ಇಂತಹ ಔನ್ನತ್ಯ ಸದುದ್ದೇಶದ ‘ಜಾತಿಗಣತಿ’ ವಿರೋಧಿಸುವವರು ಸಾಮಾಜಿಕ ನ್ಯಾಯದ ವಿರೋಧಿಗಳೆಂಬಂತೆ ಬಿಂಬಿತರಾಗ ಬಿಡಲಿದ್ದಾರೆ. ಕಾಂತರಾಜ ಆಯೋಗದ ವರದಿಗೆ ವಿರೋಧ ಬಿಡಿ, ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ. ಅಧ್ಯಯನ ನಡೆಸಲು ಉಪಸಮಿತಿ ರಚಿಸಿ ವಿಶೇಷ ಅಧಿವೇಶನ ಕರೆದು ಚರ್ಚೆಗೊಳಪಡಿಸಿ ಆರೋಗ್ಯಪೂರ್ಣ ಚರ್ಚೆ ಮಾಡಿ... ಸರ್ವರಿಗೂ ಸಮಪಾಲು ಎಂಬ ಬಾಬಾ ಸಾಹೇವ್ ಅಂಬೇಡ್ಕರ್ ಅವರ ಆಶಯವನ್ನು ಸಾಕಾರಗೊಳಿಸಿ.