ಸಾರಾಂಶ
ಇತ್ತೀಚೆಗೆ ಮನುಷ್ಯ ವಿಕೃತಿಯ ವಿಶ್ವ ರೂಪ ವರದಿ ಆಗುತ್ತಿದೆ. ಭಾರತೀಯರು ಪವಿತ್ರ ಎಂದು ಪೂಜಿಸುವ ಪ್ರಾಣಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆಯುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ.
ಇತ್ತೀಚೆಗೆ ಮನುಷ್ಯ ವಿಕೃತಿಯ ವಿಶ್ವ ರೂಪ ವರದಿ ಆಗುತ್ತಿದೆ. ಭಾರತೀಯರು ಪವಿತ್ರ ಎಂದು ಪೂಜಿಸುವ ಪ್ರಾಣಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆಯುತ್ತಿರುವ ಜನರು ಹೆಚ್ಚುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಮದ್ಯದ ನಶೆ, ಮತೀಯ ದ್ವೇಷ, ವಿಕೃತ ಮನಸ್ಥಿತಿ ಕಾರಣಗಳು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು, ಮನಶಾಸ್ತ್ರಜ್ಞರು.
ಕ್ರೌರ್ಯದ ಪ್ರಕರಣಗಳು
1.ಕಳೆದ ಜ.12ರ ಮುಂಜಾನೆ ಸುಮಾರು 3 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನರದ ಓಲ್ಡ್ ಪೆನ್ಷನ್ ಮೊಹಲ್ಲಾದ ರಸ್ತೆ ಬದಿ ಶೆಡ್‌ನಲ್ಲಿ ಕಟ್ಟಲಾಗಿದ್ದ ಮೂರು ಸೀಮೆ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮರೆಯಲಾಗಿತ್ತು. ಮೂಕಪ್ರಾಣಿಗಳ ಮೇಲಿನ ಈ ಕ್ರೌರ್ಯ ಘಟನೆ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಹಸುಗಳ ಮಾಲೀಕ ಕರ್ಣ ಎಂಬುವವರು ನೀಡಿದ ದೂರಿನ ಮೇರೆಗೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 325 ಅಡಿ ಎಫ್‌ಐಆರ್ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಬಿಹಾರದ ಚಂಪಾರಾಣ್ ಮೂಲದ ಸೈಯದ್ ನಸ್ರು(30) ಎಂಬಾತನನ್ನು ಬಂಧಿಸಿದ್ದರು.
ಬಂಧಿತ ಆರೋಪಿ ಸೈಯದ್ ನಸ್ರು ಹಲವು ವರ್ಷಗಳಿಂದ ಘಟನಾ ಸ್ಥಳದ ಸುಮಾರು 50 ಮೀಟರ್ ದೂರದ ಪ್ಲಾಸ್ಟಿಕ್ ಬ್ಯಾಗ್ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ. ಮದ್ಯದ ನಶೆಯಲ್ಲಿ ಬ್ಲೇಡ್‌ನಿಂದ ಮೂರು ಹಸುಗಳ ಕೆಚ್ಚಲು ಕೊಯ್ದು ಪರಾರಿಯಾಗಿದ್ದ. ಈತನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
2.ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದ ಕೊಂಡಾಕುಳಿಯಲ್ಲಿ ಜನವರಿ 18ರಂದು ಮೇಯಲು ಬಿಟ್ಟ ಗರ್ಭ ಧರಿಸಿದ ಹಸುವಿನ ತಲೆ, ಕಾಲು ಕತ್ತರಿಸಿ ಹತ್ಯೆ ಮಾಡಲಾಗಿತ್ತು. ಗರ್ಭದಲ್ಲಿದ್ದ ಭ್ರೂಣವನ್ನೂ ಹೊರ ತೆಗೆದು ಹತ್ಯೆ ಮಾಡಲಾಗಿತ್ತು. ಆರೋಪಿಗಳನ್ನು ಬಂಧಿಸಿದಾಗ ಮಾಂಸ ಮಾರಾಟಕ್ಕಾಗಿ ಕೃತ್ಯ ಎಸಗಿದ್ದು ಬೆಳಕಿಗೆ ಬಂದಿತ್ತು.
3. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕನೀರ ಎಂಬಲ್ಲಿ ವೆಂಕಟಾಪುರ ನದಿ ತೀರದಲ್ಲಿ ಹಸುವಿನ ಅಂಗಾಂಗಗಳು, ಹತ್ಯೆ ಮಾಡಿದ ಭ್ರೂಣವನ್ನು ತುಂಬಿದ ಗೋಣಿಚೀಲ ಪತ್ತೆಯಾಗಿತ್ತು. ಚೀಲವನ್ನು ನಾಯಿ ಎಳೆದಾಡುತ್ತಿದ್ದಾಗ ಜನರು ಚೀಲದಲ್ಲಿ ಏನಿದೆ ಎಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ಏಪ್ರಿಲ್ 2025ರಲ್ಲಿ ಈ ಘಟನೆ ನಡೆದಿತ್ತು.
4. ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಜೂ.21ರಂದು ಜಮೀನಿಗೆ ಮೇಯಲು ಬಂದ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಯ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಹಸು ಮೃತಪಟ್ಟಿತು. ಸೂಲಿವಾರ ಗ್ರಾಮದ ಹಾಲಿನ ಡೇರಿ ಅಧ್ಯಕ್ಷ ಮರಿಬಸವಯ್ಯ ಹಸು ಅದೇ ಗ್ರಾಮದ ಗುರುಸಿದ್ದಪ್ಪ ಜಮೀನಿನಲ್ಲಿ ಮೇಯುತ್ತಿದ್ದಾಗ ಕಿಡಿಗೇಡಿಗಳು ಮಚ್ಚಿನಿಂದ ಹಸುವಿನ ಕೆಚ್ಚಲನ್ನು ಕೊಯ್ದಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ಡೇರಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮರಿಬಸವಯ್ಯ ಮತ್ತು ಗುರುಸಿದ್ದಪ್ಪ ನಡುವೆ ವೈಮನಸ್ಸು ಏರ್ಪಟ್ಟಿತು. ಹೀಗಾಗಿ ಗುರುಸಿದ್ದಪ್ಪ ವಿರುದ್ಧ ಮರಿಬಸವಯ್ಯ ಅವರು ಹಸುವಿನ ಕೆಚ್ಚಲು ಕೊಯ್ದಿರುವ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಹಸುಗಳ ಮೇಲಿನ ಕ್ರೌರ್ಯಕ್ಕೆ ಹಲವು ಕಾರಣ
ಮೂಕಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯಲು ಹಲವು ಕಾರಣಗಳಿವೆ. ಮದ್ಯದ ನಶೆ, ಗಾಂಜಾ ನಶೆ, ವೈಯಕ್ತಿಕ ದ್ವೇಷ-ಅಸೂಯೆ, ಮತೀಯ ಕಾರಣಗಳಿಂದ ದುಷ್ಟರು ಹಸುಗಳ ಮೇಲೆ ಕ್ರೌರ್ಯ ಮೆರೆಯುತ್ತಾರೆ. ಇಲ್ಲಿ ಒಂದೊಂದು ಘಟನೆಗೂ ಪ್ರತ್ಯೇಕ ಕಾರಣಗಳಿರುತ್ತವೆ. ಕೆಲವರು ಮದ್ಯ, ಗಾಂಜಾ ಇತರೆ ಮಾದಕ ವಸ್ತುಗಳನ್ನು ಸೇವಿಸಿ ಹೋಗುವಾಗ ಬಿಡಾಡಿ ದನ, ರಸ್ತೆ ಬದಿ ಕಟ್ಟಲಾದ ಹಸುಗಳ ಕೆಚ್ಚಲು ಕೊಯ್ಯುವುದು, ಹಲ್ಲೆ ನಡೆಸುವುದು, ಕಾಲು ಕತ್ತರಿಸುವುದು ಸೇರಿ ಇತರೆ ವಿಕೃತಿ ಮೆರೆಯುತ್ತಾರೆ. ಕೆಲ ಪ್ರಕರಣಗಳಲ್ಲಿ ಕಿಡಿಗೇಡಿಗಳು ಹಸುಗಳ ಮಾಲೀಕರ ಮೇಲಿನ ವೈಯಕ್ತಿಕ ದ್ವೇಷ-ಅಸೂಯೆ ತೀರಿಸಿಕೊಳ್ಳಲು ಮೂಕ ಹಸುಗಳ ಮೇಲೆ ಕ್ರೌರ್ಯ ಸಾಧಿಸುತ್ತಾರೆ. ಕೆಲ ಬಾರಿ ಮತೀಯ ಕಾರಣಗಳಿಗೂ ಗೋವುಗಳ ಮೇಲೆ ರಾಕ್ಷಸಿ ಕೃತ್ಯ ಎಸಗಿರುವ ನಿದರ್ಶನಗಳಿವೆ. ಇಂತಹ ಹೇಯ ಕೃತ್ಯ ಎಸಗುವವರ ಮನಸ್ಥಿತಿ ವಿಕೃತವಾಗಿರುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಐದು ವರ್ಷ ಜೈಲು ಶಿಕ್ಷೆ
ಪ್ರಾಣಿಗಳನ್ನು ಕೊಲ್ಲುವುದು, ಹಲ್ಲೆ ಮಾಡುವುದು, ಅಂಗವಿಕಲಗೊಳಿಸುವುದು, ನಿಷ್ಪ್ರಯೋಜಕಗೊಳಿಸುವುದು ಮಾಡಿದರೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 325 ಅಡಿ ಎಫ್‌ಐಆರ್ ದಾಖಲಿಸಲಾಗುತ್ತದೆ. ಅಂಥ ವ್ಯಕ್ತಿಗೆ ಐದು ವರ್ಷಗಳ ವರೆಗೆ ವಿಸ್ತರಿಸಬಹುದಾದ(ಕಠಿಣ ಅಥವಾ ಸರಳ) ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಅಂತೆಯೇ ಇಂತಹ ಘಟನೆಗಳ ಸಂಬಂಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲು ಅವಕಾಶವಿದೆ. ಈ ಕಾಯ್ದೆಯಡಿ ತಪ್ಪಿತಸ್ಥನಿಗೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ಯಾಡಿಸ್ಟ್ ಮನಸ್ಥಿತಿಯ ಬುದ್ದಿವಂತ ವ್ಯಕ್ತಿಯ ಕೃತ್ಯ: ಡಾ। ಕೆ.ಅರ್.ಶ್ರೀಧರ್
ಇದೊಂದು ಸ್ಯಾಡಿಸ್ಟ್ ಮನಸ್ಥಿತಿಯ ವ್ಯಕ್ತಿತ್ವ. ಚಿಕ್ಕ ವಯಸ್ಸಿನಲ್ಲಿ ಪೋಷಕರಿಂದ ತೀವ್ರ ನೋವು, ಅಪಮಾನ ಅನುಭವಿಸಿದವರ ಮನಸಿನಲ್ಲಿ ಸುಪ್ತವಾಗಿ ಉಳಿದ ದ್ವೇಷ ಹದಿ ಹರೆಯಕ್ಕೆ ಬಂದಾಗ ಹೊರಬರುವ ಮನಸ್ಥಿತಿಯಿಂದ ನಡೆಸುವ ಕೃತ್ಯ ಎಂದು ಶಿವಮೊಗ್ಗದ ಖ್ಯಾತ ಮನಶಾಸ್ತ್ರಜ್ಞ ಡಾ. ಕೆ. ಅರ್. ಶ್ರೀಧರ್ ಅಭಿಪ್ರಾಯಪಡುತ್ತಾರೆ.
ತಾನು ಮಾಡುವ ಕೆಲಸ ಬೇರೆಯವರಿಗೆ ಹಿಂಸೆಯಾದಾಗ ಒಳಗೊಳಗೇ ಅನುಭವಿಸುವ ಖುಷಿ. ಒಂದು ರೀತಿಯಲ್ಲಿ ವಿಕೃತಾನಂದ. ತನ್ನ ಸುಪ್ತ ಮನಸ್ಸನ್ನು ತೃಪ್ತಿ ಪಡಿಸಿಕೊಳ್ಳುವ ರೀತಿ. ಇಂತಹ ಕೃತ್ಯ ನಡೆಸುವಾಗ ವಿರೋಧ ವ್ಯಕ್ತಪಡಿಸದ, ಸುಲಭವಾಗಿ ಸಿಗುವ ಜೀವಿ ಎಂದರೆ ಅದು ಹಸು ಮತ್ತು ಸುಲಭದ ಭಾಗ ಕೆಚ್ಚಲು. ಹಸು ಅಥವಾ ಎಮ್ಮೆ ಹೀಗೆ ತಪ್ಪಿಸಿಕೊಳ್ಳದ ಪ್ರಾಣಿಯಾದರೆ ಇವರಿಗೆ ಅದೇ ಸಾಕು. ಇನ್ನೊಂದು ಮುಖ್ಯ ಅಂಶವೆಂದರೆ ಈ ಪ್ರಾಣಿಗಳು ತಾವು ಪ್ರತಿರೋಧ ತೋರುವುದಿಲ್ಲ ಮತ್ತು ದೂರನ್ನೂ ಕೊಡದ ಮೂಕ ಪ್ರಾಣಿಗಳು. ಇಂತಹ ಕೃತ್ಯ ನಡೆಸಿದ ಬಳಿಕ ಈ ಕೃತ್ಯದ ಆರೋಪ ಬೇರೆಯವರ ಮೇಲೆ ಸುಲಭವಾಗಿ ಹೋಗಿ ತಾವು ತಪ್ಪಿಸಿಕೊಳ್ಳಬಹುದು ಎಂಬುದು. ಸಹಜವಾಗಿಯೇ ಇಂತಹ ವ್ಯಕ್ತಿಗಳು ಬುದ್ದಿವಂತರಾಗಿರುತ್ತಾರೆ ಎನ್ನುತ್ತಾರೆ ಶ್ರೀಧರ್.
ಸಾಮಾಜಿಕ ಬದ್ಧತೆ ಇಲ್ಲದವರ ವರ್ತನೆ
ಜೀವಿಸುವ ಪ್ರೇರಣೆ (life initinet) ಯಿಂದ ವಿಮುಖವಾದ ನೈತಿಕ ಪ್ರಜ್ಞೆ ಕುಸಿದ, ಸಾಮಾಜಿಕ ಬದ್ಧತೆ ಇಲ್ಲದ, ಗುಂಪುಗಾರಿಕೆಯ ವರ್ತನೆ(Crowd bihavior) ಯ ಪ್ರಭಾವಕ್ಕೆ ಒಳಗಾದಾಗ ಕೆಲವರು de individnatior (ತನ್ನತನ ಕಳೆದುಕೊಳ್ಳುವ) ಪ್ರಕ್ರಿಯೆಗೆ ಒಳಗಾಗಿ ವೆಂಡಲಿಜಂ, ಅಗ್ರೇಶನ್ ಮತ್ತು ಮಾಬ್ ವಯಲನ್ಸ್‌ನಂಥ ಹೀನ ಕೃತ್ಯಗಳಿಗೆ ಎಳೆಸುತ್ತಾರೆ. ಇವರಲ್ಲಿ ಸಮಾಜಪರ (Prosocial behavior) ವರ್ತನೆಯನ್ನು ರೂಪಿಸುವ ಅವಶ್ಯಕತೆ ಇದೆ.
-ಎಸ್.ಆರ್.ಮೂಗನವರಮಠ, ಪ್ರಾಧ್ಯಾಪಕರು, ಮನೋವಿಜ್ಞಾನಿ.