ಸಾರಾಂಶ
ಇದೀಗ ಕನ್ನಡದ ಕತೆ, ಕಾದಂಬರಿಗಳು ವಿಶ್ವಮನ್ನಣೆ ಪಡೆಯುತ್ತಿವೆ. ಅನುವಾದಗೊಂಡು ಎಲ್ಲೆಲ್ಲೂ ಸಿಗುತ್ತಿವೆ. ಇದು ಆರಂಭದ ಹೆಜ್ಜೆ. ಮುಂಬರುವ ದಿನಗಳಲ್ಲಿ ಹೊಸ ತಲೆಮಾರಿನ ಅನುವಾದಕರು ಕನ್ನಡ ಕೃತಿಗಳನ್ನು ಅನುವಾದಿಸಿ ಲೋಕಕ್ಕೆ ತಲುಪಿಸಬಹುದು
ಹಿಂದೆ ಸಾಹಿತ್ಯದ ನೊಬೆಲ್ ನಿರೀಕ್ಷಿತ ಪಟ್ಟಿಯಲ್ಲಿ ಆರ್ ಕೆ ನಾರಾಯಣ್ ಹೆಸರು ಪ್ರತಿವರ್ಷವೂ ಬಂದು ಹೋಗುತ್ತಿತ್ತು. ಅವರಿಗೆ ನೊಬೆಲ್ ಬರಲಿಲ್ಲ. ಅನಂತಮೂರ್ತಿಯವರು ಬೂಕರ್ ಶಾರ್ಟ್‌ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅತ್ಯುತ್ತಮ ಅನುವಾದ ಮತ್ತು ಲಿಟರರಿ ಏಜಂಟುಗಳ ಸಹವಾಸದ ಕೊರತೆಯಿಂದಾಗಿ ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಅವಕಾಶದಿಂದ ವಂಚಿತವಾಗಿತ್ತು. ಅನಂತಮೂರ್ತಿ, ಕುವೆಂಪು, ಭೈರಪ್ಪ ಮುಂತಾದವರ ಕೃತಿಗಳು ಅನುವಾದಗೊಂಡಿದ್ದರೂ ಅವುಗಳ ಹಿಂದೆ ಬಿದ್ದು ಸ್ಪರ್ಧೆಯಲ್ಲಿಡುವವರು ಇರಲಿಲ್ಲ.
ಇದೀಗ ಕನ್ನಡದ ಕತೆ, ಕಾದಂಬರಿಗಳು ವಿಶ್ವಮನ್ನಣೆ ಪಡೆಯುತ್ತಿವೆ. ಅನುವಾದಗೊಂಡು ಎಲ್ಲೆಲ್ಲೂ ಸಿಗುತ್ತಿವೆ. ಇದು ಆರಂಭದ ಹೆಜ್ಜೆ. ಮುಂಬರುವ ದಿನಗಳಲ್ಲಿ ಹೊಸ ತಲೆಮಾರಿನ ಅನುವಾದಕರು ಕನ್ನಡ ಕೃತಿಗಳನ್ನು ಅನುವಾದಿಸಿ ಲೋಕಕ್ಕೆ ತಲುಪಿಸಬಹುದು ಎಂಬ ಭರವಸೆಯನ್ನು ಬಾನು ಮುಷ್ತಾಕ್ ಅವರ ಕೃತಿಗೆ ಬಂದ ಅಂತಾರಾಷ್ಟ್ರೀಯ ಬೂಕರ್ ಮೂಡಿಸಿದೆ. ಅದರ ಅನುವಾದಕಿ ‘’ದೀಪಾ ಭಾಸ್ತಿ ‘’ ಜತೆ ಒಂದು ಸುದೀರ್ಘ ಮಾತುಕತೆ.
- ಎಸ್ ಗಿರೀಶ್ ಬಾಬು
1. ಹಾರ್ಟ್ ಲ್ಯಾಂಪ್ ಅನ್ನು ಮೂಲಭಾಷೆಯಲ್ಲಿ ಓದಿದಾಗ ಭಾವನಾತ್ಮಕ ಪ್ರತಿಕ್ರಿಯೆ ಹೇಗಿತ್ತು? ಅನುವಾದಿಸುವ ಹುಕಿ ಬರೋ ಥರ ಇತ್ತಾ?
ನಾನು ಸೆಂಟಿಮೆಂಟಲ್ ಓದುಗಳಲ್ಲ. ಬಹಳ ಓದುತ್ತೇನೆ. ಈ ಕಥೆಗಳ ಓದಿಸುವ ಗುಣ ಚೆನ್ನಾಗಿತ್ತು. ಆಳವಾಗಿವೆ. ಸಾವಧಾನತೆ ಇದೆ. ಹಾಗಂತ ಓದಿದ ತಕ್ಷಣ ಇದನ್ನು ಅನುವಾದಿಸಬೇಕು ಅಂತನಿಸಿದ್ದಲ್ಲ. ಅನುವಾದದ ಹಾದಿ ಭಿನ್ನವಾದದ್ದು. ಹೀಗಾಗಿ ಮೊದಲ ಓದಿನಲ್ಲೇ ಹೀಗಾಯ್ತು ಅನ್ನಲಿಕ್ಕಾಗದು. ಸಾಹಿತ್ಯಿಕ ಓದು ಭಾವನಾತ್ಮಕ ಗ್ರಹಿಕೆಯೂ ಹೌದು. ಅನುವಾದಕ್ಕೆ ಕೃತಿ ಕೈಗೆತ್ತಿಕೊಳ್ಳುವಾಗ ಅದನ್ನು ವೃತ್ತಿಪರವಾಗಿ ನೋಡುತ್ತೇನೆ. ಅನುವಾದಿಸಲು ಕೇವಲ ಭಾವನಾತ್ಮಕತೆ ಇದ್ದರೆ ಸಾಲದು, ಸತತ ಅಭ್ಯಾಸವೂ ಬೇಕು.
2. ಸಾಹಿತ್ಯವನ್ನು ಅನುವಾದಿಸುವುದೆಂದರೆ ಅದು ಕೇವಲ ಪದಗಳ ಭಾಷಾಂತರ ಅಷ್ಟೇ ಅಲ್ಲ. ಸ್ವರ, ಲಯ ಮತ್ತು ಆತ್ಮವನ್ನು ಅಲ್ಲಿ ಛಾಪಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾರ್ಟ್‌ಲ್ಯಾಂಪ್‌ನಲ್ಲಿ ಅನುವಾದಿಸುವಾಗ ಎದುರಾದ ಸವಾಲುಗಳೇನು?
ಈ ಕಥೆಗಳಲ್ಲಿರುವ ಸಂಸ್ಕೃತಿಯನ್ನು ತೀರ ಹತ್ತಿರದಿಂದ ಕಂಡವಳಲ್ಲ. ಹೀಗಾಗಿ ಬಾನು ಅವರ ಎಲ್ಲಾ ಕಥೆಗಳನ್ನು ಮತ್ತೆ ಮತ್ತೆ ಓದಬೇಕಾಯ್ತು. ಒಂದು ಹಂತದಲ್ಲಿ ಈ ಪ್ರಾಸೆಸ್‌ನಲ್ಲಿ ಆತ್ಮವಿಶ್ವಾಸ ಬಂತು, ಆ ಬಳಿಕ ಅವುಗಳಲ್ಲಿ ನಾನು ಅನುವಾದಿಸಬೇಕಿರುವ ಕತೆಗಳನ್ನು ಆಯ್ಕೆ ಮಾಡಿಕೊಂಡೆ. ಆಮೇಲೆ ಬಹಳ ವ್ಯವಧಾನದಿಂದ ಅನುವಾದಕ್ಕೆ ಮುಂದಾದೆ. ಪೂರಕವಾದ ಇತರೆ ಓದು, ಸಂಗೀತಗಳೆಲ್ಲ ನನ್ನ ತೊಡಗಿಸುವಿಕೆಯನ್ನು ತೀವ್ರಗೊಳಿಸುತ್ತಿದ್ದವು.
3. ಈ ಕೃತಿಯಲ್ಲಿ ಯಾವುದಾದರೊಂದು ನುಡಿಗಟ್ಟು, ಈಡಿಯಂ ಅಥವಾ ಭಾಷಾವೈಶಿಷ್ಟ್ಯ ಇಲ್ಲವೇ ಸಾಂಸ್ಕೃತಿಕ ಉಲ್ಲೇಖ ನಿಮಗೆ ಇದನ್ನು ಅನುವಾದಿಸಲಾಗದು ಅಂತನ್ನಿಸಿತ್ತಾ? ಹಾಗಾಗಿದ್ದರೆ ಅದನ್ನು ಹೇಗೆ ನಿಭಾಯಿಸಿದಿರಿ?
ಇಲ್ಲ ಆ ಥರ ಯಾವುದೂ ಅನಿಸಿಲ್ಲ. ನೀವು ಕೆಲಸದಲ್ಲಿ ಪಳಗಿದರೆ ಪ್ರತಿಯೊಂದು ಅಂಶವನ್ನೂ ಬೇರೆ ಭಾಷೆಗೆ ತರಬಹುದು. ಕೊಂಚ ಕೆಲಸ ಮಾಡಿದರೆ ಅದೆಲ್ಲ ಸಾಧ್ಯವಾಗುತ್ತದೆ. ದಖನಿ, ಉರ್ದು, ಅರಾಬಿಕ್, ಕನ್ನಡತನವನ್ನೂ ಭಾಷಾಂತರದಲ್ಲಿ ತರಬಹುದು. ಕನ್ನಡ ಭಾಷೆಯ ನಾದದ ಗೇಯತೆಯನ್ನು ಇಂಗ್ಲೀಷ್‌ಗೆ ತರಬಹುದು.
4. ಅನುವಾದ ಪ್ರಕ್ರಿಯೆಯಲ್ಲಿ ಲೇಖಕರೊಂದಿಗೆ ಎಷ್ಟು ನಿಕಟವಾಗಿ ಕೆಲಸ ಮಾಡಿದ್ದೀರಿ? ಪದಗಳ ಆಯ್ಕೆ ಅಥವಾ ವ್ಯಾಖ್ಯಾನಗಳ ಬಗ್ಗೆ ಯಾವುದೇ ಪ್ರಮುಖ ಚರ್ಚೆಗಳು ಅಥವಾ ಭಿನ್ನಾಭಿಪ್ರಾಯಗಳಾಗಿದ್ದವೇ?
ಬಹಳ ಸಲೀಸಾಗಿ ಅನುವಾದ ನಡೆಯುತ್ತಿತ್ತು. ಅಲ್ಲಲ್ಲಿ ಅರ್ಥವಾಗದ ಸಂಗತಿಗಳಿದ್ದರೆ ಕೇಳುತ್ತಿದ್ದೆ. ನನ್ನ ಸಂದೇಹಗಳಿಗೆ ಅವರು ಉತ್ತರಿಸುತ್ತಿದ್ದರು. ಇದಲ್ಲದೆ ವಾಗ್ವಾದಗಳೇ ನಡೆದಿಲ್ಲ.
5. ಒಬ್ಬ ಅನುವಾದಕರಾಗಿ ನಿಮಗೆ ವೈಯಕ್ತಿಕವಾಗಿ ಮಹತ್ವದ್ದಾಗಿ ಅಥವಾ ಸವಾಲಾಗಿ ಅನಿಸಿದ ಯಾವುದೇ ದೃಶ್ಯಗಳು ಅಥವಾ ಅಧ್ಯಾಯಗಳು ಹಾರ್ಟ್‌ಲ್ಯಾಂಪ್‌ನಲ್ಲಿವೆಯೇ? ಏಕೆ?
ನನಗೆ ಕನೆಕ್ಟ್ ಆದ ಅನೇಕ ವಿಚಾರಗಳಿದ್ದವು. ಅವುಗಳಲ್ಲಿ ಒಂದನ್ನು ಅಂತ ನೆನಪಿಸಿಕೊಳ್ಳುವುದು ಕಷ್ಟ.
6. ಹಾರ್ಟ್‌ಲ್ಯಾಂಪ್‌ನ ನಿರೂಪಣಾ ಧ್ವನಿ ಅಥವಾ ಸಾಹಿತ್ಯ ಶೈಲಿಯು ನೀವು ಅದನ್ನು ಅನುವಾದಿಸಿದ ಭಾಷೆಯ ಯಾವುದೇ ಬರಹಗಾರರು ಅಥವಾ ಸಂಪ್ರದಾಯಗಳನ್ನು ನೆನಪಿಸುತ್ತದೆಯೇ?
ಆ ಥರದ್ದೇನೂ ಮನಸ್ಸಿಗೆ ಬರುತ್ತಿಲ್ಲ.
7. ನಿಮ್ಮ ಅನುವಾದದ ಬಗ್ಗೆ ನಿಮಗೆ ಹೆಮ್ಮೆ ಅನಿಸಿದ ಒಂದು ಉದಾಹರಣೆಯನ್ನು ಹಂಚಿಕೊಳ್ಳಬಲ್ಲಿರಾ ? ಇದು ಸಖತ್ತಾಗಿ ಬಂತು ಎನ್ನುವ ಭಾವ?
ಈ ಇಡೀ ಪ್ರಾಜೆಕ್ಟೇ ಹೆಮ್ಮೆ ನೀಡಿದ ಕೆಲಸ. ಅದರಲ್ಲಿ ಕೆಲವನ್ನೇ ಆರಿಸುವುದು ಕಷ್ಟ. ಈ ಕೃತಿಯಲ್ಲಿ ಕನ್ನಡದ ಗುನುಗು ಇಂಗ್ಲೀಷಿಗೆ ಚೆನ್ನಾಗಿ ಬಂದಿದೆ. ಉತ್ತಮ ಓದುವಿಕೆ ಇಂಗ್ಲೀಷ್ ಓದುಗನಿಗೆ ಒಂದೊಳ್ಳೆ ಓದಿನ ಅನುಭವ ನೀಡುತ್ತದೆ. ಈ ಕೃತಿಯ ಕೊನೆಯಲ್ಲಿರುವ ಅನುವಾದಕರ ಮಾತಿನಲ್ಲಿ ಈ ಬಗ್ಗೆ ವಿವರವಾಗಿ ಬರೆದಿದ್ದೇನೆ.
8. ಹಾರ್ಟ್‌ಲ್ಯಾಂಪ್‌ನಲ್ಲಿರುವ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಆಧ್ಯಾತ್ಮಿಕ ಸಂದರ್ಭಗಳನ್ನು ಇಡಿಯಾಗಿ ಗ್ರಹಿಸಲು ಸಂಶೋಧನೆ ಮಾಡಿದ್ದು ಅಥವಾ ಹೊಸದೇನಾದರೂ ಕಲಿತದ್ದು ಅನ್ನೋದಿತ್ತಾ?
ಇಡೀ ಪುಸ್ತಕದ ಆಂತರ್ಯವನ್ನು ತೀವ್ರವಾಗಿ ಬರಹದಲ್ಲಿ ವ್ಯಕ್ತಪಡಿಸಲು ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ನುಸ್ರತ್ ಫತೇ ಆಲಿ ಖಾನ್, ಆಲಿ ಸೇಥಿ ಮೊದಲಾದವರು ಸೂಫಿ ಗಾಯನ ಮತ್ತೆ ಮತ್ತೆ ಕೇಳುತ್ತಿದ್ದೆ. ಈ ಸಂಸ್ಕೃತಿಯ ಗಂಧವನ್ನು ಬರಹದಲ್ಲಿ ಒಳಗೊಳಿಸಲು ಇದು ಸಹಕಾರಿಯಾಗಿತ್ತು. ಉರ್ದು ಟಿವಿ ಡ್ರಾಮಾ ನೋಡಿದ್ದೆ.
9. ಮಾತೃಭಾಷೆಯ ಕೃತಿ ಹಾರ್ಟ್‌ಲ್ಯಾಂಪ್ ಆಗಿ ಅನುವಾದಗೊಳ್ಳುವಾಗ ಓದುಗ ಪಡೆದುಕೊಳ್ಳುವುದು, ಕಳೆದುಕೊಳ್ಳುವುದು ಏನಾದರೂ ಇತ್ತೇ? ಇಂಗ್ಲಿಷ್ ಭಾಷೆಯ ಓದುಗರಿದಾಗ ಪ್ರಯೋಜನದ ಬಗ್ಗೆ ಹೇಳುವುದಾದರೆ?
ಸಂಪೂರ್ಣ ಭಿನ್ನವಾದ ಎರಡು ಸಂಸ್ಕೃತಿ, ಭಾಷೆ, ವ್ಯಾಕರಣಗಳು ಇರುವಾಗ ಡಿಟ್ಟೋ ಅದದನ್ನೇ ಅಲ್ಲಿಂದ ಇಲ್ಲಿಗೆ ತರುವುದು ಕಷ್ಟ ಸಾಧ್ಯ. ಕನ್ನಡ ಇಂಗ್ಲೀಷ್‌ನಂತಿಲ್ಲದ ಭಾಷೆ. ಇಂಗ್ಲೀಷ್ ತಮಿಳಿನಂತಿಲ್ಲ. ವಿಭಿನ್ನತೆ ಇಲ್ಲಿ ಸಾಮಾನ್ಯವಾದುದು. ಹೀಗಿರುವಾಗ ಆ ಸಂಪೂರ್ಣತೆಯನ್ನು ನಿರೀಕ್ಷಿಸಬಾರದು. ಅದರರ್ಥ ಅನುವಾದಿತ ಕೃತಿಯ ಓದುಗ ಏನನ್ನೋ ಕಳೆದುಕೊಂಡ ಅನ್ನೋದಲ್ಲ. ಹಾಗೆ ನೋಡಿದರೆ ಇಲ್ಲಿ ಕಳೆಯುವಿಕೆಗಿಂತ ಗಳಿಸುವಿಕೆ ಅಗ್ರಸ್ಥಾನ. ಕರ್ನಾಟಕದಾಚಿನವರನ್ನು ಈ ಅನುವಾದವಿಲ್ಲದೆ ಬಾನು ಅವರ ಕಥೆ ತಲುಪೋದು ಸಾಧ್ಯ ಇಲ್ಲ. ಈ ಅನುವಾದದ ಮೂಲಕ ಆಕೆ ಕನ್ನಡೇತರ ಓದುಗರನ್ನು ಸಂಪಾದಿಸಿದ್ದಾರೆ. ಇದು ಹೆಚ್ಚೆಚ್ಚು ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳ ಕೃತಿಯನ್ನು ಓದಲು ಪ್ರೋತ್ಸಾಹಕವಾಗಬಹುದು.
10. ಇದು ಕನ್ನಡದ ಮೊದಲ ಅಂತಾರಾಷ್ಟ್ರೀಯ ಬುಕರ್. ಈ ಪ್ರಶಸ್ತಿ ಸ್ವೀಕಾರದ ಕ್ಷಣ ಹೇಗಿತ್ತು?
ಇದು ಹಲವು ಪ್ರಥಮಗಳ ಒಟ್ಟೂ ಮೊತ್ತ. ಭಾರತದ ಅನುವಾದಕಿಗೆ ಮೊದಲ ಬಾರಿಗೆ ಈ ಗೌರವ ಸಂದಿದೆ. ಮೊದಲ ಕನ್ನಡ ಕೃತಿ. ಮೊದಲ ಸಣ್ಣ ಕಥೆ ಸಂಕಲನಕ್ಕೆ ಸಿಕ್ಕಿದ ಪ್ರಶಸ್ತಿ. ಜಾಗತಿಕ ಮಟ್ಟದಲ್ಲಿ ಚಾಲ್ತಿಯಲ್ಲಿರುವ ‘ಪೀಪಲ್ ಆಫ್ ಕಲರ್’ ಕಾನ್ಸೆಪ್ಟ್‌ನಲ್ಲಿ ನೋಡಿದರೆ ಅದರಲ್ಲೂ ಪ್ರಥಮದ ಪಟ್ಟಿಗೆ ಸೇರುತ್ತದೆ. ಇಂಥಾದ್ದೊಂದು ಪ್ರಶಸ್ತಿ ಸಿಕ್ಕ ಕ್ಷಣ ಬಹಳ ಸಂತೋಷಪಟ್ಟೆ.
11. ಎದೆಯ ಹಣತೆ ಭಾಷಾಂತರಿಸುತ್ತಿದ್ದ ವೇಳೆ, ಹಾರ್ಟ್‌ಲ್ಯಾಂಪ್ ಈ ಪ್ರಮಾಣದಲ್ಲಿ ಜಾಗತಿಕ ಮನ್ನಣೆ ಗಳಿಸಬಹುದು ಎಂಬ ಹೊಳಹು ಇತ್ತೆ?
ಅನುವಾದ ಮಾಡುವಾಗ ಇದು ಬುಕರ್‌ಗೆ ಹೋಗುತ್ತೆ ಅಂತ ಅನಿಸಿರಲಿಲ್ಲ. ನಾನು ಅಂತಲ್ಲ ಯಾರೂ ಈ ನಿರೀಕ್ಷೆಯಲ್ಲಿ ಇರಲಿಲ್ಲ. ಆ ಯೋಚನೆ ಮನಸ್ಸಲ್ಲಿಟ್ಟುಕೊಂಡು ನಾನಂತೂ ಈ ಕೆಲಸ ಮಾಡಿಲ್ಲ. ಈ ಕಥೆಗಳನ್ನು ಮತ್ತೆ ರೀವರ್ಕ್ ಮಾಡಿ ಹಾಗೆ ಬರೀಬೇಕು ಎಂಬ ಐಡಿಯಾ ಇದ್ದಿದ್ದಷ್ಟೇ.
12. ಜಗತ್ತಿಗೆ ಎದೆಯ ಹಣತೆ ಈ ಪರಿ ಇಷ್ಟವಾಗಿದ್ದು ಏಕೆ ಅನಿಸತ್ತೆ?
ಈ ಕಥೆಗಳು ತುಂಬ ರಿಲೇಟೆಬಲ್. ಒಂದು ಮುಸ್ಲಿಂ ಸಮುದಾಯದ ದಕ್ಷಿಣ ಭಾರತದ ಸಮುದಾಯದಲ್ಲಿ ನಡೆಯುವ ಕಥೆಗಳಾದರೂ ಇದರಲ್ಲಿರುವ ಥೀಮ್ ಅದು ಜಾಗತಿಕ ಮಟ್ಟದಲ್ಲಿ ತುಂಬ ಪ್ರಸ್ತುತ. ಪುರುಷ ಪ್ರಧಾನ ಸಮಾಜ ಎಲ್ಲ ಕಡೆ ಇದೆ. ಮಹಿಳೆಯರ ಮೇಲೆ ಈ ಥರ ದೌರ್ಜನ್ಯ ಆಗುವಂಥಾದ್ದಾಗಲೀ ಅಥವಾ ಪುರುಷ ಪ್ರಧಾನ ಸಮಾಜದಿಂದ ಇರುವ ಒತ್ತಡ ಎಲ್ಲ ಕಡೆ ಇರುವಂಥಾದ್ದು. ಈ ಕಾರಣಕ್ಕೆ ಅದು ಜಗತ್ತಿನಲ್ಲಿರುವ ಎಲ್ಲ ಜನರಿಗೆ ರಿಲೇಟೆಬಲ್.
13. ಎದೆಯ ಹಣತೆ ಹಾರ್ಟ್ ಲ್ಯಾಂಪ್ ಆಗಿದ್ದು, ಭಾಷಾಂತರದಿಂದಲೋ ಅಥವಾ ಭಾವಾಂತರದಿಂದಲೋ?
ಈ ಕತೆಯ ಅನುವಾದಕ್ಕೆ ಅನೇಕ ಕಾರಣಗಳಿದ್ದವು. ಮೊದಲನೆಯದಾಗಿ ವೈಯುಕ್ತಿಕವಾಗಿ ನನಗೆ ಇಷ್ಟವಾದ ಕಥೆಗಳು. ಇಂಗ್ಲೀಷ್ ಅನುವಾದ ಆಗುವಾಗ ಚೆನ್ನಾಗಾಗಬಹುದು ಅಂತ ಅನ್ನಿಸ್ತಿತ್ತು. ಇನ್ನೊಂದು ಸುಮಾರು 50 -60 ಕಥೆಗಳ ವಿಸ್ತಾರದಲ್ಲಿ ವೆರೈಟಿ ಆಫ್ ಥೀಮ್ಸ್ ಏನಿದೆ ಅದು ತೋರಿಸಬೇಕೆನ್ನುವ ಐಡಿಯಾ ಇತ್ತು. ಆ ಮೂಲಕ ಆಯ್ಕೆ ಮಾಡಿದೆ.
14. ಭಾನು ಅವರ 6 ಕಥಾಸಂಕಲನಗಳಿಂದ ಈ 12 ಕಥೆಗಳನ್ನು ಆಯ್ಕೆ ಮಾಡಿ ಅನುವಾದ ಮಾಡಿರುವೆ. ಈ 12 ಕಥೆಗಳೇ ಭಾಷಾಂತರಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಒಂದು ಥೀಮ್‌ಗೆ ಸೆಟ್ ಆಗುವಂಥಾ, ಇಂಗ್ಲೀಷ್‌ನಲ್ಲಿ ಇದರ ಅನುವಾದ ಬಹಳ ಚೆನ್ನಾಗಿ ಬರುತ್ತದೆ ಅನಿಸಿದ ಮಹತ್ವದ ಕಥೆಗಳನ್ನು ಅನುವಾದಕ್ಕೆ ಆಯ್ಕೆ ಮಾಡಿದ್ದೆ.
15 ಪ್ರೆಂಚ್, ಇಟಾಲಿಯನ್, ಡ್ಯಾನಿಷ್ ಕೃತಿಗಳು ಅಂತಿಮ ಸುತ್ತಿನಲ್ಲಿ ಇದ್ದವು. ಈ ಸ್ಪರ್ಧೆಯನ್ನು ಎದೆಯ ಹಣತೆ ಮೀರಿ ನಿಂತದ್ದು ಏಕಿರಬಹುದು?
ಇದು ತೀರ್ಪುಗಾರರನ್ನು ಕೇಳಬೇಕಷ್ಟೇ. ಏಕೆಂದರೆ ಅಂತಿಮ ಸುತ್ತಿಗೆ ಬಂದ ಕೃತಿಗಳಲ್ಲಿ ಕೆಲವನ್ನು ಎಲ್ಲವೂ ಅದ್ಭುತ ಕಥೆಗಳು. ಅತ್ಯುತ್ತಮ ಅನುವಾದ. ಸೋಫಿ ಹ್ಯೂಗ್ಸ್ ಅವರು ಅನುವಾದ ಮಾಡಿರುವ ‘ಪರ್ಫೆಕ್ಷನ್’ ಅಂತೂ ನನಗೆ ತುಂಬ ತುಂಬ ಇಷ್ಟವಾದ ಪುಸ್ತಕ. ಸೋಫಿ ಹ್ಯೂಗ್ಸ್ ಅದ್ಭುತ ಅನುವಾದಕಿ. ಅವುಗಳಲ್ಲಿ ಹಾರ್ಟ್ ಲ್ಯಾಂಪ್ ಆಯ್ಕೆಗೆ ಏನು ಕಾರಣ ಅನ್ನೋದು ತೀರ್ಪುಗಾರರ ಟಿಪ್ಪಣಿ ನೋಡಿದರೆ ಗೊತ್ತಾಗಬಹುದು.
16. ಈ ಹಿಂದೆಯೂ ಹಲವು ಭಾಷಾಂತರ ಮಾಡಿದ್ದೆ, ಭಾನು ಮುಷ್ತಾಕ್ ಅವರ ಕೃತಿಯನ್ನು ಭಾಷಾಂತರ ಮಾಡಬೇಕು ಅನಿಸಿದ್ದು ಏಕೆ ಮತ್ತು ಯಾವಾಗ?
2022 ರಲ್ಲಿ ಅವರು ಮ್ಯೂಚ್ಯುವಲ್ ಫ್ರೆಂಡ್ ಮೂಲಕ ನನಗೆ ಕೇಳಿದ್ರು, ಮಾಡೋದಕ್ಕೆ ಆಸಕ್ತಿ ಇದೆಯಾ ಅಂತ. ಅವರ ಕೃತಿಗಳನ್ನು ಓದಿದಾಗ ಹೀಗೆ ಮಾಡಬಹುದು ಅಂತ ಯೋಚನೆ ಬಂತು. ಅಲ್ಲಿಂದ ಈ ಕೆಲಸ ಶುರುವಾಯ್ತು. ನಾನು ಒಂದೇ ಗುಕ್ಕಿನಲ್ಲಿ ನಾನು ಅನುವಾದ ಮಾಡೋದಿಲ್ಲ. ಸಮಯ ತಗೊಂಡು ನಿಧಾನಕ್ಕೆ ಕೆಲಸ ಮಾಡುವುದು ನನ್ನ ಕ್ರಮ.
17- ಬಾನು ಮುಷ್ತಾಕ್ ಅವರ ಕೃತಿಯನ್ನು ಅನುವಾದಿಸುವಾಗ ಅತ್ಯಂತ ಸವಾಲು ಅನಿಸಿದ್ದು ಏನು?
ನಾನು ಆ ಸಮುದಾಯದವಳಲ್ಲ ಅನ್ನೋದರ ಬಗ್ಗೆ ಕಾನ್ಶಿಯಸ್ ಆಗಿದ್ದೆ. ಇಂಡಿಯಾದಲ್ಲಿ ಇವೆಲ್ಲ ಸೂಕ್ಷ್ಮ ವಿಷಯ. ಸಮಾಜ ವ್ಯವಸ್ಥೆಯ ಸಂಕೀರ್ಣ ವಿನ್ಯಾಸದಲ್ಲಿ ಒಂದು ಜಾತಿ ಕುಲ ಗೋತ್ರ ಧರ್ಮ ಒಂದಿಷ್ಟು ಸಂಗತಿಗಳನ್ನು ಕಟ್ಟಿ ಅತಿ ಮಾಡುತ್ತಾರೆ. ಹಾಗೆ ನೋಡಿದರೆ ನಾನು ಹಿಂದುತ್ವದ ಆಚರಣೆಗಳ ಅಭ್ಯಾಸ ಮಾಡುತ್ತಿಲ್ಲ. ಬೇರೆ ಯಾವುದೇ ಧರ್ಮವನ್ನು ಪಾಲನೆ ಮಾಡಲ್ಲ. ಹೀಗಿರುವಾಗ ಅನುವಾದದಲ್ಲಿ ಸವಾಲುಗಳು ಇದ್ದೇ ಇದ್ದವು.
18. ಕಥೆಗಳ ಆಯ್ಕೆ, ಭಾಷಾಂತರಿಸುವ ಶೈಲಿ ವಿಚಾರದಲ್ಲಿ ಭಾನು ಅವರಿಂದ ಸ್ವಾತಂತ್ರ್ಯ ದೊರಕಿತ್ತೆ?
ಖಂಡಿತಾ. ಸಂದೇಹ ಇದ್ದಾಗ ಕೇಳ್ತಾ ಇದ್ದೆ.
19- ಕನ್ನಡಕ್ಕೆ ಜಾಗತಿಕ ಮನ್ನಣೆ ದೊರಕಿದೆ. ಇನ್ನು ಕನ್ನಡದ ಮತ್ತಷ್ಟು ಮೇರು ಕೃತಿಗಳ ಬಗ್ಗೆ ಜಾಗತಿಕ ಓದುಗರ ಆಸಕ್ತಿ ಹೆಚ್ಚಬಹುದಲ್ಲವೇ?
ಖಂಡಿತವಾಗಿ.
20 . ಪತ್ರಕರ್ತೆಯಾಗಿದ್ದೆ, ಪ್ರಿಲ್ಯಾನ್ಸ್ ಮಾಡುತ್ತಿದೆ. ಸ್ವಂತ ಕೃತಿಗಳನ್ನು ರಚಿಸಿದ್ದೆ. ಭಾಷಾಂತರದ ಹುಚ್ಚು ಆರಂಭವಾಗಿದ್ದು ಯಾವಾಗ ಮತ್ತು ಏಕೆ?
ಭಾಷಾಂತರದ ಹುಚ್ಚು ಅಂತ ಏನಿಲ್ಲ. ನನ್ನ ಮುಖ್ಯವಾದ ಅಭಿವ್ಯಕ್ತಿ ಅಲ್ಲ ಅದು. ನನಗೆ ಭಾಷೆಗಳು ಅಂದರೆ ಬಹಳ ಇಷ್ಟ. ಇದಕ್ಕೆ ಇಂಗ್ಲೀಷ್ ಮೀಡಿಯಂ ಸ್ಕೂಲ್ ಅಲ್ಲಿ ಓದಿ ಇಂಗ್ಲೀಷ್ ಮೀಡಿಯಾದಲ್ಲಿ ಕೆಲಸ ಮಾಡುವಾಗ ಎಲ್ಲಿಯೋ ಒಂದು ಕಡೆ ಕನ್ನಡದ ಜೊತೆಗಿರುವ ಒಂದು ನಂಟು ಸಡಿಲವಾಗುತ್ತಿದೆಯೇನೋ ಅಂತ ಅನಿಸುತ್ತಿತ್ತು. ಅನುವಾದ ಮಾಡುವ ಮೂಲಕ ಕನ್ನಡಕ್ಕೆ ಇನ್ನೂ ಹತ್ತಿರ ಹೋಗುತ್ತಿದ್ದೇನೆ ಭಾವನೆ ಇರುವ ಕಾರಣ ಇದರ ಬಗ್ಗೆ ತುಂಬ ಇಷ್ಟ ಆಗೋದಕ್ಕೆ ಶುರುವಾಯ್ತು.
21- ಅಣ್ಣಾವ್ರ ಜೇನಿನ ಹೊಳೆಯೋ ಹಾಡನ್ನು ಜಾಗತಿಕ ವೇದಿಕೆಯಲ್ಲಿ ಉಲ್ಲೇಖಿಸಿದ್ದು ವೈರಲ್ ಆಗಿ ಕನ್ನಡಗರ ಹೆಮ್ಮೆಗೆ ಕಾರಣವಾಗಿರುವೆ?
ಅದು ನನಗೆ ಬಹಳ ಇಷ್ಟವಾದ ಹಾಡು. ಡಾ ರಾಜ್‌ಕುಮಾರ್ ಅದ್ಭುತ ಕಂಠಸಿರಿಯಲ್ಲಿ ಹೊಮ್ಮಿರುವ ಈ ಹಾಡು ಚಿ ಉದಯಶಂಕರ್ ಬರೆದಿರುವುದು. ಸುಮಾರು ವರ್ಷಗಳ ಹಿಂದೆ ನಾನು ಎರಡು ವರ್ಷಗಳ ಕಾಲ ಚಿ ಉದಯಶಂಕರ್ ಅವರ ಪತ್ನಿ ನಡೆಸುತ್ತಿದ್ದ ಶಾಲೆಯಲ್ಲಿ ಓದಿದ್ದೆ. ನನಗೆ ಈ ಸಾಲು ಉಲ್ಲೇಖಿಸುವಾಗ ಆ ದಿನಗಳು ನೆನಪಾಗುತ್ತಿದ್ದವು. ಒಂದು ಸಾಲಲ್ಲಿ ಕನ್ನಡ ಅಂದ್ರೆ ಏನು ಹೇಳಬೇಕು ಅನ್ನುವುದನ್ನು ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ ಸಾಲು ಬಿಂಬಿಸುತ್ತದೆ. ಇದು ಕನ್ನಡದ ಸಂಪೂರ್ಣ ಚಿತ್ರ ಕಟ್ಟಿಕೊಡುತ್ತದೆ. ಕನ್ನಡ ಹೇಗೆ ಮ್ಯಾಜಿಕಲ್ ಅನ್ನೋದನ್ನು ಹೇಳುತ್ತದೆ.
22- ಮುಂದಿನ ಯೋಜನೆಗಳೇನು ಮತ್ತಷ್ಟು ಭಾಷಾಂತರ ಮಾಡುವ ಪ್ಲಾನ್ ಇದೆಯೇ , ಸ್ವತಂತ್ರ ಕೃತಿ ರಚನೆಯ ಯೋಜನೆಗಳು ಇವೆಯೇ?
ಎರಡೂ ಇದೆ. ಇತ್ತೀಚೆಗೆ ನಾನು ಓದಿದ ಕನ್ನಡದ ಕೃತಿ ಸಮುದ್ಯತಾ ವೆಂಕಟ್‌ರಾಮು ಅವರ ‘ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ’. ಅಕ್ಷರ ಪ್ರಕಾಶನದಿಂದ ಹೊಸ ಬಂದಿರುವ ಸಣ್ಣ ಕಾದಂಬರಿ. ಅದ್ಭುತವಾಗಿದೆ. ಕೆಲವೊಂದು ರೂಪಕಗಳು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಅನ್ನು ನೆನಪಿಸುತ್ತದೆ. ಕಥೆಯ ವಿನ್ಯಾಸ ಸೊಗಸಾಗಿದೆ. ನನ್ನ ಮುಂದಿನ ಅನುವಾದದ ಪ್ರಾಜೆಕ್ಟ್ ಅದುವೇ. ಇದಲ್ಲದೇ ಸ್ವಂತ ಕೃತಿ ಶುರು ಮಾಡಬೇಕು. ಈ ವರ್ಷ ಬಹಳ ಕೆಲಸಗಳಿವೆ. ಶೀಘ್ರ ಬರೆಯುವೆ.
ಭಾನು ಮತ್ತು ದೀಪಾಗೆ ಬೂಕರ್ ಪ್ರಶಸ್ತಿ ಬಂದಿದ್ದಕ್ಕೆ ರಾಜಕೀಯ ನರೇಟಿವ್ ಕೂಡ ಬಂದಿದೆ. ಅದು ಗಮನಕ್ಕೆ ಬಂದಿದೆಯೇ ?
ಸಮಯದ ಅಭಾವದಿಂದ ನನಗೆ ಸೋಷಲ್ ಮೀಡಿಯಾ ನೋಡಲಾಗುತ್ತಿಲ್ಲ. ಆದರೆ ಅರ್ಥಪೂರ್ಣ ಸಂಗತಿಯನ್ನು ಈ ಮಟ್ಟದಲ್ಲಿ ಕಾಣುವುದು ನನಗೆ ಸಮಂಜಸ ಅನಿಸುವುದಿಲ್ಲ. ಎಲ್ಲ ಸಮುದಾಯಗಳೂ ಮಹತ್ವವಾದುವೇ. ಎಲ್ಲ ಕಥೆಗಳೂ ಮುಖ್ಯವೇ. ಆದರೆ ನಾನು ‘ಐಡೆಂಡಿಟಿ ರಾಜಕೀಯ’ದಲ್ಲಿ ನಂಬಿಕೆ ಹೊಂದಿಲ್ಲ. ತಾರತಮ್ಯವನ್ನು ಸದಾ ವಿರೋಧಿಸುತ್ತ ಬಂದವಳು. ಬಾನು ಅವರು ಬರೆದಿರುವ ಕಥೆಗಳು ಮುಸ್ಲಿಂ ಸಮುದಾಯದ ಕಥೆಗಳು. ಆದರೆ ಅದರಲ್ಲಿ ಬರುವ ಮಹಿಳೆಯರ ಬಗೆಗಿನ ತಿರಸ್ಕಾರದ ಸನ್ನಿವೇಶಗಳು, ಗಂಡಸರ ದೌರ್ಜನ್ಯ ಇವೆಲ್ಲ ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಸೀಮಿತ ಅಲ್ಲ. ಪುರುಷ ಪ್ರಧಾನ್ಯತೆ ಕೇವಲ ಮುಸ್ಲಿಂ ಸಮಾಜದಲ್ಲಷ್ಟೇ ಇರೋದಲ್ಲ. ಎಲ್ಲ ಸಮುದಾಯದಲ್ಲಿಯೂ, ಎಲ್ಲ ಜಾತಿ, ಮತ ಧರ್ಮಗಳಲ್ಲಿರುವ ಕೆಟ್ಟ ಸಾಮಾಜಿಕ ಪಿಡುಗು ಅದು. ಹಾಗೇ ಈ ಕಥೆಗಳ ಪಾತ್ರಗಳ ಹೆಸರು ಮುಸ್ಲಿಂ ಹೆಸರುಗಳೇ ಆಗಿದ್ದಿರಬಹುದು. ಆದರೆ ಆ ಪಾತ್ರಗಳಿಗೆ ಬೇರೆ ಸಮುದಾಯದ ಮಹಿಳೆಯರ ಹೆಸರು ಜೋಡಿಸಿದ್ದರೂ ಕತೆಗಳ ತಿರುಳಿನಲ್ಲಿ ಬದಲಾವಣೆ ಆಗೋದಿಲ್ಲ.
ಟಿಕ್ ಟಾಕ್, ಫೇಸ್ ಬುಕ್ ಯುಗದಲ್ಲಿ ಓದು ಕಣ್ಮರೆಯಾಗುತ್ತಿರುವಾಗ ಸಾಹಿತ್ಯ ಹಾಗೂ ಭಾಷಾಂತರ ಯುವ ಸಮುದಾಯಕ್ಕೆ ಪ್ರಸ್ತುತವಾಗಿ ಉಳಿಯುವ ಬಗೆ ಹೇಗೆ?
ಓದುವವರು ಓದುತ್ತಲೇ ಇದ್ದಾರೆ. ಸೋಷಲ್ ಮೀಡಿಯಾಗಳಿಂದ ಓದಿನ ಕ್ರಮಕ್ಕೆ ಕೊಂಚ ಭಂಗ ಬಂದಿರಬಹುದು. ಆದರೆ ಬುಕ್‌ವರ್ಮ್ ಸರ್ವೇ ಪ್ರಕಾರ ಯುಕೆಯಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓದುಗರು ತುಂಬ ಇದ್ದಾರಂತೆ. ನಮ್ಮಲ್ಲಿ ಈ ಸಂಖ್ಯೆ ಕಡಿಮೆ ಆಗಿರಬಹುದು. ಆದರೆ ನಮ್ಮ ದೇಶದ ಜನಸಂಖ್ಯೆಯ 0.5 ಓದುಗರಿದ್ದರೂ ಅದು ದೊಡ್ಡ ಸಂಖ್ಯೆಯೇ. ಪುಸ್ತಕವೇ ಓದುಗನನ್ನು ತಲುಪುತ್ತದೆ. ಓದುಗರೂ ಪುಸ್ತಕವನ್ನು ತಲುಪುತ್ತಾರೆ.