ಐಸಿಐಸಿಐ ಲೈಫ್ ಇನ್ಶೂರೆನ್ಸ್, ತನ್ನ ನೂತನ ಕಾರ್ಪೊರೇಟ್ ಬ್ರ್ಯಾಂಡ್ ಗುರುತಿನ ಜೊತೆಗೆ ‘ಹರ್ ಕಲ್ ಆಸಾನ್’ ಎಂಬ ಹೊಸ ಧ್ಯೇಯವಾಕ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ಪ್ರಮುಖ ಖಾಸಗಿ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಐಸಿಐಸಿಐ ಲೈಫ್ ಇನ್ಶೂರೆನ್ಸ್, ತನ್ನ ನೂತನ ಕಾರ್ಪೊರೇಟ್ ಬ್ರ್ಯಾಂಡ್ ಗುರುತಿನ ಜೊತೆಗೆ ‘ಹರ್ ಕಲ್ ಆಸಾನ್’ ಎಂಬ ಹೊಸ ಧ್ಯೇಯವಾಕ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತೀಯ ಗ್ರಾಹಕರಿಗೆ ಜೀವ ವಿಮೆಯನ್ನು ಮತ್ತಷ್ಟು ಸರಳ, ಪಾರದರ್ಶಕ ಹಾಗೂ ಸುಲಭವಾಗಿ ಒದಗಿಸುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ.ಕಳೆದ 25 ವರ್ಷಗಳಲ್ಲಿ 20 ಕೋಟಿಗೂ ಹೆಚ್ಚು ಭಾರತೀಯರ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಿದ ಹೆಗ್ಗಳಿಕೆ ಸಂಸ್ಥೆಗಿದೆ ಎಂದು ಐಸಿಐಸಿಐ ಲೈಫ್ ಇನ್ಶೂರೆನ್ಸ್‌ನ ಮಾರ್ಕೆಟಿಂಗ್ ಮತ್ತು ಡಿಜಿಟಲ್ ಮುಖ್ಯಸ್ಥ ಶ್ರೀನಿವಾಸ್ ಬಾಲಸುಬ್ರಮಣಿಯನ್ ತಿಳಿಸಿದ್ದಾರೆ. ಬದಲಾಗುತ್ತಿರುವ ಜೀವನಶೈಲಿ, ಕುಟುಂಬ ವ್ಯವಸ್ಥೆ ಹಾಗೂ ವೃತ್ತಿಪರ ಅನಿಶ್ಚಿತತೆಗಳ ನಡುವೆ ದೀರ್ಘಾವಧಿಯ ಹಣಕಾಸು ಯೋಜನೆಯನ್ನು ರೂಪಿಸುವುದು ಜನಸಾಮಾನ್ಯರಿಗೆ ಸಂಕೀರ್ಣ ಪ್ರಕ್ರಿಯೆಯಾಗಿ ಉಳಿಯಬಾರದು ಎಂಬುದು ಸಂಸ್ಥೆಯ ಆಶಯವಾಗಿದೆ ಎಂದರು.
ಈ ಹೊಸ ಗುರುತು ಕೇವಲ ಹೆಸರಿನ ಬದಲಾವಣೆಯಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಸ್ಪಷ್ಟತೆ ಹಾಗೂ ನೆಮ್ಮದಿ ನೀಡುವ ಬದ್ಧತೆಯಾಗಿದೆ. ಕೇಂದ್ರ ಸರ್ಕಾರದ ‘2047ರ ವೇಳೆಗೆ ಎಲ್ಲರಿಗೂ ವಿಮೆ’ ಗುರಿಗೆ ಪೂರಕವಾಗಿ ವಿಮಾ ಪ್ರಕ್ರಿಯೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಿ, ಭವಿಷ್ಯದ ಆರ್ಥಿಕ ನಿರ್ಧಾರಗಳನ್ನು ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಕೈಗೊಳ್ಳಲು ಸಂಸ್ಥೆ ನೆರವಾಗಲಿದೆ ಎಂದು ಅವರು ವಿವರಿಸಿದ್ದಾರೆ.