ನನ್ನ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ನಾನು ಈ ಮಾದರಿಯನ್ನು ಗಮನಿಸಿದ್ದೇನೆ. ಬಂಡವಾಳವು ಆರಂಭದಲ್ಲಿ ಹರಿದುಬರುತ್ತದೆ, ಅತಿಯಾಗಿ ಸಂಗ್ರಹವಾಗುತ್ತದೆ, ಆತಂಕ ಹುಟ್ಟುಹಾಕುತ್ತದೆ, ಮೌಲ್ಯವನ್ನು ಮರುನಿಗದಿಪಡಿಸುತ್ತದೆ ಮತ್ತು ಪುನರ್ ನಿರ್ಮಿಸುತ್ತದೆ.
ರಾಜೀವ್ ಚಂದ್ರಶೇಖರ್
ಶಾಸಕರು, ಕೇರಳ ಬಿಜೆಪಿ ಅಧ್ಯಕ್ಷರು
ನನ್ನ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ನಾನು ಈ ಮಾದರಿಯನ್ನು ಗಮನಿಸಿದ್ದೇನೆ. ಬಂಡವಾಳವು ಆರಂಭದಲ್ಲಿ ಹರಿದುಬರುತ್ತದೆ, ಅತಿಯಾಗಿ ಸಂಗ್ರಹವಾಗುತ್ತದೆ, ಆತಂಕ ಹುಟ್ಟುಹಾಕುತ್ತದೆ, ಮೌಲ್ಯವನ್ನು ಮರುನಿಗದಿಪಡಿಸುತ್ತದೆ ಮತ್ತು ಪುನರ್ ನಿರ್ಮಿಸುತ್ತದೆ. ಈ ನಡುವೆ ಉದ್ಯಮವು ಒಳಗೊಳಗೇ ತನ್ನಿಂತಾನೆ ಬೆಳೆಯುತ್ತಿರುತ್ತದೆ. ಹೂಡಿಕೆಗಳು ಪ್ರತಿಭೆ ಇರುವ ಕಡೆಗೆ ಹರಿಯುತ್ತವೆ. ಪ್ರತಿಭೆಯು ಅವಕಾಶಗಳು ಇರುವ ಕಡೆಗೆ ಸಾಗುತ್ತದೆ. ಭಾರತದಲ್ಲಿ ಪ್ರತಿಭೆಯ ಕೊರತೆ ಇಲ್ಲ.
ನ.5ರಿಂದ ಈಚೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ 4 ಪ್ರಮುಖ ಬದಲಾವಣೆಗಳಾದವು. ನಾಸ್ಡಾಕ್ ಷೇರು ಸೂಚ್ಯಂಕ ಶೇ.5.5ರಷ್ಟು ಕುಸಿಯಿತು, 2.3-3 ಲಕ್ಷ ಕೋಟಿ ಡಾಲರ್ನಷ್ಟು ಹೂಡಿಕೆ ಕರಗಿ ಹೋಯಿತು. ನಿಕ್ಕಿ ಮತ್ತು ಕೋಸ್ಪಿ ಷೇರುಪೇಟೆ ಶೇ.6ರಷ್ಟು ಇಳಿದವು, ಜೆನ್ಸನ್ ಹುವಾಂಗ್ ರಾಜೀನಾಮೆ ನೀಡಿದರು; ಎನ್ವಿಡಿಯಾ ಸತತ 7ನೇ ವಾರವೂ ನಷ್ಟವನ್ನು ಎದುರಿಸಿತು. ಅದರ ಮಾರುಕಟ್ಟೆ ಮೌಲ್ಯ ಅಕ್ಟೋಬರ್ನ ಗರಿಷ್ಠ ಮಟ್ಟಕ್ಕಿಂತ ಸುಮಾರು 1.6–1.7 ಲಕ್ಷ ಕೋಟಿ ಡಾಲರ್ ಕೆಳಗಿಳಿಯಿತು. ಆ್ಯಂಥ್ರೋಪಿಕ್ ಪ್ರತಿ ಷೇರಿಗೆ 83 ಡಾಲರ್ನಂತೆ ಷೇರುಪೇಟೆಯಲ್ಲಿ ನೋಂದಣಿ ಆಯಿತು. ಅಂದರೆ ಇದರ ಮೌಲ್ಯ ಸುಮಾರು 1.5 ಲಕ್ಷ ಕೋಟಿ ಡಾಲರ್. ಹುವಾಂಗ್ ಮತ್ತೆ ಎನ್ವಿಡಿಯಾ ಸಿಇಒ ಆಗಿ ಅಧಿಕಾರಕ್ಕೆ ಮರಳಿದರು ಮತ್ತು ಎನ್ವಿಡಿಯಾದ ಷೇರು ಬೆಲೆ ಒಂದೇ ದಿನ ಶೇ.30ರಷ್ಟು ಏರಿಕೆ ಕಂಡಿತು. ನಾಸ್ಡಾಕ್ ಸರಿಸುಮಾರು ಶೇ.7ರಷ್ಟು ಏರಿತು. ಈ 4 ಪ್ರಕರಣಗಳಲ್ಲಿ 3ರಲ್ಲಿ ತಂತ್ರಜ್ಞಾನದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ, ಆದರೂ ಬೆಲೆಗಳು ಲಕ್ಷಾಂತರ ಕೋಟಿ ಬದಲಾದವು. ನಾಲ್ಕನೆಯದರಲ್ಲಿ -ಆ್ಯಂಥ್ರೋಪಿಕ್ನ ಷೇರುಪೇಟೆ ಪ್ರವೇಶದಲ್ಲಿ- ನಿಜವಾದ ಬದಲಾವಣೆಯೊಂದು ಉಂಟಾಯಿತು. ಅದು ತೀವ್ರವಾಗಿತ್ತು. ಇವೆಲ್ಲದರ ಸಾಮಾನ್ಯ ಎಳೆ ಎಂದರೆ ಪ್ರತಿಭೆ ಮತ್ತು ನಿರ್ಮಾಣಗಾರರು. ಮಾರುಕಟ್ಟೆಗಳು ಎರಡೂ ದಿಕ್ಕುಗಳಲ್ಲಿ ಇವರ ಮೌಲ್ಯವನ್ನು ಸರಿಯಾಗಿ ಅಂದಾಜಿಸುವುದಿಲ್ಲ.
ನ.23ರಂದು, ಜೆನ್ಸನ್ ಹುವಾಂಗ್ ರಾಜೀನಾಮೆ ನೀಡಿದ 11 ದಿನಗಳ ನಂತರ, ಎನ್ವಿಡಿಯಾ ಮಂಡಳಿಯು ಅವರನ್ನು ಅವಿರೋಧವಾಗಿ ಅಧ್ಯಕ್ಷ, ಸಿಇಒ ಮತ್ತು ನಿರ್ದೇಶಕರನ್ನಾಗಿ ಪುನರ್ನೇಮಕ ಮಾಡಿತು. ವಿದೇಶಿ ಗುಪ್ತಚರ ಕಾರ್ಯಾಚರಣೆಯ ತನಿಖೆ ಇನ್ನೂ ಮುಂದುವರಿದಿದೆ. ಎಐ ನಮ್ಮ ಕಾಲದ ಅತ್ಯಂತ ಕಾರ್ಯತಂತ್ರದ ಉದ್ಯಮವಾಗಿದೆ. ಎನ್ವಿಡಿಯಾ ಅದರ ಕೇಂದ್ರದಲ್ಲಿದೆ. ಹುವಾಂಗ್ ಅದರ ಪ್ರತಿಭೆಯ ಅಮೂಲ್ಯ ಭಾಗ. ಈ ಉದ್ಯಮದ ಅತ್ಯಂತ ಮೌಲ್ಯಯುತ ವ್ಯಕ್ತಿಗಳು ಗುರಿಯಾಗುತ್ತಾರೆ. ಮಂಡಳಿಗಳು ತಮ್ಮ ಕಾರ್ಯತಂತ್ರದಷ್ಟೇ ಗಂಭೀರವಾಗಿ ಅವರ ಭದ್ರತೆ ಮತ್ತು ಉಳಿಸಿಕೊಳ್ಳುವಿಕೆಯನ್ನು ಪರಿಗಣಿಸಬೇಕು. ಹುವಾಂಗ್ ಇಲ್ಲದಿದ್ದಾಗ ಎನ್ವಿಡಿಯಾದ ಡೆವಲಪರ್ ಟೆಕ್ನಾಲಜಿ ನಿರ್ದೇಶಕರು, ‘ಎನ್ವಿಡಿಯಾದಲ್ಲಿನ ಬದಲಾಯಿಸಲಾಗದ ಪ್ರತಿಭೆಗಳು ಈಗ ಹೊರಹೋಗುವ ಬಗ್ಗೆ ಯೋಚಿಸುತ್ತಿವೆ’ ಎಂದು ಎಚ್ಚರಿಸಿದ್ದರು. ವೇತನ ಪರಿಶೀಲನೆಗಳನ್ನು ಬೇಗನೆ ಮಾಡಲಾಯಿತು ಮತ್ತು ನೇಮಕ ಮಾಡಿಕೊಳ್ಳುವವರು ಕರೆ ಮಾಡಲು ಪ್ರಾರಂಭಿಸಿದರು. ಮಾರುಕಟ್ಟೆಯು ಪ್ರತಿಭೆಗೆ ಸಂಬಂಧಿಸಿದ ಅಪಾಯವನ್ನು ಒಂದು ರೀತಿಯಲ್ಲಿ ಹೀಗೆ ಅಂದಾಜಿಸುತ್ತಿತ್ತು: ಈ ಉದ್ಯಮದಲ್ಲಿ, ಸಿಲಿಕಾನ್ನಷ್ಟೇ ಅಥವಾ ಅದಕ್ಕೆ ಸಮನಾಗಿ, ಅತ್ಯಂತ ವಿರಳವಾದ ಸಂಪನ್ಮೂಲವೆಂದರೆ ಪ್ರತಿಭೆ ಅಥವಾ ಮಾನವ ಸಂಪನ್ಮೂಲ.
ನ.19ರಂದು, ಆಂಥ್ರೋಪಿಕ್ ನಾಸ್ಡಾಕ್ನಲ್ಲಿ ಲಿಸ್ಟ್ ಆಯಿತು. ಆರಂಭಿಕ 70ರಿಂದ 78 ಡಾಲರ್ಗಿಂತ ಹೆಚ್ಚಾಗಿ ಪ್ರತಿ ಷೇರಿಗೆ 83 ಡಾಲರ್ಗೆ ಬೆಲೆ ನಿಗದಿಯಾಯಿತು, ಇದರ ಮೌಲ್ಯ ಸುಮಾರು 1.5 ಲಕ್ಷ ಕೋಟಿ ಡಾಲರ್. ಅದು 111.50 ಡಾಲರ್ನಲ್ಲಿ ಆರಂಭವಾಗಿ, ನಂತರ ಸ್ಥಿರವಾಯಿತು.
ಆ್ಯಂಥ್ರೋಪಿಕ್ನ ಉದಾಹರಣೆ:
ಉದಯ್ ಕೋಟಕ್ ಅವರ ಪೋಸ್ಟ್ನಲ್ಲಿ, ಆ್ಯಂಥ್ರೋಪಿಕ್ 5 ವರ್ಷಗಳ ಹಿಂದೆ ಅಸ್ತಿತ್ವದಲ್ಲೇ ಇರಲಿಲ್ಲ ಮತ್ತು ಈಗ ಭಾರತದ ಅಗ್ರ 10 ಕಂಪನಿಗಳ ಒಟ್ಟು ಮೌಲ್ಯಕ್ಕಿಂತ ಹೆಚ್ಚು ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗಿತ್ತು. ಅವರ ಪ್ರಶ್ನೆಗಳು ಗಂಭೀರ ಉತ್ತರಗಳಿಗೆ ಅರ್ಹವಾಗಿವೆ. ‘ನಾವು ಕಡಿಮೆ ಮೌಲ್ಯಮಾಪನಕ್ಕೊಳಗಾಗಿದ್ದೇವೆಯೇ ಅಥವಾ ನಾವು ಹೊಸ ಜಗತ್ತಿನಲ್ಲಿ ವೇಗವಾಗಿ ಬೆಳೆಯಬೇಕಾಗಿದೆಯೇ? ಅಥವಾ ಎರಡೂ ಹೌದೇ?’ ನನ್ನ ಉತ್ತರ: ಎರಡೂ ಹೌದು. 2025ರ ಸಂಪೂರ್ಣ ವರ್ಷದ 4.6 ಬಿಲಿಯನ್ ಡಾಲರ್ ಆದಾಯಕ್ಕೆ ಹೋಲಿಸಿದರೆ, ಆ್ಯಂಥ್ರೋಪಿಕ್ 2026ರ ಮೊದಲಾರ್ಧದಲ್ಲಿ 16.3 ಬಿಲಿಯನ್ ಡಾಲರ್ ಆದಾಯವನ್ನು ದಾಖಲಿಸಿದೆ. ಇದು ಅಳವಡಿಕೆಯ ಅತಿವೇಗದ ಹಾದಿಯಾಗಿದೆ ಮತ್ತು ಈ ಅಳವಡಿಕೆಯು ಒಂದೇ ದಿಕ್ಕಿನಲ್ಲಿ ಸಾಗುತ್ತದೆ.
ಸುಮಾರು 940 ಮಂದಿಯಿಂದ 2024ರ ಅಂತ್ಯದ ವೇಳೆಗೆ ಸುಮಾರು 5,300 ಜನರ ವರೆಗೆ ಬೆಳೆದ ತಂಡದಿಂದ ಆ್ಯಂಥ್ರೋಪಿಕ್ ನಿರ್ಮಾಣವಾಯಿತು. ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಪ್ರತಿ ಉದ್ಯೋಗಿಗೆ ಅಳವಡಿಸಿದರೆ, ಪ್ರತಿ ಉದ್ಯೋಗಿಯ ಮೌಲ್ಯ ಸುಮಾರು 28 ಕೋಟಿ ಡಾಲರ್ನಷ್ಟು ಆಗುತ್ತದೆ. ಇದು ಎಷ್ಟು ದುರ್ಬಲವಾಗಿದೆ ಎಂಬುದನ್ನು ಆ ಫೈಲಿಂಗ್ ತೋರಿಸಿಕೊಡುತ್ತದೆ.
ಭಾರತಕ್ಕೆ ಸ್ವಂತ ಎಐ ಕಂಪನಿ ತುರ್ತು:
ನನ್ನ ವೃತ್ತಿಜೀವನದ ಪ್ರತಿಯೊಂದು ಹಂತದಲ್ಲೂ ನಾನು ಈ ಮಾದರಿಯನ್ನು ನೋಡಿದ್ದೇನೆ. ಬಂಡವಾಳವು ಆರಂಭದಲ್ಲಿ ಬರುತ್ತದೆ, ಅತಿಯಾಗಿ ಸಂಗ್ರಹವಾಗುತ್ತದೆ, ಆತಂಕ ಹುಟ್ಟುಹಾಕುತ್ತದೆ, ಮೌಲ್ಯವನ್ನು ಮರುನಿಗದಿಪಡಿಸುತ್ತದೆ ಮತ್ತು ಪುನರ್ ನಿರ್ಮಿಸುತ್ತದೆ. ಈ ನಡುವೆ ಮಾರುಕಟ್ಟೆಯು ಒಳಗೊಳಗೇ ತನ್ನಿಂತಾನೆ ಬೆಳೆಯುತ್ತಲೇ ಇರುತ್ತದೆ. 2000ನೇ ಇಸವಿಯಲ್ಲಿ, ಇಂಟರ್ನೆಟ್ ಸ್ಫೋಟದಲ್ಲಿ ನಾಸ್ಡಾಕ್ ಶೇ.78ರಷ್ಟು ನಷ್ಟ ಅನುಭವಿಸಿತು, ಆದರೆ ಇಂದು ಇಂಟರ್ನೆಟ್ ನಮ್ಮ ಸುತ್ತಲಿನ ಎಲ್ಲದಕ್ಕೂ ಮೂಲಾಧಾರವಾಗಿದೆ. ನವೆಂಬರ್ನ ಕುಸಿತ, ಎನ್ವಿಡಿಯಾ ಆಘಾತ ಮತ್ತು ಸೋಮವಾರದ ಚೇತರಿಕೆ — ಇವೆಲ್ಲವೂ ವೇಗವಾದ ಸಿನಿಮಾದಂತಿವೆ. ಎಐ ತನ್ನ ಸವಾಲುಗಳನ್ನು ದಾಟಿ ಉಳಿಯುತ್ತದೆ. ಅದು ಪೂರ್ಣ ಪ್ರಮಾಣದಲ್ಲಿ ಬಂದಾಗ ಅದರ ಒಡೆತನ ಯಾರದ್ದು ಎಂಬುದೇ ಪ್ರಶ್ನೆ.
3 ವಾರಗಳ ಹಿಂದೆ, ಆನ್ಲೈನ್ ಬ್ರೋಕರ್ ಒಬ್ಬರ ಸಿಇಒ, ಭಾರತದಲ್ಲಿ ಹಣ ಕಳೆದುಕೊಳ್ಳಲು ಯಾವುದೇ ಎಐ ಕಂಪನಿಗಳಿಲ್ಲ ಎಂಬುದರಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ಈ ಬೆಳವಣಿಗೆಯ ಹಾದಿಯಲ್ಲಿ ಯಾವ ಪಾಲೂ ಇಲ್ಲದ ದೇಶವು ನಷ್ಟಗಳಿಂದ ತಪ್ಪಿಸಿಕೊಳ್ಳುತ್ತದೆ. ಆದರೆ ಹೂಡಿಕೆಗಳು, ಉದ್ಯೋಗಗಳು ಮತ್ತು ಉದ್ಯಮಗಳು ಹಾಗೂ ಆರ್ಥಿಕತೆಗಳಲ್ಲಿ ಅಭೂತಪೂರ್ವ ಮೌಲ್ಯವರ್ಧನೆಯಿಂದ (ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಸಿಗುವ ಲಾಭವನ್ನೂ ಅದು ಪಡೆಯಲಾರದು ಮತ್ತು ತನ್ನದೇ ಉದ್ಯಮಗಳು, ಗ್ರಾಹಕರು ಮತ್ತು ವಿದ್ಯಾರ್ಥಿಗಳು ಈ ತಂತ್ರಜ್ಞಾನದ ಸುತ್ತ ಅವಕಾಶಗಳನ್ನು ರೂಪಿಸಿಕೊಳ್ಳುವ ನಿಯಮಗಳನ್ನು ನಿರ್ಧರಿಸಲೂ ಸಾಧ್ಯವಾಗುವುದಿಲ್ಲ.
ಪ್ರತಿಭೆ ಇರುವ ಕಡೆ ಹೂಡಿಕೆ:
ಎಐ ಈಗಿನ ರಣರಂಗವಾಗಿದೆ. ಪ್ರತಿಭೆ ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಹೂಡಿಕೆಗಳು ಪ್ರತಿಭೆ ಇರುವ ಕಡೆಗೆ ಹರಿಯುತ್ತವೆ. ಪ್ರತಿಭೆಯು ಅವಕಾಶಗಳು ಇರುವ ಕಡೆಗೆ ಸಾಗುತ್ತದೆ. ಭಾರತದಲ್ಲಿ ಪ್ರತಿಭೆಯ ಕೊರತೆ ಇಲ್ಲ. ವಿಶ್ವದ ಚಿಪ್ ವಿನ್ಯಾಸಕರಲ್ಲಿ ದೊಡ್ಡ ಪಾಲು ಇಲ್ಲಿದೆ, ಮತ್ತು ಅವರು ವಿನ್ಯಾಸಗೊಳಿಸಿದ ಸಿಲಿಕಾನ್ನ ಬೌದ್ಧಿಕ ಆಸ್ತಿಯು (ಐಪಿ) ಇತರ ರಾಷ್ಟ್ರಗಳ ಬ್ಯಾಲೆನ್ಸ್ ಶೀಟ್ಗಳಲ್ಲಿವೆ. ಸ್ಟ್ಯಾನ್ಫೋರ್ಡ್ನ 2026ರ ಎಐ ಸೂಚ್ಯಂಕವು ಎಐ ಲೇಖಕರು ಮತ್ತು ಆವಿಷ್ಕಾರಕರ ವಿಷಯದಲ್ಲಿ ಭಾರತವನ್ನು ವಿಶ್ವದಲ್ಲಿ 2ನೇ ಸ್ಥಾನದಲ್ಲಿರಿಸಿದೆ. ಅಮೆರಿಕದ ಸುಮಾರು 2,20,000 ಕ್ಕೆ ಹೋಲಿಸಿದರೆ ಭಾರತದಲ್ಲಿ ಸುಮಾರು 50,000 ಮಂದಿ ಇದ್ದಾರೆ. ಭಾರತ ಎಐ ಕೌಶಲ್ಯದ ವ್ಯಾಪ್ತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಅಳೆಯಲಾದ ಯಾವುದೇ ದೇಶಕ್ಕಿಂತ ಹೆಚ್ಚಿನ ನಿವ್ವಳ ಎಐ ಪ್ರತಿಭೆಯ ಹೊರಹರಿವನ್ನೂ ಅದು ದಾಖಲಿಸಿದೆ. ನಾವು ಎಂಜಿನಿಯರ್ಗಳಿಗೆ ತರಬೇತಿ ನೀಡುತ್ತೇವೆ. ಆದರೆ ಅವರು ನಿರ್ಮಿಸಿದ್ದರ ಮಾಲೀಕತ್ವ ಬೇರೆಯವರದ್ದಾಗಿರುತ್ತದೆ.
ಎಐ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಅಗತ್ಯ:
ಅಮೆರಿಕದ ಸ್ವಂತ ಬಾಗಿಲೂ ಅನಿಶ್ಚಿತವಾಗಿದೆ. ಅದರ 1,00,000 ಡಾಲರ್ ಎಚ್-1ಬಿ ವೀಸಾ ಶುಲ್ಕವನ್ನು ಜೂನ್ನಲ್ಲಿ ರದ್ದುಪಡಿಸಲಾಯಿತು. ಅದು ಇನ್ನೂ ಮೇಲ್ಮನವಿಯ ಹಂತದಲ್ಲಿದೆ. ಅವಕಾಶಗಳು, ಕಠಿಣ ಸಮಸ್ಯೆಗಳು, ಕಂಪ್ಯೂಟ್ ಮತ್ತು ಮಾಲೀಕತ್ವ ಇರುವಲ್ಲಿಗೆ ಪ್ರತಿಭೆ ಸಾಗುತ್ತದೆ. ಅದಕ್ಕಾಗಿಯೇ ನಮ್ಮ ಬಂಡವಾಳವು ಚಿಪ್ ವಿನ್ಯಾಸಕ್ಕೆ ಹಣ ನೀಡಬೇಕು, ನಮಗೆ ಸಾರ್ವಭೌಮ ಇನ್ಫರೆನ್ಸ್ ಚಿಪ್ಗಳು ಮತ್ತು ದೇಶೀಯ ಖರೀದಿ ಬೇಕು. ನಮ್ಮದೇ ಭಾಷೆಗಳಲ್ಲಿ ಕಂಪ್ಯೂಟ್ ಹಾಗೂ ಮಾದರಿಗಳು ಬೇಕು.
ಭಾರತದ ಅತ್ಯಂತ ದೊಡ್ಡ 10 ಕಂಪನಿಗಳಿಗಿಂತ ಹೆಚ್ಚು ಮೌಲ್ಯ ಹೊಂದಿರುವ 5 ವರ್ಷದ ಕಂಪನಿಯು ನಮ್ಮನ್ನು ಬೆದರಿಸಬಾರದು. ಅದು ನಮಗೆ ಪಾಠವಾಗಬೇಕು. ಸಂಸ್ಥಾಪಕರು ಹೊರಹೋಗುತ್ತಾರೆ ಮತ್ತು ಮರಳುತ್ತಾರೆ. ಮಂಡಳಿಗಳು ತನಿಖೆ ನಡೆಸುತ್ತವೆ. ಇದ್ಯಾವುದೂ ಒಳಗಿನ ವಾಸ್ತವವನ್ನು ಬದಲಿಸುವುದಿಲ್ಲ. ಕಂಪ್ಯೂಟ್ ಅಗ್ಗವಾಗುತ್ತದೆ, ಮಾದರಿಗಳು ಉತ್ತಮವಾಗುತ್ತವೆ, ಅಳವಡಿಕೆಯು ಒಂದೇ ದಿಕ್ಕಿನಲ್ಲಿ ಸಾಗುತ್ತದೆ ಮತ್ತು ತಮ್ಮ ಪ್ರತಿಭೆಯನ್ನು ಉಳಿಸಿಕೊಳ್ಳುವ ರಾಷ್ಟ್ರಗಳು ಹಾಗೂ ಉದ್ಯಮಗಳು ತಮ್ಮ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಬೆಲೆಗಳು ಇಂದು ಏನೊಂದರ ಮೌಲ್ಯ ಎಷ್ಟು ಎಂದು ಕೇಳುತ್ತವೆ. ಬೆಳವಣಿಗೆಯ ಹಾದಿಯು ನಾಳೆ ಏನು ಸಾಧ್ಯವಾಗುತ್ತದೆ ಎಂದು ಕೇಳುತ್ತದೆ. ಆ ಪ್ರಶ್ನೆಗಳಲ್ಲಿ ಒಂದಕ್ಕೆ ಮಾತ್ರ ಕಳೆದ 50 ವರ್ಷಗಳಿಂದ ಒಂದೇ ಉತ್ತರವಿದೆ. ಆ ಹಾದಿಯು ನಿರಂತರವಾಗಿದೆ. ಅದರ ಮಾಲೀಕತ್ವ ಯಾರದ್ದು ಎಂಬುದನ್ನು ಪ್ರತಿಭೆ ನಿರ್ಧರಿಸುತ್ತದೆ. ಉಳಿದದ್ದೆಲ್ಲವೂ ಕೇವಲ ಗದ್ದಲ.
