ಸಾರಾಂಶ
ಬೆಂಗಳೂರು : ಅರ್ಥಶಾಸ್ತ್ರ, ಎಂಜಿನಿಯರಿಂಗ್ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಸಂಶೋಧಕರಿಗೆ 2024ನೇ ಸಾಲಿನ ‘ಇನ್ಫೋಸಿಸ್ ಸೈನ್ಸ್ ಫೌಂಡೇಷನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರ್ಥಶಾಸ್ತ್ರ ವಿಭಾಗದಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರೊ. ಅರುಣ್ ಚಂದ್ರಶೇಖರ್, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವಾಷಿಂಗ್ಟನ್ ವಿವಿಯ ಪ್ರೊ. ಶ್ಯಾಮ್ ಗೊಲ್ಲಕೋಟ, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳು ವಿಭಾಗದಲ್ಲಿ ಉಪನ್ಯಾಸಕ ಮಹಮೂದ್ ಕೋರಿಯಾ, ಜೀವ ವಿಜ್ಞಾನ ವಿಭಾಗದಲ್ಲಿ ಪುಣೆಯ ಐಐಎಸ್‌ಇಯ ಜೀವಶಾಸ್ತ್ರ ವಿಭಾಗದ ಪ್ರೊ. ಸಿದ್ದೇಶ್ ಕಾಮತ್, ಗಣಿತ ವಿಜ್ಞಾನಗಳ ವಿಭಾಗದಲ್ಲಿ ಕೊಲ್ಕತ್ತಾದ ಐಎಸ್‌ಐಐ ಪ್ರೊ. ನೀನಾ ಗುಪ್ತಾ ಹಾಗೂ ಭೌತವಿಜ್ಞಾನ ವಿಭಾಗದಲ್ಲಿ ಪ್ರೊ. ವೇದಿಕಾ ಖೇಮಾನಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ಗಣಿತಜ್ಞ ಪ್ರೊ.ಪೀಟರ್ ಸರ್ನಾಕ್ ಅವರು, ಅಸಾಧಾರಣ ಸಂಶೋಧನೆ ಮಾಡಿರುವವರನ್ನು ಗುರುತಿಸಿ ಬಹುಮಾನ ನೀಡುವುದು ಸ್ವಾಗತಾರ್ಹ. ಭಾರತೀಯ ಗಣಿತ ವಿದ್ವಾಂಸರು, ಭೌತಶಾಸ್ತ್ರಜ್ಞರು ಮತ್ತು ಕಂಪ್ಯೂಟರ್ ವಿಜ್ಞಾನಿಗಳ ಅಪಾರವಾದ ಪ್ರತಿಭೆ ಮತ್ತು ಪ್ರಭಾವವನ್ನು ಪ್ರತ್ಯಕ್ಷವಾಗಿ ನೋಡುತ್ತಾ ಬಂದಿದ್ದೇನೆ. ಇನ್ಫೋಸಿಸ್ ಸೈನ್ಸ್ ಫೌಂಡೇಶನ್‌ನಿಂದ ವಿಶ್ವದ ಪ್ರಮುಖ ವಿದ್ವಾಂಸರನ್ನು ಪ್ರತಿ ವರ್ಷ ಗುರುತಿಸುತ್ತಿರುವುದು ಭಾರತದಲ್ಲಿ ಮಾತ್ರವಲ್ಲದೇ, ಜಾಗತಿಕವಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬುತ್ತದೆ ಎಂದರು.
₹86.19 ಲಕ್ಷ ನಗದು, ಚಿನ್ನದ ಪದಕ ವಿತರಣೆ:
ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಪ್ರಶಸ್ತಿಯು 86.19 ಲಕ್ಷ ರು. ನಗದು, ಚಿನ್ನದ ಪದಕ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. ಈ ವರ್ಷ ಮೊದಲ ಬಾರಿ 40 ವರ್ಷದೊಳಗಿನ ಸಾಧಕರಿಗೂ ಪ್ರಶಸ್ತಿ ನೀಡಲಾಗಿದೆ.