ಗಗನಯಾನಕ್ಕೆ ಮಹಿಳೆಯರ ಕಳಿಸುವ ಉದ್ದೇಶ: ಸೋಮನಾಥ್
KannadaprabhaNewsNetwork | Published : Oct 23 2023, 12:15 AM IST
ಗಗನಯಾನಕ್ಕೆ ಮಹಿಳೆಯರ ಕಳಿಸುವ ಉದ್ದೇಶ: ಸೋಮನಾಥ್
ಸಾರಾಂಶ
ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಯಲ್ಲಿ ಮಹಿಳಾ ಫೈಟರ್ ಟೆಸ್ಟ್ ಪೈಲಟ್‌ಗಳು ಅಥವಾ ಮಹಿಳಾ ವಿಜ್ಞಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲು ಆದ್ಯತೆ ನೀಡುತ್ತೇವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಪೂರ್ವಭಾವಿ ಸಿದ್ಧತೆಗೆ ಮುಂದಿನ ವರ್ಷ ಮಹಿಳಾ ರೋಬೋಟ್ ರವಾನೆ ಪಿಟಿಐ ತಿರುವನಂತಪುರಂ ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಯಲ್ಲಿ ಮಹಿಳಾ ಫೈಟರ್ ಟೆಸ್ಟ್ ಪೈಲಟ್‌ಗಳು ಅಥವಾ ಮಹಿಳಾ ವಿಜ್ಞಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲು ಆದ್ಯತೆ ನೀಡುತ್ತೇವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ. ‘ಮಹಿಳೆಯರನ್ನು ಅಂತರಿಕ್ಷಕ್ಕೆ ಕಳುಹಿಸುವುದರ ಸಾಧ್ಯಾಸಾಧ್ಯತೆ ಪರಿಶೀಲನೆಗೆ ಮುಂದಿನ ವರ್ಷ ಮಾನವರಹಿತ ಗಗನಯಾನ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸುವಾಗ ಅದರಲ್ಲಿ ಮಹಿಳೆಯನ್ನು ಹೋಲುವ ರೋಬೋಟ್ (ಫೀಮೇಲ್ ಹ್ಯೂಮನೈಡ್ ರೋಬೋಟ್) ಇರಿಸಲಾಗುವುದು. ಅದನ್ನು ಗಮನಿಸಿ 2025ರಲ್ಲಿ ಭೂಮಿಯಿಂದ 400 ಕಿ.ಮೀ. ದೂರಕ್ಕೆ ಕೈಗೊಳ್ಳಲಿರುವ ಮಾನವಸಹಿತ ಗಗನಯಾನ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ನಮಗೆ ಸರಿಯಾದ ಮಹಿಳಾ ಅಭ್ಯರ್ಥಿಗಳು ಸಿಗಬೇಕಷ್ಟೆ’ ಎಂದು ತಿಳಿಸಿದ್ದಾರೆ. ಇಸ್ರೋದ ಗಗನಯಾನ ನೌಕೆ ವೈಫಲ್ಯ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, ‘2025ರಲ್ಲಿ ಮಾನವಸಹಿತ ಗಗನಯಾನ ಯೋಜನೆ ಕೈಗೊಳ್ಳುವ ಸಾಧ್ಯತೆಯದೆ. ಅದರಲ್ಲಿ ಮೂರು ದಿನಗಳ ಕಾಲ ಅಂತರಿಕ್ಷದಲ್ಲಿ ಮನುಷ್ಯರನ್ನು ಇರಿಸಿ ಪ್ರಯೋಗ ನಡೆಸಲಾಗುವುದು. ಆರಂಭದಲ್ಲಿ ವಾಯುಪಡೆಯ ಫೈಟರ್ ಟೆಸ್ಟ್ ಪೈಲಟ್‌ಗಳನ್ನು ಪರಿಗಣಿಸಲಾಗುವುದು. ಸದ್ಯಕ್ಕೆ ನಮ್ಮಲ್ಲಿ ಮಹಿಳಾ ಫೈಟರ್ ಪೈಲಟ್‌ಗಳು ಇಲ್ಲ. ಅವರು ಸಿಕ್ಕರೆ ಪರಿಗಣಿಸುತ್ತೇವೆ. ಎರಡನೇ ಆಯ್ಕೆಯಾಗಿ ಮಹಿಳಾ ವಿಜ್ಞಾನಿಗಳನ್ನು ಪರಿಗಣಿಸಲಾಗುವುದು. ಅವರು ನಮಗೆ ಸಿಗುವ ಸಾಧ್ಯತೆ ಹೆಚ್ಚಿದೆ’ ಎಂದು ತಿಳಿಸಿದರು. ಆದರೆ ಎಷ್ಟು ಮಹಿಳೆಯರನ್ನು ಕಳುಹಿಸಲಾಗುವುದು ಅಥವಾ ಮಹಿಳೆಯರನ್ನು ಮಾತ್ರವೇ ಕಳುಹಿಸಲು ಚಿಂತನೆ ನಡೆದಿದೆಯೇ ಎಂಬ ಬಗ್ಗೆ ಅವರು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ.