ಭದ್ರತಾ ವೈಫಲ್ಯಕ್ಕೆ ಪ್ರತಾಪ ಸಿಂಹ ರಾಜೀನಾಮೆ ಕೇಳುವುದು ಸರಿಯಲ್ಲ

| Published : Dec 18 2023, 02:00 AM IST

ಭದ್ರತಾ ವೈಫಲ್ಯಕ್ಕೆ ಪ್ರತಾಪ ಸಿಂಹ ರಾಜೀನಾಮೆ ಕೇಳುವುದು ಸರಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್ತಿನ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ಯುವಕರ ಮೇಲೆ ಮತ್ತು ಭದ್ರತಾ ಲೋಪ ಎಸಗಿದವರ ಮೇಲೆ ಕ್ರಮ ಕೈಗೊಳ್ಳಬೇಕೆ ಹೊರತು, ಪಾಸ್ ವಿತರಣೆ ಮಾಡಿದ್ದನ್ನೇ ಮುಂದಿಟ್ಟುಕೊಂಡು ಸಂಸದ ಪ್ರತಾಪ್ ಸಿಂಹ ರಾಜೀನಾಮೆ ಕೇಳುವುದು ಶೋಭೆಯಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

- ಮಾಜಿ ಸಚಿವ ಜಿ.ಟಿ. ದೇವೇಗೌಡ ಅಭಿಮತ

ಫೋಟೋ- 17ಎಂವೈಎಸ್ 37

ಕನ್ನಡಪ್ರಭ ವಾರ್ತೆ ಮೈಸೂರು

ಸಂಸತ್ತಿನ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ಯುವಕರ ಮೇಲೆ ಮತ್ತು ಭದ್ರತಾ ಲೋಪ ಎಸಗಿದವರ ಮೇಲೆ ಕ್ರಮ ಕೈಗೊಳ್ಳಬೇಕೆ ಹೊರತು, ಪಾಸ್ ವಿತರಣೆ ಮಾಡಿದ್ದನ್ನೇ ಮುಂದಿಟ್ಟುಕೊಂಡು ಸಂಸದ ಪ್ರತಾಪ್ ಸಿಂಹ ರಾಜೀನಾಮೆ ಕೇಳುವುದು ಶೋಭೆಯಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ಭಾನುವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಸಂಸತ್ ಭವನದಲ್ಲಿ ಭದ್ರತಾ ಲೋಪ ಆಗಿರುವುದು ನಿಜ. ಭದ್ರತಾ ಲೋಪ ಎಸಗಿರುವ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ಸಂಸತ್ ಭವನ ಪ್ರವೇಶ ಮಾಡಿ ಪ್ರೇಕ್ಷಕರ ಗ್ಯಾಲರಿಯಿಂದ ಓಡಿಬಂದು ದಾಂಧಲೆ ನಡೆಸಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಭದ್ರತಾ ಲೋಪ ಎಸಗಿರುವ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳಬೇಕು. ಅದನ್ನು ಬಿಟ್ಟು ಸಂಸದರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ರಾಜಕೀಯ ಪ್ರೇರಿತ ಎಂದು ಹೇಳಿದರು.

ಕ್ಷೇತ್ರದ ಮತದಾರರು ಪಾಸ್ ಕೇಳಿದಾಗ ನಾವು ಕೊಡಲೇ ಬೇಕು. ಪಾಸ್ ಕೇಳಿರುವ ವ್ಯಕ್ತಿಯು ನಮ್ಮ ಕ್ಷೇತ್ರದ ಮತದಾರರೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಬಳಿಕ ಪರಿಚಯಸ್ಥರಿಂದ ವಿವರ ಪಡೆದು ಕೊಡುತ್ತೇವೆ. ಸಂಸತ್ನ ಭದ್ರತಾ ಸಿಬ್ಬಂದಿ ಪಾಸ್ ಪರಿಶೀಲಿಸಬೇಕಿತ್ತು. ಸಿಬ್ಬಂದಿ ವೈಫಲ್ಯದಿಂದ ಈ ಘಟನೆ ನಡೆದಿದೆ. ಇದಕ್ಕೆ ಪ್ರತಾಪ ಸಿಂಹ ರಾಜೀನಾಮೆ ಕೇಳುವುದು ಸರಿಯಲ್ಲ ಎಂದರು.

ಶಾಸಕರು, ಸಂಸದರು ತಮ್ಮ ಕ್ಷೇತ್ರದ ಮತದಾರರಿಗೆ ಅಧಿವೇಶನ ನೋಡುವುದಕ್ಕೆ ಪಾಸ್ ಕೊಡುತ್ತಾರೆ. ಕೆಲವು ಸಂದರ್ಭದಲ್ಲಿ ಮುಖಂಡರು, ಕಾರ್ಯಕರ್ತರೂ ಕೇಳುತ್ತಾರೆ. ಕ್ಷೇತ್ರದ ಮತದಾರರು ಪಾಸ್ ಕೇಳಿದಾಗ ನಾವು ಕೊಡಲೇಬೇಕು ಎಂದು ಅವರು ಹೇಳಿದರು.

ವಿಮಾನ ನಿಲ್ದಾಣಕ್ಕೆ ನಾಲ್ವಡಿ ಹೆಸರು ಅಂತಿಮ

ಶಾಸಕ ಪ್ರಸಾದ್ ಅಬ್ಬಯ್ಯ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವಂತೆ ಹೇಳಿರುವುದು ಸರಿಯಲ್ಲ. ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರೇ ಅಂತಿಮ. ಮೈಸೂರು ಕಟ್ಟಿ ಬೆಳೆಸಿ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರಸಾದ್ ಅಬ್ಬಯ್ಯ ತಮ್ಮ ವೈಯಕ್ತಿ ಹೇಳಿಕೆಯನ್ನಷ್ಟೇ ನೀಡಿದ್ದಾರೆ. ಆ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಬೆಂಬಲ ಸೂಚಿಸಿಲ್ಲ. ಸರ್ಕಾರ ಕೂಡ ಇದರ ಬಗ್ಗೆ ಪ್ರಸ್ತಾವನೆ ಇಟ್ಟಿಲ್ಲ ಎಂದು ಅವರು ತಿರುಗೇಟು ನೀಡಿದರು.

ಭೀಕರ ಬರಗಾಲದ ಪರಿಸ್ಥಿತಿಯ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ. ರೈತರ ಸಾಲ ಮನ್ನಾ ಮಾಡಬೇಕು ಎಂದು ತಿಳಿಸಿದ್ದೇವೆ. ಮುಖ್ಯಮಂತ್ರಿಗಳು ಬಡ್ಡಿ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಕೇವಲ ಬಡ್ಡಿ ಮನ್ನಾ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. 2025ರ ತನಕ ರೈತರ ಸಾಲದ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು. ರೈತರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.