ಕ್ರಾಂತಿಕಾರಿಗಳ ಹುಟ್ಟಿಗೆ ಜಲಿಯನ್‌ ‘ವಾಲಾಬಾಗ್’ ಕಾರಣ - ಆಂಗ್ಲರ ಅಮಾನುಷ ಕ್ರೌರ್ಯಕ್ಕೆ ಪ್ರಾಣ ತೆತ್ತ ಭಾರತೀಯರು

| N/A | Published : Apr 13 2025, 12:24 PM IST

Jallianwala Bagh

ಸಾರಾಂಶ

ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟನ್‌ ಗೆಲುವಿಗೆ ನೆರವಾದರೂ ಕೃತಘ್ನ ಆಂಗ್ಲರ ಅಮಾನುಷ ಕ್ರೌರ್ಯಕ್ಕೆ ಪ್ರಾಣ ತೆತ್ತ ಭಾರತೀಯರು

 ಬ್ಯಾ. ರಾ. ಪ್ರಸನ್ನಕುಮಾರ್, ಬ್ಯಾಡರಹಳ್ಳಿ, ಮೈಸೂರು

ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟನ್‌ ಗೆಲುವಿಗೆ ನೆರವಾದರೂ ಕೃತಘ್ನ ಆಂಗ್ಲರ ಅಮಾನುಷ ಕ್ರೌರ್ಯಕ್ಕೆ ಪ್ರಾಣ ತೆತ್ತ ಭಾರತೀಯರು

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಜಲಿಯನ್‌ ವಾಲಾಬಾಗ್ ದುರಂತ ಕೂಡ ಮಹತ್ವ ಪಡೆದಿದೆ. ಅಮೃತಸರದ ಜಲಿಯಲ್‌ ವಾಲಾಬಾಗ್‌ನಲ್ಲಿ ನೆರೆದಿದ್ದ ಸಾವಿರಾರು ಮಂದಿಯ ಮೇಲೆ ಬ್ರಿಟಿಷ್‌ ಸೈನಿಕರು ಗುಂಡಿನ ಮಳೆಗೈದಿದ್ದರು. ಅನಾಹುತದಲ್ಲಿ ಪ್ರಾಣ ತೆತ್ತಿದ್ದು ಅಮಾಯಕರು. ಇದು ಭಾರತದಲಲ್ಲಿ ಕ್ರಾಂತಿಕಾರಿಗಳ ಹುಟ್ಟಿಗೆ ಕಾರಣವಾಯಿತು, ಬ್ರಿಟಿಷರ ಅಂತ್ಯಕ್ಕೂ ಸನಿಹವಾಯಿತು.

ಇಂದು ಜಲಯನ್‌ ವಾಲಾಬಾಗ್‌ ದುರಂತ ದಿನ (ಲೋಗೋ ಮಾಡಿ)

ಸುಮ್ಮನೆ ಬರಲಿಲ್ಲ 47ರ ಸ್ವಾತಂತ್ರ್ಯ. ನಾವಿಂದು ಸ್ವಾತಂತ್ರ್ಯದ ಫಲಗಳನ್ನು ಅಚ್ಚುಕಟ್ಟಾಗಿ ಉಣ್ಣುತ್ತಿದ್ದೇವೆ. ಎಷ್ಟೊಂದು ತ್ಯಾಗ ಬಲಿದಾನಗಳಾಗಿವೆ. ಬದುಕಿನ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಗುಲಾಮಗಿರಿಯ ವಿರುದ್ಧ ಪರಕೀಯರ ದುರಾಡಳಿತದ ವಿರುದ್ಧ ಹೋರಾಡಿ ಸಾವಿಗೆ ಕೊರಳೊಡ್ಡಿದ್ದಾರೆ. ಇಂತಹ ನಿಜ ಪ್ರಾತಃ ಸ್ಮರಣೀಯರನ್ನು ನೆನೆಯದಿದ್ದರೆ ನಮಗೆ ಮತ್ತು ದೇಶಕ್ಕೆ ಮಾಡಿದ ಅಪಚಾರವಾಗುತ್ತದೆ. ಅಖಂಡ ಭಾರತದಾದ್ಯಂತ ಬ್ರಿಟಿಷರ ವಿರುದ್ಧ ನಡೆದ ಹೋರಾಟ ಮಹತ್ವದ್ದಾಗಿವೆ. ಅದರಲ್ಲೂ ಜಲಿಯನ್‌ವಾಲಾಬಾಗ್ ದುರಂತ ಬ್ರಿಟಿಷ್ ಆಳ್ವಿಕೆಯ ಅಮಾನುಷ ಕ್ರೌರ್ಯದ ಕರಾಳ ಪುಟಗಳನ್ನು ಚರಿತ್ರೆಯಲ್ಲಿ ಓದುವಾಗ ಭಾರತೀಯರ ಕಣ್ಣುಗಳು ಕೆಂಪಾಗುತ್ತವೆ. ಹುತಾತ್ಮರನ್ನು ನೆನೆದು ಬಿಕ್ಕುತ್ತವೆ.

ಪ್ರಥಮ ಮಹಾಯುದ್ಧದಲ್ಲಿ ಬ್ರಿಟಿಷರು ಭಾರತೀಯ ಸೈನಿಕರನ್ನು ಬಳಸಿಕೊಂಡು ಯಶಸ್ಸು ಸಾಧಿಸಿದ್ದರು. 1919ರ ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ಭಾರತದ ಬಿಕಾನೇರ್‌ನ ಮಹಾರಾಜ ಗಂಗಾಸಿಂಗ್ ಕೂಡ ಭಾಗವಹಿಸಿ ವರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕೃತಘ್ನ ಬ್ರಿಟಿಷರು ದಮನಕಾರಿ ನೀತಿ ಬಿಡಲಿಲ್ಲ.

ಕ್ರಾಂತಿಕಾರಿಗಳನ್ನು ಮತ್ತವರ ಸಂಘಟನೆಗಳ ಚಟುವಟಿಕೆಗಳನ್ನು ಹತ್ತಿಕ್ಕಲು ರೌಲಟ್‌ನ ಅಧ್ಯಕ್ಷತೆಯ ಆಯೋಗದ ವರದಿಯನ್ವಯ ಯಾವುದೇ ಮುನ್ಸೂಚನೆಯಿಲ್ಲದೆ ಯಾರನ್ನಾದರೂ ಬಂಧಿಸಬಹುದಿತ್ತು, ತನಿಖೆ ಮಾಡಬಹುದಿತ್ತು, ಪತ್ರಿಕಾ ನಿರ್ಬಂಧನ ಹೇರಲಾಗಿತ್ತು.

ಪ್ರತಿಭಟಿಸುತ್ತಿದ್ದವರ ಮೇಲೆ ಗುಂಡಿನ ಮಳೆ

ಕರಾಳ ಶಾಸನ ರೌಲಟ್ ಕಾಯ್ದೆಯನ್ನು ವಿರೋಧಿಸಿ ಸಾವಿರಾರು ಜನ ಬೈಸಾಕಿ ಹಬ್ಬದ ಸಂದರ್ಭದಲ್ಲಿ 1919ರ ಏಪ್ರಿಲ್ 13ರಂದು ಸಂಜೆ 5.15ರ ಸಮಯದಲ್ಲಿ ಪಂಜಾಬ್‌ನ ಅಮೃತಸರದ ಹತ್ತಿರವಿರುವ ಜಲಿಯನ್ ವಾಲಾಬಾಗ್‌ನಲ್ಲಿ ಸೇರಿದ್ದವರಲ್ಲಿ ಶಸ್ತ್ರಾಸ್ತ್ರಗಳಿರಲಿಲ್ಲ. ಕೇವಲ ಅಹಿಂಸಾತ್ಮಕ ಪ್ರತಿಭಟನೆಯ ಹೆಸರಿನಲ್ಲಿ ಜಮಾಯಿಸಿದ್ದ ಸಾಮಾನ್ಯ ಜನರವರು. ಸುತ್ತಲೂ ಎತ್ತರದ ಗೋಡೆಗಳು ಒಳಬರಲು ಹೊರ ಹೋಗಲು ಒಂದೇ ಪ್ರವೇಶ.

ಐದಡಿಯ ದ್ವಾರವಿದ್ದ ಒಂದು ದೊಡ್ಡ ಮೈದಾನದಲ್ಲಿ ಸಾವಿರಾರು ಪ್ರತಿಭಟನಾಕಾರರ ಮೇಲೆ ಜಲಂಧರ್ ಸೈನ್ಯದ ತುಕಡಿಯ ನಾಯಕ ಜನರಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡಯರ್ ‘ಫೈರ್’ ಎಂದು ಆಜ್ಞೆ ಮಾಡುತ್ತಿದ್ದಂತೆ ಬ್ರಿಟಿಷ್ ಸೈನಿಕರ ಗುಂಡಿನ ದಾಳಿಗೆ ಜೀವ ತೆತ್ತವರು 1200 ಜನವಾದರೆ, ತಳ್ಳಾಟದಲ್ಲಿ ಬಾವಿಗೆ ಬಿದ್ದು ಪ್ರಾಣ ಬಿಟ್ಟವರು 120ಕ್ಕೂ ಅಧಿಕ. ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಘಟನೆಯೊಂದು 15 ನಿಮಿಷದಲ್ಲಿ ಮುಗಿದೇ ಹೋಗಿ ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿತು.

ಅಮಾಯಕರು ಸತ್ತರೂ ನಿಲ್ಲದ ಜಂಭ

‘ನನ್ನ ಸೈನಿಕರ ಬಂದೂಕಿನಲ್ಲಿ ಗುಂಡುಗಳು ಮುಗಿದಿದ್ದರಿಂದ ಹತ್ಯಾಕಾಂಡವನ್ನು ಮುಂದುವರೆಸಲಾಗಲಿಲ್ಲ’ ಎಂದು ಡಯರ್ ಜಂಭ ಕೊಚ್ಚಿಕೊಂಡಿದ್ದ. ಆದರೆ ಅವತ್ತಿನ ಬ್ರಿಟಿಷ್ ಸರ್ಕಾರ 379 ಜನ ಸತ್ತರೆಂದು ಕಾಟಾಚಾರದ ವರದಿ ನೀಡಿ ಈ ಗುಂಡಿನ ದಾಳಿ ಅನಿವಾರ್ಯ, ಆಕಸ್ಮಿಕವೆಂದು ಹೇಳಿತ್ತು. ಹಂಟರ್ ಎಂಬ ನ್ಯಾಯಾಧೀಶನು ತನಿಖಾ ಸಮಿತಿಯ ಅಧ್ಯಕ್ಷತೆಯಲ್ಲಿ ನೀಡಿದ ವರದಿ ಬ್ರಿಟಿಷ್ ಪಕ್ಷಪಾತಿಯಾಗಿತ್ತು.

ಹತ್ಯಾಕಾಂಡದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ಬ್ರಿಟಿಷರು ಮಾಡದೆ ಇದ್ದಾಗ ಕಾಂಗ್ರೆಸ್‌ನ ಪಂಡಿತ ಮದನ ಮೋಹನ ಮಾಳವೀಯ, ಮೋತಿಲಾಲ್‌ ನೆಹರು, ಚಿತ್ತರಂಜನದಾಸ್, ಅಬ್ಬಾಸ್ ತ್ಯಾಬ್ಜಿ ಇವರನ್ನೊಳಗೊಂಡ ಸಮಿತಿ ರಚಿಸಿ ತನಿಖೆ ಮಾಡಿದಾಗ ಹತ್ಯಾಕಾಂಡದ ಕ್ರೌರ್ಯ ಬಯಲಿಗೆ ಬಂತು. ಲಾಲಾ ಲಜಪತ ರಾಯರು ಸಹ ಈ ಕೃತ್ಯಕ್ಕೆ ಮೈಕಲ್ ಓ ಡಯರ್ ನೇರ ಹೊಣೆಗಾರನೆಂದು ತನಿಖೆ ಮಾಡಿ ಸ್ಪಷ್ಟಪಡಿಸಿದರು.

ಕ್ರಾಂತಿಕಾರಿಗಳ ಉದಯಕ್ಕೆ ಕಾರಣ

1919ರ ಡಿಸೆಂಬರ್‌ನಲ್ಲಿ ಅಮೃತಸರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೃತ್ಯವನ್ನು ಖಂಡಿಸಲಾಯಿತು. ಅಧಿವೇಶನದ ನಂತರ ಸ್ವಾತಂತ್ರ್ಯ ಚಳುವಳಿಯ ರಂಗ ಪರದೆಯಿಂದ ಲೋಕಮಾನ್ಯ ತಿಲಕರು ನಿರ್ಗಮಿಸಿದರೆ, ಗಾಂಧಿ ಮುಂದಿನ ಹೋರಾಟಗಳ ನಾಯಕನಾಗಿ ಮೆರೆದರು. ಈ ಘಟನೆ ಭಾರತೀಯರ ಹೋರಾಟವನ್ನು ದಮನಗೊಳಿಸುವ ಬದಲು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿ ದುರಾಡಳಿತದ ವಿರುದ್ಧದ ಹೋರಾಟ ತೀವ್ರಗೊಂಡು ಭಗತ್‌ಸಿಂಗ್, ಚಂದ್ರಶೇಖರ್ ಆಜಾದ್, ರಾಮಪ್ರಸಾದ್ ಬಿಸ್ಮಿಲ್ಲಾ, ಆಶ್ಫಾಕ್‌ ಉಲ್ಲಾಖಾನ್, ಮೊದಲಾದ ಕ್ರಾಂತಿಕಾರಿಗಳಿಗೆ ಜನ್ಮ ನೀಡಿತು. ಕ್ರಾಂತಿಕಾರಿಗಳು ಹೋರಾಟದ ಆಕಾಶದಲ್ಲಿ ಬರಸಿಡಿಲಾಗಿ ಕೋಲ್ಮಿಂಚಾಗಿ ಕಾಣಿಸಿಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾದರು. ಭಾರತವಷ್ಟೆಯಲ್ಲ ಇಡೀ ಏಷ್ಯಾದಲ್ಲಿ ರಾಷ್ಟ್ರೀಯ ಚಳುವಳಿಯ ಕಾವು ಕಾಡ್ಗಿಚ್ಚಿನಿಂದ ಹಬ್ಬಲಾರಂಭಿಸಿತು.

ಗುರುದೇವ ರವೀಂದ್ರನಾಥ ಟ್ಯಾಗೋರ್‌ ತಮ್ಮ ‘ನೈಟ್‌ಹುಡ್’ ಪದವಿಯನ್ನು ಹಿಂತಿರುಗಿಸಿದರು. ಚರ್ಚಿಲ್ ಕೂಡ ಈ ಘಟನೆಯನ್ನು ಖಂಡಿಸಿದ್ದ. ಡೈಲಿ ಹೆರಾಲ್ಡ್ ಪತ್ರಿಕೆ ದಯೆ ಕರುಣೆಯನ್ನು ಬೋಧಿಸುವ ಕ್ರೈಸ್ತ ಧರ್ಮಕ್ಕೆ ದೊಡ್ಡ ಕಳಂಕವೆಂದು ಹೇಳಿತು.

ತೀರಾ ನಾಚಿಗೇಡಿನ ವಿಚಾರವೆಂದರೆ ಡಯರ್‌ನನ್ನು ನಿರಾಪರಾಧಿಯೆಂದು ಹೊಗಳಿ ಭಾರತದಲ್ಲಿದ್ದ ಯುರೋಪಿಯನ್ನರ ಸಂಘ ಡಯರ್‌ನನ್ನು ಬ್ರಿಟಿಷ್ ಸಾಮ್ರಾಜ್ಯದ ರಕ್ಷಕನೆಂದು ಹೊಗಳಿ 20,000 ಪೌಂಡುಗಳ ನಿಧಿಯನ್ನೂ ಸಮರ್ಪಿಸಿತು. ಆದರೆ ಹತ್ಯಾಕಾಂಡದ ಸಂಚುಕೋರ ಕರ್ನಲ್ ಡಯರ್ ಪಾರ್ಶ್ವವಾಯು ಮತ್ತು ಮೆದುಳಿನ ರಕ್ತಸ್ರಾವದಿಂದ ನರಳಿ 1927 ಜುಲೈ 23ರಂದು ಮರಣಿಸಿದ.

ಹತ್ಯಾಕಾಂಡವನ್ನು ಹತ್ತಿರದಿಂದ ನೋಡಿದ್ದ ಪಂಜಾಬಿನ ಧೀರಪುತ್ರ ಉಧಾಂಸಿಂಗ್ ಓ ಡಯರ್‌ನನ್ನು ಲಂಡನ್‌ನ ಕ್ಯಾಕಿಸ್ಟಾನ್ ಹಾಲ್‌ನಲ್ಲಿ 1940ರ ಮಾರ್ಚ್‌ 13ರಂದು ಸಾರ್ವಜನಿಕವಾಗಿ ಗುಂಡಿಕ್ಕಿ ಸಾಯಿಸಿದ. ಬ್ರಿಟಿಷ್ ಇತಿಹಾಸಕಾರ ಟೇಲರ್‌ನೆಂಬ ವಿದ್ವಾಂಸ ‘ಭಾರತದಲ್ಲಿ ಬ್ರಿಟಿಷ್ ಆಡಳಿತದ ಅಂತಿಮ ದಿನಗಳನ್ನು ಹೆಚ್ಚು ಹತ್ತಿರವಾಗಿಸಿದ್ದು ಜಲಿಯನ್‌ವಾಲಾಬಾಗ್ ಘಟನೆ’ ಎಂದಿದ್ದಾನೆ.