ಸಾರಾಂಶ
- ಪ್ರಿಯಾ ಕೆರ್ವಾಶೆ‘
ನಮ್ಮೂರಲ್ಲಿ ಮಳೆ ಜಾಸ್ತಿ. ಒಮ್ಮೆ ಜೋರು ಮಳೆ ಬಂದಾಗ ನಾವು ಕಟ್ಟಿದ ಶಾಲೆ ತಳದಿಂದಲೇ ಕುಸಿದು ಬಿತ್ತು. ಊರವರಿಗೆ ಆಡಿಕೊಳ್ಳಲು ಒಂದು ವಿಷಯ ಸಿಕ್ಕಿತು. ಆದರೆ ನಾವು ಬಿಟ್ಟೇವಾ? ಮಳೆನಿಂತ ಮರುದಿನದಿಂದಲೇ ಮತ್ತೆ ಶಾಲೆ ಕಟ್ಟಲು ಶುರು ಮಾಡಿದೆವು.’
ಹಿಂದಿಯಲ್ಲಿ ಕೊಂಚ ಸಂಕೋಚ, ಇನ್ನೊಂಚೂರು ರಾಗ ಬೆರೆಸಿ ಬಾಸ್ಮತಿ ಮಾತನಾಡುತ್ತಿದ್ದರು. ಈಕೆ ಜಾರ್ಖಂಡ್‌ನ ‘ಹೊ’ ಬುಡಕಟ್ಟಿಗೆ ಸೇರಿದವರು. ಜಾರ್ಖಂಡ್‌ನ ಪಿ ಎಸ್ ಮಂಜ್‌ಹರಿ ಜಿಲ್ಲೆಯ ಲಂಜ್‌ಹರಿ ಹಳ್ಳಿಯಲ್ಲಿ ಇವರ ವಾಸ.
ಶಾಲೆಯಿಲ್ಲದ ತನ್ನೂರಲ್ಲಿ ತನ್ನ ಕೈಯ್ಯಾರೆ ಶಾಲೆ ಕಟ್ಟಿದ ಧೀರ ದಿಟ್ಟ ಹೆಣ್ಣು ಈ ಬಾಸ್ಮತಿ. ನಮಗೆಲ್ಲ ಪರಿಮಳ ಬೆರೆತ ಬಾಸ್ಮತಿ ಅಕ್ಕಿ ಚಿರಪರಿಚಿತ. ಅದೇ ಹೆಸರಿನ ಈ ಹೆಣ್ಣುಮಗಳು ತನ್ನ ಬುಡಕಟ್ಟಿನ ಮಕ್ಕಳಿಗೆ ಅಕ್ಷರದ ತುತ್ತುಣಿಸೋ ಕೆಲಸದಲ್ಲಿ ನಿರತೆ. ಈ ಬಾಸ್ಮತಿಯ ಕಥೆ ಅವಳ ಮಾತಲ್ಲೇ ಹೇಳೋದು ಚಂದ.
‘ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಊರಲ್ಲಿ ಬಡತನ ಇದೆ, ಶಿಕ್ಷಣ ಇಲ್ಲ, ನಮ್ಮ ಬದುಕು ಕಷ್ಟದ್ದು ಅನ್ನೋದೆಲ್ಲ ಗೊತ್ತಾಗುತ್ತಿರಲಿಲ್ಲ. ಕಾಡು ಸಮೃದ್ಧವಾಗಿತ್ತು. ಹಣ್ಣು ಹಂಪಲು ತಿನ್ನುತ್ತಾ, ನದಿ ನೀರಲ್ಲಿ ಈಜಾಡುತ್ತಾ, ಕಾಡಲ್ಲಿ ಕುಣಿಯುತ್ತಾ ಹಾಯಾಗಿದ್ದೆವು. ಆದರೆ ನನಗೆ ಸಿಕ್ಕ ಶಿಕ್ಷಣ ಸಿಗುತ್ತಾ ಹೋದಂತೆ ವಾಸ್ತವದ ಅರಿವಾಗುತ್ತಾ ಬಂತು. ಬೇರೆಲ್ಲ ಬಿಡಿ, ನಮ್ಮ ಸಮುದಾಯದ ಮಂದಿಗೆ ತೀರ ಓದು ಬರಹ ಕಲಿಯೋದಕ್ಕೂ ವ್ಯವಸ್ಥೆ ಇಲ್ಲವಲ್ಲ ಅನಿಸತೊಡಗಿತು. ಆದರೆ ಊರ ಜನ ಇದರ ಬಗ್ಗೆ ಎಲ್ಲ ಹೆಚ್ಚು ತಲೆಕೆಡಿಸಿದ ಹಾಗಿರಲಿಲ್ಲ.’
ಈ ಬಾಸ್ಮತಿ ಬಹಳ ಬೇಗ ತನಗೆ ಶಿಕ್ಷಣ ಬೇಕು ಅನ್ನೋದನ್ನು ಕಂಡುಕೊಂಡಳು. ಪಿಯುಸಿವರೆಗೂ ಛಲ ಬಿಡದೇ ಓದಿ ಪಾಸಾಗ್ತಾ ಬಂದಳು. ಆದರೆ ಡಿಗ್ರಿಗೆ ಬರುವಷ್ಟರಲ್ಲಿ ಇನ್ನು ಶಿಕ್ಷಣ ಮುಂದುವರಿಸುವುದು ಕಷ್ಟ ಅನಿಸಿತು. ಸೆಕೆಂಡ್ ಇಯರ್ ಡಿಗ್ರಿಗೆ ಕಾಲೇಜಿಗೆ ಗುಡ್‌ಬೈ ಹೇಳಬೇಕಾಗಿ ಬಂತು.
ಈ ನಡುವೆ ಕೇವಲ 17 ವರ್ಷಕ್ಕೇ ಈ ಹುಡುಗಿಗೆ ಅವರ ಬುಡಕಟ್ಟು ಪದ್ಧತಿಯಂತೆ ಮದುವೆ ಆಗಿಬಿಟ್ಟಿತ್ತು. ಮಡಿಲಿಗೆ ಮಗುವೂ ಬಂತು. ಮಗು ಹುಟ್ಟಿ ವಾರ ಕಳೆಯುವುದರೊಳಗೆ ಬಾಸ್ಮತಿಗೆ ಅದೇನನಿಸಿತೋ, ತನ್ನ ಸ್ನೇಹಿತೆಯೊಬ್ಬಳ ಜೊತೆಗೆ ಮರದಡಿಯಲ್ಲೇ ತನ್ನ ಸಮುದಾಯದ ಮಕ್ಕಳಿಗೆ ಅಕ್ಷರ ತಿದ್ದಿಸಲು ಶುರುವಿಟ್ಟಳು. ಇದಕ್ಕೆ ಕುಹಕವಾಡಿದವರೇ ಬಹಳ. ಆದರೆ ಈ ಹುಡುಗಿಗೆ ಹಠ ಬಂದುಬಿಟ್ಟಿತ್ತು, ಏನಾದ್ರೂ ಸರಿ, ನಮ್ಮ ಬುಡಕಟ್ಟಿನ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿಯೇ ಸಿದ್ಧ ಅಂದುಕೊಂಡಳು.
ಈ ಬಗ್ಗೆ ಬಾಸ್ಮತಿ ವಿವರಿಸೋದು ಹೀಗೆ.
‘ನಾವು ಶಾಲೆ ಶುರು ಮಾಡಿದ್ದು ಮರದ ಅಡಿಯಲ್ಲಿ. ನಾನು ಮತ್ತು ಸುಜಾತ ಎಂಬ ಹುಡುಗಿ ಸೇರಿಕೊಂಡು ನಾಲ್ಕೈದು ಮಕ್ಕಳನ್ನು ಕಷ್ಟಪಟ್ಟು ಕೂರಿಸಿ ಅವರಿಗೆ ಅಕ್ಷರ ತಿದ್ದಿಸಲು ಶುರು ಮಾಡಿದೆವು. ಆದರೆ ಮರದಡಿ ಬಿಸಿಲು, ಮಳೆ, ಚಳಿ ಎನ್ನದೇ ಕಲಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ನಮ್ಮ ಸಮುದಾಯಕ್ಕಾಗಿ ಶಾಲೆಯನ್ನೇ ಕಟ್ಟೋಣ ಎಂದುಕೊಂಡೆ. ಈ ವಿಚಾರವನ್ನು ನಮ್ಮೂರಿನ ಪಂಚಾಯ್ತಿ ಮುಂದೆಯೂ ಹೇಳಿದೆ. ಎಲ್ಲರೂ ಶಾಲೆ ಮಾಡೋಣ ಅಂತೇನೋ ಅಂದರು. ಆದರೆ ಮಾಡೋಣ ಅಂದರೆ ಸಾಕಾ? ಕೆಲಸ ಶುರು ಆಗಬೇಕಲ್ವಾ? ಬೇರೆಯವರ ಸಹಾಯ ಸಿಗುವ ಲಕ್ಷಣ ಕಾಣಲಿಲ್ಲ. ನಾನು, ಅಮ್ಮ, ಒಂದಿಬ್ಬರ ಜೊತೆ ಸೇರಿಕೊಂಡು ಶಾಲೆಗೆ ಪಾಯ ತೆಗೆಯತೊಡಗಿದೆವು. ನಮ್ಮ ಸತತ ಕೆಲಸದಿಂದ ಮೂರು ಕೋಣೆಗಳ ಮಣ್ಣಿನ ಕಟ್ಟಡ ನಿರ್ಮಾಣವಾಯ್ತು. ಸದ್ಯ, ಇನ್ನು ಮಕ್ಕಳು ಬಿಸಿಲು, ಮಳೆಯಲ್ಲಿ ಒದ್ದಾಡಬೇಕಿಲ್ಲ ಅಂದುಕೊಂಡು ಇನ್ನೇನು ಶಾಲೆಯಲ್ಲಿ ಮಕ್ಕಳಿಗೆ ಪಾಠ ಶುರು ಮಾಡಬೇಕು ಅಂದುಕೊಂಡಿದ್ದೆವು. ಅಷ್ಟರಲ್ಲಿ ಧೋ ಅಂತ ಮಳೆ ಸುರಿಯಲಾರಂಭಿಸಿತು. ನಮ್ಮೂರಲ್ಲಿ ಮಳೆಯ ಅಬ್ಬರ ಜಾಸ್ತಿ. ಹಾಗೆ ಸುರಿದ ಮಳೆಗೆ ನಮ್ಮ ಶಾಲೆ ತಳದಿಂದಲೇ ಕುಸಿದುಬಿತ್ತು. ನಮಗೆ ಕಟ್ಟಡ ಕಟ್ಟಿ ಅಭ್ಯಾಸ ಇಲ್ಲ. ಹೀಗಾಗಿ ಪಾಯ ಗಟ್ಟಿ ಇಲ್ಲದೇ ಕಟ್ಟಡ ಕುಸಿದಿತ್ತು. ಊರ ಜನ ನಮ್ಮನ್ನು ನೋಡಿ ಮತ್ತೊಮ್ಮೆ ನಕ್ಕರು. ಮಳೆ ನಿಂತಿತು. ನಮಗೆ ಅಷ್ಟೊತ್ತಿಗಾಗಲೇ ಕಟ್ಟಡ ಕಟ್ಟುವ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಬಂದಿತ್ತು. ಅದರಲ್ಲಿ ಗಟ್ಟಿ ಪಾಯ ಮಾಡಿ ಮತ್ತೊಮ್ಮೆ ಶಾಲೆ ಕಟ್ಟಲು ಮುಂದಾದೆವು. ನಮ್ಮ ಕೆಲವು ದಿನಗಳ ಸತತ ಪರಿಶ್ರಮದಿಂದ ಶಾಲೆ ನಿರ್ಮಾಣವಾಯ್ತು. ರೂಫ್‌ಗೆ ತಗಡಿನ ಶೀಟನ್ನು ಹೊದೆಸಿದೆವು.’
ಹೀಗೆ ಶುರುವಾದ ಶಾಲೆಗಾಗಿ 2020ರಲ್ಲಿ ಬಾಸ್ಮತಿ ಒಂದು ಟ್ರಸ್ಟ್ ಆರಂಭ ಮಾಡುತ್ತಾರೆ. ‘ರೂರಲ್ ಡೆವಲಪ್‌ಮೆಂಟ್ ಆಫ್ ಚೈಲ್ಡ್ ಎಜುಕೇಶನ್ ಆ್ಯಂಡ್ ವುಮೆನ್ ಎಂಪವರ್‌ಮೆಂಟ್’ ಎಂಬ ಹೆಸರಿನಲ್ಲಿ ಈ ಟ್ರಸ್ಟ್ ಮೂಲಕ ಶಾಲೆ ಕಾರ್ಯಾಚರಿಸುತ್ತಿದೆ.
ಅಂದು ಕೆಲವೇ ಕೆಲವು ಮಕ್ಕಳಿದ್ದ ಶಾಲೆಯಲ್ಲಿ ಇಂದು 320ಕ್ಕೂ ಅಧಿಕ ಮಕ್ಕಳಿದ್ದಾರೆ. ಎಷ್ಟೋ ಮಕ್ಕಳು ಇದೇ ಶಾಲೆಯಲ್ಲೇ ಉಳಿಯುತ್ತಾರೆ. ಬಾಸ್ಮತಿ ಅವರನ್ನೂ ಸೇರಿಸಿ ಸುಮಾರು 20 ಜನ ಶಿಕ್ಷಕರಿದ್ದಾರೆ.
‘ನಮ್ಮ ಶಾಲೆಯಲ್ಲೀಗ ಏಳನೇ ಕ್ಲಾಸ್‌ವರೆಗೂ ತರಗತಿ ನಡೆಯುತ್ತದೆ. ಆದರೆ ಒಂದು ಸೆಲೆಬಸ್ ರೂಪಿಸಿ ಅದರಂತೆ ಪಾಠ ಮಾಡುವ ಪದ್ಧತಿ ಇನ್ನೂ ಶುರುವಾಗಿಲ್ಲ. ಏಕೆಂದರೆ ಅದಕ್ಕೆ ತಕ್ಕ ಶೈಕ್ಷಣಿಕ ಸಲಕರಣೆ ನಮ್ಮಲ್ಲಿಲ್ಲ. ನಾವು ಹತ್ತಿರದ ಪಟ್ಟಣದಿಂದ ಮಕ್ಕಳು ಓದಿಬಿಟ್ಟ ಪುಸ್ತಕಗಳನ್ನೆಲ್ಲ ಇಲ್ಲಿಗೆ ಎತ್ತಿಕೊಂಡು ಬರುತ್ತೇವೆ. ಮಕ್ಕಳಿಗೆ ಬೇಸಿಕ್ ಓದು, ಬರವಣಿಗೆಯಷ್ಟಾದರೂ ಕಲಿಸಬೇಕು ಅಂದುಕೊಳ್ಳುತ್ತೇವೆ. ಏಕೆಂದರೆ ನಮ್ಮಲ್ಲಿ 10ನೇ ಕ್ಲಾಸ್ ಓದುವ ವಯೋಮಾನದ ಹುಡುಗರಿಗೆ 2 ಕ್ಲಾಸ್ ಮಕ್ಕಳಷ್ಟೂ ಓದು, ಬರಹ ಇರೋದಿಲ್ಲ. ಹೀಗಾಗಿ ಮೊದಲು ಅಕ್ಷರ ಬರೆಯುವುದು, ಓದುವುದನ್ನು ಕಲಿಸೋಣ. ಆಮೇಲೆ ಅವರನ್ನು ಹೇಗಾದರೂ ಸುಧಾರಿಸಬಹುದು ಎಂಬುದು ನಮ್ಮ ನಿಲುವು. ಆದರೂ ಮುಂದಿನ ವರ್ಷದಿಂದ ಒಂದು ಸೆಲೆಬಸ್ ರೂಪಿಸುವ ಐಡಿಯಾ ಇದೆ’ ಎನ್ನುವ ಬಾಸ್ಮತಿ ಸದ್ಯ ಅವರ ಶಾಲೆಯ ಅಡ್ಮಿಶನ್ ಕುರಿತ ಸಂಗತಿಯನ್ನು ಅರ್ಧ ಖುಷಿ, ಅರ್ಧ ಬೇಸರದಿಂದ ಹೇಳುತ್ತಾರೆ.
‘ಶುರುವಲ್ಲಿ ನಮ್ಮ ಶಾಲೆಗೆ ಮಕ್ಕಳು ಬಂದದ್ದು ಗೊತ್ತಾದರೆ ಮನೆಯಲ್ಲಿ ಪೋಷಕರು ಅವರನ್ನು ಹೊಡೆಯುತ್ತಿದ್ದದ್ದೂ ಇತ್ತು. ಆದರೆ ಈಗ ಅವರೇ ಶಾಲೆಗೆ ಕರೆತಂದು ಬಿಡುತ್ತಿದ್ದಾರೆ ಅನ್ನೋದೆ ಖುಷಿ. ಇನ್ನೊಂದು ಕಡೆ ಪ್ರತೀ ವರ್ಷವೂ ನಮ್ಮ ಶಾಲೆಯಲ್ಲಿ ಅಡ್ಮಿಶನ್ ಕೇಳಿಕೊಂಡು ಬರುವ ಮಕ್ಕಳ ಸಂಖ್ಯೆ ಬೆಳೆಯುತ್ತಲೇ ಇದೆ. ಆದರೆ ಹಾಗೆ ಕೇಳಿಕೊಂಡು ಬಂದ ಎಲ್ಲರನ್ನೂ ಶಾಲೆಗೆ ಸೇರಿಸುವಷ್ಟು ಸೌಕರ್ಯ ನಮಗಿಲ್ಲ. ಹೀಗಾಗಿ ಬೇಸರದಿಂದಲೇ ವಾಪಾಸ್ ಕಳಿಸುತ್ತಿದ್ದೇವೆ. ಸದ್ಯ ಆರು ಬಿಲ್ಡಿಂಗ್ ಇವೆ. ದೊಡ್ಡ ಹಾಲ್ ಥರ ಮಾಡಿ ಅಲ್ಲಿ ಎರಡು ತರಗತಿಯ ಮಕ್ಕಳಿಗೆ ಪಾಠ ಹೇಳುತ್ತೇವೆ’ ಎನ್ನುತ್ತಾರೆ.
ಸದ್ಯ ಬಾಸ್ಮತಿ ಡಿಪ್ಲೊಮೊ ವಿದ್ಯಾಭ್ಯಾಸದ ಜೊತೆಗೆ ತಾನೇ ಕಟ್ಟಿದ ಶಾಲೆಯ ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
33 ವರ್ಷ ಹರೆಯ ಈ ಹೆಣ್ಣುಮಗಳಿಗೆ ಇತ್ತೀಚೆಗೆ ಸಿಐಐ ಫೌಂಡೇಶನ್‌ನಿಂದ ‘ಮಾದರಿ ಮಹಿಳೆ’ ಪ್ರಶಸ್ತಿ ಬಂದಿದೆ.
ಬಾಕ್ಸ್ ಈ ಶಾಲೆಗೂ ಬೆಂಗಳೂರಿನ ನಂಟು
ಬಾಸ್ಮತಿ ಕಟ್ಟಿರುವ ಈ ಶಾಲೆಗೂ ಬೆಂಗಳೂರಿಗೂ ನಂಟಿದೆ. ಅದು ಬಹಳ ಸ್ವಾರಸ್ಯಕರವಾದದ್ದು. ಕೆಲವು ವರ್ಷಗಳ ಹಿಂದೆ ಯಾವುದೋ ಟೂರಿಸಂ ಗೆ ಸಂಬಂಧಿಸಿದ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ಪರ್ತಕರ್ತೆಯೊಬ್ಬರು ಜಾರ್ಖಂಡ್‌ಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಬಾಸ್ಮತಿ ಪರಿಚಯವಾಗುತ್ತದೆ. ಆ ಹೊತ್ತಿಗೆ ಬಾಸ್ಮತಿ ಊರಿನಲ್ಲಿ ಬಿರುಗಾಳಿ ಮಳೆ. ಆ ಮಳೆಗೆ ಶಾಲೆಗೆ ಹೊದೆಸಿದ್ದ ಶೀಟ್ ಹಾರಿ ಹೋಗುತ್ತದೆ. ಅಷ್ಟಾದರೂ ಶಾಲೆಯಲ್ಲಿ ಪಠ್ಯ ಚಟುವಟಿಕೆ ಮುಂದುವರಿಸುವ ಹಠ ಬಾಸ್ಮತಿ ಅವರದ್ದು. ಇವರ ಈ ಪ್ರೀತಿ ಗಮನಿಸಿದ ಆ ಪತ್ರಕರ್ತೆ ಶಾಲೆಗೆ ಶೀಟ್ ಹೊದೆಸುವ ವ್ಯವಸ್ಥೆ ಮಾಡುತ್ತಾರೆ. ಜೊತೆಗೆ ತಮ್ಮ ಬೆಂಗಳೂರಿನ ಅನೇಕ ಸ್ನೇಹಿತರಿಗೆ ಈ ಶಾಲೆಯ ಬಗ್ಗೆ ತಿಳಿಸಿ ನೆರವಿನ ಕೋರಿಕೆ ಮುಂದಿಡುತ್ತಾರೆ. ಅದರಂತೆ ಬೆಂಗಳೂರಿನ ಅನೇಕ ಸಮಾನ ಮನಸ್ಕರು ಈ ಶಾಲೆಗೆ ನೆರವಾಗುತ್ತ ಬಂದಿದ್ದಾರೆ. ಈ ಪತ್ರಕರ್ತೆಯ ಸಹಾಯದಿಂದ ಬಾಸ್ಮತಿ ಸದ್ಯ ಬೆಂಗಳೂರಿನ ಅಜೀಂ ಪ್ರೇಮ್ ಜೀ ಯೂನಿವರ್ಸಿಟಿಯಲ್ಲಿ ಡಿಪ್ಲೊಮೊ ಓದುತ್ತಿದ್ದಾರೆ. ಮಕ್ಕಳ ಬೇಸಿಕ್ ಕಲಿಕೆ ಕುರಿತಾದ ಈ 1 ವರ್ಷದ ಕೋರ್ಸ್ ಮಾಡಲು ನಾಲ್ಕೈದು ಸಲ ಬೆಂಗಳೂರಿಗೆ ಬಂದಿದ್ದಾರೆ.
ಈ ನಡುವೆ ಬೆಂಗಳೂರಿನ ಖ್ಯಾತ ಆಯೋಜಕಿ, ನಿರೂಪಕಿ ಸಂಧ್ಯಾ ಎಸ್ ಕುಮಾರ್ ಅವರು ಪ್ರತೀ ವರ್ಷ ರಾಷ್ಟ್ರಮಟ್ಟದ ಖ್ಯಾತ ಗಾಯಕರನ್ನು ಕರೆಸಿ ದೊಡ್ಡ ಮಟ್ಟದ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಾರೆ. ಇದರಲ್ಲಿ ಬಂದ ಹಣವನ್ನು ಸಾಮಾಜಿಕ ಸಂಘ ಸಂಸ್ಥೆಗಳಿಗೆ ನೀಡುತ್ತಾರೆ. ಈ ಬಾರಿ ಆಯೋಜಿಸಿದ್ದ ಮೊಹಮ್ಮದ್ ರಫಿ ಕುರಿತ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಬಾಸ್ಮತಿ ಕಟ್ಟಿರುವ ಈ ಶಾಲೆಗೆ ಮುಡಿಪಾಗಿಟ್ಟಿದ್ದಾರೆ. ಸಿದ್ಧಾರ್ಥ್ ಪರೆಯಾ ಹಾಗೂ ಗೀತಾ ಬಿರುವ ಇವರಿಗೆ ಜೊತೆಯಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ ರೂರಲ್ ಡೆವಲಪ್‌ಮೆಂಟ್ ಆಫ್ ಚೈಲ್ಡ್ ಎಜುಕೇಶನ್ ಆ್ಯಂಡ್ ವುಮೆನ್ ಎಂಪವರ್‌ಮೆಂಟ್ ವೆಬ್‌ಸೈಟ್ : http://www.rdcewe.org/