ಸಕುರಾ, ಸಾಕೆ ಮತ್ತು ಸಯೂರಿ ! ಹಮ್ಮು ಬಿಮ್ಮುಗಳಿಲ್ಲದೆ ತನ್ನಷ್ಟಕ್ಕೆ ತಾನು ಅರಳಿತು

| N/A | Published : Apr 20 2025, 01:50 AM IST / Updated: Apr 20 2025, 08:14 AM IST

Japanese cherry blossom
ಸಕುರಾ, ಸಾಕೆ ಮತ್ತು ಸಯೂರಿ ! ಹಮ್ಮು ಬಿಮ್ಮುಗಳಿಲ್ಲದೆ ತನ್ನಷ್ಟಕ್ಕೆ ತಾನು ಅರಳಿತು
Share this Article
  • FB
  • TW
  • Linkdin
  • Email

ಸಾರಾಂಶ

ಜಪಾನಿನ ಹೂ ಮಾಸದ ಬಗೆಗೆ ಸಚಿತ್ರ ಲೇಖನ

- ಡಾ. ಕೆ.ಎಸ್. ಪವಿತ್ರ

ನಾನು ಜಪಾನಿಗೆ ಹೋದದ್ದು 15 ವರ್ಷಗಳ ಕೆಳಗೆ. ಕಲ್ಪನೆಯ ಕಣ್ಣು ಇನ್ನೂ ಪೂರ್ತಿ ಅರಳಿರದ ಸಮಯ; ಬುದ್ಧಿಗೆ ಅಷ್ಟೇನೂ ಮಾಹಿತಿಯೂ ಇರದ ಕಾಲ. ‘ಚೆರ್ರಿ ಬ್ಲಾಸಮ್’ ಎಂಬ ಉತ್ಸವದ ಬಗ್ಗೆ ಕೇಳಿದ್ದು ಬಿಟ್ಟರೆ ಮತ್ತೇನೂ ಗೊತ್ತಿರಲಿಲ್ಲ. ಆಗ ಜಪಾನ್‌ನಲ್ಲಿ ಫೆಲೋಷಿಪ್‌ಗೆಂದು ಒಂದು ವಾರ ಕಳೆದರೂ ಅಲ್ಲಿನ ಜನರ ಶಿಸ್ತು-ರೈಲುಗಳಷ್ಟೇ ಆಗ ನನ್ನ ಅರಿವಿಗೆ ಬಂದ ವಿಷಯಗಳು. 

ಅದಾದ ಮೇಲೆ ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಎಂಬ ಡಾ|| ಶಿವರಾಮ ಕಾರಂತರ ಪ್ರವಾಸ ಕಥನ, ಜಪಾನ್‌ನ ಪ್ರಸಿದ್ಧ ‘ಗೇಷ್ಯಾ’ ಗಳ ಚರಿತ್ರೆಗಳು ಇವೆಲ್ಲವನ್ನೂ ಓದಿ ಮತ್ತೆ ಅವಕಾಶ ಸಿಕ್ಕರೆ ಈ ಬಾರಿ ಜಪಾನ್ ಸರಿಯಾಗಿ ಸವಿಯಲೇ ಬೇಕು ಅಂದುಕೊಂಡಿದ್ದೆ.ಟೋಕಿಯೋ ವಿಮಾನ ನಿಲ್ದಾಣದಲ್ಲಿ ಇಳಿದಾಗಲೇ ಅರಳಿ ನಿಂತ ತೆಳು ಗುಲಾಬಿ-ಬಿಳಿ ಹೂವಿನ ಹಗುರಾದ ಮರಗಳು ಕಣ್ಣಿಗೆ ಬಿದ್ದಿದ್ದವು. ‘ಮೆಮೋಯಿರ್ಸ್‌ ಆಫಾ ಗೇಷ್ಯಾ’ ಕಾದಂಬರಿಯ ‘ಸಯೂರಿ’ ಎಂಬ ಗಾಜುಕಣ್ಣಿನ ಚೆಲುವೆ ಗೇಷ್ಯಾಳನ್ನು ನೆನಪಿಸಿದ್ದವು. ಜಪಾನೀ ಸ್ನೇಹಿತೆ ಹಶಿನಾವೋ ಹೇಳಿದ್ದಳು ‘ಇದು ಸಕುರಾ ಸಮಯ’. ದಾರಿಯುದ್ದಕ್ಕೂ ಅಲ್ಲಲ್ಲಿ, ಕೆಲವೊಮ್ಮೆ ಸಾಲು ಸಾಲು ತೆಳು ಗುಲಾಬಿ ಬಣ್ಣದ ಸುಕುಮಾರ ಹೂವಿನ ಹೊರೆ ಹೊತ್ತ ತೆಳು ಕಾಂಡದ ಮರಗಳು. 

ಮೊಬೈಲ್ ತೆರೆದರೆ ‘ಚೆರ್ರಿ ಬ್ಲಾಸಮ್’ ಎಲ್ಲಿ, ಯಾವ ದಿನ ಆರಂಭವಾಗುತ್ತಿದೆ ಎಂಬ ಬಗ್ಗೆ ಊಹೆಗಳು, ಎಲ್ಲಿ ಪಾರ್ಟಿ ಮಾಡಬಹುದು ಎಂಬ ಸಲಹೆಗಳು.ನಾವು ‘ಸಾದಾ’ ಎಂದು ಭಾವಿಸುವ ಸ್ನಾನ, ಹೂದಾನಿಯಲ್ಲಿ ಹೂವಿಡುವುದು, ಚಹಾ ಕುಡಿಯುವುದು ಇಂತಹ ಪ್ರತಿಯೊಂದಕ್ಕೂ ಈ ಜಪಾನೀಯರು ಚಿತ್ರ- ವಿಚಿತ್ರ ಹೆಸರುಗಳನ್ನಿಟ್ಟು, ಅವುಗಳನ್ನು ಒಂದು ಕಲೆಯೇ ಎಂಬಂತೆ ನಂಬಿ-ನಂಬಿಸಿ ನಡೆಯುತ್ತಾರೆ; ಇದೂ ಅಂತದ್ದೇ ಒಂದು ರೀತಿ ಅಂದುಕೊಂಡು ನಗು ಬಂತು. ಆದರೂ ‘ಚೆರ್ರಿ ಬ್ಲಾಸಮ್’ -‘ಸಕುರಾ ಸವಿಯುವ ಸಮಯವಿದು’ ಎಂದುಕೊಂಡು ಯುನೋ ಪಾರ್ಕ್‌ನ ಬಳಿ ಹೋಗಿ ಅರಳಿದ್ದ, ಅರಳುತ್ತಿದ್ದ, ಅರಳಿ-ಬಾಡಿ ಬೀಳುತ್ತಿದ್ದ ಸಕುರಾ ಮರಗಳ ಕೆಳಗೆ ಕುಳಿತು ಸುತ್ತ ನೋಡತೊಡಗಿದೆ. ಹಾಗೇ ಯೋಚಿಸತೊಡಗಿದೆ.

ಡಿ.ವಿ.ಜಿ. ಒಂದು ಕವನದಲ್ಲಿ ಒಮ್ಮೆ ಜಗತ್ತಿನ ಎಂತೆಂತಹ ಅದ್ಭುತಗಳನ್ನು ನೋಡಿಯೂ ದೇವರು ‘ಮೆಚ್ಚಲಿಲ್ಲ, ತುಟಿಯ ಬಿಚ್ಚಲಿಲ್ಲ’ ವಂತೆ; ಒಂದು ಹೂ ಮಾತ್ರ ಯಾವ ಹಮ್ಮು ಬಿಮ್ಮುಗಳಿಲ್ಲದೆ ತನ್ನಷ್ಟಕ್ಕೆ ತಾನು ಅರಳಿತಂತೆ. ಆಗ ದೇವ ಮೊಗದಲ್ಲಿ ನಗು ಅರಳಿತಂತೆ ಎಂದು ಬರೆಯುತ್ತಾರೆ. ಜಪಾನೀ ಸಂಸ್ಕೃತಿಯಲ್ಲಿ ‘ಸಕುರಾ’ ಅಂತಹದೇ ದೈವಿಕ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಸಕುರಾ ಅರಳುವ ಸಮಯ ಹೊಸ ವರ್ಷದ (ನಮ್ಮ ಯುಗಾದಿಯ ಸಂದರ್ಭವೇ ಇದು), ರೈತರು ಹೊಸ ಬೆಳೆಗಳನ್ನು ಬಿತ್ತುವ, ಮಕ್ಕಳು ಶಾಲೆಯ ಒಂದು ವರ್ಷವನ್ನು ಮುಗಿಸಿ, ಮತ್ತೊಂದು ಹೊಸ ವರ್ಷವನ್ನು ಆರಂಭಿಸುವ ಸಮಯವನ್ನೂ ಇದು ಸಂಕೇತಿಸುತ್ತದೆ. ಬೌದ್ಧ ಮತ್ತು ಶಿಂಟೋ ಧರ್ಮಗಳನ್ನು ಅನುಸರಿಸುವ ಜಪಾನೀಯರಿಗೆ ‘ಸಕುರಾ’ ದಂತಹ ಚಂದದ ಹೂವಿನಲ್ಲಿಯೂ ಜೀವನದ ತತ್ತ್ವ ಕಾಣಿಸುವುದೇನೂ ಅಚ್ಚರಿಯ ಮಾತಲ್ಲ! ಸಾವಿರ ವರ್ಷಗಳಷ್ಟು ಹಿಂದೆಯೇ ಜಪಾನೀಯರು ಉಪಯೋಗಿಸಿದ ಪದ ಗುಚ್ಛ ‘ಮೋನೋ ನೋ ಅವಾರೆ’ ಜೀವನ, ಪ್ರೀತಿ ಮತ್ತು ಸೌಂದರ್ಯ ಇವುಗಳ ಕ್ಷಣಿಕತೆಗಳನ್ನು ಸಕುರಾದೊಂದಿಗೆ ಜೋಡಿಸುತ್ತದೆ. 

ಸಕುರಾ ಅರಳುವ ಸಮಯ ಹೆಚ್ಚೆಂದರೆ ಒಂದು ವಾರ. ಹೂ ಅರಳಿದ ಸಮಯದಲ್ಲಿ ಇಡೀ ಜಪಾನಿನ ತುಂಬ ವಸಂತದ ಸಂಭ್ರಮ. ಹೂ ಅರಳುವ ಮುನ್ಸೂಚನೆಯ ವಾರ್ತೆಗಳು ಮುಖ್ಯ ಸಮಾಚಾರವಾಗಿ ಪ್ರಸಾರವಾಗುತ್ತದೆ. ಸಕುರಾ ಕೆಳಗೆ ಸಾಕೆ ಸವಿಯುವ ‘ಹನಾಮಿ’ ಪಾರ್ಟಿಗಳಿಗೆ ಜನರು ತಯಾರಾಗುತ್ತಾರೆ. ಹಿಯಾನ್ ವಂಶಸ್ಥರ ಕಾಲದಲ್ಲಿ ಅಂದರೆ ಏಳರಿಂದ 12ನೇಯ ಶತಮಾನದ ಸಮಯದಲ್ಲಿ ಖ್ಯಾತನಾಮರು ಗೇಷ್ಯಾಗಳ ಮುಖ್ಯ ಕೇಂದ್ರ ಕ್ಯೋಟೋ ಎಂಬ ನಗರದ ಹೊರಗಿರುವ ಪರ್ವತಗಳ ಮೇಲೆ ಹೋಗಿ ‘ಸಕುರಾ’ ನೋಡಿ, ಸ್ಫೂರ್ತಿಯಿಂದ ಕವನ ಬರೆಯುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತು.

ಸೆಗ್ಯೋ ಎಂಬ ಭಿಕ್ಷು-ಕವಿ ತಾನು ಹುಣ್ಣಿಮೆಯ ದಿನ ಸಕುರಾ ಕೆಳಗೆ ಕುಳಿತು ಹೂ ನೋಡುತ್ತಾ ಸಾಯಬೇಕು ಎಂದೇ ಒಂದು ಕವನ ಬರೆದಿದ್ದನಂತೆ. ಆತನ ಪ್ರಾರ್ಥನೆ ಫಲಿಸಿರಬೇಕು! 1190ರಲ್ಲಿ ಚೈತ್ಯಾಲಯವೊಂದರಲ್ಲಿ ಹುಣ್ಣಿಮೆಯ ದಿನ ‘ಸಕುರಾ’ ನೋಡುತ್ತಲೇ ಆತ ಮರಣಿಸಿದನಂತೆ! ‘ಹನಾಮಿ’ ಪಾರ್ಟಿಗಳನ್ನು ಈ ಕಾಲದ ನಂತರ ಸಾಮಾನ್ಯ ಜನರೂ ಮಾಡಲಾರಂಭಿಸಿದರು. ಈಗಂತೂ ಜಪಾನೀಯರು ಮರದ ಕೆಳಗೆ ಹರಡುವ ಒಂದು ಬಟ್ಟೆ, ಪಿಕ್‌ನಿಕ್ ಬಾಸ್ಕೆಟ್ ಹೊತ್ತು ಹಗಲು-ರಾತ್ರಿ ಯಾವಾಗ ಬೇಕೆಂದರೂ ಪಾರ್ಟಿ ಮಾಡಲು ಸಿದ್ಧರು.ಬಿಳಿ-ಗುಲಾಬಿ ಬಣ್ಣದಿಂದ ಮನಸ್ಸಿಗೆ ಮುದ ನೀಡುವ ‘ಸಕುರಾ’ ದಿಂದ ಗೇಷ್ಯಾರನ್ನು ನೆನಪಿಸುವಂತೆಯೇ, ಹೊಡೆದಾಟದ ವೀರರಾದ ಜಪಾನಿನ ‘ಸಮುರಾಯ್’ ಗಳನ್ನೂ ಸಂಕೇತಿಸುತ್ತದೆ ಎಂದರೆ ಆಶ್ಚರ್ಯವೆನಿಸದೇ ಇರದು. 

 ಭಯವಿಲ್ಲದೇ ವೀರರಾಗಿ ಹೋರಾಡುವ, ಬೇಗ ಮರಣಿಸುವ ‘ಸಮುರಾಯ್’ಗಳು ‘ಸಕುರಾ’ ದಂತೆಯೇ ಕೆಲ ಸಮಯ ಮಾತ್ರ ಲೋಕದ ಗಮನ ಸೆಳೆಯುವವರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆತ್ಮಹತ್ಯಾ ದಾಳಿಗಳನ್ನು ನಡೆಸುತ್ತಿದ್ದ ಕಾಮಿಕಜೆ ಪೈಲಟ್‌ಗಳು ತಮ್ಮ ವಿಮಾನಗಳ ಮೇಲೆ ಸಕುರಾ ಹೂಗಳನ್ನು ಚಿತ್ರಿಸಿಕೊಳ್ಳುತ್ತಿದ್ದರಂತೆ. ತಮ್ಮ ಬಲಿದಾನವನ್ನು ಅವರು ‘ಚಕ್ರವರ್ತಿಯ ಮೇಲೆ ಹಾಕುವ ಸುಂದರ ಸಕುರಾ ಪಕಳೆಗಳಂತೆ’ ಎಂದೇ ಅವರು ಭಾವಿಸುತ್ತಿದ್ದರು. ಸುಂದರ ಸಕುರಾ ಸಮುರಾಯ್‌ಗಳಿಂದ ವೀರ ಸಕುರಾವಾದದ್ದು ಒಂದು ವಿಸ್ಮಯವೇ. ಮಾನವ ಮನಸ್ಸು ಎಲ್ಲಿಂದ ಎಲ್ಲಿಗೆ ಕಲ್ಪನೆಯನ್ನು ವಿಸ್ತರಿಸಬಲ್ಲದು ಎಂಬುದರ ಒಂದು ನಿದರ್ಶನವೂ ಇದಿರಬಹುದು.ಸಕುರಾದೊಂದಿಗೆ ಹೊಂದುವ ಮತ್ತೊಂದು ಪದ, ಜಪಾನೀಯರಿಗೆ ಅತ್ಯಂತ ಪ್ರಿಯವಾದ ‘ಸಾಕೆ’ ಎಂಬ ಮದ್ಯ. ಜಪಾನೀ ಪರಂಪರೆಯಿಂದ ಬಂದ ಅಕ್ಕಿಯನ್ನು ಹುದುಗೊಳಿಸಿ ಮದ್ಯ ತಯಾರಿಸುವ ವಿಧಾನವನ್ನು ಯುನೆಸ್ಕೋ ತನ್ನ ಜಾಗತಿಕ ಇಂಟ್ಯಾಜಿಬಲ್ ಹೆರಿಟೇಜ್ ಪಟ್ಟಿಯಲ್ಲಿ ಅಡಕಗೊಳಿಸಿದೆ. 

ಅಕ್ಟೋಬರ್ 1ನ್ನು ‘ಜಾಗತಿಕ ಸಾಕೆ ದಿನ’ವಾಗಿ ಆಚರಿಸಲಾಗುತ್ತದೆ ಎಂದರೆ ಜಪಾನೀಯರ ಮದ್ಯ ಪ್ರೀತಿ ನಮಗೆ ಅರಿವಾಗಬೇಕು. ಸಕುರಾಕ್ಕೂ ಸಾಕೆಗೂ ‘ಹನಾಮಿ’ ಪಾರ್ಟಿಗಳು ಗಟ್ಟಿಯಾಗಿ ಕೊಂಡಿಯನ್ನು ಬೆಸೆದು ಬಿಡುತ್ತವೆ. ಸಕುರಾದ ಜೀವನ ಕ್ಷಣಿಕ, ಹಾಗಾಗಿ ಅದನ್ನು ಪೂರ್ತಿಯಾಗಿ ಸವಿಯೋಣ’ ಎಂಬ ಸಂದೇಶವನ್ನು ಅರ್ಥ ಮಾಡಿಕೊಂಡಂತೆ, ಸಾಕೆಯ ನಶೆಯನ್ನು ಹನಾಮಿ ಪಾರ್ಟಿಗಳು ಏರಿಸುತ್ತದೆ! ಮನೋವಿಜ್ಞಾನಿಗಳು ಸಕುರಾ ಹೂವಿನಂತಹ ಸುಂದರ ಪರಿಸರ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ತರುತ್ತವೆ,ಸಿಟ್ಟು-ಅಳುಗಳನ್ನು ಕಡಿಮೆ ಮಾಡುತ್ತವೆ ಎಂದು ಅಧ್ಯಯನ ಮಾಡಿ ತೋರಿಸಿಯೇ ಬಿಟ್ಟಿದ್ದಾರೆ! ಇತರೆಡೆಗಳಲ್ಲಿಯೂ ಹೂ-ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸಬೇಕು ಎಂದು ಶಿಫಾರಸ್ಸನ್ನೂ ಮಾಡಿದ್ದಾರೆ. ಆದರೂ ನಾವೇಕೋ ನಮ್ಮ

ಉದ್ಯಾನನಗರಿ ಬೆಂಗಳೂರಿನಲ್ಲಿಯೂ ‘ಬೆಂಗಳೂರು ಬ್ಲೂಮ್ಸ್’ ಉತ್ಸವ ಮಾಡುವ ಉತ್ಸಾಹ ತೋರಿಸಿಲ್ಲ! ಸಕುರಾ ಹೂಗಳನ್ನು ಮುಟ್ಟಬೇಡಿ-ಚಿವುಟಬೇಡಿ ಎಂದು ಬೋರ್ಡುಗಳನ್ನು ಹಿಡಿದು ನಿಲ್ಲುವ, ಅದನ್ನು ಪಾಲಿಸುವ ಶಿಸ್ತು ನಮ್ಮಲ್ಲಿ ಕಡಿಮೆಯೇ!ಸಕುರಾ ಮರದ ಕೆಳಗೆ ಕುಳಿತಾಗ ಇವೆಲ್ಲವನ್ನೂ ಮಾತಾಡಿ, ಸುತ್ತ ಮುತ್ತಲ ಜನರೊಡನೆ ಚರ್ಚೆ ಮಾಡಿ ತಿಳಿದುಕೊಂಡರೂ, ಸಕುರಾ-ಸಾಕೆಗಳು ನನಗೆ ನೆನಪಿಸಿದ್ದು ಮತ್ತೆ ‘ಸಯೂರಿ’ ಎಂಬ ಚೆಲುವೆ ಗೇಷ್ಯಾಳನ್ನೇ. ಕಲಾವಿದೆಯರಾದ -ಚೆಲುವೆಯರಾದ ‘ಗೇಷ್ಯಾ’ಗಳು ತೊಡುವ ಚೆಂದದ ಕಿಮೋನೋ, ಮುಖದ ಪ್ರಸಾಧನಗಳು, ಬೇರೆ ಬೇರೆ ಹಂತದಲ್ಲಿ ‘ಸಾಕೆ ಸೆರಿಮೊನಿ’ಗಳು ಎಲ್ಲವೂ ಹೂವರಳಿ ಬೀಳುವ, ಅಳುವ ಸಕುರಾ -ವೀಪಿಂಗ್ ಚೆರ್ರಿ ಮರಗಳಾಗುವ, ಸೌಂದರ್ಯ ನಶಿಸುವ, ಕೆಲಕಾಲವಷ್ಟೇ ಕಣ್ಣು ಮುಂದಿದ್ದರೂ, ಬಹುಕಾಲ ಮನದಲ್ಲುಳಿಯುವ ಸುಂದರಿಯರನ್ನೇ ಜಪಾನಿನ ತುಂಬ ಅರಳುವ ಸಕುರಾ ನೆನಪಿಸುತ್ತದೆ. ಆದ್ದರಿಂದಲೇ ಸಕುರಾ ಎಂದರೆ ಅದು ಸುಂದರವೂ ಹೌದು, ವೀರವೂ ಹೌದು, ವಿಷಾದವೂ ಹೌದು!