ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರಸಿದ್ಧ ವ್ಯಕ್ತಿಗಳಿಗೆ ರಾಜ್‌ ಮಾದರಿ : ಬರಗೂರು ಅಭಿಮತ

| N/A | Published : Apr 19 2025, 02:06 AM IST / Updated: Apr 19 2025, 06:26 AM IST

ಸಾರಾಂಶ

ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರಸಿದ್ಧ ವ್ಯಕ್ತಿಗಳು ಹೇಗಿರಬೇಕು ಎಂಬುದಕ್ಕೆ ವರನಟ ಡಾ.ರಾಜ್‌ಕುಮಾರ್‌ ಅವರ ನಡೆ-ನುಡಿ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

 ಬೆಂಗಳೂರು : ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರಸಿದ್ಧ ವ್ಯಕ್ತಿಗಳು ಹೇಗಿರಬೇಕು ಎಂಬುದಕ್ಕೆ ವರನಟ ಡಾ.ರಾಜ್‌ಕುಮಾರ್‌ ಅವರ ನಡೆ-ನುಡಿ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕನ್ನಡ ಜನಶಕ್ತಿ ಕೇಂದ್ರದಿಂದ ಶುಕ್ರವಾರ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ವರನಟ ಡಾ.ರಾಜ್‌ಕುಮಾರ್‌ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿ, ಚಿತ್ರರಂಗವಾಗಲಿ ಅಥವಾ ಯಾವುದೇ ಕ್ಷೇತ್ರವಾಗಿರಲಿ, ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರು ಸಾರ್ವಜನಿಕ ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ರಾಜ್‌ಕುಮಾರ್‌ ಅವರು ಮಾದರಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ನಿಸರ್ಗದಲ್ಲಿ ದೇವರನ್ನು ಕಂಡರೆ, ರಾಜ್‌ಕುಮಾರ್‌ ಅವರು ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್‌ಕುಮಾರ್‌ ಅವರು ನಟಿಸಿದ ಚಿತ್ರಗಳು ಜನರಲ್ಲಿ ಕುಟುಂಬ ಪ್ರಜ್ಞೆಯನ್ನು ಮೂಡಿಸುತ್ತಿದ್ದವು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಚಿತ್ರಗಳ ಮೂಲಕ ಕನ್ನಡ ಭಾಷೆಯ ವೈವಿಧ್ಯತೆಯನ್ನು ತೋರಿಸಿಕೊಟ್ಟರು. ಭಾಷಿಕ ಮತ್ತು ಸಾಂಸ್ಕೃತಿಕ ಬಹುತ್ವವನ್ನು ಹೊಂದಿದ್ದರು. ಅವರ ಅಭಿನಯಕ್ಕೆ ಸಾಟಿಯೇ ಇಲ್ಲ. ನನಗೆ ಈ ಪ್ರಶಸ್ತಿ ಲಭಿಸಿರುವುದು ಹೆಚ್ಚು ಸಂತಸ ತಂದಿದೆ ಎಂದರು.

ಸದಭಿರುಚಿ ಚಿತ್ರಗಳು :ರಾಜ್‌ಕುಮಾರ್‌ ಅವರು ಜನರಿಗೆ ಏನನ್ನು ನೀಡಿದ್ದಾರೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಚಿತ್ರಗಳ ಮೂಲಕ ನೋಡುಗರಿಗೆ ಆನಂದ ನೀಡಿದರು, ಸದಭಿರುಚಿ ಬೆಳೆಸಿದರು, ಮೌಲ್ಯಗಳಿಗೆ ಕಾರಣರಾಗಿದ್ದು ಕಡಿಮೆ ಸಾಧನೆಯಲ್ಲ. ಇಂದು ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ನೈತಿಕತೆ ಕುಸಿಯುತ್ತಿದ್ದು ಅಧಃಪತನ ಕಾಣುತ್ತಿದೆ. ಇಂತಹ ಸಮಯದಲ್ಲಿ ರಾಜ್‌ಕುಮಾರ್‌ ಅವರ ಕೊರತೆ ಎದ್ದು ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ವಿದ್ವಾಂಸ ಡಾ.ಎಚ್‌.ಎಸ್‌.ರಾಘವೇಂದ್ರರಾವ್‌ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಚಿತ್ರ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಉದ್ಯಮಿ ಕೆ.ಮೋಹನ್‌ರಾವ್‌, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಇದ್ದರು.