ಸಾರಾಂಶ
ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ವಿರೋಧಾಭಾಸವೇ ಸರಿ. ಇಂದು ಪ್ರತಿಯೊಂದರಲ್ಲಿ ನಾವು ಜಾತೀಯತೆ ಕಾಣುತ್ತಿದ್ದೇವೆ. ಅದರಿಂದ ಹೊರಬರಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆಂದಿಗಿಂತ ಇಂದು ಕನಕದಾಸರ ಸಂದೇಶ ಹೆಚ್ಚು ಪ್ರಸ್ತುತವಾಗಿದೆ.
- ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು
ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ವಿರೋಧಾಭಾಸವೇ ಸರಿ. ಇಂದು ಪ್ರತಿಯೊಂದರಲ್ಲಿ ನಾವು ಜಾತೀಯತೆ ಕಾಣುತ್ತಿದ್ದೇವೆ. ಅದರಿಂದ ಹೊರಬರಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆಂದಿಗಿಂತ ಇಂದು ಕನಕದಾಸರ ಸಂದೇಶ ಹೆಚ್ಚು ಪ್ರಸ್ತುತವಾಗಿದೆ.
-----
ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ...
15 ಮತ್ತು 16ನೇ ಶತಮಾನದಷ್ಟು ಹಿಂದೆಯೇ ಅದ್ಭುತವಾದ ಚಿಂತನೆಯನ್ನು ಸಮಾಜಕ್ಕೆ ಕೊಟ್ಟು ಹೋದ ಕವಿ, ದಾರ್ಶನಿಕ, ಸಂತ, ಸಮಾಜ ಸುಧಾರಕ, ತತ್ವಜ್ಞಾನಿ, ಸಂಗೀತಗಾರ, ಮಹಾನ್ ಚಿಂತಕ ಎಲ್ಲವೂ ಆಗಿದ್ದ ಕನಕದಾಸರು ಹಾಗೂ ಅವರ ಸಂದೇಶಗಳು ಇಂದು ಹಿಂದೆಂದಿಗಿಂತ ಪ್ರಸ್ತುತ.
ಕನಕದಾಸರು ಕರ್ನಾಟಕದಲ್ಲಿ 15-16ನೇ ಶತಮಾನದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದರು. ತುಂಬು ಜೀವನ ನಡೆಸಿದ ಮಹಾನ್ ದಾರ್ಶನಿಕ ಕನಕದಾಸರ ಜೀವನದ ಒಂದೊಂದು ಸಾಧನೆ, ಘಟನೆಗಳನ್ನು ಅವಲೋಕಿಸಿದರೆ ಅವರೆಂತಹ ದೇವರ ಅದ್ಭುತ ಸೃಷ್ಟಿ ಎನ್ನುವುದನ್ನು ಅರಿಯಬಹುದು. ಸೌಹಾರ್ದತೆ, ಸಮಾನತೆ, ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಕನಕದಾಸರ ತತ್ವೋಪದೇಶಗಳು ಎಂದಿಗೂ ಪ್ರಸ್ತುತತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.
ವಿಜಯನಗರ ಅರಸರು 78 ಗ್ರಾಮಗಳ ಉಸ್ತುವಾರಿಯನ್ನು ಕನಕದಾಸರಿಗೆ ವಹಿಸಿದ್ದರು. ವಾಹನಗಳೇ ಇಲ್ಲದ ಅಂದಿನ ಕಾಲದಲ್ಲಿ ಕಾಲ್ನಡಿಗೆಯಲ್ಲೇ ಸಂಚಾರ ಮಾಡುತ್ತ ವಹಿಸಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುವ ಮೂಲಕ ಅರಸರ ಮೆಚ್ಚುಗೆಗೆ ಪಾತ್ರರಾದರು. ಯುದ್ಧದಲ್ಲಿ ಅವಮಾನಕ್ಕೀಡಾದ ನಂತರದಲ್ಲಿ ಇಡೀ ದೇಶವನ್ನೇ ಕಾಲ್ನಡಿಗೆಯಲ್ಲಿ ಸಂಚರಿಸುವ ಮೂಲಕ ದೇಶಕ್ಕೆ ಸಮಾನತೆಯ ಸಂದೇಶ ಸಾರಿದರು.
ಕುರುಬ ಸಮುದಾಯದ ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗೆ ಜನಿಸಿದ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಅವರ ಆಧ್ಯಾತ್ಮಿಕ ಗುರು ವ್ಯಾಸರಾಯರು ಅವರಿಗೆ ಕನಕದಾಸ ಎಂಬ ಹೆಸರನ್ನು ಇಟ್ಟರು.
‘ನಾನು’ ಎನ್ನುವುದನ್ನು ಕಳೆದುಕೊಂಡವನು ಮಾತ್ರ ಮೋಕ್ಷಕ್ಕೆ ಹೋಗುತ್ತಾನೆ ಎಂದು ಕನಕದಾಸರು ವಿದ್ವತ್ ಸಭೆಯಲ್ಲಿ ಪ್ರತಿಪಾದಿಸಿದ ರೀತಿಗೆ ಪಂಡಿತರೇ ಬೆರಗಾಗುತ್ತಾರೆ. ‘ನಾನು ಎನ್ನುವುದು ಅಹಂ, ಅಹಂಕಾರವನ್ನು ತ್ಯಜಿಸಿದವ ಮಾತ್ರ ಮೋಕ್ಷ ಕಾಣಲು ಸಾಧ್ಯ’ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಪಾಂಡಿತ್ಯದ ಸಾಮರ್ಥ್ಯ ಏನೇ ಇದ್ದರೂ, ಅಹಂಕಾರವನ್ನು ತೊಲಗಿಸುವವರೆಗೆ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಸ್ವತಃ ಗುರು ವ್ಯಾಸತೀರ್ಥರೇ ಬೆರಗಾಗುವ ರೀತಿಯಲ್ಲಿ ಪ್ರತಿಪಾದಿಸಿದರು. ಅವರ ಇಂತಹ ಚಿಂತನೆಗಳೇ ಇಂದಿಗೂ ನಮ್ಮನ್ನು ಅವರತ್ತ ಸೆಳೆಯುತ್ತವೆ.
ದರ್ಶನ ಕೊಟ್ಟ ಶ್ರೀಕೃಷ್ಣ
ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರಿಂದ ಅವರಿಗೂ ಉಡುಪಿ ಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಕನಕದಾಸರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದವರು. ಶ್ರೀಕೃಷ್ಣನನ್ನು ಪೂಜಿಸಲು ಬಯಸಿದ ಕನಕದಾಸರಿಗೆ ಉಡುಪಿಯ ದೇವಾಲಯ ಪ್ರವೇಶ ನಿರಾಕರಿಸಲಾಯಿತು. ಅಂದಿನ ಸಮಾಜದಲ್ಲಿ ಜಾತಿ ಪದ್ಧತಿ ಬಲವಾಗಿ ಬೇರೂರಿದ್ದರಿಂದ ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡಲಿಲ್ಲ.
ಹಾಗಾಗಿ ಕೃಷ್ಣನ ದರ್ಶನ ಭಾಗ್ಯ ಪಡೆಯದೇ ಹತಾಶೆಯಿಂದ ದೇವಸ್ಥಾನದಿಂದ ಹೊರಡುತ್ತಿದ್ದ ಕನಕದಾಸರಿಗೆ ಸಾಕ್ಷಾತ್ ಶ್ರೀಕೃಷ್ಣನೇ ಅವರ ದಿಕ್ಕಿಗೆ ತಿರುಗಿದನೆಂದೂ, ಗೋಡೆಗೆ ಕಿಂಡಿ ಕೊರೆದು ಕೃಷ್ಣ ಕನಕನಿಗೆ ದರ್ಶನ ನೀಡಿದನೆಂದೂ ಪ್ರತೀತಿ ಇದೆ. ಪೂರ್ವಾಭಿಮುಖವಾಗಿದ್ದ ವಿಗ್ರಹವು ಅಂದಿನಿಂದ ಪಶ್ಚಿಮಾಭಿಮುಖವಾಗಿದೆ ಎನ್ನುವ ಪ್ರತೀತಿ ಇದೆ. ಇಂದಿಗೂ ಕನಕನ ಕಿಂಡಿ ಎಂದೇ ಪ್ರಸಿದ್ಧಿಯಾದ ಅದೇ ಕಿಂಡಿಯ ಮೂಲಕವೇ ಭಕ್ತರಿಗೆ ಶ್ರೀಕೃಷ್ಣನ ದರ್ಶನ ಭಾಗ್ಯ.
ಕನಕದಾಸರು ಶ್ರೀಕೃಷ್ಣನನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಶ್ರೀಕೃಷ್ಣನು ಅವರನ್ನು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಈ ಘಟನೆ ನಿದರ್ಶನವಾಗಿದೆ. ಇಂದಿಗೂ ಉಡುಪಿ ಶ್ರೀಕೃಷ್ಣ ದೇವಸ್ಥಾನದ ಮುಖ್ಯ ಬಾಗಿಲು ಶಾಶ್ವತವಾಗಿ ಮುಚ್ಚಿದ್ದು, ಶ್ರೀಕೃಷ್ಣನ ವಿಗ್ರಹವು ದೇವಸ್ಥಾನದ ಹಿಂಭಾಗಕ್ಕೆ ಮುಖ ಮಾಡಿದೆ ಎನ್ನುವ ಪ್ರತೀತಿ ಇದೆ. ಗೋಡೆಯಲ್ಲಿನ ಕಿಂಡಿ ಅಂದಿನಿಂದ ಕನಕನ ‘ಕನಕನ ಕಿಂಡಿ’ ಎಂದು ಹೆಸರನ್ನು ಪಡೆದುಕೊಂಡಿತು. ಇಂದಿಗೂ ಭಕ್ತರು ಈ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನವನ್ನು ಪಡೆದುಕೊಳ್ಳುತ್ತಾರೆ. ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರಿಂದ ಅವರು ಹೆಚ್ಚಿನ ಹಾಡುಗಳನ್ನು ಶ್ರೀಕೃಷ್ಣನ ಬಗ್ಗೆಯೇ ಹಾಡಿದ್ದಾರೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಹಲವಾರು ಕೃತಿಗಳನ್ನು ರಚಿಸಿದ್ದ ಕನಕದಾಸರು ಜೀವನದ ಕೊನೆಯುಸಿರಿರುವವರೆಗೂ ಸಂಗೀತ, ಸಾಹಿತ್ಯದ ದಾಸರಾದರು. ಯುದ್ಧದಲ್ಲಿ ಗಾಯಗೊಂಡ ನಂತರದಲ್ಲಿ ತತ್ವಶಾಸ್ತ್ರದೊಂದಿಗೆ ಸಂಗೀತ ಮತ್ತು ಸಾಹಿತ್ಯವನ್ನು ರಚಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ, ಅತ್ಯಂತ ಸರಳವಾದ ಭಾಷೆಯನ್ನು ಬಳಸಿ ಕೃತಿಗಳನ್ನು ರಚಿಸಿದ್ದಾರೆ.
ಸಂಗೀತಕ್ಕೆ ಕನಕ ಕಾಣಿಕೆ
ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಪುರಂದರ ದಾಸರೊಂದಿಗೆ ಕನಕದಾಸರ ಕಾಣಿಕೆಯೂ ಸಲ್ಲುತ್ತದೆ. ಹಲವಾರು ಕೃತಿಗಳ ರಚನೆಯ ಮೂಲಕ ಕರ್ನಾಟಕ ಸಂಗೀತಕ್ಕೆ ಅದ್ಭುತವಾದ ಕೊಡುಗೆಯನ್ನು ನೀಡಿದರು. ಸುಮಾರು 316 ಕೀರ್ತನೆಗಳನ್ನು ಅವರು ರಚಿಸಿದ್ದಾರೆ ಎನ್ನುವ ದಾಖಲೆಗಳು ಸಿಗುತ್ತವೆ.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಅವರ ಕೀರ್ತನೆಯಷ್ಟೇ ಸಾಹಿತ್ಯ ಕೂಡ ಶ್ರೇಷ್ಠ. ಮೋಹನ ತರಂಗಿಣಿ, ಹರಿ ಭಕ್ತಿ ಸಾರ, ನಳ ಚರಿತ್ರೆ, ರಾಮಧಾನ್ಯ ಚರಿತ್ರೆ ಪ್ರಮುಖ ಕೃತಿಗಳು.
ರಾಮಧಾನ್ಯ ಚರಿತ್ರೆಯಲ್ಲಿ ಬಡವರನ್ನು ಪ್ರತಿನಿಧಿಸುವ ರಾಗಿ ಮತ್ತು ಶ್ರೀಮಂತರನ್ನು ಪ್ರತಿನಿಧಿಸುವ ಭತ್ತದ ನಡುವಿನ ಸಂವಾದ ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ. ಅಂತ್ಯದಲ್ಲಿ ರಾಗಿ (ಬಡವ) ಗೆಲ್ಲುವ ಮೂಲಕ ಸಮಾಜಕ್ಕೆ ನೀಡುವ ಸಂದೇಶ ಅವರ ಅದ್ಭುತ ಕಲ್ಪನೆಗೆ ಸಾಕ್ಷಿಯಾಗಿದೆ.
ಕನಕ ದಾಸರ ಇಷ್ಟದೇವರು ಶ್ರೀ ಆದಿಕೇಶವ. ಆದುದರಿಂದಲೇ ತಮ್ಮ ಜನ್ಮ ಸ್ಥಳ ಬಾಡಕ್ಕೆ ಸಮೀಪದ ಕಾಗಿನೆಲೆಯಲ್ಲಿ ಆದಿಕೇಶವ ದೇವಾಲಯವನ್ನು ಕಟ್ಟಿಸಿದರು. ಕಾಗಿನೆಲೆಯ ಆದಿಕೇಶವರಾಯ ಎಂಬುದು ಇವರ ಕೀರ್ತನೆಗಳ ಅಂಕಿತನಾಮ ಕೂಡ.
ಜಾತಿ ಪದ್ಧತಿ ವಿರುದ್ಧ ಹೋರಾಟ
16ನೇ ಶತಮಾನದಲ್ಲಿ ಜಾತಿ ಪದ್ಧತಿಯನ್ನು ಹೋಗಲಾಡಿಸಲು ಹೋರಾಡಿದವರಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಕುಲ ಕುಲ ಕುಲವೆಂದು ಬಡಿದಾಡಬೇಡಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ... ಎನ್ನುವ ಅದ್ಭುತ ಸಂದೇಶವನ್ನು ನೀಡಿದ್ದರು. ಆದರೆ ಇಂದಿಗೂ ನಾವು ಜಾತಿಯನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ವಿರೋಧಾಭಾಸವೇ ಸರಿ. ಇಂದು ಪ್ರತಿಯೊಂದರಲ್ಲಿ ನಾವು ಜಾತೀಯತೆಯನ್ನು ಕಾಣುತ್ತಿದ್ದೇವೆ. ಅದರಿಂದ ಹೊರಬರಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಹಿಂದೆಂದಿಗಿಂತ ಇಂದು ಅವರ ಸಂದೇಶ ಹೆಚ್ಚು ಪ್ರಸ್ತುತವಾಗುತ್ತದೆ.
ಕನಕದಾಸರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಕೀರ್ತನೆಗಳು, ಹಾಡುಗಳು ಹಾಗೂ ಸಂದೇಶಗಳ ಮೂಲಕ ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ.