ಸದಾ ಹೊಸತನಗಳಿಗೆ ಹೆಸರಾಗಿರುವ ಕನ್ನಡಪ್ರಭ ಇ - ಪುರವಣಿ ‘ಸಾಹಿತ್ಯ ಪ್ರಭ’ ಬಿಡುಗಡೆ

| Published : Oct 06 2024, 01:16 AM IST / Updated: Oct 06 2024, 04:39 AM IST

ಸಾರಾಂಶ

ಸದಾ ಹೊಸತನಗಳಿಗೆ ಹೆಸರಾಗಿರುವ ‘ಕನ್ನಡಪ್ರಭ’ ಪತ್ರಿಕೆಯು ಸಂಪೂರ್ಣವಾಗಿ ಸಾಹಿತ್ಯಕ್ಕೆ ಮೀಸಲಾಗಿರುವ ಇ- ಪುರವಣಿ ‘ಸಾಹಿತ್ಯ ಪ್ರಭ’ವನ್ನು ಬಿಡುಗಡೆ ಮಾಡಿದೆ.  

 ಮುಂಬೈ : ಸದಾ ಹೊಸತನಗಳಿಗೆ ಹೆಸರಾಗಿರುವ ‘ಕನ್ನಡಪ್ರಭ’ ಪತ್ರಿಕೆಯು ಸಂಪೂರ್ಣವಾಗಿ ಸಾಹಿತ್ಯಕ್ಕೆ ಮೀಸಲಾಗಿರುವ ಇ- ಪುರವಣಿ ‘ಸಾಹಿತ್ಯ ಪ್ರಭ’ವನ್ನು ಬಿಡುಗಡೆ ಮಾಡಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಮುಂಬೈನಲ್ಲಿ ನಡೆದ ‘ನಾರ್ತ್ ಅಚೀವರ್ಸ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪುರವಣಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಟ ನವೀನ್ ಶಂಕರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ‘ಮೊದಲು ಉದ್ಭವಿಸಿದ್ದು ಜ್ಞಾನ. ಆಮೇಲೆ ಅಕ್ಷರ. ಅಕ್ಷರದಿಂದ ಪದ, ಪದದಿಂದ ವಾಕ್ಯ. ವಾಕ್ಯದಿಂದ ಸಾಹಿತ್ಯ. ಜ್ಞಾನದಿಂದ ತಂತ್ರಜ್ಞಾನ. ಆಮೇಲೆ ತಂತ್ರಾಂಶ ಜ್ಞಾನ ಬಂತು. ಈ ತಂತ್ರಾಂಶ ಜ್ಞಾನವನ್ನು ಮತ್ತೆ ಸಾಹಿತ್ಯಕ್ಕೆ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ರವಿ ಹೆಗಡೆ ಮತ್ತು ತಂಡ ಮಾಡುತ್ತಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬರಲ್ಲಿಯೂ ಸಾಹಿತ್ಯ ಇದೆ. ಆ ಸಾಹಿತ್ಯವನ್ನು ಅಭಿವ್ಯಕ್ತಿ ಮಾಡುವಂತಹ ಪ್ರಯತ್ನ ಮಾಡಬೇಕು. ಹಾಗೆ ಬರೆದಾಗ ಸಾಹಿತ್ಯ ರೂಪುಗೊಳ್ಳುತ್ತದೆ. ಸಾಹಿತಿ ರೂಪುಗೊಳ್ಳುತ್ತಾನೆ. ಈ ನಿಟ್ಟಿನಲ್ಲಿ ‘ಸಾಹಿತ್ಯ ಪ್ರಭ’ ಉತ್ತಮವಾಗಿ ಮೂಡಿ ಬಂದಿದೆ. ಈ ಮೂಲಕ ಸಾಹಿತ್ಯ ಲೋಕಕ್ಕೆ ‘ಕನ್ನಡಪ್ರಭ’ ಉತ್ತಮ ಉತ್ತೇಜನ ನೀಡುವ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದರು.

ಮತ್ತೊಂದು ಹಿರಿಮೆ:

‘ಕನ್ನಡಪ್ರಭ’ ಮತ್ತು ಸಾಹಿತ್ಯ ಜಗತ್ತಿಗೆ ಅವಿನಾಭಾವ ಸಂಬಂಧ ಇದೆ. ಭಾನುಪ್ರಭದಲ್ಲಿ ಸಾಹಿತ್ಯ ಜಗತ್ತಿನ ಶ್ರೇಷ್ಠ ಲೇಖಕರ ಕತೆ, ಸಂದರ್ಶನ, ಬರಹಗಳು ಪ್ರಕಟವಾಗುತ್ತಿದ್ದವು. ವಿಶೇಷವಾಗಿ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ದೈನಂದಿನ ಧಾರಾವಾಹಿ ಕೂಡ ಪ್ರಕಟವಾಗುತ್ತಿತ್ತು. ಎಸ್‌.ಎಲ್‌. ಭೈರಪ್ಪನವರ ‘ಗೃಹಭಂಗ’ ಕಾದಂಬರಿ ಮೊದಲು ‘ಕನ್ನಡಪ್ರಭ’ದಲ್ಲಿಯೇ ದೈನಂದಿನ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಇದೀಗ ಈ ಹೆಗ್ಗಳಿಕೆಗೆ ಮತ್ತೊಂದು ಹಿರಿಮೆ ಸೇರಿಕೊಂಡಂತಾಗಿದೆ.ಇ-ಸಾಹಿತ್ಯ ಪುರವಣಿ ಎಲ್ಲಿ ಲಭ್ಯ?:

‘ಸಾಹಿತ್ಯ ಪ್ರಭ’ ಪುರವಣಿಯ ಮೊದಲ ಸಂಚಿಕೆಯನ್ನು kpepaper.asianetnews.com ವೆಬ್‌ಸೈಟ್‌ನಲ್ಲಿ ಓದಬಹುದು. ಈ ಪುರವಣಿಯಲ್ಲಿ ಖ್ಯಾತ ಸಾಹಿತಿಗಳ ಸಂದರ್ಶನ, ಶ್ರೇಷ್ಠ ಕತೆಗಳ ಅನುವಾದ, ವಿಮರ್ಶೆ, ಅತ್ಯುತ್ತಮ ಪುಸ್ತಕಗಳ ಪರಿಚಯ, ಹೊಸ ಪುಸ್ತಕಗಳ ಅಧ್ಯಾಯ ಮತ್ತು ಸಾಹಿತಿಗಳ ಬರವಣಿಗೆ ಜಗತ್ತಿನ ಕುರಿತಾದ ಕುತೂಹಲಕರ ಬರಹಗಳು ಲಭ್ಯವಾಗುತ್ತವೆ. ಸಂಪೂರ್ಣವಾಗಿ ಸಾಹಿತ್ಯಕ್ಕೆ ಮೀಸಲಾದ ಈ ಪುರವಣಿಯು ಸಾಹಿತ್ಯಾಸಕ್ತರಿಗೆ ಉತ್ತಮ ಓದನ್ನು ನೀಡಲಿದೆ. ಈ ಪುರವಣಿಯು ಎರಡು ವಾರಕ್ಕೊಮ್ಮೆ ಪ್ರಕಟವಾಗಲಿದೆ.ಪುರವಣಿ ಬಿಡುಗಡೆ ಸಂದರ್ಭದಲ್ಲಿ ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ, ಪ್ರಧಾನ ಪುರವಣಿ ಸಂಪಾದಕ ಗಿರೀಶ್ ರಾವ್‌ ಹತ್ವಾರ್‌ (ಜೋಗಿ), ಸಮನ್ವಯ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ, ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣನವರ ಮತ್ತಿತರರು ಇದ್ದರು.