ಸಾವಿರಾರು ಕಿಲೋಮೀಟರುಗಳನ್ನು ಕ್ರಮಿಸಿದ ಒಂದು ಪಯಣ ಮಾತ್ರವಲ್ಲ, ‘ಹೆಣ್ಣು ಮಕ್ಕಳಿಂದ ಇದು ಅಸಾಧ್ಯ, ನಮ್ಮ ದೇಶ ಹೆಣ್ಣುಮಕ್ಕಳಿಗೆ ಅಷ್ಟೇನೂ ಸುರಕ್ಷಿತವಲ್ಲ’ ಎಂಬ ನಂಬಿಕೆ ಹುಸಿಯಾಗಿಸಿದ, ಬದುಕಿನ ಸ್ಟೀರಿಂಗ್ ನಮ್ಮ ಕೈಗೇ ತೆಗೆದುಕೊಂಡು, ನಮ್ಮ ಕಣ್ಣ ಹೊಳಪಿಗೆ ಬೆಳಗುತ್ತಿದ್ದ ಹೆದ್ದಾರಿಗಳ ರೋಚಕ ಕ್ಷಣ
K2K:
ಏನಿದು K2K?
K2K ಎನ್ನುವುದು ರಸ್ತೆಗಳ ಮೇಲೆ ಸಾವಿರಾರು ಕಿಲೋಮೀಟರುಗಳನ್ನು ಕ್ರಮಿಸಿದ ಒಂದು ಪಯಣ ಮಾತ್ರವಲ್ಲ, ‘ಹೆಣ್ಣು ಮಕ್ಕಳಿಂದ ಇದು ಅಸಾಧ್ಯ, ನಮ್ಮ ದೇಶ ಹೆಣ್ಣುಮಕ್ಕಳಿಗೆ ಅಷ್ಟೇನೂ ಸುರಕ್ಷಿತವಲ್ಲ’ ಎಂಬ ನಂಬಿಕೆಗಳನ್ನು ಹುಸಿಯಾಗಿಸಿದ, ನಮ್ಮ ಬದುಕಿನ ಸ್ಟೀರಿಂಗ್ ಅನ್ನು, ನಮ್ಮ ಕೈಗೇ ತೆಗೆದುಕೊಂಡು, ನಮ್ಮ ಕಣ್ಣ ಹೊಳಪಿಗೆ ಬೆಳಗುತ್ತಿದ್ದ ಹೆದ್ದಾರಿಗಳ ರೋಚಕ ಕ್ಷಣಗಳ ಅನುಭೂತಿ.
ನಾನು, ಕೃಪಾ ಮತ್ತು ವಿದ್ಯಾ ಮೂವರು ಜೀವದ ಗೆಳತಿಯರು. ಮಹೀಂದ್ರಾ ಥಾರ್ ಕಾರಿನಲ್ಲಿ, ಭಾರತದ ದಕ್ಷಿಣದ ತುತ್ತತುದಿಯಾದ ಕನ್ಯಾಕುಮಾರಿಯಿಂದ ಉತ್ತರದ ಸ್ವರ್ಗ ಕಾಶ್ಮೀರದವರೆಗೆ ಪಯಣಿಸಿದಾಗ, ಮೀರಿದ್ದು ಕೇವಲ ಭೌಗೋಳಿಕ ಅಂತರವನ್ನಲ್ಲ, ಬದಲಿಗೆ ನಮ್ಮೊಳಗಿದ್ದ ಅಧೀರತೆಯನ್ನು, ನಮಗೆ ನಾವೇ ಹಾಕಿಕೊಂಡ ಗಡಿಗಳನ್ನು, ನಮ್ಮ ಇತಿಮಿತಿಗಳನ್ನು ಮತ್ತು ಲೀಲಾಜಾಲವಾಗಿ ಡ್ರೈವಿಂಗ್ ಮಾಡುವುದು ಗಂಡಸರಿಗಷ್ಟೇ ಸಾಧ್ಯ ಎನ್ನುವ ಸ್ಟೀರಿಯೋಟಿಪಿಕಲ್ ಇಮೇಜ್ ಅನ್ನು.
ಕಿಡಿ ಹೊತ್ತಿದ ಕ್ಷಣ
ಒಂದೇ ಅಪಾರ್ಟ್‌ಮೆಂಟ್ ನಲ್ಲಿ ವಾಸಿಸುತ್ತಿದ್ದ ನಾವು ಮೂವರು ಆಪ್ತರಾಗಿದ್ದು, ಒಂದು ಟ್ರಾವೆಲ್ ಏಜನ್ಸಿ ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಲೇಹ್ ಮತ್ತು ಲಡಾಕ್ ಟೂರ್ ಹೋಗಿದ್ದಾಗ. ರೋಡ್ ಟ್ರಿಪ್ ನಮ್ಮ ಸಮಾನ ಆಸಕ್ತಿ ಎಂದು ಗೊತ್ತಾದೊಡನೆ, ಬೈಕು ಮತ್ತು ಕಾರುಗಳಲ್ಲಿ ಸುತ್ತಾಡತೊಡಗಿದ್ದೆವು. ವಾರಾಂತ್ಯವೋ, ರಜೆಯೋ ಸಿಕ್ಕರೆ ದೂರದ ಜಾಗಗಳಿಗೆ ಹೋಗುತ್ತಿದ್ದೆವು. ಇಲ್ಲದಿದ್ದರೆ ಮುಂಜಾನೆ ತಿಂಡಿಗೋ, ಸಂಜೆಯ ಚಹಾ ಸವಿಯಲೋ ಮೂವರಿಗೂ ಅನುಕೂಲವಾದ ಕಡೆ ಸಿಗುತ್ತಿದ್ದೆವು. ಪಳಗಿದ ಬೈಕರ್ ಆಗಿರುವ ಕೃಪಾ ನಮಗೆ ಸ್ಫೂರ್ತಿ. ವೃತ್ತಿಜೀವನದ ಧಾವಂತದಲ್ಲಿ, ಸಂಸಾರ ಸಾಗರದಲ್ಲಿ ಮುಳುಗೇಳುತ್ತಾ, ಸಿಕ್ಕಷ್ಟೇ ಸಮಯದಲ್ಲಿ ಭೇಟಿಯಾಗಿ, ಹರಟುತ್ತಿದ್ದ ಆ ಒಂದು ಸಂಜೆ, ನಾವೇಕೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾರಿನಲ್ಲಿ ಒಂದು ರೋಡ್ ಟ್ರಿಪ್ ಮಾಡಬಾರದು ಎಂದು ಯೋಚಿಸಿದೆವು. ಆದರೂ ಇದೆಲ್ಲಾ ಆಗಿ ಹೋಗುವ ಮಾತಲ್ಲ ಎನ್ನುವ ಒಂದು ಸಿನಿಕತೆ ಇತ್ತು. ಮೊದಲಿಗೆ ಇತರ ಕನಸುಗಳಂತೆಯೇ ಇದೂ ಕೆಲದಿನಗಳ ನಂತರ ಕಮರಿಹೋಗುತ್ತದೆ ಅಂದುಕೊಂಡಿದ್ದೆವು ಕೂಡ.
ಮೊದಲ ಹೆಜ್ಜೆ
ಲಾವೋ ತ್ಸು ಹೇಳಿದಂತೆ, ‘ಸಾವಿರ ಮೈಲಿಗಳ ಪ್ರಯಾಣವು ಪ್ರಾರಂಭವಾಗುವುದು ಒಂದೇ ಹೆಜ್ಜೆಯಿಂದ’. ನಮ್ಮ ಪಾಲಿಗೆ, ಆ ಮೊದಲ ಹೆಜ್ಜೆ ಆ ಸಂಜೆಯ ನಮ್ಮ ದೃಢ ಸಂಕಲ್ಪವಾಗಿತ್ತು. ಆದರೆ, ಈ ಯೋಚನೆಯನ್ನು ಮನೆಯವರ ಮುಂದಿಟ್ಟಾಗ, ನಿರೀಕ್ಷೆಯಂತೆಯೇ ಆತಂಕದ ಪ್ರಶ್ನೆಗಳ ಸುರಿಮಳೆಯಾಯಿತು. ‘ನೀವು ನೀವೇ ಅಷ್ಟು ದೂರ ಹೋಗ್ತೀರಾ? ಹದಿನೈದು ದಿನಗಟ್ಟಲೆ ಮನೆ ಪರಿಸ್ಥಿತಿ ಏನು? ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಅಷ್ಟಕ್ಕೂ ನೀವೇನು ಇನ್ನೂ ಸಣ್ಣ ವಯಸ್ಸಿನ ಹುಡುಗಿಯರು ಅಂದುಕೊಂಡಿದ್ದೀರಾ? ನಲವತ್ತು ದಾಟಿದ ನಡುವಯಸ್ಸಿನ ಹೆಂಗಸರು. ಸಾವಿರಾರು ಮೈಲಿಗಳನ್ನೂ ದಿನಗಟ್ಟಲೆ ಕುಳಿತು ಪಯಣಿಸಿದರೆ ಅಷ್ಟೇ ಕಥೆ, ಮೈ ಕೈ ನೋವು ಬಂದು ಒದ್ದಾಡ್ತೀರ, ಯಾಕಾದ್ರೂ ಹೊರಟೆವೋ ಅಂತ ಪೇಚಾಡುತ್ತೀರ’ ಅಂತೆಲ್ಲಾ ಗೊಣಗಿದರು. ಅವರ ಕಾಳಜಿ ನಮಗೆ ಅರ್ಥವಾಗಿತ್ತು, ಆದರೆ ಆ ಪ್ರಶ್ನೆಗಳೇ ನಮ್ಮ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಮಾನಸಿಕ ಸ್ಥೈರ್ಯದೊಂದಿಗೆ ನಮ್ಮ ದೈಹಿಕ ಸಾಮರ್ಥ್ಯವನ್ನೂ ಪರೀಕ್ಷಿಸಿಕೊಳ್ಳುವ ಸಂದರ್ಭ ಇದಾಗಿತ್ತು. ಕಳೆದ ಜೂನ್‌ನಲ್ಲಿ ಹೋಗಬೇಕೆಂದು ತಯಾರಾಗಿದ್ದೆವು. ಕೆಟ್ಟ ಬಿಸಿಲಿನಲ್ಲಿ ಉತ್ತರ ಭಾರತ ಸುತ್ತುವುದು ಕಷ್ಟ ಎಂದು ಮನೆಯವರೆಲ್ಲಾ ಹೆದರಿಸಿದರೂ, ನಾವು ನಿಜಕ್ಕೂ ಹೆದರಿದ್ದು ಪೆಹಲ್ಗಾಮ್ ಕಣಿವೆಯಲ್ಲಿ ಕ್ರೌರ್ಯದ ಅಟ್ಟಹಾಸ ಮೆರೆದು ಇಪ್ಪತ್ತಾರು ಜನರನ್ನು ಕೊಂದ ಉಗ್ರಗಾಮಿಗಳಿಗೆ.
ಜಮ್ಮು ಕಾಶ್ಮೀರದ ಕಡೆ ತಲೆ ಹಾಕುವುದೇ ಬೇಡ ಎಂದು ಮನೆಯವರೆಲ್ಲಾ ಗದರಿದರೂ, ನಮ್ಮ ಕನಸು ಮಾತ್ರ ಒಳಗೇ ಬದುಕಿತ್ತು. ಕಡೆಗೂ ಹೇಗೋ ಒಪ್ಪಿಸಿ, ಡಿಸೆಂಬರಿನ ಚಳಿಯಲ್ಲಿಯೇ ಹೊರಡುವುದು ಎಂದು ನಿರ್ಧರಿಸಿದೆವು. ಸುಮಾರು ಒಂದು ವರ್ಷದ ಹಿಂದೆಯೇ ಹಾಕಿಕೊಂಡಿದ್ದ ಈ ಯೋಜನೆಗೆ ಚಾಲನೆ ಸಿಕ್ಕಿತ್ತು.
ತಯಾರಿ
ತಿಂಗಳ ಮೊದಲೇ ಸಿದ್ಧತೆ ಭರದಿಂದ ಸಾಗಿತ್ತು. ಥಾರ್ ಒಂದು ಆಫ್ ರೋಡ್ ಗಾಡಿಯಾದ್ದರಿಂದ ಅಷ್ಟೇನೂ ಐಷಾರಾಮದ ಗಾಡಿಯಲ್ಲ. ಹಿಂದೆ ಕುಳಿತುಕೊಳ್ಳುವವರು ಮೈ ಬಗ್ಗಿಸಿ ಕಷ್ಟಪಟ್ಟು ತೂರಬೇಕು. ಹೆಚ್ಚೇನೂ ಇಲೆಕ್ಟ್ರಾನಿಕ್ಸ್ ಇಲ್ಲದ, ಮೆಕ್ಯಾನಿಕಲ್ ಕಂಟ್ರೋಲ್‌ಗಳೇ ಇದ್ದ ಈ ಕಪ್ಪು ಗಾಡಿಗೆ ಪ್ರೀತಿಯಿಂದ ‘ಕರಿಯ’ಅಂತ ಹೆಸರಿಟ್ಟೆವು. ಟೈಯರ್ ಬದಲಿಸುವುದರಿಂದ ಹಿಡಿದು, ಗಾಡಿಯ ಒಳಹೊರಗನ್ನೆಲ್ಲಾ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆವು. ಗಾಡಿಯ ಕಾಗದ ಪತ್ರಗಳನ್ನು ಜೋಡಿಸಿಕೊಂಡೆವು. ಹದಿನೈದು ದಿನಗಳಲ್ಲಿ ವಿವಿಧ ಹವಾಮಾನಕ್ಕೆ ಬೇಕಾದ ಬಟ್ಟೆಗಳನ್ನು ತುರುಕಿಕೊಂಡೆವು. ಲಗೇಜ್ ತುಂಬಾ ಜಾಸ್ತಿಯಾಯಿತು ಅನ್ನಿಸಿದರೂ ಅಗತ್ಯವೆನಿಸಿದ ಎಲ್ಲ ಸಾಮಗ್ರಿಗಳನ್ನೂ ಇಟ್ಟುಕೊಂಡೆವು. ಬಹಳ ರುಚಿಯಾಗಿ ಅಡುಗೆ ಮಾಡುವ ವಿದ್ಯಾ ದಾರಿಗೆ ಚಕ್ಕುಲಿ, ಕೋಡುಬಳೆ, ಅವಲಕ್ಕಿ, ಮಂಡಕ್ಕಿ ಮುಂತಾದುವನ್ನು ಮಾಡಿಕೊಂಡಳು. ಎಮರ್ಜೆನ್ಸಿ ಔಷಧಿಗಳು, ಫಸ್ಟ್ ಏಡ್ ಬಾಕ್ಸ್ ಸಿದ್ದವಾಯಿತು.
ರೋಡಿಗಿಳಿದ ರಾಧಿಕೆಯರು
ಏನೋ ಸುಮ್ಮನೆ ಹಗಲುಗನಸು ಕಾಣುತ್ತಿದ್ದಾರೆ ಅಂದುಕೊಂಡಿದ್ದ ಮನೆಯವರಿಗೇ ದಿಗಿಲಾಗುವಂತೆ ಒಂದು ದಿನ ಹೊರಟೇ ಬಿಟ್ಟೆವು! ಡಿಸೆಂಬರ್ ಎರಡನೇ ಶನಿವಾರ ಬೆಂಗಳೂರಿನಿಂದ ಕನ್ಯಾಕುಮಾರಿ ತಲುಪಿ, ಆ ರಾತ್ರಿ ಅಲ್ಲಿಯೇ ತಂಗಿದೆವು. ವಿವೇಕಾನಂದ ರಾಕ್ ಎದುರಿಗಿದ್ದ ಹೋಟೆಲ್‌ನಿಂದ ಕಾಣುತ್ತಿದ್ದ ಮೂರು ಸಾಗರಗಳು ಸಂಗಮಿಸುವ ಆ ಪವಿತ್ರ ಭೂಮಿಯಲ್ಲಿ, ನಮ್ಮ ಥಾರ್‌ನ ಇಂಜಿನ್ ಸ್ಟಾರ್ಟ್ ಮಾಡಿದಾಗ, ಅದು ಕೇವಲ ವಾಹನದ ಸದ್ದಾಗಿರಲಿಲ್ಲ, ಅದು ನಮ್ಮ ಮೂವರ ಹೃದಯಗಳಲ್ಲಿ ರೋಮಾಂಚನದಿಂದ ಹೊಡೆದುಕೊಳ್ಳುತ್ತಿದ್ದ ನಗಾರಿಯ ಸದ್ದಾಗಿತ್ತು. ಜೆ.ಆರ್.ಆರ್. ಟೋಲ್ಕಿನ್ ಅವರ Not all those who wander are lost ಎಂಬ ಮಾತು ಪದೇ ಪದೇ ನೆನಪಾಗುತ್ತಿತ್ತು. ನಮ್ಮದು ಕಾಲಹರಣದ ಅಲೆದಾಟವಲ್ಲ, ನಮ್ಮನ್ನು ನಾವು ಕಂಡುಕೊಳ್ಳುವ, ನಮ್ಮ ನಿಜವಾದ ಕ್ಷಮತೆಯನ್ನು ಗುರುತಿಸಿಕೊಳ್ಳುವ ಪ್ರಯತ್ನ ಎನ್ನುವುದು ಮೊದಲ ದಿನವೇ ಅರ್ಥವಾಗಿತ್ತು. ಪ್ರತಿ ದಿನ ಮುಂಜಾನೆಯೇ ಬೇಗ ಹೊರಡುವುದು, ಹಗಲು ಹೊತ್ತಿನಲ್ಲಿ ಮಾತ್ರ ಪಯಣಿಸುವುದು ಮತ್ತು ಸುಮಾರು ಆರುನೂರರಿಂದ ಏಳುನೂರು ಕಿಲೋಮೀಟರು ಮಾತ್ರ ಕ್ರಮಿಸುವುದು ಎಂದು ನಿರ್ಧರಿಸಿದ್ದೆವು. ಮೂರೂ ಜನರು ಹೆದ್ದಾರಿಗಳಲ್ಲಿ ಕಾರು ಓಡಿಸಿ ಅನುಭವ ಹೊಂದಿದ್ದವರಾಗಿದ್ದರಿಂದ, ಅಂಥ ಶ್ರಮವೇನೂ ಆಗಲಿಲ್ಲ. ಕನ್ಯಾಕುಮಾರಿಯಿಂದ, ಬೆಂಗಳೂರು, ಹೈದರಾಬಾದ್, ನಾಗಪುರ್, ಗ್ವಾಲಿಯರ್, ಆಗ್ರಾ, ದೆಹಲಿ, ಲುಧಿಯಾನಾ, ಜಮ್ಮು ಮತ್ತು ಕೊನೆಗೆ ಕಾಶ್ಮೀರದ ಶ್ರೀನಗರ ನಾವು ಆಯ್ದುಕೊಂಡ ದಾರಿಯಾಗಿತ್ತು. ಮತ್ತು ಮರಳುವಾಗ ಶ್ರೀನಗರದಿಂದ ಉಧಂಪುರ್, ಅಮೃತಸರ್, ಜೈಪುರ್, ಇಂದೋರ್, ಬಿಜಾಪುರ್ ಮತ್ತು ಕೊನೆಗೆ ಬೆಂಗಳೂರು. ಸುಮಾರು ಎಂಟು ಸಾವಿರ ಕಿಲೋಮೀಟರು ದೂರವನ್ನು ಕ್ರಮಿಸಿದೆವು.
ವೈವಿಧ್ಯತೆಯ ದರ್ಶನ
ಪಯಣ ಸಾಗಿದಂತೆ, ನಮ್ಮ ದೇಶದ ನಿಜವಾದ ವೈವಿಧ್ಯತೆಯ ದರ್ಶನವಾಯಿತು. ಹವಾನಿಯಂತ್ರಿತ ಕಾರಿನೊಳಗೆ ಕುಳಿತು ನೋಡಿದರೆ ತಮಿಳುನಾಡು ಬಹಳ ಸುಂದರ. ಅಚ್ಚ ಹಸಿರು ಹಾಸುಗಳು, ದಿಟ್ಟ ಬೆಟ್ಟಗಳು, ಕೈಗಾರಿಕಾ ಪ್ರದೇಶಗಳು, ವಿಂಡ್ ಟರ್ಬೈನ್‌ಗಳು ನೋಡಿದಷ್ಟೂ ಖುಷಿ ಕೊಡುತ್ತಿದ್ದವು. ತೆಲಂಗಾಣದ ಭತ್ತದ ಗದ್ದೆಗಳು, ನದಿಗಳು, ಬಂಡೆಗಳು, ಬಿಸಿಲು, ಬಯಲುಗಳ ಮೂಲಕ ಹಾದು ಮಿನಾರಿನ ನಗರ ಹೈದರಾಬಾದ್ ತಲುಪಿ, ಚಾರ್ ಮಿನಾರ್ ಎದುರು ನಿಂತಾಗ ಬೆರಗು. ಮುಂದೆ ಮಹಾರಾಷ್ಟ್ರದ ಮೂಲಕ ಪಶ್ಚಿಮ ಘಟ್ಟಗಳಲ್ಲಿ ಸುಳಿದಾಡುತ್ತಾ ನಾಗಪುರ್ ಮುಟ್ಟಿದೆವು. ಬ್ರಿಟಿಷರು ಭಾರತದ ಉದ್ದಗಲಗಳನ್ನು ಅಳೆಯಲು ಒಂದು ರೆಫರೆನ್ಸ್ ಪಾಯಿಂಟ್ ಆಗಿ ಬಳಸಿಕೊಳ್ಳುತ್ತಿದ್ದ ‘ಝೀರೋ ಮೈಲ್’ ಎನ್ನುವ ಪಾಯಿಂಟ್‌ನಲ್ಲಿ ನಿಂತಾಗ ಹೀಗೊಂದು ಜಾಗ ಇದೆಯೇ ಎಂದು ಅಚ್ಚರಿಯಾಯಿತು. ಅಲ್ಲಿಂದ ಮುಂದೆ ಮಧ್ಯಪ್ರದೇಶದ ಬಯಲು ಸೀಮೆಗಳು, ಗ್ವಾಲಿಯರ್‌ನ ಸಿಂಧಿಯಾ ರಾಜಮನೆತನದ ಅರಮನೆ ಸೆಳೆಯಿತು. ಆ ನಂತರ ಉತ್ತರ ಪ್ರದೇಶದ ಆಗ್ರಾ ತಲುಪಿದಾಗ ಪ್ರೀತಿಯ ಸಂಕೇತವೇ ಆಗಿರುವ ತಾಜ್ ಮಹಲು, ಮುಂಜಾನೆಯ ಮಂಜು ಮುಸುಕಿದರೂ ಬೆಳ್ಳಗೆ ಹೊಳೆಯುತ್ತಿತ್ತು. ಮುಂದೆ ದೆಹಲಿ ತಲುಪಿದಾಗಲೂ ಇಬ್ಬನಿ ತಬ್ಬಿದ ಇಳೆಯ ಮೇಲಿನ ‘ಗೇಟ್ ವೇ ಆಫ್ ಇಂಡಿಯಾ’ ನಮ್ಮ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಲಿಲ್ಲ. ಈಗಾಗಲೇ ನಾವು ಬೆಳಗಿನ ಲೋ ವಿಸಿಬಿಲಿಟಿ ಏನೆಂದು ಅರಿತಿದ್ದೆವು. ಫಾಗ್ ಲೈಟುಗಳು, ಡಿಪ್ಪರ್, ಹೆಡ್ ಲೈಟ್ ಮುಂತಾದವುಗಳನ್ನೆಲ್ಲಾ ಹೊತ್ತಿಸಿಕೊಂಡು ಮಂದಗತಿಯಲ್ಲಿ ಸಾಗತೊಡಗಿದೆವು. ಇಂತಹ ಕಷ್ಟಕರವಾದ ದಾರಿಯಲ್ಲಿ ಹೆಚ್ಚಿನ ಅನುಭವವಿದ್ದ ಕೃಪಾ ಡ್ರೈವರ್ ಸೀಟ್ ಅಲಂಕರಿಸುತ್ತಿದ್ದಳು. ಮುಂದೆ ಉಣ್ಣೆ ಬಟ್ಟೆಗಳಿಗೆ ಹೆಸರು ವಾಸಿಯಾದ ಪಂಜಾಬಿನ ಲೂಧಿಯಾನದಲ್ಲಿ, ಹೊಟ್ಟೆ ಬಿರಿಯುವಂತೆ ಸ್ಟ್ರೀಟ್ ಫುಡ್ ತಿಂದೆವು. ಪರಾಟ/ ರೊಟ್ಟಿಗಳ ಜೊತೆಯಲ್ಲಿ ಪಲ್ಯ ಹಾಕಿದಂತೆ ಬೆಣ್ಣೆ ಹಾಕಿಕೊಟ್ಟರೆ ದೇಹದ ತೂಕ ನಿಯಂತ್ರಿಸಿಕೊಳ್ಳುವುದು ಹೇಗೆ ತಾನೇ ಸಾಧ್ಯ ಎನ್ನುವುದು ಆಗಲೇ ಅರ್ಥವಾಗಿದ್ದು. ಉತ್ತರದ ಕಡೆಗೆ ಹೋದಂತೆಲ್ಲಾ ನಾವು ದಿನವೊಂದರಲ್ಲಿ ಕ್ರಮಿಸಬಹುದಾದ ದೂರ ಕಮ್ಮಿಯಾಗುತ್ತಿದೆ ಎನ್ನುವುದು ನಮ್ಮ ಅರಿವಿಗೆ ಬಂತು. ಇನ್ನೂರು, ಮುನ್ನೂರು ಕಿಲೋಮೀಟರುಗಳಿಗೇ ಐದಾರು ಗಂಟೆಗಳನ್ನು ತೋರಿಸುತ್ತಿದ್ದ ಗೂಗಲ್ ಮ್ಯಾಪ್ ಮೇಲೆ ಕೂಡ ಅನುಮಾನ ಬರುವಂತಾಯಿತು. ಅಂತೂ ದೂರದಲ್ಲಿ ಹಿಮಾಚ್ಛಾದಿತ ಪರ್ವತಗಳು ಕಾಣಿಸತೊಡಗಿದಾಗ ಏನೋ ಪುಳಕ. ಶ್ರೀನಗರದಲ್ಲಿ ಮಂಜು ಸುರಿಯುತ್ತಿದೆಯಂತೆ ಎನ್ನುವ ಸುದ್ದಿ ಕಿವಿಗೆ ಬಿದ್ದಾಗ ಸ್ವಲ್ಪ ದಿಗಿಲಾಯಿತು. ಕೆಲವೇ ತಿಂಗಳುಗಳ ಹಿಂದಷ್ಟೇ ಮಳೆಯಿಂದ, ಭೂಕುಸಿತವಾಗಿ ಅಲ್ಲಲ್ಲಿ ರಸ್ತೆಗಳನ್ನು ರಿಪೇರಿ ಮಾಡುತ್ತಿದ್ದರು. ಅಂಕುಡೊಂಕಾದ, ಕಡಿದಾದ ರಸ್ತೆಗಳಲ್ಲಿ ಸಾಗಿದ ನಂತರ, ಅಂತಿಮವಾಗಿ, ಕಾಶ್ಮೀರದ ‘ಭೂಮಿಯ ಮೇಲಿನ ಸ್ವರ್ಗ’ವನ್ನು ತಲುಪಿದಾಗ, ನಮ್ಮ ಮೂವರ ಕಣ್ಣುಗಳಲ್ಲೂ ಆನಂದಭಾಷ್ಪ. ಅಂತೂ ಇಂತೂ ಶ್ರೀನಗರ ತಲುಪಿ ಬಿಟ್ಟೆವು! ಸತತವಾಗಿ ಪ್ರಯಾಣ ಮಾಡುತ್ತಲೇ ಬಂದ ನಮಗೆ ಅಂದು ಸ್ವಲ್ಪವೂ ದಣಿವಿರಲಿಲ್ಲ. ನಮ್ಮ ಮೇಲೆ ನಮಗೇ ಅಭಿಮಾನ, ಹೆಮ್ಮೆ ಆಗಿತ್ತು. ಒಂದು ಕಾಲದಲ್ಲಿ ಜಮ್ಮು ಕಾಶ್ಮೀರಕ್ಕೆ ಪ್ರವಾಸಿಯಾಗಿ ಕೂಡ ಹೋಗುವುದೇ ಅನುಮಾನವಾಗಿದ್ದ ನನಗೆ, ಅಲ್ಲಿನ ರಸ್ತೆಗಳಲ್ಲಿ ಕಾರು ಓಡಿಸುತ್ತಿದ್ದೇನೆ ಎನ್ನುವುದೇ ರೋಮಾಂಚಕವಾಗಿತ್ತು!
ಹಾರುತಿರಲಿ ಬಾವುಟ
ದಾಲ್ ಲೇಕ್ ಹತ್ತಿರದ ಪಾರ್ಕಗ್ಗ್‌ನಲ್ಲಿ ಕಾರು ನಿಲ್ಲಿಸಿ ಮೂವರೂ ತಬ್ಬಿಕೊಂಡು ಸಂಭ್ರಮಿಸಿದೆವು. ಸ್ವಲ್ಪ ದಿಗಿಲಿನಿಂದಲೇ ಭಾರತದ ಮತ್ತು ಕರ್ನಾಟಕದ ಬಾವುಟಗಳನ್ನು ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡೆವು. ಹೆದರಿದವರ ಮೇಲೆ ಹಾವು ಎಸೆದಂತೆ ಒಬ್ಬ ಎತ್ತರದ ವ್ಯಕ್ತಿ ಬಂದು, ಈ ಹಳದಿ ಮತ್ತು ಕೆಂಪು ಬಣ್ಣದ್ದು ಇದು ಯಾವ ಬಾವುಟ ಎಂದು ಕೇಳಿದನು. ನಾವು ‘ಇದು ಕರ್ನಾಟಕದ ಬಾವುಟ, ನಾವು ಮೂರೂ ಜನ ಬೆಂಗಳೂರಿನಿಂದ ಬಂದಿದ್ದೇವೆ, ಇದೊಂದು ಅಡ್ವೆಂಚರ್ ಟ್ರಿಪ್ ಅಷ್ಟೇ’ ಎಂದು ಹೇಳಿ ಸುಮ್ಮನಾದೆವು. ನಮ್ಮದೇ ದೇಶದಲ್ಲಿ ನಮ್ಮ ಬಾವುಟ ಹಾರಿಸಲು ಇಷ್ಟೊಂದು ಹೆದರಬೇಕೇ ಎಂದು ಸಿಟ್ಟು ಬಂದರೂ, ಅದನ್ನು ವ್ಯಕ್ತ ಪಡಿಸಲು ಇದು ಸರಿಯಾದ ಜಾಗ ಮತ್ತು ಸಮಯವಲ್ಲ ಎಂದು ತೆಪ್ಪನಾದೆವು.
ಮರುದಿನವೇ ಹಿಂದಿರುಗಬೇಕಿದ್ದರಿಂದ ಆಗಲೇ ಕತ್ತಲಾಗುತ್ತಿದ್ದರೂ ದಾಲ್ ಲೇಕ್ ನಲ್ಲಾದರೂ ವಿಹರಿಸೋಣ ಎಂದು ದೋಣಿಯಲ್ಲಿ ಕುಳಿತೆವು. ದಡದಿಂದ ಹತ್ತಿಪ್ಪತ್ತು ಮೀಟರು ಒಳಗೆ ಹೋಗಿದ್ದೆವೇನೋ ಅಷ್ಟೇ, ನಾಲ್ಕೂ ದಿಕ್ಕುಗಳಿಂದ ಕಾಶ್ಮೀರಿಗಳು ಧರಿಸುವ ಉದ್ದನೆಯ ದಪ್ಪನೆಯ ಉಣ್ಣೆಯ ಗೌನುಗಳನ್ನು ಧರಿಸಿ ಕುಳಿತಿದ್ದ ಗಂಡಸರ ದೋಣಿಗಳು ನಮ್ಮನ್ನು ಸುತ್ತುವರೆದು ಬಿಟ್ಟವು! ಲಡಾಖಿನಲ್ಲಿ ರಾಫ್ಟಿಂಗ್ ಮಾಡುವಾಗ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿಬಿಟ್ಟಿದ್ದ ನನಗೆ ಇನ್ನೆಂದೂ ನೀರಿಗಿಳಿಯಬಾರದು ಎನ್ನುವ ಭಯವಿದ್ದರೂ, ಸ್ನೇಹಿತೆಯರ ಬಲವಂತಕ್ಕೆ ದೋಣಿಯೇರಿದ್ದ ನಾನು, ಅಂತೂ ನೀರಿನಲ್ಲೇ ನನ್ನ ಸಾವು ಬರೆದಿದೆಯೇನೋ ಎಂದು ಚಳಿಯಲ್ಲೂ ಬೆವರಿಬಿಟ್ಟೆ. ಆಮೇಲೆ ಗೊತ್ತಾಯಿತು, ಅವರೆಲ್ಲಾ ಟೂರಿಸ್ಟ್ ಗಳಿಗೆ ಅಲ್ಲಿನ ವಿಶೇಷವಾದ ಸಾಮಾನುಗಳನ್ನು ದೋಣಿಗಳಲ್ಲೇ ಹೊತ್ತುತಂದು ಮಾರುವವರು ಎಂದು. ಒಬ್ಬಾತ ಕಾಶ್ಮೀರಿ ಹೆಂಗಸರ ಉಡುಗೆ, ಆಭರಣಗಳನ್ನು ತೊಡಿಸಿ, ಫೋಟೋ ತೆಗೆದುಕೊಟ್ಟರೆ, ಬಿಸಿ ಬಿಸಿ ಕಾವ ಎನ್ನುವ ಪಾನೀಯ ಮಾರುವವನೊಬ್ಬ. ಆಭರಣಗಳು, ಪಶ್ಮಿನಾ ಶಾಲುಗಳು , ಕೇಸರಿ, ಆಪ್ರಿಕಾಟ್, ಬಾದಾಮಿ, ಫಿಗ್ ಮುಂತಾದ ತಿನಿಸುಗಳನ್ನೂ ಮಾರುತ್ತಿದ್ದರು.
ಕೆಲವೇ ದಿನಗಳಲ್ಲಿ ಈ ಲೇಕ್ ಸಂಪೂರ್ಣವಾಗಿ ಹಿಮಗಟ್ಟುವುದು ಎಂದು ಅವರುಗಳು ಹೇಳಿದಾಗ ಪ್ರಕೃತಿಯ ವೈವಿಧ್ಯತೆಗೆ ಬೆರಗಾದೆವು. ದಾರಿಯುದ್ದಕ್ಕೂ ಸಾಕಷ್ಟು ಪ್ರವಾಸಿ ತಾಣಗಳಿದ್ದರೂ ನಾವು ಎಲ್ಲವನ್ನು ನೋಡಲಾಗಲಿಲ್ಲ. ನಮ್ಮ ಪಯಣದ ಉದ್ದೇಶ ಪ್ರವಾಸಿ ತಾಣಗಳನ್ನು ನೋಡುವುದಾಗಿರಲಿಲ್ಲ, ಬದಲಿಗೆ ಅತ್ಯಂತ ಕಡಿಮೆ ಸಮಯದಲ್ಲಿ ದೇಶದ ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪುವುದಾಗಿತ್ತು. ಆಗಲೇ ಪ್ರಕೃತಿಯ ಬೃಹತ್ ಸ್ವರೂಪದ ಮುಂದೆ ನಾವೆಷ್ಟು ಸಣ್ಣವರು ಎಂಬ ಅರಿವು ಮೂಡಿತು.
ಕಾರಿನೊಳಗಿಂದ ಕಂಡದ್ದೇನು
ಆಸಕ್ತಿಯಿದ್ದರೂ ಚಲಿಸುತ್ತಿರುವ ಗಾಡಿಯಲ್ಲಿ ನಾನು ಓದಲಾರೆ. ಹಾಗಾಗಿ ಪ್ರಯಾಣವೆಂದರೆ ನನಗೆ ಪ್ರಕೃತಿಯ ಸೊಬಗನ್ನು ಸವಿಯುವುದು ಮತ್ತು ಇಷ್ಟವಾದ ಸಂಗೀತವನ್ನು ಕೇಳುವುದು. ಊಟಕ್ಕೆ ನಿಲ್ಲಿಸಿದಾಗ ಅಲ್ಲಿನ ಆಹಾರ ಪದ್ದತಿಗಳನ್ನು ಗಮನಿಸುವುದು, ಜನರ ಉಡುಗೆ ತೊಡುಗೆ, ವ್ಯವಹಾರಗಳನ್ನು ಅವಲೋಕಿಸುವುದು ನನಗಿಷ್ಟ. ಹಾಡುಗಳ ಆಯ್ಕೆ ಚಾಲಕಿಯದೇ ಆಗಿರುತ್ತಿತ್ತು. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಟ್ರಾಕ್ಟರ್‌ಗಳಲ್ಲಿ ಡ್ರೈವರುಗಳು ಭೋಜಪುರಿ ಹಾಡುಗಳನ್ನು ಜೋರಾಗಿ ಕೇಳುತ್ತಾ ಹೋಗುತ್ತಿದ್ದರೆ, ಮೊದಲಿಗೆ ಇದೇನು ಗದ್ದಲ ಅನ್ನಿಸಿದರೂ, ಕಡೆಗೆ ನಾವೂ ಹಾಡಿಗೆ ಓಲಾಡುತ್ತಿದ್ದೆವು. ಇವನ್ನೆಲ್ಲಾ ಮಾಡುತ್ತಲೇ ಕೃಪಾ ಸೂಕ್ಷ್ಮವಾಗಿ ಗಾಡಿಯ ಸದ್ದುಗಳನ್ನೂ ಆಲಿಸುತ್ತಾ ಸದಾ ಜಾಗೃತಳಾಗಿರುತ್ತಿದ್ದಳು. ರಸ್ತೆಬದಿಗಳಲ್ಲಿ ತರಕಾರಿ ಮಾರುತ್ತಿದ್ದರೆ, ವಿದ್ಯಾ, ಎಲ್ಲವನ್ನೂ ಆಸೆಯಿಂದ ನೋಡುತ್ತಿದ್ದಳು. ಬೆಂಗಳೂರಿನಲ್ಲಿ ಸಿಗದ ಹಲವು ತರಕಾರಿಗಳ ಹೆಸರುಗಳನ್ನೂ ನಮಗೆ ಕಲಿಸಿದಳು. ಜನ ರಸ್ತೆಯಲ್ಲಿ ಗಾಡಿ ಓಡಿಸುವ ಪರಿಯಿಂದಲೇ ಇದು ಇಂತಹ ಇಲಾಖೆಯಿರಬಹುದು ಎಂದು ಊಹಿಸಿಕೊಳ್ಳುವಷ್ಟು ಪರಿಚಿತವಾದವು ರಸ್ತೆಗಳು. ನಿಜ ಹೇಳಬೇಕೆಂದರೆ, ಟ್ರಾಫಿಕ್ ಬಹಳ ಇದ್ದರೂ ಬೆಂಗಳೂರಿನ ಜನರೇ ಎಷ್ಟೋ ವಾಸಿ.
ಸವಾಲುಗಳು
ಈ ಪಯಣದಲ್ಲಿ ಎಲ್ಲವೂ ಸುಗಮವಾಗಿರಲಿಲ್ಲ. ಒಮ್ಮೆ ದಾರಿ ತಪ್ಪಿದ್ದೆವು, ಮತ್ತೊಮ್ಮೆ ನಿರ್ಜನ ಪ್ರದೇಶದಲ್ಲಿ ಟಯರ್ ಪಂಕ್ಚರ್ ಆಯಿತು. ಮಗದೊಮ್ಮೆ ಆಗ್ರಾದಲ್ಲಿ ಸಿಗ್ನಲ್ ಬಳಿ ನಿಂತಿದ್ದ ನಮ್ಮ ಗಾಡಿಗೆ ಹಿಂದಿನಿಂದ ಮತ್ತೊಂದು ಗಾಡಿ ಬಂದು ಗುದ್ದಿಬಿಟ್ಟಿತು! ಪಯಣ ಮುಂದುವರೆಸಲು ಸಾಧ್ಯವೇ ಆಗದಂತಹ ಪರಿಸ್ಥಿತಿ. ಆ ಕ್ಷಣಗಳಲ್ಲಿ ಭಯವಾಗಿದ್ದು ನಿಜ. ಮನೆಯಲ್ಲಿ ಹೇಳಿದರೆ ಸುಮ್ಮನೆ ಹೆದರುತ್ತಾರಲ್ಲದೆ ಈಗಿಂದೀಗಲೇ ಹೊರಟು ಬಂದುಬಿಡಿ ಎಂದು ಗದರುತ್ತಾರೆ ಅಂದುಕೊಂಡು, ಸಮಸ್ಯೆಯನ್ನು ನಾವು ನಾವೇ ಬಗೆಹರಿಸಿಕೊಳ್ಳುವುದೆಂದು ನಿರ್ಧರಿಸಿದೆವು. ನಮ್ಮ ಅದೃಷ್ಟಕ್ಕೆ ಹತ್ತಿರದ ಮಹಿಂದ್ರಾ ಸರ್ವಿಸ್ ಸ್ಟೇಷನ್ ಸಿಕ್ಕಿತು. ಆತ ಒಂದೇ ದಿನದಲ್ಲಿ ಗಾಡಿಯನ್ನು ರೆಡಿ ಮಾಡಿಕೊಟ್ಟನು. ಪ್ರತಿಯೊಂದು ಸಿದ್ಧತೆಯನ್ನೂ ಮಾಡಿಕೊಂಡೇ ಬಂದಿದ್ದ ನಮಗೆ ಅಚಾನಕ್ ಆಗಿ ಎರಗಿದ ಈ ಸಂಕಟವನ್ನು ಹೇಗೆ ನಿಭಾಯಿಸುವುದು ಎಂದು ಚಡಪಡಿಸುವಂತಾಯಿತು. ಈ ಸಂದರ್ಭದಲ್ಲಿ ಕಮ್ಯೂನಿಕೇಷನ್ ಟೆಕ್ನಾಲಜಿ ನಿಜಕ್ಕೂ ಅದ್ಭುತವಾದ ಆಸರೆಯಾಯಿತು. ಗಾಡಿಯಲ್ಲಿನ ಅಲೆರ್ಟ್ಸ್ ಇಂಡಿಕೇಟರ್, ಗೂಗಲ್ ಮ್ಯಾಪ್, ಡ್ಯಾಶ್ ಬೋರ್ಡ್ ಕ್ಯಾಮೆರಾ, ಆನ್ಲೈನ್ ಪೇಮೆಂಟ್, ವಿಡಿಯೋ ಕಾಲ್ ಮುಂತಾದವುಗಳಿಂದ ಕೆಲಸ ಸರಾಗವಾಯಿತು.
ಕೊನೆ ಮಾತು
ನಮ್ಮ ಈ ಕಥೆ ಕಾರು ಓಡಿಸುವ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇವೆ. ನಿಮ್ಮ ''ಕಾಶ್ಮೀರ'' ಯಾವುದು ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಬದುಕಿನ ವಾಹನದ ಸಾರಥಿ ನೀವೇ ಆಗಿರಿ.
