ಸಾರಾಂಶ
‘ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು’ ಕುರಿತು ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ, ಪಿಎಚ್.ಡಿ ಪಡೆದಿರುವ ಮಹಾಪ್ರಬಂಧದ ಸಂಕ್ಷಿಪ್ತ ರೂಪ ಇದಾಗಿದೆ
ಮೈಸೂರು : ಡಾ.ಸರ್ಜಾಶಂಕರ ಹರಳಿಮಠ ಅವರ ‘ಕನ್ನಡತನ’- ಕನ್ನಡ ಅಸ್ಮಿತೆಯ ಶತಮಾನತದ ಚಿಂತನೆಗಳು ಕುರಿತ ಸಂಶೋಧನಾ ಕೃತಿ.
‘ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು’ ಕುರಿತು ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ, ಪಿಎಚ್.ಡಿ ಪಡೆದಿರುವ ಮಹಾಪ್ರಬಂಧದ ಸಂಕ್ಷಿಪ್ತ ರೂಪ ಇದಾಗಿದೆ. ಆರಂಭದಲ್ಲಿಯೇ ಮಾರ್ಗದರ್ಶಕ ಡಾ.ರಹಮತ್ ತರೀಕೆರೆ, ಮೌಲ್ಯಮಾಪಕರಾದ ಕರ್ನಾಟಕ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ, ಡಾ.ನಿಂಗಪ್ಪ ಮುದೇನೂರು ಅವರ ಅಭಿಪ್ರಾಯಗಳಿವೆ.
ಭಾಷೆಗೆ ತನ್ನತನದ ಪ್ರಶ್ನೆ ಯಾಕಾಗಿ ಕಾಡುತ್ತದೆ? ಅಧ್ಯಾಯದಲ್ಲಿ ಕನ್ನಡ ಬಿಕ್ಕಟ್ಟುಗಳ ಸಂಕೀರ್ಣ ನೆಲೆಗಳು, ಕನ್ನಡದಲ್ಲಿ ವಿಚಾರ ಸಾಹಿತ್ಯಃ ಲೇಖಕರ ಆದ್ಯತೆಗಳು, ಕನ್ನಡ ಅಸ್ಮಿತೆ ಕುರಿತ ಚಿಂತನಧಾರೆಗಳಿವೆ. ಕನ್ನಡ ಎಂದರೆ ಏನು?, ವಿಚಾರ ಸಾಹಿತ್ಯದ ಪ್ರಭಾವ, ಭಾಷಾ ಅಸ್ಮಿತೆ, ಕನ್ನಡತನ ಅಥವಾ ಕನ್ನಡದ ಅಸ್ಮಿತೆ ಕುರಿತು ಚರ್ಚಿಸಲಾಗಿದೆ.
ಕನ್ನಡ ಅಸ್ಮಿತೆ- ಸಾಹಿತ್ಯವಾದಿ ನೆಲೆಯಲ್ಲಿ ಬಿಎಂಶ್ರೀ, ಕುವೆಂಪು,ಲಂಕೇಶ್ ಅವರ ಚಿಂತನೆಗಳ ಕಡೆ ನೋಟ ಇದೆ. ಅಲ್ಲದೇ ತಾನು ಅಪ್ಪಚ್ಚಿ ಮಾಡಿದ ಭಾಷೆಗಳಿಂದಲೇ ಮರುಹುಟ್ಟು ಪಡೆದ ಸಂಸ್ಕೃತ, ಕುವೆಂಪು ಚಿಂತನೆಗಳ ಸಂಕೀರ್ಣತೆ ದಾಖಲಿಸಲಾಗಿದೆ.
ಭಾಷಾ ಮೂಲಭೂತವಾದಿ ನೆಲೆಯಲ್ಲಿ ಆಲೂರು ವೆಂಕಟರಾಯರು, ಎಂ. ಚಿದಾನಂದಮೂರ್ತಿ ಅವರ ಚಿಂತನೆಗಳು, ಸಾಂಸ್ಕೃತಿಕ ಹುಡುಕಾಟದ ನೆಲೆಯಲ್ಲಿ ಶಂಭಾ ಜೋಶಿ, ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ, ಜನಪ್ರಿಯ ನೆಲೆಯಲ್ಲಿ ಅನಕೃ, ಕರ್ನಾಟಕ ರಕ್ಷಣಾ ವೇದಿಕೆಯ ಚಿಂತೆಗಳು, ದ್ರಾವಿಡ ಶೋಧದ ನೆಲೆಯಲ್ಲಿ ಡಿ.ಎನ್. ಶಂಕರ ಭಟ್ಟ, ಕೆ.ವಿ. ನಾರಾಯಣ, ಸಾಮಾಜಿಕ ನೆಲೆಯಲ್ಲಿ ಬರಗೂರು ರಾಮಚಂದ್ರಪ್ಪ, ದಲಿತ ನೆಲೆ ಬಗ್ಗೆ ವಿಮರ್ಶಿಸಲಾಗಿದೆ. ಪ್ರಮಾಣ ಭಾಷೆ ಮತ್ತು ಕನ್ನಡ ಅಸ್ಮಿತೆ, ವಿವಿಧ ಆಯಾಮಗಳು, ಪ್ರಾತಿನಿಧಿಕ ಚಿಂತನೆಗಳ ಬಗ್ಗೆ ವ್ಯಾಖ್ಯಾನಿಸಲಾಗಿದೆ.ರಾಜಕೀಯ ಧೋರಣೆಗಳಲ್ಲಿ ಏಕೀಕರಣ ಪೂರ್ವ, ಏಕೀಕರಣೋತ್ತರ ರಾಜಕೀಯ ಧೋರಣೆಗಳ ಬಗ್ಗೆ ವಿಮರ್ಶಿಸಲಾಗಿದೆ.
ವಿಚಾರ ಸಾಹಿತ್ಯವನ್ನು ಕನ್ನಡ ಅಸ್ಮಿತೆ ಎಂಬ ಪರಿಕಲ್ಪನೆಯ ಮೂಲಕ ವಿವಿಧ ಆಯಾಮಗಳ ಮೂಲಕ ವಿಶ್ಲೇಷಣೆ ಮಾಡಿರುವುದು ಈ ಸಂಶೋಧನಾ ಗ್ರಂಥದಲ್ಲಿ ಎದ್ದು ಕಾಣಿಸುತ್ತದೆ.
ಕನ್ನಡತನಃ ಅಧ್ಯಯನದ ಹೊಳಹುಗಳು ಅಧ್ಯಾಯವೇ ಡಾ.ಸರ್ಜಾಶಂಕರ ಹರಳಿಮಠ ಅವರ ಸಂಶೋಧನಾ ಕೃತಿಯ ಮುಖ್ಯಭಾಗ ಎನಿಸುತ್ತದೆ. ಏಕೆಂದರೆ ವಿವಿಧ ಅಧ್ಯಯನ ನೆಲೆಯಲ್ಲಿ ಪ್ರಮುಖ ಫಲಿತಗಳ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ. ಇಷ್ಟನ್ನು ಗಮನಿಸಿದರೆ ಸಾಕು ಕನ್ನಡ ಅಸ್ಮಿತೆ ಉಳಿಸಲು ಏನು ಮಾಡಬೇಕು? ಎಂಬುದು ಅರಿವಿಗೆ ಬರುತ್ತದೆ.
ವಿದ್ವಾಂಸರಿಗೆ ಮಾತ್ರವಲ್ಲದೇ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇದೊಂದು ಉಪಯುಕ್ತ ಕೃತಿಯಾಗಿದೆ. ತೌಲನಿಕ ಅಧ್ಯಯನ ಮಾಡುವವರಿಗೆ ಮಾರ್ಗದರ್ಶನ ಮಾಡುವಂತಿದೆ.
ಈ ಕೃತಿಯನ್ನು ಪ್ರಗತಿ ಪ್ರಕಾಶನ ಪ್ರಕಟಿಸಿದ್ದು, ಆಸಕ್ತರು ಡಾ.ಸರ್ಜಾಶಂಕರ ಹರಳಿಮಠ, ಮೊ. 88845 62600 ಸಂಪರ್ಕಿಸಬಹುದು.