ರಾಜ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯಕ್ಕೆ ಅವಕಾಶ ಕೊಡಲ್ಲ: ಡಾ.ಎಂ.ಸಿ.ಸುಧಾಕರ್‌

| Published : Jan 04 2024, 01:45 AM IST

ರಾಜ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯಕ್ಕೆ ಅವಕಾಶ ಕೊಡಲ್ಲ: ಡಾ.ಎಂ.ಸಿ.ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅತಿಥಿ ಶಿಕ್ಷಕರ ಕಾಯಂಗೊಳಿಸುವಿಕೆಯ ಗಲಾಟೆ, ವಿಶ್ವ ವಿದ್ಯಾಲಯಗಳ ಶುಲ್ಕ, ರಾಜ್ಯದಲ್ಲಿ ವಿದೇಶಿ ವಿವಿ ಆಗಮನದ ಪ್ರಸ್ತಾಪ, ವಿಶ್ವವಿದ್ಯಾಲಯಗಳ ಬಂಡವಾಳ, ಇತರೆ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ‘ಕನ್ನಡಪ್ರಭ’ದ ಜೊತೆ ಮುಖಾಮುಖಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡಪ್ರಭ ವಿಶೇಷ ಸಂದರ್ಶನ

ಲಿಂಗರಾಜು ಕೋರಾಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಅವರಿಗೆ ರಾಜಕಾರಣ ಎಂಬುದು ರಕ್ತದಲ್ಲೇ ಬಂದಿದೆ. ಮುತ್ತಜ್ಜ ಪಟೇಲ್‌ ಚೌಡರೆಡ್ಡಿ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಅರಸರ ಆಳ್ವಿಕೆಯಲ್ಲಿ ಮೈಸೂರು ಪ್ರತಿನಿಧಿ ಸಭೆಯ ಸದಸ್ಯರಾಗಿದ್ದವರು. ತಾತ ಎಂ.ಸಿ.ಆಂಜನೇಯ ರೆಡ್ಡಿ ಚಿಂತಾಮಣಿ ಕ್ಷೇತ್ರದಿಂದ ಗೆದ್ದ ಮೊದಲ ಪಕ್ಷೇತರ ಶಾಸಕ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ತಂದೆ ಚೌಡರೆಡ್ಡಿ, ಮೊಯ್ಲಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಇಂತಹ ಕುಟುಂಬದಿಂದ ಬಂದ ಸುಧಾಕರ್‌ ಈ ಸರ್ಕಾರದಲ್ಲಿ ಉನ್ನತ ಶಿಕ್ಷಣ ಇಲಾಖೆಯಂತಹ ಮಹತ್ವದ ಖಾತೆಯ ಜವಾಬ್ದಾರಿ ಹೊತ್ತಿದ್ದಾರೆ. ಇದೀಗ ಅವರ ರಾಜ್ಯದಲ್ಲಿ ಅವರ ಇಲಾಖೆಯ ಅತಿಥಿ ಉಪನ್ಯಾಸಕರ ಮುಷ್ಕರದ್ದೇ ದೊಡ್ಡ ಸದ್ದು. ಅತಿಥಿ ಉಪನ್ಯಾಸಕರ ವಿಚಾರವನ್ನೂ ಒಳಗೊಂಡು ಇಲಾಖೆಯಲ್ಲಿ ಕಳೆದ 8 ತಿಂಗಳ ಆಡಳಿತದ ವೈಖರಿ ಹಾಗೂ ಸವಾಲುಗಳ ಬಗ್ಗೆ ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ‘ಮುಖಾಮುಖಿ’ಯಾಗಿದ್ದಾರೆಅತಿಥಿ ಉಪನ್ಯಾಸಕರ ಹೋರಾಟ 40 ದಿನ ಕಳೆಯಿತು?

ನೋಡಿ, ಅವರ ಬಗ್ಗೆ ಸರ್ಕಾರಕ್ಕೆ ಬಹಳಷ್ಟು ಸಹಾನುಭೂತಿ ಇದೆ. ಆದರೆ, ಅವರ ಸೇವೆ ಕಾಯಂಗೆ ಕಾನೂನಲ್ಲಿ ಅವಕಾಶವಿಲ್ಲ. ಇದು ಬಹಳ ವರ್ಷಗಳ ಸಮಸ್ಯೆ. ಹಿಂದಿನ ಸರ್ಕಾರದಲ್ಲೂ ಸೇವೆ ಕಾಯಂಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪರಿಶೀಲಿಸಲು ನಾಲ್ಕು ಜನ ಅಧಿಕಾರಿಗಳ ಸಮಿತಿ ಮಾಡಿದ್ದರು. ಆದರೆ, ಸೇವೆ ಕಾಯಂ ಸಾಧ್ಯವಿಲ್ಲ ಎಂದು ತಿಳಿದು ಅವರ ಕಾರ್ಯಭಾರ ವಿಲೀನಗೊಳಿಸಿ ಸಂಬಳ ಹೆಚ್ಚಿಸಿದರು. ಈಗ ಮತ್ತೆ ಪ್ರತಿಭಟನೆ ಮಾಡಿದ್ದಕ್ಕೆ ಜವಾಬ್ದಾರಿಯುತ ಸರ್ಕಾರವಾಗಿ ಏನಾದರೂ ಅನುಕೂಲ ಮಾಡಿಕೊಡಬೇಕೆಂದು ಪರಿಶೀಲಿಸಿ ಕಾನೂನು ಚೌಕಟ್ಟಿನಲ್ಲೇ 5 ಸಾವಿರ ವೇತನ ಹೆಚ್ಚಳ, 5 ಲಕ್ಷ ರು. ಆರೋಗ್ಯ ವಿಮೆ, 5 ಲಕ್ಷ ರು. ಇಡುಗಂಟು ಸೇರಿ ಕೆಲ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿದ್ದೇವೆ.

ಬೇರೆ ಇಲಾಖೆಯಲ್ಲಿ ಸರ್ಕಾರ ಸೇವೆ ಕಾಯಂ ಮಾಡಿದೆಯಲ್ಲ?

ಅವರು ಗ್ರಾಮೀಣಾಭಿವೃದ್ಧಿ, ಇಂಧನ ಇಲಾಖೆ ಹೆಸರೇಳುತ್ತಾರೆ. ಆ ಇಲಾಖೆಗಳಿಗೂ ನಮ್ಮ ಇಲಾಖೆಗೂ ಹೋಲಿಕೆ ಸಾಧ್ಯವಿಲ್ಲ. ಅಲ್ಲಿ ಒತ್ತಡ ಇರುವುದಿಲ್ಲ. ಇಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಬಹಳಷ್ಟಿದೆ. ಈಗ ಸೇವೆ ಸಲ್ಲಿಸುತ್ತಿರುವ 10 ಸಾವಿರ ಮಂದಿ ಜೊತೆಗೆ ಒಟ್ಟು 30 ಸಾವಿರ ಮಂದಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ್ದರು. ಹಿಂದೆ ಸೇವೆ ಸಲ್ಲಿಸಿ ನಂತರ ಅವಕಾಶ ಸಿಗದವರೂ ಇದ್ದಾರೆ. ಅವರೆಲ್ಲರೂ ನಮಗೂ ಅರ್ಹತೆ ಇದೆ, ಸೇವೆ ಕಾಯಂ ಮಾಡಿ ಅಂದ್ರೆ ಹೇಗಾಗುತ್ತೆ. ಇವತ್ತು ಪ್ರತಿಯೊಂದನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುವಂತವರಿದ್ದಾರೆ. ಉಮಾದೇವಿ ಪ್ರಕರಣದ ನಂತರ ಯಾವುದೇ ಹುದ್ದೆಗೆ ನೇರವಾಗಿ ಸೇವೆ ಕಾಯಂ ಮಾಡಲು ಅವಕಾಶವೂ ಇಲ್ಲ.

ಪ್ರಣಾಳಿಕೆಯಲ್ಲಿ ಸೇವಾ ಭದ್ರತೆಗೆ ನಿಯಮ ರೂಪಿಸುತ್ತೇವೆ ಎಂದಿದ್ದೀರಿ?

ಸೇವಾ ಭದ್ರತೆಗೆ ನಿಯಮ ರೂಪಿಸೋದು ಅಂದರೆ ಸೇವೆ ಕಾಯಂಗೊಳಿಸೋದು ಅಂತ ಅಲ್ಲ. ಅತಿಥಿ ಉಪನ್ಯಾಸಕರಾಗಿ ಹತ್ತಾರು ವರ್ಷ ಸೇವೆ ಮಾಡಿದವರು ಬರಿಗೈಯಲ್ಲಿ ಹೋಗಬಾರದು ಅಂತಲೇ 5 ಸಾವಿರ ವೇತನ ಹೆಚ್ಚಳ, 5 ಲಕ್ಷ ರು. ಇಡಿಗಂಟು, ಕುಟುಂಬಕ್ಕೆ 5 ಲಕ್ಷ ರು. ಆರೋಗ್ಯ ವಿಮೆಯಂತಹ ನಿರ್ಧಾರ ಮಾಡಿದ್ದು. ಜೊತೆಗೆ ಪ್ರಾಧ್ಯಾಪಕ ಹುದ್ದೆಯ ನೇಮಕಾತಿಯಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಮಾಡಿದವರಿಗೆ ವರ್ಷಕ್ಕೆ 1 ಪರ್ಸೆಂಟ್‌ನಂತೆ ಗರಿಷ್ಠ 10 ವರ್ಷಗಳ ವರೆಗೆ 5 ಪರ್ಸೆಂಟ್‌ ಅಂಕ ನೀಡಲು ಅವಕಾಶ ಮಾಡಲಾಗಿದೆ. ಇದರಿಂದ 300 ಅಂಕಗಳ ಪರೀಕ್ಷೆಯಲ್ಲಿ 15 ಕೃಪಾಂಕ ಸಿಗುತ್ತದೆ. 0.01 ಅಂಕದಲ್ಲಿ ಹುದ್ದೆಗಳು ತಪ್ಪುವ ಈ ಸ್ಪರ್ಧಾತ್ಮಕ ಕಾಲದಲ್ಲಿ 15 ಅಂಕ ಕಡಿಮೆ ಏನಲ್ಲ. ಮುಂದೆ ಇದಕ್ಕೆ ವಿಶೇಷ ನಿಯಮ ತರುತ್ತೇವೆ ಅಂತಲೂ ಹೇಳಿದ್ದೇವೆ. ಅವರು ಕೇಳುತ್ತಿಲ್ಲ.

ನೀವು ಮಾಡಲ್ಲ, ಅವರು ಬಿಡಲ್ಲ, ಮುಂದೇನು?

ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸುಲಭವೇ. ಜ.1ರ ಗಡುವು ನೀಡಿದ್ದೆವು. ಮಾನವೀಯತೆ ನೆಲೆಗಟ್ಟಿನ ಮೇಲೆ ಅವಕಾಶ ಕೊಡುತ್ತಿದ್ದೇವೆ. ಆದರೆ, ಅವರು ಪಟ್ಟು ಸಡಿಲಿಸಲಿಲ್ಲ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದಾಗ ಸರ್ಕಾರಕ್ಕೂ ಜವಾಬ್ದಾರಿ ಇದೆ, ನಿರ್ಧಾರ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅವರ ಆದೇಶದಂತೆ ಕಠಿಣ ತೀರ್ಮಾನ ಮಾಡಲೇ ಬೇಕಾಗುತ್ತದೆ.ನಿಮ್ಮಿಬ್ಬರ ಜಗಳದಲ್ಲಿ ವಿದ್ಯಾರ್ಥಿಗಳ ಬಡವಾಗುತ್ತಿದ್ದಾರೆ?

ನೋಡೋಣ, ಈ ವಿಚಾರದ ಬಗ್ಗೆ ಈಗಲೇ ಏನೂ ಹೇಳಲಾಗಲ್ಲ. ಎಲ್ಲೆಲ್ಲಿ ಎಷ್ಟರ ಮಟ್ಟಿಗೆ ಪಠ್ಯಬೋಧನೆ ಆಗಿದೆ. ಇರುವ ಅವಧಿಯಲ್ಲೇ ವಿಶೇಷ ತರಗತಿ ಮಾಡಿ ಪೂರ್ಣಗೊಳಿಸಲಾಗುತ್ತದಾ? ಅಂತ ನೋಡುತ್ತೇವೆ. ಬಾಕಿ ಇರುವ ಪಠ್ಯ ಬೋಧನೆಗೆ ಪರ್ಯಾಯ ವ್ಯವಸ್ಥೆ ಮಾಡುವ ಆಲೋಚನೆಯೂ ಇದೆ. ಅರ್ಹತೆ ಇದ್ದರೂ ಅರ್ಜಿ ಹಾಕಿದ್ದ ಬಹಳಷ್ಟು ಜನರಿಗೆ ಅತಿಥಿ ಉಪನ್ಯಾಸಕ ಸೇವೆಗೆ ಅವಕಾಶ ಸಿಕ್ಕಿಲ್ಲ. ಇವರ ಸೇವೆ ಪಡೆಯುವ ಪ್ರಯತ್ನ ಮಾಡುತ್ತೇವೆ.

ಕಾಲೇಜುಗಳಲ್ಲಿ ಚುನಾವಣೆ ನಡೆಸಬೇಕೆಂಬ ಕೂಗಿದೆ?

ನೋಡೋಣ. ಯುವ ನಾಯಕರನ್ನು ಹುಟ್ಟುಹಾಕಲು ನಮ್ಮ ಪಕ್ಷದಲ್ಲೂ ಯೂತ್‌ ಕಾಂಗ್ರೆಸ್‌, ಎನ್‌ಎಸ್‌ಯುಐ ಸಂಘಟನೆಗಳೂ ಇವೆ. ಚುನಾವಣೆ ಮೂಲಕ ಬಂದರಷ್ಟೇ ಯುವ ನಾಯಕರಲ್ಲ. ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದೆ. ಏನೂ ಇಲ್ಲದೆ ಗಲಾಟೆಗಳು ನಡೆಯುತ್ತಿವೆ. ಇನ್ನು ಚುನಾವಣೆ ಅದು ಇದು ನೋಡೋಣ, ಸ್ವಲ್ಪ ಯೋಚಿಸಿ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಅವರ ಏನು ಹೇಳುತ್ತಾರೆ ಅದರಂತೆ ಮುಂದುವರೆಯುತ್ತವೆ.ಬಿಜೆಪಿ ಅವಧಿಯ 7 ‘ಶೂನ್ಯ ಬಜೆಟ್‌’ ವಿವಿ ಮುಚ್ಚುತ್ತೀರಾ?

ಒಂದು ರಸ್ತೆಗೆ ಡಾಂಬರಿಗೆ ಕೋಟಿಗಟ್ಟಲೆ ಹಣ ಬೇಕು. ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ಯಾಂಪಸ್‌, ಅನುದಾನ, ಸೌಲಭ್ಯಗಳು ಬೇಡವಾ. ಯಾವುದೂ ಇಲ್ಲದೆ ಸ್ಥಾಪನೆ ಮಾಡಿ ಅಂದರೆ ಹೇಗಾಗುತ್ತದೆ. ಅರ್ನ್‌ ವೈಲ್‌ ಯು ಲರ್ನ್‌ ಅಂತಾರೆ ಬಿಜೆಪಿಯವರು ಅದರ ಅರ್ಥವನ್ನ ಅವರೇ ಹೇಳಬೇಕು. ಅವರು ಮಾಡಿದ ಅವೈಜ್ಞಾನಿಕ ನಿರ್ಧಾರದಿಂದ ಇರೋ ಮೂಲ ಸಂಸ್ಥೆಯ ನೆಲೆಗಟ್ಟು ಹೋಯಿತು, ಹೊಸ ವಿವಿ ಅಸ್ತಿತ್ವ ಉಳಿಸಿಕೊಳ್ಳುವುದೂ ಕಷ್ಟವಾಯಿತು. ವಿವಿಗಳೂ ಬರೀ ಪದವಿ ಕೊಡಲು ಅಲ್ಲ ಇರೋದು. ಸಂಶೋಧನೆ ಮಾಡಬೇಕು. ಶೈಕ್ಷಣೀಕವಾಗಿ ಹೆಚ್ಚು ಅವಕಾಶಗಳು ಲಭ್ಯವಾಗಬೇಕು ಎನ್ನುವುದು ಉದ್ದೇಶ. ಈ ವಿವಿಗಳ ಭವಿಷ್ಯವನ್ನ ಮುಖ್ಯಮಂತ್ರಿ ಅವರು ನಿರ್ಧಾರ ಮಾಡುತ್ತಾರೆ.

ಬರೋ ಶೈಕ್ಷಣಿಕ ವರ್ಷಕ್ಕೆ ಎನ್‌ಇಪಿ ರದ್ದಾಗುತ್ತಾ?

ರಾಜ್ಯದ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾಗಿ ಈಗ ಮೂರನೇ ವರ್ಷ ನಡೆಯುತ್ತಿದೆ. ಹಾಗಾಗಿ ಏಕಾಏಕಿ ಯಾವುದೇ ನೀತಿ ತರಲು ಸಾಧ್ಯವಿಲ್ಲ. ಹಾಗಾಗಿ ಅದನ್ನೇ ಮುಂದುವರೆಸಿದ್ದೇವೆ. ಈಗಾಗಲೇ ರಾಜ್ಯ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚಿಸಲಾಗಿದೆ. ಅದು ಸದ್ಯದಲ್ಲೇ ಮಧ್ಯಂತರ ವರದಿ ಕೊಡಬಹುದು. ಇನ್ನು ಎನ್‌ಇಪಿಯಲ್ಲೇ 4ನೇ ವರ್ಷ ಪದವಿ ಓದುವುದು ಕಡ್ಡಾಯವಿಲ್ಲ. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದೆ. ಆದರೆ, ಗೊಂದಲ ಇದೆ. ಈ ಬಗ್ಗೆ ಎಸ್‌ಇಪಿ ಸಮಿತಿ ವರದಿ ಕೊಟ್ಟಾಗ ಅದರ ಸಲಹೆ ನೋಡಿಕೊಂಡು ಸೂಕ್ತ ಘೋಷಣೆ ಮಾಡುತ್ತೇವೆ.

ಹಾಗಾದರೆ ಮುಂದಿನ ಶೈಕ್ಷಣಿಕ ಸಾಲಿಗೆ ಎಸ್‌ಇಪಿ ಜಾರಿಯಾಗಲ್ವಾ?

ಸಮಿತಿಗೆ ವರದಿ ನೀಡಲು ಫೆ.28ಕ್ಕೆ ಗಡುವು ಕೊಟ್ಟಿದ್ದೇವೆ. ಅಷ್ಟರೊಳಗೆ ಅವರು ವರದಿ ಕೊಟ್ಟರೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಅನುಷ್ಠಾನದ ವೇಳಾಪಟ್ಟಿ ನೋಡಿಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಜಾರಿಗೊಳಿಸಲು ಸಾಧ್ಯವಿದೆಯಾ ಎಂದು ಕ್ರಮ ತಗೆದುಕೊಳ್ಳುತ್ತೇವೆ.ವಿವಿಗಳಲ್ಲಿ ಏಕರೂಪ ವೇಳಾಪಟ್ಟಿ ಪ್ರಯತ್ನ ಏನಾಯ್ತು?

ನಡೆಯುತ್ತಿದೆ. ಎಲ್ಲ ವಿವಿಗಳ ಮಾಹಿತಿ ತರಿಸಿಕೊಂಡಿದ್ದೇನೆ. ಐದು ವಿವಿಗಳ ವೇಳಾಪಟ್ಟಿಯಲ್ಲಿ ಹೆಚ್ಚು ವ್ಯತ್ಯಾಸಗಳಿವೆ. ಉಳಿದದ್ದು ಅಷ್ಟು ವ್ಯತ್ಯಾಸವಿಲ್ಲ. ಈಗ ಅತಿಥಿ ಉಪನ್ಯಾಸಕರ ಗೊಂದಲ ಬಗೆಹರಿದ ಮೇಲೆ ಎಲ್ಲ ವಿವಿಗಳಲ್ಲೂ ಪ್ರತಿ ವರ್ಷ ಪ್ರವೇಶ ಪ್ರಕ್ರಿಯೆ, ಪಠ್ಯ ಬೋಧನೆ, ಪರೀಕ್ಷೆ, ಮೌಲ್ಯಮಾಪನ ಎಲ್ಲದರಲ್ಲೂ ಏಕರೂಪ ವ್ಯವಸ್ಥೆಗೆ ಸಾಮಾನ್ಯ ವೇಳಾಪಟ್ಟಿ ತರುತ್ತೇವೆ.

ಐಐಟಿ ಮಾದರಿ ಯುವಿಸಿಇ ಅಭಿವೃದ್ಧಿ ಯಾವ ಹಂತಕ್ಕೆ ಬಂತು?

ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಹಿಂದಿನ ಸರ್ಕಾರ ಘೋಷಿಸಿ ಜ್ಞಾನ ಭಾರತಿಯಲ್ಲಿ 50 ಎಕರೆ ಜಾಗ ಮೀಸಲಿಟ್ಟಿದ್ದರು. ಇನ್ನೂ 50 ಎಕರೆ ಸೇರಿಸೋಣ ಅಂದುಕೊಂಡೆವು. ಆದರೆ, ಅಷ್ಟೆ ಸಾಕು ಎನ್ನುವ ಅಭಿಪ್ರಾಯವಿದೆ. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಅವರು 25 ಕೋಟಿ ರು. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟ ರೂಪ ನೀಡಲು ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ವಿಶೇಷ ಅನುದಾನ ಪಡೆಯಲಾಗುವುದು.

ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣವೂ ಬೇಕಲ್ವಾ?

ಖಂಡಿತ. ಇವತ್ತು ಕೈಗಾರಿಕೆಗಳು ಸೇರಿದಂತೆ ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಕ್ಕೆ ಹೆಚ್ಚು ಆದ್ಯತೆ ಇದೆ. ಹಾಗಾಗಿ ನಮ್ಮ ಸರ್ಕಾರ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಗಮನ ನೀಡುತ್ತಿದೆ. ಕಾಲೇಜು, ವಿವಿಗಳು, ತಾಂತ್ರಿಕ, ಡಿಪ್ಲೊಮಾ ಶಿಕ್ಷಣದಲ್ಲಿ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಹಂತ ಹಂತವಾಗಿ ವಿಶೇಷ ಕೌಶಲ್ಯ ತರಬೇತಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ. ಮೊದಲ ಹಂತದಲ್ಲಿ ಐದು ಭಾಗದಲ್ಲಿ ಐದು ಕೇಂದ್ರಗಳನ್ನು ಆರಂಭಿಸಲು ವಿವಿಧ ಇಲಾಖಾ ಮಂತ್ರಿಗಳ ಸಹಯೋಗದಲ್ಲಿ ಸಮಿತಿ ರಚಿಸಲಾಗಿದೆ.

ಇಲಾಖೆಯಲ್ಲಿ ಕಡತ ವಿಲೇವಾರಿ ತಡವಾಗುತ್ತಿದೆಯಂತೆ?

ಇಲಾಖೆಯಲ್ಲಿ ಆ ರೀತಿ ಒಂದೆರಡು ಉದಾಹರಣೆಗಳಾಗಿರಬಹುದು. ಒಬ್ಬರು ಇಬ್ಬರು ಸಣ್ಣ ಪುಟ್ಟ ಕಾರಣದಿಂದ ತಡ ಮಾಡಿರಬಹುದು. ಆದರೆ, ಅಂತಹದ್ದು ನನ್ನ ಗಮನಕ್ಕೆ ಬಂತ ತಕ್ಷಣ ಗಭೀರವಾಗಿ ಪರಿಗಣಿಸಿ ವಿಳಂಬಕ್ಕೆ ಅವಕಾಶವಾಗದಂತೆ ಶೀಘ್ರ ವಿಲೇವಾರಿಗೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ವಿವಿಧ ವಿವಿಗಳಲ್ಲಿ ಕುಲಪತಿ ಹುದ್ದೆ ನೇಮಕಾತಿ ತಡವಾಗಿದೆ?ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಆಯ್ಕೆಗೆ ಆಯಾ ಶೋಧನಾ ಸಮಿತಿಗಳು ತಲಾ ಮೂವರು ಅರ್ಹರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಿವೆ. ಮುಖ್ಯಮಂತ್ರಿಗಳು ಆ ಕಡತವನ್ನು ಸದ್ಯದಲ್ಲೇ ರಾಜ್ಯಪಾಲರಿಗೆ ಕಳುಹಿಸಲಿದ್ದಾರೆ. ನಂತರ ರಾಜ್ಯಪಾಲರು ಸರ್ಕಾರದೊಂದಿಗೆ ಸಮಾಲೋಚಿಸಿ ಕುಲಪತಿಗಳ ನೇಮಕಾತಿ ಆದೇಶ ಹೊರಡಿಸುತ್ತಾರೆ. ಸಿಂಡಿಕೇಟ್‌-ಅಕಾಡೆಮಿಕ್‌ ಕೌನ್ಸಿಲ್‌ಗಳಿಗೂ ನಾಮನಿರ್ದೇಶನ ಆಗಿಲ್ಲ ?ಈಗಾಗಲೇ ಸಿಂಡಿಕೇಟ್‌ ಸದಸ್ಯರ ನೇಮಕಕ್ಕೆ ಚಾಲನೆ ನೀಡಲಾಗಿದೆ. ಸದ್ಯದಲ್ಲೇ ಮಂಗಳೂರು ಮತ್ತು ಮೈಸೂರು ವಿವಿಗಳಿಗೆ ಸಿಂಡಿಕೇಟ್‌ ಸದಸ್ಯರ ನೇಮಕ ಮಾಡಲಾಗುವುದು. ನಂತರ ಉಳಿದ ವಿವಿಗಳಿಗೂ ನಡೆಯಲಿದೆ. ಸಿಂಡಿಕೇಟ್‌ ಸದಸ್ಯರ ನೇಮಕಾತಿ ಪೂರ್ಣಗೊಂಡ ನಂತರ ಅಕಾಡೆಮಿಕ್‌ ಕೌನ್ಸಿಲ್‌ ಗೂ ನೇಮಕಾತಿ ಆರಂಭಿಸುತ್ತೇವೆ.ಎಂಜಿನಿಯರಿಂಗ್‌ ಕಾಲೇಜುಗಳಿಗೆ ನಿರ್ಬಂಧಕ್ಕೆ ಪತ್ರ ಬರೆದಿದ್ರಿ?ಬೆಂಗಳೂರು ಸೇರಿದಂತೆ ಕೆಲ ನಗರ ಪ್ರದೇಶದ ಕಾಲೇಜುಗಳಿಗೆ ತಲಾ 1500 ರಿಂದ 5000 ಸೀಟುಗಳ ವರೆಗೆ ದಾಖಲಾತಿಗೆ ಅವಕಾಶ ನೀಡಲಾಗುತ್ತಿದೆ. ಅದೂ ಕಂಪ್ಯೂಟರ್‌ ಸೈನ್ಸ್‌, ಇನ್ಫರ್ಮೇಷನ್‌ ಸೈನ್ಸ್‌ ಹೀಗೆ ಯಾವುದೋ ಒಂದೆರಡು ಕೋರ್ಸುಗಳಿಗೇ ಅಷ್ಟು ಸೀಟು ನೀಡಲಾಗುತ್ತಿದೆ. ಎಲ್ಲ ಕಡೆಯಿಂದ ಮಕ್ಕಳು, ಪ್ರಾಧ್ಯಾಪಕರು ನಗರ ಪ್ರದೇಶಕ್ಕೆ ಕೇಂದ್ರೀಕೃತವಾದರೆ ಗ್ರಾಮೀಣ ಭಾಗದ ಹಾಗೂ ರಾಜ್ಯದ ಇತರೆ ಭಾಗದ ಕಾಲೇಜುಗಳ ಗತಿ ಏನು? ಬೀಗ ಹಾಕಬೇಕಾಗುತ್ತದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಪತ್ರ ಬರೆದು ನ್ಯಾಷನಲ್‌ ಮೆಡಿಕಲ್‌ ಕೌನ್ಸಿಲ್‌ ಎಂತಹ ಆಸ್ಪತ್ರೆಯೇ ಆಗಲಿ ವೈದ್ಯಕೀಯ ಕಾಲೇಜಿಗೆ 250ರ ಮೇಲೆ ಸೀಟು ನೀಡುವುದಿಲ್ಲ. ಅದೇ ರೀತಿ ಎಂಜಿನಿಯರಿಂಗ್‌ಗೂ ಮನಬಂದಂತೆ ಸೀಟು ಹೆಚ್ಚಿಸಿಕೊಳ್ಳಲು ಅವಕಾಶ ನೀಡಬೇಡಿ, ಕಠಿಣ ನಿರ್ಬಂಧ ಹಾಕಿ ಎಂದು ಮನವಿ ಮಾಡಿದ್ದೆ. ಆದರೆ, ಅವರು ಒಪ್ಪಿಲ್ಲ. ಹೀಗಾದರೆ ಗುಣಮಟ್ಟದ ಶಿಕ್ಷಣ ಸಾಧ್ಯನಾ?ಎಂಜಿನಿಯರಿಂಗ್‌ ಕಾಲೇಜುಗಳ ನಿಯಂತ್ರಣಕ್ಕೆ ರಾಜ್ಯಕ್ಕೆ ಅಧಿಕಾರ ಇಲ್ವಾ?ಎಐಸಿಟಿಯವರು ಸರ್ಕಾರಕ್ಕೆ ಏನೂ ಅಧಿಕಾರವೇ ಇಲ್ಲ ಅನ್ನೋತರ ಹೇಳಿಕೆ ಕೊಡ್ತಾರೆ. ಎಲ್ಲ ನಮ್ಮದೇ ಅನ್ನೋತರ ಫ್ರೇಮ್‌ ವರ್ಕ್‌ ಮಾಡಬಹುದು. ರಾಜ್ಯ ಸರ್ಕಾರಕ್ಕೂ ನಿರ್ಬಂಧ ಹಾಕುವ ಅಧಿಕಾರ ಇದೆ. ಒಂದೇ ಬಾರಿ ಈ ಪ್ರಯೋಗ ಬೇಡ ಅಂತ ಸುಮ್ಮನಿದ್ದೇವೆ. ಮುಂದಿನ ದಿನಗಳಲ್ಲಿ ಎಐಸಿಟಿಯವರು ಯಾವುದೇ ಪರಿಶೀಲನೆ ಮಾಡದೆ ಹೆಚ್ಚುವರಿಯಾಗಿ ನೀಡಿದ ಸೀಟುಗಳನ್ನು ನಾವು ಸೀಟು ಹಂಚಿಕೆಗೇ ಪರಿಗಣಿಸುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅನುಮತಿ ಪಡೆಯುತ್ತೇವೆ. ಎಲ್ಲ ಅಧಿಕಾರ ಅವರಿಗೇ ಇಲ್ಲ, ಸರ್ಕಾರಕ್ಕೂ ಇದೆ. ಎಐಸಿಟಿಯವರು ಬರೀ ಕೇಂದ್ರದ ಸೂಚನೆ, ಅವರ ಅಜೆಂಡಾ ಅಡಿ ಕೆಲಸ ಮಾಡ್ತಿದಾರೆ. ವಿದ್ಯಾರ್ಥಿಗಳ ಭವಿಷ್ಯ ಏನು ಅಂತ ನೋಡುತ್ತಿಲ್ಲ.ಕೇಂದ್ರ ಸರ್ಕಾರ ವಿದೇಶಿ ವಿವಿ ಕ್ಯಾಂಪಸ್‌ಗೆ ಅವಕಾಶ ನೀಡಿದೆ?ವಿದೇಶಿ ವಿವಿಗಳು ನಮ್ಮ ರಾಜ್ಯಕ್ಕೆ ಬರಲು ವೈಯಕ್ತಿಕವಾಗಿ ನನ್ನ ಸಹಮತ ಇಲ್ಲ. ನಮ್ಮ ವಿಶ್ವವಿದ್ಯಾಲಯಗಳ ಜೊತೆ ಸಹಭಾಗಿತ್ವದಲ್ಲಿ ಶೈಕ್ಷಣಿಕ ಚಟುವಟಿಕೆ, ವಿದ್ಯಾರ್ಥಿಗಳ ವಿನಿಮಯ, ಸಂಶೋಧನೆ, ಆವಿಷ್ಕಾರಗಳನ್ನು ನಡೆಸುವ ಬಗ್ಗೆ ಸಹಮತವಿದೆ. ಇದರಿಂದ ನಮ್ಮ ರಾಜ್ಯದ ಬಡ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವಾಗಲಿದೆ. ಅದನ್ನು ಬಿಟ್ಟು ವಿದೇಶಿ ವಿವಿಗಳಿಗೆ ಇಲ್ಲಿ ಅವಕಾಶ ನೀಡಿದರೆ ಮತ್ತೆ ಹಣ ಇರುವವರಿಗೆ ಅವಕಾಶ ಸಿಗುತ್ತದೆ. ಬಡವರಿಗೆ ಅನುಕೂಲ ಆಗುವುದಿಲ್ಲ. ಹಾಗಾಗಿ ಅವುಗಳಿಗೆ ಪ್ರೋತ್ಸಾಹ ನೀಡಲ್ಲ.ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿತೀರಾ?ಆ ರೀತಿ ಏನಿಲ್ಲ. ಎಲ್ಲಾ ಬರೀ ಊಹಾಪೋಹ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಪ್ರತಿ ಕ್ಷೇತ್ರಕ್ಕೂ ನಾಲ್ಕಾರು ಮಂದಿ ಆಕಾಂಕ್ಷಿಗಳಿದ್ದಾರೆ. ನಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಶಾಸಕ ಶಿವಶಂಕರೆಡ್ಡಿ ಸೇರಿದಂತೆ ನಾಲ್ಕೈದು ಜನ ಆಕಾಂಕ್ಷಿಗಳು ಇದಾರೆ. ರಾಜ್ಯನಾಯಕರು, ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಗೆಲುವಿನ ಮಾನದಂಡದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.