ಸಾರಾಂಶ
ಗ್ಯಾರಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ದಿವಾಳಿಯಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆದರು. ಆದರೆ ಆರ್ಥಿಕ ಶಿಸ್ತಿನ ಎಲ್ಲೇ ಮೀರದೆ, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಖಾತ್ರಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ವಿರೋಧ ಪಕ್ಷದವರು ಒಂದಿಲ್ಲೊಂದು ಟೀಕೆ ಮಾಡುತ್ತಾ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಲೇ ಬಂದರು. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ದಿವಾಳಿಯಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆದರು. ಆದರೆ ಆರ್ಥಿಕ ಶಿಸ್ತಿನ ಎಲ್ಲೇ ಮೀರದೆ, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಖಾತ್ರಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ
-ದಿನೇಶ್ ಗೂಳಿಗೌಡ, ಶಾಸಕರು, ಕರ್ನಾಟಕ ವಿಧಾನಪರಿಷತ್
ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ಜನರಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತಲೇ ಬಂದಿದ್ದು, ಈಗಿನ ಕಾಂಗ್ರೆಸ್ ಸರ್ಕಾರ ಕೂಡ ಅದನ್ನು ಮುಂದುವರೆಸಿಕೊಂಡು ಸಾಗುತ್ತಿದೆ. ಬಿಜೆಪಿ ಸರ್ಕಾರದ ದುರಾಡಳಿತದಿಂದ ಬಸವಳಿದಿದ್ದ ರಾಜ್ಯದ ಜನತೆಯ ಬಾಳನ್ನು ಗ್ಯಾರಂಟಿ ಯೋಜನೆಗಳು ಹಸನಾಗಿಸುತ್ತಿವೆ. ನೆಮ್ಮದಿಯ ಬದುಕಿನ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಹತ್ತಾರು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಪರಿಣಾಮ ಕರ್ನಾಟಕ ಮಾಡೆಲ್ ಈಗ ಭಾರತದ ಮಾಡೆಲ್ ಆಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರ ಆಡಳಿತವಿರುವ ಕರ್ನಾಟಕದತ್ತ ಭಾರತ ಮಾತ್ರವಲ್ಲ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ.
ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಗ್ಯಾರಂಟಿಯನ್ನು ಕೊಟ್ಟು ಮುನ್ನುಗುತ್ತಿರುವ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದೆ. ಕಾಂಗ್ರೆಸ್ ಮೇಲೆ ನಂಬಿಕೆ, ವಿಶ್ವಾಸವನ್ನಿಟ್ಟು ಸ್ಪಷ್ಟ ಬಹುಮತ ನೀಡುವುದರ ಜೊತೆಗೆ ವಿಧಾನಸಭಾ ಉಪಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಜನತೆ ಕಾಂಗ್ರೆಸ್‌ನ ಬೆನ್ನಿಗೆ ನಿಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ವಿರೋಧ ಪಕ್ಷದವರು ಒಂದಿಲ್ಲೊಂದು ಟೀಕೆ ಮಾಡುತ್ತಾ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಲೇ ಬಂದರು. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ದಿವಾಳಿಯಾಗಲಿದೆ ಎಂದೆಲ್ಲಾ ಬೊಬ್ಬೆ ಹೊಡೆದರು. ಆದರೆ ಆರ್ಥಿಕ ಶಿಸ್ತಿನ ಎಲ್ಲೇ ಮೀರದೆ, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಖಾತ್ರಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂಬುದಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಸಾಕ್ಷಿ.
ಜಿಎಸ್‌ಡಿಪಿ ಬೆಳವಣಿಗೆಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನಕ್ಕೇರಿದೆ. ಮಾತ್ರವಲ್ಲದೆ ತೆರಿಗೆ ಸಂಗ್ರಹಣೆ ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನಕ್ಕೇರಿ ಕನ್ನಡಿಗರಿಗೆ ಅಭಿವೃದ್ಧಿಯ ಗ್ಯಾರಂಟಿ ನೀಡಿದೆ. ದೇಶದ ಒಟ್ಟಾರೆ ಜಿಡಿಪಿ ಶೇಕಡ 8.2ರಷ್ಟು ಬೆಳವಣಿಗೆಗಿಂತ ಕರ್ನಾಟಕದ ಜಿಡಿಪಿ 10.2% ಬೆಳವಣಿಗೆಯಾಗಿ ದೇಶದಲ್ಲೇ ಅಗ್ರ ಸ್ಥಾನ ತಲುಪಿದ್ದು, ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿ ಕರ್ನಾಟಕ ತಲುಪಿದೆ ಎಂದರೆ ಕಾಂಗ್ರೆಸ್ ಸರ್ಕಾರ ದೂರದೃಷ್ಟಿ ಯೋಜನೆಗಳೇ ಕಾರಣ.
ಕೇರ್ ಎಡ್ಜ್ ವರದಿ ಪ್ರಕಾರ ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು ಇದು, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ.
ವಿಶ್ವದ ಅತಿ ದೊಡ್ಡ ಆರ್ಥಿಕ ಪುನಶ್ಚೇತನ ಮತ್ತು ಸಾಮಾಜಿಕ ಭದ್ರತಾ ಯೋಜನೆ (ಗ್ಯಾರಂಟಿ ಯೋಜನೆ) ತಂದು ಸುಮಾರು 4.5 ಕೋಟಿ ಕನ್ನಡಿಗರ ಪ್ರತಿ ಮನೆಗೂ 5 ಸಾವಿರ ರುಪಾಯಿವರೆಗೆ ನೀಡಿ ಬಡವರ ಬಾಳಿಗೆ ಬೆಳಕಾಗುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 2 ವರ್ಷದಲ್ಲಿ ₹90 ಸಾವಿರ ಕೋಟಿ ನೇರವಾಗಿ ಹಣ ಜಮಾವನ್ನು 4.50 ಕೋಟಿ ಪಲನುಭವಿಗಳ ಖಾತೆಗೆ ಹಾಕಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅಧ್ಯಯನ ಮಾಡಲು ವಿಶ್ವದಾದ್ಯಂತ ಅರ್ಥಶಾಸ್ತ್ರಜ್ಞರು ಮತ್ತು ವಿಶ್ವವಿದ್ಯಾಲಯಗಳ ಗಮನ ಸೆಳೆಯುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮಾದರಿಯನ್ನು ಕೇಂದ್ರದ ಬಿಜೆಪಿ ಯಥಾವತ್ ನಕಲು ಮಾಡಿದೆ. ವಿಪರ್ಯಾಸ ಎಂದರೆ ಕಾಂಗ್ರೆಸ್ ಸರ್ಕಾರ ನುಡಿದಂತೆ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅವುಗಳ ಜಾರಿಗೆ ತಿಣುಕಾಡುತ್ತಿರುವುದು ಜಗಜ್ಜಾಹೀರು.
ಬಹುಮುಖ್ಯವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮಾನ್ ಯಾಂಗ್ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಶಂಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಜಾತಿ ಗಣತಿ ಮಾಡೆಲ್ ಅನ್ನು ದೇಶಾದ್ಯಂತ ಮೊದಲ ಬಾರಿಗೆ ಕೇಂದ್ರ ಸರ್ಕಾರ ಜಾರಿ ಮಾಡುವ ಮುಖಾಂತರ ಕರ್ನಾಟಕ ಸರ್ಕಾರದ ಮಾಡೆಲ್ ದೇಶಕ್ಕೆ ಮಾಡೆಲ್ ಆಗಿದೆ.
20 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ
ಕಾಂಗ್ರೆಸ್ ಸರ್ಕಾರ ಉದ್ಯೋಗ ಸೃಷ್ಟಿಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವಂತೆ ಮಾಡಿದೆ. 2024ರಲ್ಲಿ ಉದ್ಯೋಗ ವಿಷಯದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ 63.93% ಉದ್ಯೋಗವಕಾಶವನ್ನು ಹೊಂದಿದ್ದು, ಉದ್ಯೋಗ ಪಡೆಯಲು ಅರ್ಹರಾಗಿರುವ ಪದವೀಧರರಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದೆ.
ವಿಶ್ವದ ಅತ್ಯುನ್ನತ ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳನ್ನು ದೊಡ್ದಬಳ್ಳಾಪುರ ಮತ್ತು ದಾಬಸ್ ಪೇಟೆ ಮಧ್ಯೆ 2 ಸಾವಿರ ಎಕರೆ ಪ್ರದೇಶದಲ್ಲಿ ‘ಕೆಎಚ್‌ಐಆರ್ ಸಿಟಿ’ಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯದೊಂದಿಗೆ ನಿರ್ಮಿಸುತ್ತಿದೆ. ಈ ಯೋಜನೆಯಿಂದ ₹40 ಸಾವಿರ ಕೋಟಿ ಬಂಡವಾಳ ಹೂಡಿಕೆ ಹಾಗೂ 80 ಸಾವಿರಕ್ಕೂ ಹೆಚ್ಚು ಉದ್ಯೋಗವಕಾಶಗಳು ಸೃಷ್ಟಿಯಾಗಲಿದೆ.
ಕಲಬುರಗಿ ಜಿಲ್ಲೆಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸುವ ಯೋಜನೆ ಕೈಗೊಂಡಿರುವ ಕಾಂಗ್ರೆಸ್ ಸರ್ಕಾರ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಸಲು ಪಣತೊಟ್ಟಿದೆ.
ಅನಿಮೇಷನ್, ವಿಶುವಲ್, ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ ವಲಯದಲ್ಲಿ 30 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಕಾಂಗ್ರೆಸ್ ಸರ್ಕಾರ 2024-29 ಕೈಗಾರಿಕಾ ನೀತಿ ಪ್ರಾರಂಭಿಸಿದ್ದು, 2029ರ ವೇಳೆಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ ₹7.5 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಸ್ಟಾರ್ಟಪ್‌ಗಳಿಗೆ ಅನುದಾನ
ದೇಶದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ 100ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿಗೆ ಈಕ್ವಿಟಿಯನ್ನು ತೆಗೆದುಕೊಳ್ಳದೇ ಅನುದಾನ ನೀಡಲಾಗಿದೆ. ಬೆಂಗಳೂರಿನ ಸರ್ಜಾಪುರ ಬಳಿ ಸ್ವಿಫ್ಟ್ (SWIFT- Startups, Workspaces, Innovation, Finance and Tecnology) ನಗರವನ್ನು 1 ಸಾವಿರ ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿ ಸ್ಟಾರ್ಟ್ ಅಪ್ ವ್ಯವಸ್ಥೆಯನ್ನು ಹೆಚ್ಚಿಸಿ ಟೆಕ್ ಕ್ಯಾಪಿಟಲ್‌ನ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಲಿದೆ. ಕಾಂಗ್ರೆಸ್ ಸರ್ಕಾರದ ಎಲಿವೇಟ್ ಪ್ರೋಗ್ರಾಂ ಪರಿಕಲ್ಪನೆಯಿಂದ 980ಕ್ಕೂ ಹೆಚ್ಚು ಸ್ಟಾರ್ಟ್ಪಪ್‌ಗಳಿಗೆ ₹224.06 ಕೋಟಿ ಅನುದಾನ ನೀಡಿ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ರಾಜ್ಯಕ್ಕೆ ಬಂಡವಾಳದ ಹರಿವು
ಕಳೆದ ಒಂದು ವರ್ಷದಲ್ಲಿ ₹48 ಸಾವಿರ ಕೋಟಿ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ₹34,115 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಿದ್ದು, ಇದರಿಂದ 13,308 ಜನರಿಗೆ ಉದ್ಯೋಗ ದೊರತಿದೆ.
ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ₹10 ಲಕ್ಷ ಕೋಟಿ ಹೂಡಿಕೆಯ ಗುರಿಯನ್ನು 100% ಸಾಧಿಸಿ ₹10.27 ಲಕ್ಷ ಕೋಟಿ ಹೂಡಿಕೆಯನ್ನು ರಾಜ್ಯಕ್ಕೆ ತರಲಾಗಿದ್ದು, ಇದರಿಂದ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ. ₹10.27 ಲಕ್ಷ ಕೋಟಿ ಹೂಡಿಕೆಯಲ್ಲಿ 45%ಗೂ ಹೆಚ್ಚು ಉತ್ತರ ಕರ್ನಾಟಕದಲ್ಲಿ ಹೂಡಿಕೆಯಾಗುವ ಮೂಲಕ ರಾಜ್ಯದೆಲ್ಲೆಡೆ ಅಭಿವೃದ್ಧಿ ಪರ್ವ ಪಸರಿಸಿದೆ.
ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷಿಸಲು ₹714.49 ಕೋಟಿ ವೆಚ್ಚದ 901 ಎಕರೆಯಲ್ಲಿ ನಾಲ್ಕು ಸೆಮಿಕಂಡಕ್ಟರ್‌ಗಳನ್ನು ಅಭಿವೃದ್ಧಿಪಡಿಸಿದೆ.
6.57 ಬಿಲಿಯನ್ ಡಾಲರ್ ಎಫ್‌ಡಿಐ
ಕಳೆದೊಂದು ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 6.57 ಬಿಲಿಯನ್ ಡಾಲರ್ ವಿದೇಶ ನೇರ ಬಂಡವಾಳ ರಾಜ್ಯಕ್ಕೆ ಹರಿದುಬಂದಿದ್ದು ಇದು ದೇಶದ ಒಟ್ಟು ಎಫ್‌ಡಿಐ ಒಳಹರಿವಿನಲ್ಲಿ ಕರ್ನಾಟಕವನ್ನು 2ನೇ ಸ್ಥಾನಕ್ಕೆ ತಲುಪಿಸಿದೆ.
ಕೌಶಲ್ಯ ತರಬೇತಿ
ದೊಡ್ಡ ದೊಡ್ಡ ಕಂಪನಿಗಳ ಜೊತೆಗೂಡಿ 1 ಲಕ್ಷ ಯುವ ಜನತೆಗೆ ತರಬೇತಿ ನೀಡುತ್ತಿದೆ. 100 ಕೇಂದ್ರದಲ್ಲಿ 30 ಸಾವಿರ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಸ್ವಉದ್ಯೋಗ ಯೋಜನೆ ಜಾರಿ ಮಾಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಬೆಂಗಳೂರಲ್ಲಿ ಅಭಿವೃದ್ಧಿ ಪರ್ವ
ವೇಗವಾಗಿ ಬೆಳೆಯುತ್ತಿರುವ ದೇಶದ ಐಟಿ ಹಬ್ ಆಗಿರುವ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಬ್ರಾಂಡ್ ಬೆಂಗಳೂರು ಯೋಜನೆಗೆ ₹1580 ಕೋಟಿ ಮೀಸಲಿಡಲಾಗಿದೆ. 14 ಮೇಲ್ಸೇತುವೆ, ಸುರಂಗ ಮಾರ್ಗ, ಎಕನಾಮಿಕ್ ಕಾರಿಡಾರ್ ಸೇರಿದಂತೆ ಸುಮಾರು ₹1.50 ಲಕ್ಷ ಕೋಟಿ ಮೂಲ ಸೌಕರ್ಯ ಅಭಿವೃದ್ಧಿ ನಡೆಯುತ್ತಿರುವ ವಿಶ್ವದ ಏಕೈಕ ನಗರ ಬೆಂಗಳೂರು. ₹1800 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ, ₹12690 ಕೋಟಿ ವೆಚ್ಚದಲ್ಲಿ ಹೊಸೂರು- ಸಿಲ್ಕ್ ಬೋರ್ಡ್ ಸುರಂಗ ಮಾರ್ಗ, ₹500 ಕೋಟಿ ವೆಚ್ಚದಲ್ಲಿ 250 ಮೀಟರ್ ಸ್ಕೈಡೆಕ್ ನಿರ್ಮಿಸಲಾಗುತ್ತಿದೆ. ಮಳೆ ಹಾನಿಯನ್ನು ಶಾಶ್ವತವಾಗಿ ತಡೆಯಲು ₹5 ಸಾವಿರ ಕೋಟಿ ಮೀಸಲಿಡಲಾಗಿದೆ. ನಮ್ಮ ಮೆಟ್ರೋ ಯೋಜನೆಗೆ 2025ನೇ ಬಜೆಟ್‌ನಲ್ಲಿ ₹2190 ಕೋಟಿ ಅನುದಾನ ನೀಡಲಾಗಿದ್ದರೆ, 2026ಕ್ಕೆ ನಮ್ಮ ಮೆಟ್ರೋ ಹೊಸ 175 ಕಿ.ಮೀ. ವಿಸ್ತರಣೆಯ ಗುರಿ ಹೊಂದಿದೆ. ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿಗಳ ಕಾವೇರಿ ಕುಡಿಯುವ ನೀರಿನ 5ನೇ ಹಂತದ ಯೋಜನೆಯನ್ನು ₹4336 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಮತ್ತು ಅನುದಾನದ ಅನ್ಯಾಯದ ನಡುವೆಯೂ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ವರ್ಷದಲ್ಲಿ ಕರ್ನಾಟಕದ ಮಾಡೆಲನ್ನು ರಾಷ್ಟ್ರಕ್ಕೆ ತೋರಿಸಿಕೊಟ್ಟಿದೆ. ಉಳಿದಿರುವ ಮೂರು ವರ್ಷಗಳಲ್ಲಿ ಕರ್ನಾಟಕದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿ ನಮ್ಮ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಿ ಮತ್ತೊಮ್ಮೆ ಜನಾಶೀರ್ವಾದ ಪಡೆದು ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ.