ಕಾವೇರಿ: ಚಾಕಲೇಟ್ ಪ್ರದರ್ಶಿಸಿ ವಿನೂತನ ಪ್ರತಿಭಟನೆ
KannadaprabhaNewsNetwork | Published : Oct 23 2023, 12:15 AM IST
ಕಾವೇರಿ: ಚಾಕಲೇಟ್ ಪ್ರದರ್ಶಿಸಿ ವಿನೂತನ ಪ್ರತಿಭಟನೆ
ಸಾರಾಂಶ
ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ಮುಂದುವರೆದಿದ್ದು, ಭಾನುವಾರ ಕೂಡ ಚಾಕಲೇಟ್ ಪ್ರದರ್ಶಿಸಿ ರಾಜ್ಯ ಹಾಗೂ ಸರ್ಕಾರ ಮೋಸ ಮಾಡಿವೆ ಎಂದು ಆರೋಪಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಸೇನಾಪಡೆಯಿಂದ ಮುಂದುವರೆದ ಧರಣಿ ಕನ್ನಡಪ್ರಭ ವಾರ್ತೆ, ಚಾಮರಾಜನಗರ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ಮುಂದುವರೆದಿದ್ದು, ಭಾನುವಾರ ಕೂಡ ಚಾಕಲೇಟ್ ಪ್ರದರ್ಶಿಸಿ ರಾಜ್ಯ ಹಾಗೂ ಸರ್ಕಾರ ಮೋಸ ಮಾಡಿವೆ ಎಂದು ಆರೋಪಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿತರು ಚಾಕಲೇಟ್ ಹಿಡಿದು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ, ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ, ಕರ್ನಾಟಕ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಚಾ.ರಂ.ಶ್ರೀನಿವಾಸಗೌಡ, ರಾಜ್ಯ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದಿದೆ. ಕಾವೇರಿ ನ್ಯಾಯಾಧೀಕರಣ ತಮಿಳುನಾಡಿನ ಏಜೆಂಟ್ ರೀತಿ ವರ್ತನೆ ಮಾಡುತ್ತಿದೆ. ನಮ್ಮ ನೀರಿಗೆ ಅತ್ಯಂತ ತೊಂದರೆ ಉಂಟು ಮಾಡುತ್ತಿದೆ. ಇದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸತತವಾಗಿ ಕಳೆದ 39 ದಿನಗಳಿಂದ ವಿನೂತನ ಪ್ರತಿಭಟನೆ ನಡೆಸಿಕೊಂಡು ಬಂದಿದ್ದು, ಬಾನುವಾರವೂ ಕೂಡ ಸರ್ಕಾರಗಳು ಕಾವೇರಿ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಜನತೆಗೆ ಚಾಕಲೇಟ್ ನೀಡಿ ಮೋಸ ಮಾಡಿವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ ಎಂದರು. ಕಾವೇರಿ ಜಲಾಶಯಗಳ ಕೊಳ್ಳದಲ್ಲಿ ನೀರು ಬರಿದಾಗುತ್ತಿದ್ದರೂ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಮೌನವಾಗಿದೆ. ತಮಿಳುನಾಡು ಸರ್ಕಾರ ಪದೇಪದೇ ಕಾವೇರಿ ನೀರಿನ ವಿಚಾರದಲ್ಲಿ ಕ್ಯಾತೆ ತೆಗೆದು ತನ್ನು ತೀಟೆಯನ್ನು ತೀರಿಸಿಕೊಳ್ಳುತ್ತಿದೆ. ಕರ್ನಾಟಕ ಸರ್ಕಾರ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಾ.ಮುರಳಿ, ಚಾ.ವೆಂ.ರಾಜ್ ಗೋಪಾಲ್, ಚಾ.ಹ.ರಾಮು,ರಾಚಪ್ಪ,ಲಿಂಗರಾಜು, ಹೆಗ್ಗೋಠಾರ ಶಿವಸ್ವಾಮಿ, ಆರಾಧ್ಯ, ಪ್ರಕಾಶ್ ಮೂಡ್ಲುಪುರ ಭಾಗವಹಿಸಿದ್ದರು. --- 22ಸಿಎಚ್‌ಎನ್12 ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಚಾಮರಾಜನಗರದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಚಾಕಲೇಟ್ ಪ್ರದರ್ಶಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.