ಸಾರಾಂಶ
ಬೆಂಗಳೂರು : ವಿಶ್ವ ಕಿಡ್ನಿ ದಿನಾಚರಣೆ-2025 ಅಂಗವಾಗಿ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಯು ‘ಕಿಡ್ನಿ ಆರೋಗ್ಯ ಎಲ್ಲರಿಗಾಗಿ’ ಅಭಿಯಾನ ಆರಂಭಿಸಿದ್ದು, ಗ್ರಾಮಾಂತರ ಭಾಗದ 10 ಸಾವಿರ ಜನರಿಗೆ ಉಚಿತ ಕಿಡ್ನಿ ತಪಾಸಣೆ ನಡೆಸುವುದಾಗಿ ಘೋಷಿಸಿದೆ.
ದೇಶದಲ್ಲಿ ಸುಮಾರು ಶೇ.15 ರಿಂದ 17ರಷ್ಟು ಜನರಿಗೆ ಕಿಡ್ನಿ ಸಮಸ್ಯೆ ಕಾಡುತ್ತಿದೆ. ತಡವಾಗಿ ಪತ್ತೆ, ತಪಾಸಣೆ, ಚಿಕಿತ್ಸೆಯ ಅಲಭ್ಯತೆ ಹಾಗೂ ದುಬಾರಿ ಚಿಕಿತ್ಸಾ ವೆಚ್ಚದಿಂದ ರೋಗಿಗಳು ತಪಾಸಣೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಕಿಡ್ನಿ ಸಮಸ್ಯೆ ಉಲ್ಬಣಗೊಂಡು ಹೆಚ್ಚಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೇರಿ ಆಸ್ಪತ್ರೆ ಹೊಸ ಉಪಕ್ರಮ ಆರಂಭಿಸಿದ್ದು, ಮಾ.17ರಿಂದ 25ರ ನಡುವೆ ರಾಜ್ಯದ 9 ಗ್ರಾಮಗಳಲ್ಲಿ 10 ಸಾವಿರ ಜನರಿಗೆ ಉಚಿತವಾಗಿ ಕಿಡ್ನಿ ತಪಾಸಣೆ ನಡೆಸಲಾಗುತ್ತದೆ. ಇದರ ಜೊತೆಗೆ ಮಧುಮೇಹ, ರಕ್ತದೊತ್ತಡ ಮತ್ತು ಕಿಡ್ನಿ ಕಾರ್ಯ ನಿರ್ವಹಣೆ ತಪಾಸಣೆಯನ್ನು ಮಾಡಲಾಗುತ್ತದೆ.
ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ₹1 ಸಾವಿರಕ್ಕೆ ಡಯಾಲಿಸಿಸ್ ಮಾಡಲಾಗುತ್ತದೆ. 50 ಜನ ಕಿಡ್ನಿ ದಾನಿಗಳಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಕಾವೇರಿ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.