ಸಂಸದರನ್ನು ಉಗ್ರವೇಷದಲ್ಲಿ ಬಿಂಬಿಸಿರುವುದಕ್ಕೂ- ಕಾಂಗ್ರೆಸ್ ಗೂ ಸಂಬಂಧ ಇಲ್ಲ

| Published : Dec 18 2023, 02:00 AM IST

ಸಂಸದರನ್ನು ಉಗ್ರವೇಷದಲ್ಲಿ ಬಿಂಬಿಸಿರುವುದಕ್ಕೂ- ಕಾಂಗ್ರೆಸ್ ಗೂ ಸಂಬಂಧ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದರನ್ನು ಉಗ್ರವೇಷದಲ್ಲಿ ಬಿಂಬಿಸಿರುವುದಕ್ಕೂ- ಕಾಂಗ್ರೆಸ್ ಗೂ ಸಂಬಂಧ ಇಲ್ಲ,ಸಂಸದ ಪ್ರತಾಪಸಿಂಹ ಭಯೋತ್ಪಾದಕ ಎಂಬ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲ. ಉಗ್ರ ವೇಷದಲ್ಲಿ ಬಿಂಬಿಸಿರುವುದಕ್ಕೂ- ಕಾಂಗ್ರೆಸ್ಗೂ ಸಂಬಂಧ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪಷ್ಟಪಡಿಸಿದರು.

- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪಷ್ಟನೆ

ಕನ್ನಡಪ್ರಭ ವಾರ್ತೆ ಮೈಸೂರು

ಸಂಸದ ಪ್ರತಾಪಸಿಂಹ ಭಯೋತ್ಪಾದಕ ಎಂಬ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲ. ಉಗ್ರ ವೇಷದಲ್ಲಿ ಬಿಂಬಿಸಿರುವುದಕ್ಕೂ- ಕಾಂಗ್ರೆಸ್ಗೂ ಸಂಬಂಧ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸ್ಪಷ್ಟಪಡಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ ಸಿಂಹ ಪ್ರಚೋದಿಸುತ್ತಾರೆ ಎಂದು ಟೀಕಿಸಿದ್ದೇವೆಯೇ ಹೊರತು ಭಯೋತ್ಪಾದಕ ಎಂದಿಲ್ಲ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪ್ರತಾಪಸಿಂಹ ಅವರನ್ನು ಕೈಯಲ್ಲಿ ಬಾಂಬ್ ಕೊಟ್ಟು ದೇಶದ್ರೋಹಿ, ಭಯೋತ್ಪಾದಕ ಎಂದೆಲ್ಲಾ ಬರೆಯಲಾಗಿತ್ತು. ಈ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿರೋಧಿ ಎಂದೆಲ್ಲಾ ಬಿಜೆಪಿಯವರು ಅಪ್ರಪಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಎಂದೂ ಮುಸ್ಲಿಂ ವಿರೋಧಿಯಲ್ಲ. ಇದೇ ವಿಚಾರವಾಗಿ ಒಕ್ಕಲಿಗರ ಸಂಘದ ನಿರ್ದೇಶಕರು ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದಾರೆ ಎಂದರು.

ಪ್ರತಿಭಟನೆ ನಡೆಸಿದ ವೇದಿಕೆ ಕೆ.ಎಸ್. ಶಿವರಾಮ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆ ಹಿಂದೆ, ಮುಂದೆ ನಿಂತಿರುತ್ತಾರೆ. ಅವರು ಕಾಂಗ್ರೆಸ್ ಪಕ್ಷದ ಸದಸ್ಯರೂ ಅಲ್ಲ. ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದರು.

ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ಲೆಹರ್ ಸಿಂಗ್ ಸಿರೊಯಾ ಪಾರ್ಲಿಮೆಂಟಿನ ಸ್ಮೊಕ್ ಬಾಂಬ್ ಸಿಡಿಸಿದ ಪ್ರಕರಣದ ಕುರಿತು ಅತ್ಯಂತ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯೂ ತನಿಖೆಯ ಹಾದಿಯನ್ನು ತಪ್ಪಿಸುತ್ತದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರನನ್ನು ಗೆಲ್ಲಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ಕೆಲಸವನ್ನು ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದರು.

ಸ್ಮೊಕ್ ಬಾಂಬ್ ಸಿಡಿಸಿದ 15 ನಿಮಿಷದಲ್ಲಿ ಕಾಂಗ್ರೆಸ್ ಪ್ರತಿಭಟಿಸಿದೆ. ಎಂದು ಲೆಹರ್ ಸಿಂಗ್ ಹೇಳಿದ್ದಾರೆ. ಮಾಜಿ ಶಾಸಕ ಸಿ.ಟಿ. ರವಿ ಕಾಂಗ್ರೆಸ್ ಟೂಲ್ ಕಿಟ್ ಎಂದು ಟೀಕಿಸಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ನಾಯಕರು ಹೇಳಿಕೆ ಕೊಡುವಾಗ ಹಿಡಿತ ಇರಬೇಕು ಎಂದು ಅವರು ಹೇಳಿದರು.

ದೇಶದ ಯುವಕರು ಉದ್ಯೋಗವಿಲ್ಲದೇ ಹತಾಶರಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ವಾರ್ಷಿಕ 2 ಕೋಟಿ ಉದ್ಯೋಗವಲ್ಲ, 10 ವರ್ಷಗಳ ಆಡಳಿತದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಎಂಜಿನಿಯರಿಂಗ್ ಮುಗಿಸಿದವರು ನರೇಗಾದಂತಹ ಕೂಲಿ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.

ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ದೇಶದಲ್ಲಿ ಪ್ರತಿನಿತ್ಯ 89 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಯ ಪ್ರಕಾರ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಮಣಿಪುರದ ಬೆತ್ತಲೆ ಮೆರವಣಿಗೆ ಬಗ್ಗೆ ಬಿಜೆಪಿಯವರು ಮೌನವಾಗಿದ್ದು, ಈಗ ಹೋರಾಟ ಮಾಡುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ವಕ್ತಾರ ಕೆ. ಮಹೇಶ್, ಸೇವಾದಳದ ಗಿರೀಶ್ ಇದ್ದರು.

---

ಬಾಕ್ಸ್ ಸುದ್ದಿವಿಮಾನ ನಿಲ್ದಾಣಕ್ಕೆ ನಾಮಕರಣ ವಿಷಯದಲ್ಲಿ ರಾಜಕೀಯಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ವಿಚಾರದಲ್ಲಿ ಸಂಸದ ಪ್ರತಾಪಸಿಂಹ ರಾಜಕೀಯ ಮಾಡುತ್ತಿದ್ದಾರೆ ಎಂದು ಎಂ. ಲಕ್ಷ್ಮಣ್ ಆರೋಪಿಸಿದರು.

ಹುಬ್ಬಳ್ಳಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವಂತೆ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ. ಅಲ್ಲದೇ, ಮೈಸೂರಿಗೂ ಸಂಬಂಧ ಇಲ್ಲ. ಟಿಪ್ಪು ಹೆಸರಿಡುವಂತೆ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು. ಈ ವಿಚಾರವಾಗಿ ಸಂಸದ ಪ್ರತಾಪಸಿಂಹ ಪತ್ರ ಬರೆದು ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ್ದಾರೆ.

ನಾಲ್ವಡಿ ಹೆಸರು ನಾಮಕರಣಕ್ಕೆ ಬಸವರಾಜ ಬೊಮ್ಮಾಯಿ ಮೂಲಕ ಕಷ್ಟಪಟ್ಟು ಕೇಂದ್ರಕ್ಕೆ ಪತ್ರ ಬರೆಸಿರುವುದಾಗಿ ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯ 2015ಲ್ಲಿಯೇ ನಾಲ್ವಡಿ ಹೆಸರು ನಾಮರಕಣ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಅದೇ ಪತ್ರವನ್ನು ಇನ್ನೊಮ್ಮೆ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ, 10 ವರ್ಷಗಳಿಂದ ಸಂಸದರಾಗಿರುವ ಪ್ರತಾಪಸಿಂಹ ಸುಮ್ಮನಿದ್ದಾರೆ ಎಂದು ಟೀಕಿಸಿದರು.