ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಸ್ಮಾರ್ಟ್ ಸಿಟಿಗೆ ಭೂ ಸ್ವಾಧೀನ ಅಧಿಸೂಚನೆ

| N/A | Published : Mar 18 2025, 01:45 AM IST / Updated: Mar 18 2025, 06:51 AM IST

ಸಾರಾಂಶ

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂ ಸ್ವಾಧೀನಕ್ಕೆ ಕೊನೆಗೂ ಅಧಿಸೂಚನೆ ಹೊರಡಿಸಿದೆ.

ಎಂ.ಅಫ್ರೋಜ್ ಖಾನ್

 ರಾಮನಗರ :  ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂ ಸ್ವಾಧೀನಕ್ಕೆ ಕೊನೆಗೂ ಅಧಿಸೂಚನೆ ಹೊರಡಿಸಿದೆ.

2025ರ ಮಾರ್ಚ್ 13ರಂದು ಈ ಅಧಿಸೂಚನೆ ಹೊರ ಬಿದ್ದಿದೆ. ಈ ಯೋಜನೆಗೆ ಒಟ್ಟು 8930 ಎಕರೆ ಭೂ ಸ್ವಾಧೀನಕ್ಕೆ ಉದ್ದೇಶಿಸಲಾಗಿದ್ದು, ಈ ಅಧಿಸೂಚನೆಯ ಮೂಲಕ ಜಮೀನುಗಳ ಮೇಲೆ ಹಕ್ಕು/ಹಿತಾಸಕ್ತಿ ಹೊಂದಿರುವವರು ಅಹವಾಲು ಆಕ್ಷೇಪಣೆಗಳಿದಲ್ಲಿ ಖಚಿತ ದಾಖಲೆಗಳೊಂದಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಈ ಅಧಿಸೂಚನೆ ಹೊರಡಿಸಲಾದ 30 ದಿನಗಳ ಒಳಗಾಗಿ ಸ್ವತಃ ಅಥವಾ ಪ್ರತಿನಿಧಿ ಮೂಲಕ ಸಲ್ಲಿಸಬಹುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಈ ಅಧಿಸೂಚನೆ ಪ್ರಕಟಿಸಲಾದ ನಂತರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಅನುಮತಿ ಇಲ್ಲದೇ ಸದರಿ ಜಮೀನುಗಳನ್ನು ವಿಲೇ ಮಾಡುವ, ಒಪ್ಪಂದ ಕ್ರಯ, ಕರಾರು, ಭೋಗ್ಯ ಅಡಮಾನ(ಲೀಸ್), ಅದಲು-ಬದಲು, ಭೂಪರಿವರ್ತನೆ, ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆಯ ನಂತರ ಕಟ್ಟಡ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸೂಚಿಸಲಾಗಿದೆ.

ಈ ಯೋಜನೆಯ ವಿವರ ಹಾಗೂ ನಕ್ಷೆಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಾಮನಗರ ಅವರ ಕಚೇರಿಯಲ್ಲಿ ಇಡಲಾಗಿದೆ. ಅಧಿಸೂಚಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಜನವಸತಿ ಪ್ರದೇಶಗಳು, ಅಭಿವೃದ್ಧಿ ಹೊಂದಿದ್ದ ಪ್ರದೇಶಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಯಥಾಸ್ಥಿತಿಯಂತೆ ಕಾಯ್ದಿರಿಸುವ ಕುರಿತಂತೆ ರಾಮನಗರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಸಮಿತಿಯ ಶಿಫಾರಸ್ಸಿನ ಅನುಸಾರ ಪರಿಶೀಲಿಸಿ ತೀರ್ಮಾನಿಸಲಾಗುವುದು. ಆಕಾರ್ ಬಂದ್ ಹಾಗೂ ಆರ್‌ಟಿಸಿ ವಿಸ್ತೀರ್ಣದ ವ್ಯತ್ಯಾಸವಿದ್ದಲ್ಲಿ ಆಕಾರ್ ಬಂದ್ ವಿಸ್ತೀರ್ಣವೇ ಅಂತಿಮವೆಂದು ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಭೂ ಮಂಜೂರಾತಿಯಾಗಿ ದುರಸ್ತಿಯಾಗದೆ ಇರುವ ಪ್ರಕರಣಗಳಲ್ಲಿ ಭೂ ಮಾಲೀಕತ್ವದ ವಿಸ್ತೀರ್ಣದ ನಿರ್ಧರಣೆಯನ್ನು ಸರ್ಕಾರದ ಸುತ್ತೋಲೆಗಳ ನಿರ್ದೇಶನಗಳ ಅನುಸಾರ ನಿರ್ಣಯಿಸಲಾಗುತ್ತದೆ.

ವಿಶೇಷ ಭೂಸ್ವಾಧೀನಾಧಿಕಾರಿ-2 ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಅವರ ಸಿಬ್ಬಂದಿಯನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಹಕ್ಕು ಅಧಿನಿಯಮದಂತೆ ಕರ್ತವ್ಯ ನಿರ್ವಹಿಸಲು ಅಧಿಕಾರ ನೀಡಲಾಗಿದೆ.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಆಯುಕ್ತರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಾಮನಗರ ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲೀ ಅಡ್ಡಪಡಿಸುವುದಾಗಲೀ ಮಾಡುವಂತಿಲ್ಲ ಎಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ.

ರಾಮನಗರ ತಾಲೂಕು, ಬಿಡದಿ-2 ಹೋಬಳಿ, ಮಂಡಲಹಳ್ಳಿ ಗ್ರಾಮದ 52 ಮಾಲೀಕರ 71 ಎಕರೆ, ಹೊಸೂರು ಗ್ರಾಮದ 2990 ಮಂದಿಯ 2452 ಎಕರೆ, ಬೈರಮಂಗಲ ಗ್ರಾಮದ 1847 ಮಂದಿಯ 1131 ಎಕರೆ, ಬನ್ನಿಗಿರಿ ಗ್ರಾಮದ 1177 ಮಂದಿಯ 714 ಎಕರೆ ಕೆಂಪಯ್ಯನ ಪಾಳ್ಯ ಗ್ರಾಮದ 586 ಮಂದಿಯ 330 ಎಕರೆ, ಕೆ.ಜಿ ಗೊಲ್ಲರಹಳ್ಳಿ ಗ್ರಾಮದ 221 ಮಂದಿಯ 314 ಎಕರೆ, ಕಂಚುಗಾರನಹಳ್ಳಿ ಗ್ರಾಮದ 1410 ಮಂದಿಯ 755 ಎಕರೆ, ಅರಳಾಳುಸಂದ್ರ ಗ್ರಾಮದ 2064 ಮಂದಿಯ 1461 ಎಕರೆ ಹಾಗೂ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮದ 103 ಮಂದಿಯ 63 ಎಕರೆ ಭೂ ಸ್ವಾಧೀನಕ್ಕೆ ಪ್ರತ್ಯೇಕವಾಗಿ 9 ಅಧಿಸೂಚನೆ ಹೊರಡಿಸಲಾಗಿದೆ.ಬಾಕ್ಸ್ ...

₹30 ಸಾವಿರ ಕೋಟಿ ಯೋಜನೆ

ಬಿಡದಿ ಬಳಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2024ರ ನ.18ರಂದು ಗ್ರೇಟರ್ ಬೆಂಗಳೂರು - ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೇರಿಸಿತು. ಬೆಂಗಳೂರು ಅಜ್ಗರ್ ಅಲಿ ರಸ್ತೆಯಲ್ಲಿದ್ದ ಬಿಎಂಆರ್‌ಡಿಎ ಕಚೇರಿಯಲ್ಲಿದ್ದ ಪ್ರಾಧಿಕಾರದ ಕಚೇರಿಯನ್ನು ರಾಮನಗರ ಕಂದಾಯ ಭವನದಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬಿಡದಿ ಬಳಿ ಉಪನಗರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಾಧಿಕಾರದ ವ್ಯಾಪ್ತಿ ಮತ್ತಷ್ಟು ವಿಸ್ತಾರ

ಗ್ರೇಟರ್ ಬೆಂಗಳೂರು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬಿಡದಿ ಹೋಬಳಿಯ 26 ಗ್ರಾಮಗಳು, ರಾಮನಗರ ತಾಲೂಕಿನ ಕಸಬಾ ಹೋಬಳಿಯ 14 ಗ್ರಾಮಗಳು, ಕೈಲಾಂಚ ಹೋಬಳಿಯ 3 ಗ್ರಾಮಗಳು, ಹಾರೋಹಳ್ಳಿ ಹೋಬಳಿಯ 6 ಗ್ರಾಮಗಳು ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ 8 ಗ್ರಾಮಗಳನ್ನು ಸೇರಿಸಿ 59 ಗ್ರಾಮಗಳನ್ನು ಒಳಗೊಂಡಂತೆ 23,361 ಹೆಕ್ಟೇರ್ ವಿಸ್ತೀರ್ಣದಲ್ಲಿ 92,822 ಜನಸಂಖ್ಯೆಯನ್ನು ಒಳಗೊಂಡಿರುವ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಲಾಗಿದೆ. 

ರೈತರಿಂದ ತೀವ್ರ ವಿರೋಧ

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ) ವತಿಯಿಂದ ಟೌನ್‌ಶಿಪ್ ನಿರ್ಮಾಣಕ್ಕೆ ರಾಮನಗರ ತಾಲೂಕಿನ ಬಿಡದಿ ಹೋಬಳಿ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹೋರಾಟ ಸಮಿತಿಯನ್ನು ರಚನೆ ಮಾಡಿಕೊಂಡು ಬಿಡದಿಯಿಂದ ರಾಮನಗರದವರೆಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದಾರೆ.ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಗಳಿದ್ದಲ್ಲಿ 30 ದಿನಗಳೊಳಗೆ ಖಚಿತ ದಾಖಲೆಗಳೊಂದಿಗೆ ಸಲ್ಲಿಸಬಹುದು. ರೈತರ ದೂರು ದುಮ್ಮಾನಗಳನ್ನು ಸ್ವೀಕಸಿ, ಅವುಗಳನ್ನು ಬಗೆಹರಿಸಲು ರಾಮನಗರದಲ್ಲಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಯಾರೂ ಬೇಕಾದರೂ ಬಂದು ಮುಕ್ತವಾಗಿ ಚರ್ಚೆ ನಡೆಸಬಹುದು. ರೈತರ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

-ಗಾಣಕಲ್ ನಟರಾಜು, ಅಧ್ಯಕ್ಷ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.