ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬೀದಿ ನಾಯಿಗಳಿಗೆ ಚಿಕನ್ ಬಿರಿಯಾನಿ ನೀಡಲು ಮುಂದಾಗಿರುವ ಬಿಬಿಎಂಪಿ ಅವರಿಗೆ ಆಶ್ರಯ ತಾಣವಾಗಿ ಶೆಲ್ಟರ್ ಗಳ ನಿರ್ಮಾಣಕ್ಕಾಗಿ ಕಾನೂನು ತಿದ್ದುಪಡಿಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬಾರದೇಕೆ ಎಂಬ ಆಗ್ರಹ ಹುಟ್ಟಿಕೊಂಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಐದು ವರ್ಷದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿಯ ಮೇಲೆ ಬೀದಿ ನಾಯಿಗಳ ದಾಳಿಯಾಗಿದೆ. ಇದಕ್ಕೆ ನಾಯಿಗಳನ್ನು ಸ್ವಚ್ಛಂದವಾಗಿ ಬೀದಿ ಬೀದಿಯಲ್ಲಿ ಅಲೆಯಲು ಬಿಟ್ಟಿರುವುದೇ ಕಾರಣ. ವಿದೇಶಗಳಂತೆ ಶೆಲ್ಟರ್ ನಿರ್ಮಾಣಕ್ಕೆ ಇರುವ ಕಾನೂನು ತೊಡಕನ್ನು ನಿವಾರಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಿದರೆ ಜನರು ಸೇಫ್ ಹಾಗೂ ಬೀದಿ ನಾಯಿಗಳೂ ಸೇಫ್ ಎಂದು ಶ್ವಾನಪ್ರೇಮಿಗಳು ಈಗ ಆಗ್ರಹಿಸತೊಡಗಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ-1960 ಮತ್ತು ಅನಿಮಲ್ ಬರ್ತ್ ಕಂಟ್ರೋಲ್ (ನಾಯಿ) ನಿಯಮ- 2001 ಬೀದಿ ನಾಯಿಗಳನ್ನು ರಕ್ಷಿಸಲು ಜಾರಿಯಲ್ಲಿವೆ. ನಿಯಮ ಉಲ್ಲಂಘಿಸಿ ಬೀದಿ ನಾಯಿಗಳ ಕೊಲ್ಲುವುದು, ಅಂಗವಿಕಲಗೊಳಿಸುವುದು, ವಿಷ ಪೂರಿತ ಆಹಾರ ನೀಡುವುದು ಅಥವಾ ಇನ್ನಿತರೆ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆ 1860 ರ ಸೆಕ್ಷನ್ 428 ರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಇನ್ನೂ ಸಂತಾನ ಹರಣ ಚಿಕಿತ್ಸೆ ಹಾಗೂ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ಮೂಲಕ ಬೀದಿ ನಾಯಿಗಳ ನಿಯಂತ್ರಣ ಕೈಗೊಳ್ಳಬೇಕು. ಬೀದಿ ನಾಯಿಗಳನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ನಿರ್ದೇಶಗಳಿದ್ದು, ಪ್ರಾಣಿ ಕಲ್ಯಾಣ ಮಂಡಳಿಯು ಈ ಕುರಿತು ನಿಗಾ ವಹಿಸಲಿದ್ದು, ಉಲ್ಲಂಘನೆ ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಶಿಕ್ಷೆಗೆ ಶಿಫಾರಸು ಮಾಡಲಾಗುತ್ತಿದೆ. ಹೀಗಾಗಿ, ಬೆಂಗಳೂರು ಸೇರಿದಂತೆ ದೇಶದಲ್ಲಿ ಬೀದಿ ನಾಯಿಗಳ ಕುರಿತು ವಿನೂತನ ಕ್ರಮಕ್ಕೆ ಮುಂದಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಶೆಲ್ಟರ್ ಬಗ್ಗೆ ಸಾರ್ವಜನಿಕ ಚರ್ಚೆ:
ಇತ್ತೀಚಿಗೆ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಬಿಬಿಎಂಪಿಯ ಯೋಜನೆ ಕುರಿತ ವರದಿ ಬಗ್ಗೆ ಕೇಂದ್ರದ ಮಾಜಿ ಸಚಿವ ಚಿದಂಬರಂ ಪುತ್ರ ಹಾಗೂ ತಮಿಳುನಾಡಿನ ಸಂಸದ ಕಾರ್ತಿ ಚಿದಂಬರಂ ತೀವ್ರ ಆಕ್ರೋಶ ಹೊರಹಾಕಿದ್ದರು. ಜತೆಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬೀದಿಯಲ್ಲಿ ನಾಯಿಗಳ ಓಡಾಟದಿಂದ ಆರೋಗ್ಯ ಮತ್ತು ಸುರಕ್ಷಿತೆಗೆ ಅಪಾಯ ಹೆಚ್ಚಾಗುತ್ತಿದೆ. ನಾಯಿಗಳನ್ನು ಬೀದಿಗಳಿಂದ ಸ್ಥಳಾಂತರ ಮಾಡಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಯೇ ಆಹಾರ, ಲಸಿಕೆ, ಸಂತಾನಹರಣ ಚಿಕಿತ್ಸೆ ನೀಡಬೇಕು. ನಾಯಿಗಳನ್ನು ಮುಕ್ತವಾಗಿ ರಸ್ತೆಯಲ್ಲಿ ಬಿಡಬಾರದು. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ನೀತಿ ರೂಪಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಮಂದಿ ಈ ಬಗ್ಗೆ ಸರ್ಕಾರಗಳು ಕ್ರಮ ವಹಿಸಬೇಕೆಂಬ ಅನಿಸಿಕೆ ತಿಳಿಸಿದ್ದರು.
ಶೆಲ್ಟರ್ ಉಪಯೋಗವೇನು?:
ಮಳೆ, ಗಾಳಿ, ಬಿಸಿಲಿನ ತಾಪದಿಂದ ಬೀದಿ ನಾಯಿಗಳು ಮುಕ್ತವಾಗಲಿವೆ. ಉತ್ತಮ ಊಟ, ವಸತಿ ವ್ಯವಸ್ಥೆ ಲಭ್ಯವಾಗಲಿದ್ದು, ಪ್ರಮುಖವಾಗಿ ಸಾರ್ವಜನಿಕವಾಗಿ ಬೀದಿ ನಾಯಿ ಹಾವಳಿ ತಪ್ಪಲಿದೆ. ರೇಬಿಸ್ ವರ್ಗಾವಣೆಯ ಅತಿ ಮುಖ್ಯ ವಾಹಿನಿಗಳಾದ ಬೀದಿ ನಾಯಿಗಳ ನಿಯಂತ್ರಣವಾಗಲಿದೆ. ಶ್ವಾನ ಪ್ರಿಯರ ಅಪೇಕ್ಷೆಯಂತೆ ಬೀದಿ ನಾಯಿಗಳಿಗೆ ಸುರಕ್ಷಿತ ತಾಣ ದೊರೆಯಲಿದೆ. ವಿದೇಶಗಳಲ್ಲಿ ಇರುವಂತೆ ಬಯಲು ಹಾಗೂ ಕಟ್ಟಡ ಕೇಂದ್ರೀತ ಶೆಲ್ಟರ್‌ಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಶೆಲ್ಟರ್ ಚಿಂತನೆ ಕೈಬಿಟ್ಟಿದ್ದ ಸರ್ಕಾರ
ಕಳೆದ ಎರಡ್ಮೂರು ವರ್ಷದ ಹಿಂದೆ ವಿಧಾನಸೌಧ, ಹೈಕೋರ್ಟ್ ಸೇರಿದಂತೆ ನಗರದ ಪ್ರಮುಖ ಕಡೆ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಸಭೆ ಸಹ ಮಾಡಲಾಗಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಕೋರ್ಟ್ ನೋಟಿಸ್ ನೀಡಲಾಗಿತ್ತು. ಹಾಗಾಗಿ, ಯೋಜನೆ ಕೈ ಬಿಡಲಾಗಿತ್ತು.
ವಿದೇಶದಲ್ಲಿ ನಾಯಿ ಶೆಲ್ಟರ್ ಹೇಗಿವೆ?
ಅಮೆರಿಕಾ, ಸ್ವಿಟ್ಜರ್‌ಲ್ಯಾಂಡ್, ಚೀನಾ, ಯೂರೋಪಿಯನ್ ದೇಶದಲ್ಲಿ ಕಟ್ಟುನಿಟ್ಟಾದ ಪ್ರಾಣಿ ಸಂರಕ್ಷಣಾ ಕಾನೂನು ಮತ್ತು ನಿಯಮಗಳಿವೆ. ಬೀದಿ ನಾಯಿಗಳನ್ನು ಶೆಲ್ಟರ್‌ನಲ್ಲಿ ಆಶ್ರಯಕ್ಕೆ ವ್ಯವಸ್ಥೆ ಮಾಡಬೇಕು. ನಾಯಿಗಳ ವಯಸ್ಸು, ತಳಿಗಳ ಆಧಾರದಲ್ಲಿ ಶೆಲ್ಟರ್ ವ್ಯವಸ್ಥೆ ಮಾಡಲಾಗುತ್ತದೆ. ಕೆಲವು ಕಡೆ ಬಯಲು ಶೆಲ್ಟರ್‌ಗಳು, ಮತ್ತೆ ಕೆಲವು ಕಡೆ ಅತ್ಯಾಧುನಿಕ ಕಟ್ಟಡದಲ್ಲಿ ಸುಸಜ್ಜಿತ ವ್ಯವಸ್ಥೆಯ ಶೆಲ್ಟರ್‌ಗಳನ್ನು ಕಾಣಬಹುದಾಗಿದೆ. ನಾಯಿಗಳಿಗೆ ಕಡ್ಡಾಯವಾಗಿ ಮೈಕ್ರೋಚಿಪ್, ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಬೇಕಿದೆ. ನಾಯಿಗಳನ್ನು ಬೀದಿಗೆ ಬಿಡುವುದು ಅಪರಾಧವಾಗಿದೆ. ಸಿಂಗಾಪುರ, ಆಸ್ಟ್ರೇಲಿಯ ಸೇರಿ ಕೆಲವು ರಾಷ್ಟ್ರದಲ್ಲಿ ಬೀದಿ ನಾಯಿಗಳಿಗೆ ಸ್ಥಳದಲ್ಲಿಯೇ ಸಂತಾನಹರಣ ಚಿಕಿತ್ಸೆ ಮಾಡಿ ಬಿಡುವ ಪದ್ಧತಿ ಇದೆ.
ದತ್ತು ಪಡೆಯಲು ಅವಕಾಶ:
ಹಲವು ದೇಶದಲ್ಲಿ ಅನಾಥ ನಾಯಿಗಳನ್ನು ಮೂರು ತಿಂಗಳಿಗೆ, ಆರು ತಿಂಗಳು, 1 ವರ್ಷ ಹೀಗೆ ದತ್ತು ಪಡೆಯುವ ಪದ್ಧತಿ ಇದೆ. ದತ್ತು ಪಡೆದ ನಾಯಿಯನ್ನು ಒಂದು ಶೆಲ್ಟರ್‌ನಲ್ಲಿ ಇಟ್ಟು ಸಾಕಲಾಗುತ್ತದೆ. ಆನ್‌ಲೈನ್ ಮೂಲಕವೂ ತಮಗಿಷ್ಟವಾದ ನಾಯಿಯನ್ನು ದತ್ತು ಪಡೆಯುವುದಕ್ಕೆ ಅವಕಾಶ ಇದೆ. ದತ್ತು ಪಡೆದವರು ಆ ನಾಯಿಯ ಆಹಾರ, ವಸತಿ, ಚಿಕಿತ್ಸೆ ವೆಚ್ಚವನ್ನು ಭರಿಸಲಿದ್ದಾರೆ.ಭಾರತ ಬಿಟ್ಟರೆ ವಿಶ್ವ ಬೇರೆ ಯಾವುದೇ ರಾಷ್ಟ್ರದಲ್ಲಿ ಬೀದಿ ನಾಯಿಗಳನ್ನು ಸಂರಕ್ಷಣೆ ಮಾಡುವ ಕಾನೂನು ಇಲ್ಲ. ಮುಂದುವರಿದ ದೇಶದಲ್ಲಿ ಬೀದಿ ನಾಯಿಗಳನ್ನು ಶೆಲ್ಟರ್‌ನಲ್ಲಿಟ್ಟು ಸಾಕಲಾಗುತ್ತದೆ.
- ಅರುಣ್, ಸದಸ್ಯರು, ಬೆಂಗಳೂರು ನಗರ ಜಿಲ್ಲೆ ಪ್ರಾಣಿ ಕಲ್ಯಾಣ ಮಂಡಳಿ