ಸಾರಾಂಶ
ಬೆಂಗಳೂರು : ರಾಜಧಾನಿ ಬೆಂಗಳೂರಿನ ‘ಬೀದಿ ನಾಯಿಗಳಿಗೆ ಪಾಲಿಕೆಯಿಂದ ಚಿಕನ್ ರೈಸ್ ಭಾಗ್ಯ’ ಶೀರ್ಷಿಕೆಯಡಿ ‘ಕನ್ನಡಪ್ರಭ’ ಗುರುವಾರ ಪ್ರಕಟಿಸಿದ ವಿಶೇಷ ವರದಿಯು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಬಿಬಿಎಂಪಿಯ ತೀರ್ಮಾನ ತೀವ್ರ ಚರ್ಚೆ ಹುಟ್ಟಿಹಾಕಿದೆ.
ಬಿಬಿಎಂಪಿಯು ₹2.88 ಕೋಟಿ ವೆಚ್ಚದಲ್ಲಿ ದಿನಕ್ಕೆ ನಗರದ ಸುಮಾರು 5 ಸಾವಿರ ಬೀದಿ ನಾಯಿಗಳಿಗೆ ಚಿಕನ್ ರೈಸ್ ಪೂರೈಕೆಗೆ ಸಂಬಂಧಿಸಿದಂತೆ ರೂಪಿಸಿದ ಯೋಜನೆ ಕುರಿತು ವಿಸ್ತೃತ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸುದ್ದಿ ವಾಹಿನಿಗಳು ಗುರುವಾರ ಬಿತ್ತರಿಸಿದ್ದು, ಕೆಲ ಮಾಧ್ಯಮಗಳಲ್ಲಿ ಸುದೀರ್ಘ ಅವಧಿಯ ಚರ್ಚೆಯನ್ನು ನಡೆಸಿದವು. ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿಯ ಕ್ರಮದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ತಿ ಚಿದಂಬರಂ ಆ್ರಕೋಶ :
ಇನ್ನೂ ಕೇಂದ್ರದ ಮಾಜಿ ಸಚಿವ ಚಿದಂಬರಂ ಪುತ್ರ ಹಾಗೂ ತಮಿಳುನಾಡಿನ ಸಂಸದ ಕಾರ್ತಿ ಚಿದಂಬರಂ ಬಿಬಿಎಂಪಿಯ ಈ ನಿರ್ಧಾರದ ಕುರಿತು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕ್ರಿಯಿಸಿರುವ ಅವರು, ಇಂತಹ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವೇ ಎಂಬುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ ಇದು ಸತ್ಯವೇ ಎಂದು ಪ್ರಶ್ನಿಸಿದ್ದಾರೆ.
ಬೀದಿಯಲ್ಲಿ ನಾಯಿಗಳ ಓಡಾಟದಿಂದ ಆರೋಗ್ಯ ಮತ್ತು ಸುರಕ್ಷಿತೆಗೆ ಅಪಾಯ ಹೆಚ್ಚಾಗುತ್ತಿದೆ. ನಾಯಿಗಳನ್ನು ಬೀದಿಗಳಿಂದ ಸ್ಥಳಾಂತರ ಮಾಡಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಯೇ ಆಹಾರ, ಲಸಿಕೆ, ಸಂತಾನಹರಣ ಚಿಕಿತ್ಸೆ ನೀಡಬೇಕು. ನಾಯಿಗಳನ್ನು ಮುಕ್ತವಾಗಿ ರಸ್ತೆಯಲ್ಲಿ ಬಿಡಬಾರದು. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ನೀತಿ ರೂಪಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬೀದಿ ನಾಯಿಗಳ ನೆಪದಲ್ಲಿ ಲೂಟಿ ಹೊಡೆಯುವ ಯೋಜನೆ ರೂಪಿಸಿಕೊಂಡಿದೆ ಎಂದು ಟೀಕೆ ಮಾಡಿದ್ದಾರೆ.
ತರಾವರಿ ಮೀಮ್ಸ್:
ಸುದ್ದಿ ವಾಹಿತಿಗಳನ್ನು ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಕುರಿತು ಗಂಭೀರ ಚರ್ಚೆಗಳು ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿಯ ಈ ಕ್ರಮದ ಕುರಿತು ತರಾವರಿ ಹಾಸ್ಯತ್ಮಕ ಮೀಮ್ಸ್ ವೈರಲ್ ಆಗಿವೆ.