ಹೃದಯ ಸಂಬಂಧಿ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಆರಂಭಿಸುವುದು, ಪ್ರಮಾಣ ಬದಲಿಸುವುದು ಅಥವಾ ನಿಲ್ಲಿಸುವುದು ಮಾಡಬಾರದು. ವಿಶೇಷವಾಗಿ ರಕ್ತ ತೆಳುವಾಗಿಸುವ ಔಷಧಿಗಳು, ರಕ್ತದೊತ್ತಡದ ಔಷಧಿಗಳು, ಹೃದಯದ ಬಡಿತ ನಿಯಂತ್ರಿಸುವ ಔಷಧಿಗಳು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿಗಳನ್ನು ಸ್ವಯಂವಾಗಿ ನಿಲ್ಲಿಸುವುದು ಅಪಾಯಕಾರಿ.
ಹೃದಯ ಸಂಬಂಧಿ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಆರಂಭಿಸುವುದು, ಪ್ರಮಾಣ ಬದಲಿಸುವುದು ಅಥವಾ ನಿಲ್ಲಿಸುವುದು ಮಾಡಬಾರದು. ವಿಶೇಷವಾಗಿ ರಕ್ತ ತೆಳುವಾಗಿಸುವ ಔಷಧಿಗಳು, ರಕ್ತದೊತ್ತಡದ ಔಷಧಿಗಳು, ಹೃದಯದ ಬಡಿತ ನಿಯಂತ್ರಿಸುವ ಔಷಧಿಗಳು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿಗಳನ್ನು ಸ್ವಯಂವಾಗಿ ನಿಲ್ಲಿಸುವುದು ಅಪಾಯಕಾರಿ.
-ಕುಮಾರ ಸುಬ್ರಹ್ಮಣ್ಯ ಮುಳಿಯಾಲ.
BIOCRROSS CHEM LLP ‘ಔಷಧ ತಯಾರಿಕಾ ಕಂಪನಿ’ಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರು.
(ಭಾರತೀಯ ಸಂಸ್ಕೃತಿ, ಹಾಗೂ ಸಮಕಾಲೀನ ಸಾಮಾಜಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ಇವರು, ಸಾಂಸ್ಕೃತಿಕ ಮತ್ತು ಸಮಾಜಮುಖಿ ವಿಷಯಗಳ ಕುರಿತು ನಿರಂತರವಾಗಿ ಅಧ್ಯಯನ ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.)
ಪ್ರತಿ ವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳಾದ ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ವಿವಿಧ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಅವುಗಳನ್ನು ತಡೆಗಟ್ಟುವ ಮಾರ್ಗಗಳನ್ನು ತಿಳಿಸುವುದು ಹಾಗೂ ಆರಂಭಿಕ ಹಂತದಲ್ಲೇ ಕಾಯಿಲೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಜನರನ್ನು ಪ್ರೇರೇಪಿಸುವುದು ಇದರ ಉದ್ದೇಶ.
2026ರ ವಿಶ್ವ ಹೃದಯ ಒಕ್ಕೂಟದ ಅಭಿಯಾನದ ಸಂದೇಶ ‘Don’t Miss a Beat’ - ‘ಹೃದಯದ ಯಾವುದೇ ಎಚ್ಚರಿಕೆಯನ್ನೂ ನಿರ್ಲಕ್ಷಿಸಬೇಡಿ’. ಹೃದಯ ನೀಡುವ ಸೂಚನೆಗಳನ್ನು ಗಮನಿಸುವುದು, ಅಪಾಯದ ಅಂಶಗಳನ್ನು ನಿಯಂತ್ರಿಸುವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಪಡೆಯುವುದು ಇದರ ಪ್ರಮುಖ ಆಶಯವಾಗಿದೆ. ಆದ್ದರಿಂದ ಹೃದಯಾಘಾತ ಬರುವವರೆಗೂ ಹೃದಯದ ಬಗ್ಗೆ ಯೋಚಿಸಬೇಕಾಗಿಲ್ಲ. ಹೃದಯಾಘಾತ ಬರದಂತೆ ಬದುಕುವ ಅಭ್ಯಾಸವೇ ನಿಜವಾದ ಹೃದಯದ ಆರೈಕೆ.
ಹೃದಯದ ಆರೋಗ್ಯಕ್ಕೆ ಮೊದಲ ಔಷಧಿ:
ಹೃದಯದ ಆರೋಗ್ಯವನ್ನು ಕಾಪಾಡಲು ದುಬಾರಿ ಆಹಾರ, ದುಬಾರಿ ಜಿಮ್ ಅಥವಾ ನಿರಂತರ ವೈದ್ಯಕೀಯ ಪರೀಕ್ಷೆಗಳಿಗಿಂತ ಮೊದಲು ಬೇಕಾಗಿರುವುದು ಸರಿಯಾದ ಜೀವನಶೈಲಿ. ತಂಬಾಕು ಸೇವನೆ, ಅನಾರೋಗ್ಯಕರ ಆಹಾರ, ದೈಹಿಕ ಚಟುವಟಿಕೆಯ ಕೊರತೆ, ಅತಿಯಾದ ತೂಕ, ಅಧಿಕ ರಕ್ತದೊತ್ತಡ, ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮುಂತಾದವು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಪ್ರಮುಖ ಅಪಾಯದ ಅಂಶಗಳಾಗಿವೆ.1.ಧೂಮಪಾನಕ್ಕೆ ಸಂಪೂರ್ಣ ವಿದಾಯ
‘ದಿನಕ್ಕೆ ಒಂದು ಅಥವಾ ಎರಡು ಸಿಗರೆಟ್ ಮಾತ್ರ’ ಎಂದುಕೊಳ್ಳುವುದು ಸುರಕ್ಷಿತ ಎಂಬುದಕ್ಕೆ ಆಧಾರವಿಲ್ಲ. ಧೂಮಪಾನವನ್ನು ನಿಲ್ಲಿಸುವುದು ಹೃದಯದ ಆರೋಗ್ಯಕ್ಕೆ ತೆಗೆದುಕೊಳ್ಳಬಹುದಾದ ಅತ್ಯಂತ ಮಹತ್ವದ ಹೆಜ್ಜೆಗಳಲ್ಲಿ ಒಂದು.ತಂಬಾಕಿನ ಯಾವುದೇ ರೂಪವನ್ನೂ ‘ಕಡಿಮೆ ಹಾನಿಕರ’ ಎಂದು ಪರಿಗಣಿಸಿ ಅವಲಂಬಿಸುವುದು ಸರಿಯಲ್ಲ.
2.ಉಪ್ಪು, ಸಕ್ಕರೆ ಮತ್ತು ಅತಿಯಾದ ಕೊಬ್ಬಿನ ಬಗ್ಗೆ ಎಚ್ಚರ
ಹೃದಯ ಸ್ನೇಹಿ ಆಹಾರ ಎಂದರೆ ರುಚಿಯಿಲ್ಲದ ಆಹಾರವಲ್ಲ. ದೈನಂದಿನ ಆಹಾರದಲ್ಲಿ ತರಕಾರಿಗಳು ಮತ್ತು ಸೊಪ್ಪುಗಳಿಗೆ ಹೆಚ್ಚಿನ ಸ್ಥಾನ ನೀಡಿ. ಹಣ್ಣುಗಳನ್ನು ಸಮತೋಲನದಿಂದ ಸೇವಿಸಿ. ಸಂಪೂರ್ಣ ಧಾನ್ಯಗಳು, ಬೇಳೆ ಮತ್ತು ಕಾಳುಗಳನ್ನು ಬಳಸಿರಿ. ಅತಿಯಾದ ಉಪ್ಪು ಕಡಿಮೆ ಮಾಡಿ. ಹೆಚ್ಚು ಸಕ್ಕರೆ ಇರುವ ಪಾನೀಯ ಮತ್ತು ಆಹಾರವನ್ನು ಮಿತಿಗೊಳಿಸಿ. ಅತಿಯಾಗಿ ಕರಿದ, ಪ್ಯಾಕೆಟ್ ಮತ್ತು ಅತಿ ಸಂಸ್ಕರಿಸಿದ ಆಹಾರವನ್ನು ಕಡಿಮೆ ಮಾಡಿ. ಆಹಾರದ ಪ್ರಮಾಣಕ್ಕೂ ಗಮನ ಕೊಡಿ.
3.ಪ್ರತಿದಿನ ವ್ಯಾಯಾಮಕ್ಕೆ ಗಮನ ಕೊಡಿ
ವ್ಯಾಯಾಮ ಮಾಡಲು ಸಮಯವಿಲ್ಲ ಎನ್ನುವುದು ಇಂದಿನ ಜೀವನಶೈಲಿಯ ಸಾಮಾನ್ಯ ಕಾರಣ. ಆದರೆ ಹೃದಯಕ್ಕೆ ಬೇಕಾಗಿರುವುದು ಯಾವಾಗಲೂ ದುಬಾರಿ ಜಿಮ್ ಅಲ್ಲ. ನಡೆಯುವುದು, ಸೈಕಲ್ ಸವಾರಿ, ಈಜು, ನೃತ್ಯ, ತೋಟಗಾರಿಕೆ ಅಥವಾ ದೈನಂದಿನ ಚಟುವಟಿಕೆಗಳಲ್ಲಿ ದೇಹವನ್ನು ಸಕ್ರಿಯವಾಗಿಡುವುದು ಸಹ ಸಹಾಯಕ. 2026ರ ವಿಶ್ವ ಹೃದಯ ದಿನದ ಅಭಿಯಾನದಲ್ಲಿಯೂ ಪ್ರತಿದಿನ ಕನಿಷ್ಠ 20 ನಿಮಿಷಗಳ ಚಲನ ವಲನಕ್ಕೆ ಪ್ರೋತ್ಸಾಹ ನೀಡಲಾಗಿದೆ.
ಆದರೆ ಈಗಾಗಲೇ ಹೃದಯ ಕಾಯಿಲೆ, ಎದೆನೋವು, ಉಸಿರಾಟದ ತೊಂದರೆ ಅಥವಾ ಇತರ ಗಂಭೀರ ಆರೋಗ್ಯ ಸಮಸ್ಯೆ ಇರುವವರು ಹೊಸ ವ್ಯಾಯಾಮ ಕ್ರಮವನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.
4.ರಕ್ತದೊತ್ತಡವನ್ನು ‘ಮೌನ ಅಪಾಯ’ ಎಂದು ತಿಳಿಯಿರಿ
ಅಧಿಕ ರಕ್ತದೊತ್ತಡ ಇರುವ ಅನೇಕ ಜನರಿಗೆ ಯಾವುದೇ ಸ್ಪಷ್ಟ ಲಕ್ಷಣಗಳಿರುವುದಿಲ್ಲ. ಆದ್ದರಿಂದ ‘ನನಗೆ ಏನೂ ತೊಂದರೆ ಇಲ್ಲ’ ಎನ್ನುವುದು ರಕ್ತದೊತ್ತಡ ಸಾಮಾನ್ಯವಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ಅಧಿಕವಾಗಿದ್ದರೆ ವೈದ್ಯರ ಸಲಹೆಯಂತೆ ನಿಯಂತ್ರಣದಲ್ಲಿಡಿ.
5.ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಪರಿಶೀಲಿಸಿ
ಮಧುಮೇಹ ಮತ್ತು ಹೆಚ್ಚಿದ ಕೊಲೆಸ್ಟ್ರಾಲ್ ಹೃದಯದ ಅಪಾಯವನ್ನು ಹೆಚ್ಚಿಸಬಹುದು. ವಿಶೇಷವಾಗಿ ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸವಿದ್ದರೆ, ಅಧಿಕ ತೂಕವಿದ್ದರೆ ಅಥವಾ ಇತರ ಅಪಾಯದ ಅಂಶಗಳಿದ್ದರೆ ನಿಯಮಿತ ಆರೋಗ್ಯ ತಪಾಸಣೆ ಮುಖ್ಯ. ಪರೀಕ್ಷೆ ಮಾಡಿಸಿಕೊಳ್ಳುವುದು ಭಯಪಡುವುದು ಅಲ್ಲ; ಅಪಾಯವನ್ನು ಮುಂಚಿತವಾಗಿ ತಿಳಿದುಕೊಳ್ಳುವುದು.
6.ತೂಕದ ಬಗ್ಗೆ ಕಾಳಜಿ ಇರಲಿ
ಅತಿಯಾದ ತೂಕವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ಅಪಾಯದ ಅಂಶಗಳೊಂದಿಗೆ ಸಂಬಂಧ ಹೊಂದಿರಬಹುದು. ಆದರೆ ತೂಕ ಇಳಿಕೆಯನ್ನು ತಕ್ಷಣದ ಗುರಿಯನ್ನಾಗಿ ಮಾಡಿಕೊಂಡು ಕಠಿಣ ಉಪವಾಸ, ಅಸಮರ್ಪಕ ಡಯಟ್ ಅಥವಾ ಸ್ವಯಂ ಔಷಧೋಪಚಾರಕ್ಕೆ ಮೊರೆ ಹೋಗಬಾರದು. ನಿಧಾನವಾದ, ನಿರಂತರವಾದ ಮತ್ತು ಆರೋಗ್ಯಕರ ಬದಲಾವಣೆಯೇ ಉತ್ತಮ.
7.ನಿದ್ರೆ ಮತ್ತು ಒತ್ತಡವನ್ನೂ ನಿರ್ಲಕ್ಷಿಸಬೇಡಿ
ನಿರಂತರ ಒತ್ತಡ, ಅಸಮರ್ಪಕ ನಿದ್ರೆ ಮತ್ತು ಅಸ್ತವ್ಯಸ್ತ ಜೀವನಶೈಲಿ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ನಿಯಮಿತ ನಿದ್ರೆ, ಕೆಲಸದ ನಡುವೆ ವಿರಾಮ, ಕುಟುಂಬದೊಂದಿಗೆ ಸಮಯ, ಹವ್ಯಾಸ, ಪ್ರಾರ್ಥನೆ ಅಥವಾ ಧ್ಯಾನ ಯಾವುದು ಮನಸ್ಸಿಗೆ ಸಮತೋಲನ ನೀಡುತ್ತದೆಯೋ ಅದಕ್ಕೆ ಜೀವನದಲ್ಲಿ ಸ್ಥಳ ನೀಡಿ. ಹೃದಯ ಕೇವಲ ರಕ್ತವನ್ನು ಪಂಪ್ ಮಾಡುವ ಅಂಗವಲ್ಲ; ನಮ್ಮ ಜೀವನಶೈಲಿಯ ಪ್ರತಿಬಿಂಬವೂ ಹೌದು.
‘ಸ್ವಯಂ ಚಿಕಿತ್ಸೆ’ಗಿಂತ ‘ಸ್ವಯಂ ಜಾಗೃತಿ’ ಮುಖ್ಯ:
ಹೃದಯದ ಆರೋಗ್ಯದ ಬಗ್ಗೆ ಮಾತನಾಡುವಾಗ ಒಂದು ಅಪಾಯಕಾರಿ ಅಭ್ಯಾಸವನ್ನು ವಿಶೇಷವಾಗಿ ಗಮನಿಸಬೇಕು ಸ್ವಯಂ ಔಷಧೋಪಚಾರ. ಎದೆನೋವು ಬಂದಾಗ ಹಿಂದಿನ ಬಾರಿ ವೈದ್ಯರು ಕೊಟ್ಟ ಮಾತ್ರೆಯನ್ನು ತೆಗೆದುಕೊಳ್ಳುವುದು, ಪರಿಚಿತರ ಔಷಧಿಯನ್ನು ಬಳಸುವುದು, ಅಥವಾ ಇಂಟರ್ನೆಟ್‌ನಲ್ಲಿ ಓದಿದ ಮಾಹಿತಿಯ ಆಧಾರದ ಮೇಲೆ ಔಷಧಿ ಆರಂಭಿಸುವುದು ಸುರಕ್ಷಿತ ವಿಧಾನವಲ್ಲ.
ಹೃದಯ ಸಂಬಂಧಿ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಆರಂಭಿಸುವುದು, ಪ್ರಮಾಣ ಬದಲಿಸುವುದು ಅಥವಾ ನಿಲ್ಲಿಸುವುದು ಮಾಡಬಾರದು. ವಿಶೇಷವಾಗಿ ರಕ್ತ ತೆಳುವಾಗಿಸುವ ಔಷಧಿಗಳು, ರಕ್ತದೊತ್ತಡದ ಔಷಧಿಗಳು, ಹೃದಯದ ಬಡಿತ ನಿಯಂತ್ರಿಸುವ ಔಷಧಿಗಳು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿಗಳನ್ನು ಸ್ವಯಂವಾಗಿ ನಿಲ್ಲಿಸುವುದು ಅಪಾಯಕಾರಿ.
ಸ್ವಯಂ ಕಾಳಜಿ ಇರಲಿ; ಸ್ವಯಂ ಚಿಕಿತ್ಸೆ ಇರಬಾರದು:
ಹೃದಯದ ಎಚ್ಚರಿಕೆಗಳನ್ನು ತಪ್ಪಾಗಿ ಅರ್ಥೈಸಬೇಡಿ ಹೃದಯಾಘಾತ ಎಂದರೆ ಯಾವಾಗಲೂ ತೀವ್ರವಾದ ಎದೆನೋವೇ ಇರಬೇಕು ಎಂಬುದು ತಪ್ಪು ಕಲ್ಪನೆ.
ಎದೆಯಲ್ಲಿ ಒತ್ತಡ, ಬಿಗಿತ ಅಥವಾ ನೋವು, ಕೈ ಅಥವಾ ಭುಜಕ್ಕೆ ಹರಡುವ ನೋವು, ಉಸಿರಾಟದ ತೊಂದರೆ, ಅತಿಯಾದ ಬೆವರು, ವಾಕರಿಕೆ, ತಲೆಸುತ್ತು ಅಥವಾ ಅಸಹಜ ದೌರ್ಬಲ್ಯ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವು ಜನರಲ್ಲಿ, ವಿಶೇಷವಾಗಿ ಮಹಿಳೆಯರು, ವಯೋವೃದ್ಧರು ಅಥವಾ ಮಧುಮೇಹ ಹೊಂದಿರುವವರಲ್ಲಿ ಲಕ್ಷಣಗಳು ವಿಭಿನ್ನವಾಗಿರಬಹುದು. ಅಂತಹ ಸಂದರ್ಭದಲ್ಲಿ ‘ಗ್ಯಾಸ್ ಆಗಿರಬಹುದು’, ‘ಅಜೀರ್ಣವಾಗಿರಬಹುದು’, ‘ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರೆ ಸರಿಯಾಗುತ್ತದೆ’ ಎಂದು ಕಾಯುವುದು ಸರಿಯಲ್ಲ.
ಹೃದಯಾಘಾತವು ತುರ್ತು ವೈದ್ಯಕೀಯ ಪರಿಸ್ಥಿತಿ. ಸಮಯ ಕಳೆಯುವುದು ಹೃದಯದ ಸ್ನಾಯುವಿಗೆ ಹಾನಿಯನ್ನು ಹೆಚ್ಚಿಸಬಹುದು. ಎಚ್ಚರಿಕೆಯ ಲಕ್ಷಣಗಳು ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡದೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಿರಿ.
ಎಲ್ಲರಿಗೂ ಒಂದೇ ರೀತಿಯ ಪರೀಕ್ಷೆಗಳು ಅಗತ್ಯವಿಲ್ಲ. ವಯಸ್ಸು, ಕುಟುಂಬದ ಇತಿಹಾಸ, ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಧೂಮಪಾನ, ತೂಕ, ಹಿಂದಿನ ಕಾಯಿಲೆಗಳು ಮತ್ತು ಇತರ ಅಪಾಯದ ಅಂಶಗಳನ್ನು ಪರಿಗಣಿಸಿ ವೈದ್ಯರು ಯಾವ ಪರೀಕ್ಷೆಗಳು ಅಗತ್ಯವೆಂದು ನಿರ್ಧರಿಸುತ್ತಾರೆ. ಆದ್ದರಿಂದ ‘ವರ್ಷಕ್ಕೊಮ್ಮೆ ಎಲ್ಲ ಹೃದಯ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳಬೇಕು’ ಎಂಬ ಭಯಾಧಾರಿತ ವಿಧಾನಕ್ಕಿಂತ ವೈಯಕ್ತಿಕ ಅಪಾಯವನ್ನು ಅರ್ಥಮಾಡಿಕೊಂಡು ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಹೆಚ್ಚು ಅರ್ಥಪೂರ್ಣ.
ಕುಟುಂಬವೂ ಹೃದಯದ ರಕ್ಷಣಾ ವಲಯವಾಗಲಿ:
ಹೃದಯದ ಆರೈಕೆ ಒಬ್ಬ ವ್ಯಕ್ತಿಯ ಜವಾಬ್ದಾರಿ ಮಾತ್ರವಲ್ಲ, ಮನೆಯಲ್ಲಿ ಉಪ್ಪು ಕಡಿಮೆ ಮಾಡುವುದರಿಂದ ಆರಂಭಿಸಿ. ಒಟ್ಟಿಗೆ ನಡೆಯುವುದನ್ನು ಅಭ್ಯಾಸ ಮಾಡಿ. ಧೂಮಪಾನಕ್ಕೆ ಅವಕಾಶ ಕೊಡಬೇಡಿ. ಆರೋಗ್ಯಕರ ಆಹಾರವನ್ನು ಮನೆಯ ಸಾಮಾನ್ಯ ಆಹಾರವಾಗಿಸಿ. ರಕ್ತದೊತ್ತಡ, ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಬಗ್ಗೆ ಮಾತನಾಡಿ. ಹೃದಯಾಘಾತದ ಲಕ್ಷಣಗಳ ಬಗ್ಗೆ ಕುಟುಂಬದ ಪ್ರತಿಯೊಬ್ಬರಿಗೂ ತಿಳಿಸಿ.
ಒಬ್ಬ ವ್ಯಕ್ತಿಯ ಜೀವನಶೈಲಿ ಬದಲಾದರೆ ಒಂದು ಜೀವ ಉಳಿಯಬಹುದು; ಒಂದು ಕುಟುಂಬದ ಜೀವನಶೈಲಿ ಬದಲಾದರೆ ಹಲವು ಜೀವಗಳಿಗೆ ರಕ್ಷಣೆ ದೊರೆಯಬಹುದು.
ವಿಶ್ವ ಹೃದಯ ದಿನವು ಒಂದು ದಿನದ ಆರೋಗ್ಯ ಶಿಬಿರಕ್ಕೆ ಸೀಮಿತವಾಗಬಾರದು. ಸೆಪ್ಟೆಂಬರ್ 29ರಂದು ಆರೋಗ್ಯದ ಬಗ್ಗೆ ಮಾತನಾಡಿ, ಸೆಪ್ಟೆಂಬರ್ 30ರಂದು ಅದನ್ನು ಮರೆತುಬಿಡುವುದಕ್ಕಿಂತ, ಪ್ರತಿದಿನ ಸ್ವಲ್ಪ ಹೆಚ್ಚು ನಡೆಯುವುದು, ಪ್ರತಿದಿನ ಸ್ವಲ್ಪ ಆರೋಗ್ಯಕರವಾಗಿ ತಿನ್ನುವುದು, ತಂಬಾಕಿಗೆ ಇಲ್ಲ ಎನ್ನುವುದು, ರಕ್ತದೊತ್ತಡ, ಸಕ್ಕರೆ, ಕೊಲೆಸ್ಟ್ರಾಲ್ ಬಗ್ಗೆ ಜಾಗರೂಕರಾಗುವುದು, ಅಗತ್ಯವಿದ್ದಾಗ ವೈದ್ಯರ ಸಲಹೆ ಪಡೆಯುವುದು ಮತ್ತು ಹೃದಯದ ಎಚ್ಚರಿಕೆಯ ಯಾವುದೇ ಸೂಚನೆಯನ್ನು ನಿರ್ಲಕ್ಷಿಸದಿರುವುದು ಇವೇ ನಿಜವಾದ ವಿಶ್ವ ಹೃದಯ ದಿನದ ಆಚರಣೆ.
ಹೃದಯವು ಎಚ್ಚರಿಕೆ ನೀಡಿದ ನಂತರ ಓಡುವುದಕ್ಕಿಂತ, ಹೃದಯ ಎಚ್ಚರಿಸುವ ಅಗತ್ಯವೇ ಬರದಂತೆ ಬದುಕುವುದು ಉತ್ತಮ. ಹೃದಯವನ್ನು ಕಾಪಾಡುವುದು ವೈದ್ಯರ ಜವಾಬ್ದಾರಿ ಮಾತ್ರವಲ್ಲ ನಮ್ಮ ಪ್ರತಿದಿನದ ಜವಾಬ್ದಾರಿಯೂ ಹೌದು.
ಆದ್ದರಿಂದ ಈ ವಿಶ್ವ ಹೃದಯ ದಿನದಂದು ‘ಹೃದಯದ ಬಡಿತವನ್ನು ಕೇಳೋಣ…ಅದರ ಎಚ್ಚರಿಕೆಯನ್ನು ನಿರ್ಲಕ್ಷಿಸದಿರೋಣ, ಹೃದಯ ಎಚ್ಚರಿಸುವ ಮುನ್ನವೇ ಎಚ್ಚರವಾಗೋಣ’.

