ಕಳೆದ ಕೆಲವು ವರ್ಷಗಳಿಂದ ಮಹಿಳಾ ಸಬಲೀಕರಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಶಿಕ್ಷಣದ ಲಭ್ಯತೆ, ಸುಧಾರಿತ ಆರೋಗ್ಯ ಸೇವೆಗಳು, ಆರ್ಥಿಕ ಒಳಗೊಳ್ಳುವಿಕೆ ಹಾಗೂ ಮೂಲಭೂತ ಸೌಕರ್ಯಗಳ ವಿಸ್ತರಣೆಯು ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಭದ್ರವಾದ ಅಡಿಪಾಯವನ್ನು ಒದಗಿಸಿವೆ.

-ನರೇಂದ್ರ ಮೋದಿ, ಪ್ರಧಾನಮಂತ್ರಿ.

ಮುಂಬರುವ ದಿನಗಳಲ್ಲಿ ಭಾರತವು ಹಬ್ಬಗಳ ಸಡಗರದಲ್ಲಿ ಮಿಂದೇಳಲಿದ್ದು, ದೇಶದ ಉದ್ದಗಲಕ್ಕೂ ಸಂಭ್ರಮದ ವಾತಾವರಣ ಮನೆಮಾಡಲಿದೆ. ಅಸ್ಸಾಂನ ಜನರು ‘ರೊಂಗಲಿ ಬಿಹು’ ಆಚರಿಸಲಿದ್ದರೆ, ಒಡಿಶಾದಲ್ಲಿ ‘ಮಹಾ ಬಿಷುಬ ಪಾನ ಸಂಕ್ರಾಂತಿ’ಯ ವೈಭವವಿರಲಿದೆ. ಪಶ್ಚಿಮ ಬಂಗಾಳದಲ್ಲಿ ‘ಪೊಯ್ಲಾ ಬೈಶಾಖ್’ ಬಂಗಾಳಿ ಹೊಸ ವರ್ಷವನ್ನು ಸ್ವಾಗತಿಸಿದರೆ, ಕೇರಳದಲ್ಲಿ ‘ವಿಷು’ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ‘ಪುತ್ಹಾಂಡು’ ಸಂಭ್ರಮವಿದ್ದರೆ, ಪಂಜಾಬ್ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ‘ಬೈಸಾಖಿ’ಯು ಹೊಸ ಭರವಸೆ ಮತ್ತು ಸಕಾರಾತ್ಮಕತೆಯನ್ನು ಹೊತ್ತು ತರಲಿದೆ. ಭಾರತದಾದ್ಯಂತ ಹಾಗೂ ವಿಶ್ವದ ವಿವಿಧೆಡೆ ಈ ಹಬ್ಬಗಳನ್ನು ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಈ ಮಂಗಳಕರ ಸಂದರ್ಭಗಳು ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.

ಅಷ್ಟೇ ಅಲ್ಲದೆ, ಏಪ್ರಿಲ್ 11ರಂದು ನಾವು ಮಹಾತ್ಮ ಫುಲೆಯವರ 200ನೇ ಜಯಂತಿಯ ಆಚರಣೆಗಳಿಗೆ ಚಾಲನೆ ನೀಡಲಿದ್ದೇವೆ ಹಾಗೂ ಏಪ್ರಿಲ್ 14ರಂದು ‘ಅಂಬೇಡ್ಕರ್ ಜಯಂತಿ’ಯ ಸಂದರ್ಭದಲ್ಲಿ ಇಡೀ ಭಾರತವು ಡಾ। ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಕ್ತಿಪೂರ್ವಕ ಗೌರವ ನಮನಗಳನ್ನು ಸಲ್ಲಿಸಲಿದೆ.

ಮಹಿಳಾ ಮೀಸಲಾತಿ ಚರ್ಚೆ:

ನವಚೈತನ್ಯವು ನಮ್ಮ ಮನಸ್ಸುಗಳನ್ನು ತುಂಬಿರುವ ಇಂತಹ ವಿಶೇಷ ಸಂದರ್ಭಗಳ ನಡುವೆಯೇ, ನಮ್ಮ ರಾಷ್ಟ್ರವು ಮತ್ತೊಂದು ಐತಿಹಾಸಿಕ ಕ್ಷಣದ ಹೊಸ್ತಿಲಲ್ಲಿ ಬಂದು ನಿಂತಿದೆ. ಇದು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಸಮಾನತೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ನಮ್ಮೆಲ್ಲರ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಲು ಲಭಿಸಿರುವ ಒಂದು ಮಹತ್ವದ ಅವಕಾಶವಾಗಿದೆ.

ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಮಹತ್ವದ ಮಸೂದೆಯ ಕುರಿತು ಚರ್ಚಿಸಲು ಮತ್ತು ಅದನ್ನು ಅಂಗೀಕರಿಸಲು ಏಪ್ರಿಲ್ 16ರಂದು ಸಂಸತ್ತು ಸಮಾವೇಶಗೊಳ್ಳಲಿದೆ. ಇದನ್ನು ಕೇವಲ ಒಂದು ಶಾಸನಾತ್ಮಕ ಪ್ರಕ್ರಿಯೆ ಎಂದು ಕರೆದರೆ ಅದು ಅದರ ಮಹತ್ವವನ್ನು ಕಡಿಮೆ ಎಂದು ಅಂದಾಜಿಸಿದಂತಾಗುತ್ತದೆ. ವಾಸ್ತವವಾಗಿ, ಇದು ಭಾರತದಾದ್ಯಂತ ಇರುವ ಕೋಟ್ಯಂತರ ಮಹಿಳೆಯರ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ‘ಮಹಿಳೆಯರು ಪ್ರಗತಿ ಹೊಂದಿದಾಗ ಮಾತ್ರ ಸಮಾಜವು ಪ್ರಗತಿ ಹೊಂದುತ್ತದೆ’ ಎಂಬ ನಮ್ಮ ಸುದೀರ್ಘ ನಾಗರಿಕತೆಯ ಮೌಲ್ಯಗಳು ಮತ್ತು ನೈತಿಕ ತತ್ವಗಳಿಗೆ ಇದು ಸಾಕ್ಷಿಯಾಗಿದೆ.

ಭಾರತದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಭಾಗ ಮಹಿಳೆಯರಾಗಿದ್ದು, ರಾಷ್ಟ್ರದ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರ ಹಾಗೂ ಅಮೂಲ್ಯವಾಗಿದೆ. ಇಂದು ವಿಜ್ಞಾನ-ತಂತ್ರಜ್ಞಾನದಿಂದ ಹಿಡಿದು ಉದ್ಯಮಶೀಲತೆಯವರೆಗೆ, ಕ್ರೀಡಾಕ್ಷೇತ್ರದಿಂದ ಸಶಸ್ತ್ರ ಪಡೆಗಳವರೆಗೆ ಮತ್ತು ಸಂಗೀತದಿಂದ ಕಲೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಭಾರತದ ಪ್ರಗತಿಯ ಮುಂಚೂಣಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಸಬಲೀಕರಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಶಿಕ್ಷಣದ ಲಭ್ಯತೆ, ಸುಧಾರಿತ ಆರೋಗ್ಯ ಸೇವೆಗಳು, ಆರ್ಥಿಕ ಒಳಗೊಳ್ಳುವಿಕೆ ಹಾಗೂ ಮೂಲಭೂತ ಸೌಕರ್ಯಗಳ ವಿಸ್ತರಣೆಯು ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಭದ್ರವಾದ ಅಡಿಪಾಯವನ್ನು ಒದಗಿಸಿವೆ.

ಆಡಳಿತದಲ್ಲಿ ಸ್ತ್ರೀ ಶಕ್ತಿ ಅಗತ್ಯ:

ಆದಾಗ್ಯೂ, ರಾಜಕೀಯ ಕ್ಷೇತ್ರದಲ್ಲಿ ಮತ್ತು ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ಸಮಾಜದಲ್ಲಿ ಅವರ ಪಾತ್ರಕ್ಕೆ ಅನುಗುಣವಾಗಿ ಶ್ರೇಣೀಕೃತವಾಗಿಲ್ಲ ಎಂಬುದು ಕಟು ಸತ್ಯ. ಆಡಳಿತ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರು ಭಾಗಿಯಾದಾಗ, ಅವರು ತಮ್ಮೊಂದಿಗೆ ತರುವ ವಿಶಿಷ್ಟ ಅನುಭವ ಮತ್ತು ಒಳನೋಟಗಳು ಸಾರ್ವಜನಿಕ ಚರ್ಚೆಗಳನ್ನು ಶ್ರೀಮಂತಗೊಳಿಸುವುದಲ್ಲದೆ ಆಡಳಿತದ ಗುಣಮಟ್ಟವನ್ನೂ ವೃದ್ಧಿಸುತ್ತವೆ. ಈ ದೃಷ್ಟಿಯಿಂದ ಅವರ ಪ್ರಾತಿನಿಧ್ಯದ ಕೊರತೆಯು ನಿಜಕ್ಕೂ ದುರದೃಷ್ಟಕರ.

ಆದ್ದರಿಂದಲೇ, 2029ರ ಲೋಕಸಭಾ ಚುನಾವಣೆ ಹಾಗೂ ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮಹಿಳಾ ಮೀಸಲಾತಿಯ ಅಡಿಯಲ್ಲೇ ನಡೆಯುವುದು ಅನಿವಾರ್ಯವಾಗಿದೆ. ಕಳೆದ ದಶಕಗಳಲ್ಲಿ, ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅವರ ನ್ಯಾಯಸಮ್ಮತ ಸ್ಥಾನಮಾನ ನೀಡಲು ಹಿಂದಿನ ಸರ್ಕಾರಗಳು ಅನೇಕ ಪ್ರಯತ್ನಗಳನ್ನು ಮಾಡಿದ್ದವು. ಸಮಿತಿಗಳನ್ನು ರಚಿಸಲಾಯಿತು, ಮಸೂದೆಗಳ ಕರಡುಗಳನ್ನು ಮಂಡಿಸಲಾಯಿತು; ಆದರೆ ಅವು ಯಾವುದೂ ಅಂತಿಮ ಗುರಿ ತಲುಪಲಿಲ್ಲ. ಆದರೂ, ಶಾಸಕಾಂಗಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂಬ ಬಗ್ಗೆ ದೇಶದಲ್ಲಿ ವ್ಯಾಪಕ ಒಮ್ಮತವಿತ್ತು. ಇದೇ ಒಮ್ಮತದ ಮನೋಭಾವದೊಂದಿಗೆ 2023ರ ಸೆಪ್ಟೆಂಬರ್‌ನಲ್ಲಿ ಸಂಸತ್ತು ‘ನಾರಿ ಶಕ್ತಿ ವಂದನಾ ಅಧಿನಿಯಮ’ವನ್ನು ಅಂಗೀಕರಿಸಿತು. ಇದನ್ನು ನಾನು ನನ್ನ ಜೀವನದ ಅತ್ಯಂತ ಸಾರ್ಥಕ ಮತ್ತು ವಿಶೇಷ ಕ್ಷಣಗಳಲ್ಲಿ ಒಂದೆಂದು ಭಾವಿಸುತ್ತೇನೆ.

ಮಹಿಳಾ ಮೀಸಲಾತಿಯನ್ನು ಖಚಿತಪಡಿಸುವ ಈ ಐತಿಹಾಸಿಕ ಅವಕಾಶವು ನಮ್ಮ ಸಂವಿಧಾನದ ಆಶಯಗಳೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಸಂವಿಧಾನ ರಚನೆಕಾರರು, ಸಮಾನತೆಯು ಕೇವಲ ಕಾಗದದ ಮೇಲಿರದೆ ಪ್ರಾಯೋಗಿಕವಾಗಿ ಸಾಕಾರಗೊಳ್ಳುವ ಸಮಾಜದ ಕನಸು ಕಂಡಿದ್ದರು. ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವುದು ಆ ಕನಸನ್ನು ನನಸು ಮಾಡುವತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಇದು ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಮಾನ ಪಾಲುದಾರರಾಗಿರುವ ಸಮಾಜವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ವಿಳಂಬ ಸಾಕು, ಪ್ರಗತಿ ಬೇಕು:

ಇದು ಇನ್ನು ಮುಂದೆ ಮುಂದೂಡಲಾಗದ ಕ್ಷಣವಾಗಿದೆ. ಮಹಿಳಾ ಪ್ರಾತಿನಿಧ್ಯವನ್ನು ಒದಗಿಸುವಲ್ಲಿ ಉಂಟಾಗುವ ಪ್ರತಿಯೊಂದು ವಿಳಂಬವೂ, ವಾಸ್ತವವಾಗಿ ನಮ್ಮ ಪ್ರಜಾಪ್ರಭುತ್ವದ ಗುಣಮಟ್ಟ ಮತ್ತು ಒಳಗೊಳ್ಳುವಿಕೆಯನ್ನು ಬಲಪಡಿಸುವ ಪ್ರಕ್ರಿಯೆಯನ್ನು ವಿಳಂಬಗೊಳಿಸಿದಂತೆಯೇ ಸರಿ. ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯ ಅಗತ್ಯವನ್ನು ದಶಕಗಳಿಂದಲೂ ಗುರುತಿಸಲಾಗಿದೆ, ಚರ್ಚಿಸಲಾಗಿದೆ ಮತ್ತು ಪುನರುಚ್ಚರಿಸಲಾಗಿದೆ. ಈಗಲೂ ಕ್ರಮ ಕೈಗೊಳ್ಳುವುದನ್ನು ಮುಂದೂಡುವುದೆಂದರೆ, ನಾವು ಈಗಾಗಲೇ ಕಂಡುಕೊಂಡಿರುವ ಮತ್ತು ಸರಿಪಡಿಸುವ ಶಕ್ತಿಯನ್ನು ಹೊಂದಿರುವ ಅಸಮತೋಲನವನ್ನು ನಾವೇ ಮುಂದುವರಿಸಿದಂತಾಗುತ್ತದೆ. 

ಭಾರತವು ಆತ್ಮವಿಶ್ವಾಸ ಮತ್ತು ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಸಾಂಸ್ಥಿಕ ವ್ಯವಸ್ಥೆಯು ಸಮಸ್ತ ನಾಗರಿಕರ-ವಿಶೇಷವಾಗಿ ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರ-ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವುದು ಅತ್ಯಗತ್ಯ. ಸಕಾಲಿಕ ಕ್ರಮವು ದಶಕಗಳ ಹಳೆಯ ಬದ್ಧತೆಯನ್ನು ಗೌರವಿಸುವುದಷ್ಟೇ ಅಲ್ಲದೆ, ಪ್ರಗತಿಯ ವೇಗವು ಕುಂಠಿತವಾಗದಂತೆ ನೋಡಿಕೊಳ್ಳುತ್ತದೆ. ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ಪ್ರಾತಿನಿಧಿಕ, ಸ್ಪಂದನಾಶೀಲ ಮತ್ತು ಭವಿಷ್ಯದ ಸವಾಲುಗಳಿಗೆ ಸನ್ನದ್ಧವಾಗಿಸಲು ಇದೊಂದು ಐತಿಹಾಸಿಕ ಅವಕಾಶವಾಗಿದೆ.

ಈ ಕ್ಷಣವು ನಮ್ಮೆಲ್ಲರ ಸಾಮೂಹಿಕ ಕ್ರಮಕ್ಕೆ ಕರೆ ನೀಡುತ್ತಿದೆ. ಇದು ಕೇವಲ ಒಂದು ಸರ್ಕಾರ, ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ವಿಷಯವಲ್ಲ. ಬದಲಾಗಿ, ಇಡೀ ರಾಷ್ಟ್ರವೇ ಈ ಹೆಜ್ಜೆಯ ಮಹತ್ವವನ್ನು ಅರಿತು, ಅದನ್ನು ಸಾಕಾರಗೊಳಿಸಲು ಒಗ್ಗೂಡುವ ಸಂದರ್ಭವಾಗಿದೆ. ಇದು ನಾವು ನಮ್ಮ ‘ನಾರಿ ಶಕ್ತಿ’ಗೆ ಸಲ್ಲಿಸಬೇಕಾದ ಗೌರವ ಮತ್ತು ಕರ್ತವ್ಯವಾಗಿದೆ. ಆದ್ದರಿಂದಲೇ, ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವು ಅತ್ಯಂತ ವ್ಯಾಪಕವಾದ ಒಮ್ಮತವನ್ನು ಪ್ರತಿಬಿಂಬಿಸಬೇಕು ಮತ್ತು ವಿಶಾಲವಾದ ರಾಷ್ಟ್ರ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಡಬೇಕು. ಇಂತಹ ಸುಸಂದರ್ಭಗಳು ನಮಗಾಗಿ ಅಲ್ಲ, ಬದಲಾಗಿ ಭವಿಷ್ಯದ ಪೀಳಿಗೆಗಾಗಿ ಕಾರ್ಯನಿರ್ವಹಿಸಲು ನಮಗೆ ಪ್ರೇರಣೆ ನೀಡುತ್ತವೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯು ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುವ ಮತ್ತು ತನ್ನನ್ನು ತಾನು ಹೆಚ್ಚು ಒಳಗೊಳ್ಳುವಿಕೆಯತ್ತ ಕೊಂಡೊಯ್ಯುವ ಸಾಮರ್ಥ್ಯದಲ್ಲಿದೆ ಎಂಬುದನ್ನು ಈ ಕ್ಷಣ ನಮಗೆ ನೆನಪಿಸುತ್ತಿದೆ.

ಎಲ್ಲರೂ ಒಟ್ಟಾಗೋಣ:

ನಾವು ಈ ಐತಿಹಾಸಿಕ ಸಂಸತ್ತಿನ ಅಧಿವೇಶನವನ್ನು ಸಮೀಪಿಸುತ್ತಿರುವಾಗ, ಪಕ್ಷ ಭೇದ ಮರೆತು ಭಾರತದ ಮಹಿಳೆಯರಿಗಾಗಿ ಕೈಗೊಂಡಿರುವ ಈ ಮಹತ್ವದ ಹೆಜ್ಜೆಯನ್ನು ಬೆಂಬಲಿಸಲು ಒಟ್ಟಾಗಿ ಬರುವಂತೆ ನಾನು ಎಲ್ಲಾ ಸಂಸತ್ ಸದಸ್ಯರಿಗೆ ಮನವಿ ಮಾಡುತ್ತೇನೆ. ನಾವೆಲ್ಲರೂ ಜವಾಬ್ದಾರಿ ಮತ್ತು ದೃಢ ಸಂಕಲ್ಪದೊಂದಿಗೆ ಈ ಸುಸಂದರ್ಭವನ್ನು ಬಳಸಿಕೊಳ್ಳೋಣ. ನಮ್ಮ ಪ್ರಜಾಪ್ರಭುತ್ವದ ಅತ್ಯುನ್ನತ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸೋಣ.

ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯ ಬಂದಾಗ, ಭಾರತವು ತನ್ನೆಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಏಕತೆಯಿಂದ ವರ್ತಿಸುತ್ತದೆ ಎಂಬುದನ್ನು ನಾವೆಲ್ಲರೂ ಕಾಲಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದ್ದೇವೆ. ಇದು ಕೂಡ ಅಂತಹದ್ದೇ ಒಂದು ಮಹತ್ವದ ಕ್ಷಣವಾಗಿದೆ. ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ; ಸಂವಿಧಾನದ ಮೌಲ್ಯಗಳನ್ನು ಗಟ್ಟಿಗೊಳಿಸೋಣ ಮತ್ತು ರಾಷ್ಟ್ರದ ಸಮಗ್ರ ಪ್ರಗತಿಗಾಗಿ ನಮ್ಮ ‘ನಾರಿ ಶಕ್ತಿ’ಯನ್ನು ಸಶಕ್ತಗೊಳಿಸೋಣ.