ಸಾರಾಂಶ
ಬೆಂಗಳೂರು : ಸಾಹಿತ್ಯ ಅನುವಾದಗಳು ಭಾಷೆಗಳನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘ ಮತ್ತು ಸುರಾನಾ ಕಾಲೇಜು ಕನ್ನಡ ವಿಭಾಗದ ವತಿಯಿಂದ ನಗರದ ಸೌತ್ ಎಂಡ್ ಸರ್ಕಲ್‌ನಲ್ಲಿರುವ ಸುರಾನಾ ಕಾಲೇಜಿನಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ.ಕೆ.ಮಲರ್‌ವಿಳಿ ಅವರಿಗೆ ‘ಇಂದಿರಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಚಾರಿತ್ರ್ಯಿಕವಾಗಿ ಕರ್ನಾಟಕಕ್ಕೆ ಹೆಚ್ಚು ಪ್ರಭಾವ ಬೀರಿದ್ದು ಉತ್ತರ ಭಾರತದ ಕವಿಗಳು. ಆದಿಕವಿ ಪಂಪ ಮತ್ತು ಕುಮಾರವ್ಯಾಸನು ಮುಖಾಮುಖಿಯಾಗಿದ್ದು ವ್ಯಾಸಭಾರತಕ್ಕೆ. ಹೀಗಾಗಿ ಭೌಗೋಳಿಕ ಕಾರಣಗಳಿಗಾಗಿ ಕರ್ನಾಟಕ ಹೆಚ್ಚು ಸಾಹಿತಿಗಳು ಉತ್ತರ ಭಾರತದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರಿಂದ ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ, ಪ್ರಾಕೃತ ಭಾಷೆಗಳ ಪ್ರಭಾವ ಜಾಸ್ತಿಯಾಯಿತು ಎಂದರು.
ಕನ್ನಡ ಭಾಷೆಯ ಚರಿತ್ರೆಯಲ್ಲಿ ಹೇಗೆ ಶಾಸನಗಳು, ವಡ್ಡಾರಾಧನೆ, ಕವಿರಾಜಮಾರ್ಗಗಳಿಗೆ ಪ್ರಾಚೀನತೆಯ ಮಹತ್ವವಿದೆಯೋ ಹಾಗೆಯೇ ತಮಿಳಿನಲ್ಲಿ ಸಂಗಂ ಸಾಹಿತ್ಯಕ್ಕೆ ತುಂಬಾ ಮಹತ್ವವಿದೆ. ಇದು ಕ್ರಿಸ್ತಪೂರ್ವ 3ನೇ ಶತಮಾನದಲ್ಲೇ ಆರಂಭವಾಯಿತು ಎನ್ನುವ ಒಂದು ವಾದವಿದೆ. ಆದರೂ ನೆರೆಯ ತಮಿಳುನಾಡಿನ ಸಾಹಿತ್ಯದ ಪ್ರೇರಣೆ ನಮ್ಮ ಸಾಹಿತಿಗಳ ಮೇಲೆ ಜಾಸ್ತಿ ಆಗಿರಲಿಲ್ಲ ಎಂದು ತಿಳಿಸಿದರು
ನೆರೆಯ ಭಾಷೆಗಳ ಸಾಹಿತ್ಯದ ಪ್ರೇರಣೆ ಕೊರತೆ ಇರುವಾಗ ಮಲರ್‌ವಿಳಿ ಮತ್ತವರ ತಂಡ ತಮಿಳಿನ ಸಂಗಂ ಸಾಹಿತ್ಯದ ಒಂಬತ್ತು ಸಂಪುಟಗಳನ್ನು ಕನ್ನಡಕ್ಕೆ ತಂದಿದ್ದಾರೆ. ಕನ್ನಡದ ಸಿದ್ದಲಿಂಗಯ್ಯ ಅವರ ಕವನಗಳನ್ನು ತಮಿಳಿಗೆ ಮತ್ತು ಡಾ.ವೈರಮುತ್ತು ಅವರ ''''''''ಕಳ್ಳಿಕ್ಕಾಟ್ಟು ಇತಿಹಾಸಂ'''''''' ಎಂಬ ತಮಿಳು ಕಾದಂಬರಿಯನ್ನು ಡಾ.ಮಲರ್‌ವಿಳಿ ಕೆ. ಅವರು ''''''''ಕಳ್ಳಿಗಾಡಿನ ಇತಿಹಾಸ'''''''' ಎಂಬುದಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಜೊತೆಗೆ ವೖರಮುತ್ತು ಅವರ ಅನೇಕ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ.ಇದು ಬಹಳ ಮಹತ್ವದ್ದಾಗಿದ್ದು ದಕ್ಷಿಣ ಭಾರತದ ನಮ್ಮ ಅರಿವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಎಂದು ಹೇಳಿದರು.
ಈ ವೇಳೆ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ, ಕಾರ್ಯದರ್ಶಿ ಭಾರತಿ ಹೆಗಡೆ, ಸುರಾನಾ ಕಾಲೇಜು ಪ್ರಾಂಶುಪಾಲೆ ಡಾ.ಕೆ.ಎನ್.ವೀಣಾ, ಗಾಯಕಿ ಸವಿತಾ ಸೇರಿ ಮತ್ತಿತರರು ಉಪಸ್ಥಿತರಿದ್ದರು.