ಸದಾಕಾಲ ಎರಡಾಗಿಯೇ ಇರುವ ಸ್ಥಿತಿಯನ್ನು ದ್ವೈತ ಎಂದು ಆಚಾರ್ಯರು ಹೇಳಿದ್ದಾರೆ. ಅಸ್ವತಂತ್ರನಾದ ಜೀವ ಹಾಗೂ ಸ್ವತಂತ್ರನಾದ ಪರಬ್ರಹ್ಮನ ಭೇದವೇ ದ್ವೈತ. ಜೀವ, ಜಡ, ಪರಮಾತ್ಮನಲ್ಲಿಯ ವಾಸ್ತವಿಕ ಭೇದವನ್ನೇ ಆಚಾರ್ಯರು ಪಂಚಭೇದವೆಂದು ಬೋಧಿಸಿದರು.

-ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ವ್ಯಾಸರ ಸಮಸ್ತ ವಾಂಙ್ಮಯವನ್ನು ತಮ್ಮ ಗ್ರಂಥಗಳ ಮೂಲಕ ವಿಶ್ವಕ್ಕೆ ತೋರಿದ ವಿಶ್ವಗುರು

ಆಶ್ವಯುಜ ಶುದ್ಧ ದಶಮಿ ವೈಭವದ ಪರ್ವ. ಜಗಚ್ಚಾಲಕನಾದ ಭಗವಂತ ಸರ್ವೇಶ. ನಾವೆಲ್ಲರೂ ಅವನ ದಾಸರು ಎಂಬ ತತ್ತ್ವವನ್ನು ಪ್ರತಿಪಾದಿಸಿದ ದ್ವೈತ ಸಿದ್ಧಾಂತದ ಪ್ರತಿಷ್ಠಾಪನಾಚಾರ್ಯ, ಭಗವಾನ್ ವೇದವ್ಯಾಸರ ಸಮಸ್ತ ವಾಂಙ್ಮಯವನ್ನು ತಮ್ಮ ಗ್ರಂಥಗಳ ಮೂಲಕ ವಿಸ್ತಾರವಾಗಿ ವಿಶ್ವಕ್ಕೆ ತೋರಿದ ವಿಶ್ವಗುರು ಶ್ರೀಮನ್ ಮಧ್ವಾಚಾರ್ಯರು ಅವತರಿಸಿದ ಪರಮ ಪಾವನ ದಿನವಿದು.

ಶುದ್ಧ ಭಾಗವತ ಧರ್ಮದ ಸಾಕಾರಮೂರ್ತಿ ಮಧ್ವಾಚಾರ್ಯರು, ಜಗತ್ತಿನ ಕಣ ಕಣದಲ್ಲಿಯೂ ಭಗವಂತ ವ್ಯಾಪಿಸಿರುವನೆಂದು ತಿಳಿಸಿದರು. ಇವನೇ ‘ಅಣೋರಣೀಯಾನ್ ಮಹತೋಮಹೀಯಾನ್’ ಎಂದು ಸಾರಿದರು. ‘ಬಾಂಧವಾಃ ವಿಷ್ಣು ಭಕ್ತಾಶ್ಚ ವಸುಧೈವ ಕುಟುಂಬಕಮ್’ - ವಿಷ್ಣುಭಕ್ತರೆಲ್ಲರೂ ಬಾಂಧವರು. ಸಮಸ್ತ ವಿಶ್ವವೇ ವಿಷ್ಣುಕುಟುಂಬವೆಂದು ಸಾರಿದರು. ವಿಶ್ವಧರ್ಮದ ವೇದಿಕೆಯ ಮೇಲೆ ವಿಷ್ಣುಭಕ್ತರ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದರು.

ಶ್ರೀಮಧ್ವರ ಮೂಲ ಸ್ವರೂಪ:

‘ಪೂರ್ವಪ್ರಸಿದ್ಧ ವ್ಯತಿರಿಕ್ತ ಅನಂತವೇದ ಪ್ರತಿಪಾದ್ಯ’- ಅನಂತವೇದಗಳಿಂದ ಭಗವಂತ ಹಾಗೂ ಲಕ್ಷ್ಮೀದೇವಿಯ ನಂತರದಲ್ಲಿ ವರ್ಣಿಸಲ್ಪಡುವವರು ಇವರೇ ಹನುಮಭೀಮಮಧ್ವರು ಎಂದು ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರ ಸ್ವಾಮಿಗಳು ಜಗತ್ತಿಗೆ ಸಾರಿದರು.

ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯಂತಯೋಷಣಃ। ಯದೀಮನುಪ್ರದಿವೋ ಮಧ್ವ ಅಧವೇ॥- (ಋಗ್ವೇದ.141-2-3).

ಋಗ್ವೇದ ಹಾಗೂ ಸ್ಕಂದ, ಕೂರ್ಮ ಇನ್ನನೇಕ ಪುರಾಣಗಳ ಪ್ರಕಾರ ಮುಖ್ಯಪ್ರಾಣರೆನಿಸಿದ ಹನುಮಂತದೇವರ ಅವತಾರವೇ ಶ್ರೀಮಧ್ವಾಚಾರ್ಯರು. ಇವರೇ ದಶಪ್ರಮತಿಗಳು. ಈ ಹನುಮಭೀಮರೇ ವಿಶ್ವಗುರು ಮಧ್ವರು.

 ಆಚಾರ್ಯರ ಪರಮಾವತಾರ 

ಕರುನಾಡಿನ ಕಡಲತೀರದ ಪಾಜಕದ ಪಾವನ ಪರಿಸರದಲ್ಲಿ ಎಂಟು ಶತಮಾನದ ಹಿಂದೆ ವಿಲಂಬಿ ಸಂವತ್ಸರದ ವಿಜಯದಶಮಿಯಂದು ಮಧ್ಯಗೇಹದ ದಂಪತಿಗಳಲ್ಲಿ ವಾಸುದೇವರಾಗಿ ಅವತರಿಸಿದರು. 8ನೇ ವಯಸ್ಸಿಗೆ ಶ್ರೀಅಚ್ಯುತಪ್ರಜ್ಞರಿಂದ ಸಂನ್ಯಾಸ ಪಡೆದು ‘ಪೂರ್ಣಪ್ರಜ್ಞ’ರಾದರು. ಇವರೇ ಮುಂದೆ ಆನಂದತೀರ್ಥರು, ಮಧ್ವಾಚಾರ್ಯರು ಎಂದೆನಿಸಿದರು.

ದ್ವೈತ ಪ್ರತಿಷ್ಠಾಪನಾಚಾರ್ಯ

ಸದಾಕಾಲ ಎರಡಾಗಿಯೇ ಇರುವ ಸ್ಥಿತಿಯನ್ನು ದ್ವೈತ ಎಂದು ಆಚಾರ್ಯರು ಹೇಳಿದ್ದಾರೆ. ಅಸ್ವತಂತ್ರನಾದ ಜೀವ ಹಾಗೂ ಸ್ವತಂತ್ರನಾದ ಪರಬ್ರಹ್ಮನ ಭೇದವೇ ದ್ವೈತ. ಜೀವ, ಜಡ, ಪರಮಾತ್ಮನಲ್ಲಿಯ ವಾಸ್ತವಿಕ ಭೇದವನ್ನೇ ಆಚಾರ್ಯರು ಪಂಚಭೇದವೆಂದು ಬೋಧಿಸಿದರು. ಎಲ್ಲ ಚೇತನರೂ ಅವರ ಸ್ವಭಾವ, ಕಾರ್ಯಗಳಿಗೆ ಅನುಗುಣವಾಗಿ ಭೇದ ಹೊಂದಿರುತ್ತಾರೆ. ಯಾರೂ ಪರಸ್ಪರ ಸಮಾನರಾಗುವುದಿಲ್ಲ. ತಾರತಮ್ಯ ಎಂಬುದು ಎಲ್ಲೆಡೆ ಪ್ರತ್ಯಕ್ಷ ಸಿದ್ಧ ಎಂದು ಮನಗಾಣಿಸಿದರು. ಎಲ್ಲ ವರ್ಣ, ವರ್ಗದವರಿಗೂ ಜ್ಞಾನದಿಂದ ಮೋಕ್ಷ ನಿಶ್ಚಿತವೆಂದು ಉಪದೇಶಿಸಿದರು. ವಿಷ್ಣುಭಕ್ತಿ ಎಲ್ಲರ ಸೊತ್ತೆಂದು ಅರುಹಿದರು. ವೇದಗಳ ಅಪೌರುಷೇಯತ್ವವನ್ನು ತಿಳಿಸಿದರು. ವಿಧಿ-ನಿಷೇಧ, ಧರ್ಮಾಧರ್ಮಗಳ ಮಾರ್ಗವಿಲ್ಲದೆ ಇದ್ದರೆ ಜಗತ್ತು ಅರಾಜಕವಾಗಿಹೋದಿತು. ಆದ್ದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಧರ್ಮ ಇದು ಅನಿವಾರ್ಯ ಎಂದರು.

ಕೇವಲ ಮಾತನಾಡುವ ಶಬ್ದಗಳು ಮಾತ್ರವಲ್ಲದೇ ಸಮುದ್ರದ ಘೋಷ, ವೃಕ್ಷಗಳ ಹೊಯ್ದಾಟದ ಧ್ವನಿ, ವಾದ್ಯಗಳಿಂದ ಬರುವ ಧ್ವನಿ ಹೀಗೆ ಸಮಸ್ತ ಧ್ವನಿ ಪ್ರಪಂಚವೇ ಭಗವಂತನ ನಾಮಗಳೆಂದು ತೋರಿಸಿದರು. ಅನಂತ ವೇದಗಳು, ರಾಮಾಯಣ ಮಹಾಭಾರತ,18 ಪುರಾಣಗಳಲ್ಲಿ ಆದಿಮಧ್ಯಾಂತದಲ್ಲಿ ವಿಷ್ಣುವೇ ಸರ್ವೋತ್ತಮ ಎಂಬ ತತ್ತ್ವವೇ ಅಡಗಿದೆ ಎಂಬುದನ್ನು ಜಗತ್ತಿಗೆ ಸಮರ್ಥವಾಗಿ ತೋರಿಸಿದ ಧೀರರು ಶ್ರೀಮಧ್ವಾಚಾರ್ಯರು.

ಆಚಾರ್ಯವಿರಚಿತ ಗ್ರಂಥಗಳು:

ವೇದಾಂತ ಪ್ರಪಂಚಕ್ಕೇ ಆಧಾರಭೂತವೆನಿಸಿದ್ದು ಬ್ರಹ್ಮಸೂತ್ರ, ಭಗವದ್ಗೀತೆ ಹಾಗೂ ಉಪನಿಷತ್ತು. ಇವುಗಳಿಗೆ ಶ್ರೀಮಧ್ವಾಚಾರ್ಯರು ಬ್ರಹ್ಮಸೂತ್ರಭಾಷ್ಯ, ಅಣುಭಾಷ್ಯ, ಅನುವ್ಯಾಖ್ಯಾನ, ನ್ಯಾಯವಿವರಣ ಎಂಬ ಸೂತ್ರಪ್ರಸ್ಥಾನಗಳನ್ನು ರಚಿಸಿದರು. ಗೀತಾ ಭಾಷ್ಯ, ಗೀತಾ ತಾತ್ಪರ್ಯ ಎಂಬ ಗೀತಾಪ್ರಸ್ಥಾನಗಳು, ಈಶಾವಾಸ್ಯೋಪನಿಷದ್ಭಾಷ್ಯ, ಕೇನೋಪನಿಷದ್ಭಾಷ್ಯ, ಕಾಠಕೋಪನಿಷದ್ಭಾಷ್ಯ, ಮಾಂಡೂಕೋಪನಿಷದ್ಭಾಷ್ಯ, ಮುಂಡಕೋಪನಿಷದ್ಭಾಷ್ಯ, ಷಟ್ ಪ್ರಶ್ನೋಪನಿಷದ್ಭಾಷ್ಯ, ತೈತ್ತಿರೀಯೋಪನಿಷದ್ಭಾಷ್ಯ, ಐತರೇಯೋಪನಿಷದ್ಭಾಷ್ಯ, ಛಾಂದೋಗ್ಯೋಪನಿಷದ್ಭಾಷ್ಯ, ಬೃದಾರಣ್ಯಕೋಪನಿಷದ್ ಭಾಷ್ಯ- ಹೀಗೆ ಹತ್ತು ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದಿದ್ದಾರೆ. ಇವುಗಳನ್ನು ಉಪನಿಷ್ಪ್ರಸ್ಥಾನಗಳೆಂದಿದ್ದಾರೆ.

ವೇದಕ್ಕೆ ಋಗ್ಭಾಷ್ಯ, ಮಹಾಭಾರತ ತಾತ್ಪರ್ಯ ನಿರ್ಣಯ, ಭಾಗವತ ತಾತ್ಪರ್ಯ ನಿರ್ಣಯ- ಹೀಗೆ ವೇದ ಇತಿಹಾಸ ಪುರಾಣಗಳ ನಿರ್ಣಯವನ್ನು ನೀಡಿದರು. ಕೃಷ್ಣಜಯಂತೀ ನಿರ್ಣಯ, ಸದಾಚಾರ ಸ್ಮೃತಿ, ತಂತ್ರಸಾರಸಂಗ್ರಹ, ಯತಿ ಪ್ರಣವಕಲ್ಪ ಎಂಬ ಆಚಾರ ಹಾಗೂ ಉಪಾಸನೆಯ ಕ್ರಮವನ್ನು ತಿಳಿಸುವ 4 ಗ್ರಂಥಗಳನ್ನು ರಚಿಸಿದರು.

ಪ್ರಮಾಣ ಲಕ್ಷಣ, ಕಥಾ ಲಕ್ಷಣ, ಉಪಾಧಿ ಖಂಡನ, ಮಾಯಾವಾದ ಖಂಡನ, ಪ್ರಪಂಚ ಮಿಥ್ಯಾತ್ವಾನುಮಾನ ಖಂಡನ, ತತ್ತ್ವಸಂಖ್ಯಾನ, ತತ್ತ್ವವಿವೇಕ, ತತ್ತ್ವೋದ್ಯೋತ, ಕರ್ಮನಿರ್ಣಯ, ವಿಷ್ಣುತತ್ತ್ವವಿನಿರ್ಣಯ ಎಂಬ ದ್ವೈತ ಸಿದ್ದಾಂತದ ಸಮಗ್ರ ತತ್ತ್ವಗಳನ್ನು ತಿಳಿಸುವ ಹಾಗೂ ಪರಮತದ ಖಂಡನೆಗಳನ್ನೊಳಗೊಂಡ ದಶಪ್ರಕರಣಗಳನ್ನು ತಿಳಿಸಿದ್ದಾರೆ. ದ್ವಾದಶ ಸ್ತೋತ್ರ, ನರಸಿಂಹ ನಖಸ್ತುತಿ, ಕಂದುಕ ಸ್ತುತಿ, ಯಮಕ ಭಾರತ, ಕೃಷ್ಣಾಮೃತ ಮಹಾರ್ಣವ ಸ್ತೋತ್ರ ಹಾಗೂ ಅನೇಕ ಸಂಕೀರ್ಣ ಗ್ರಂಥಗಳನ್ನು ರಚಿಸಿದ್ದಾರೆ.

ಮಧ್ವ ಜಯಂತಿಯ ಪರ್ವ

ಉಡುಪಿಯಲ್ಲಿ ಶ್ರೀಕೃಷ್ಣನನ್ನು ಸ್ಥಾಪಿಸಿದರು. ಎಂಟು ಶಿಷ್ಯರಿಗೆ ವಿವಿಧ ವಿಷ್ಣುವಿನ ಪ್ರತಿಮೆ ನೀಡಿ ಕೃಷ್ಣಭಕ್ತಿಯ ಪರಂಪರೆಯನ್ನು ಮುಂದುವರಿಸಲು ಆದೇಶಿಸಿದರು. ‘ಮಧ್ವರಾಯರ ಕರುಣ ಪಡೆಯದವ ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು’ ಎಂದು ವಿಜಯದಾಸರು ಸಾರಿದಂತೆ ಶ್ರೀಮಧ್ವಜಯಂತಿಯ ಪಾವನ ದಿನದಂದು ಜಗದ್ಗುರುಗಳಿಗೆ ಅನಂತ ನಮನಗಳು.

ಭಕ್ತ ಜನರ ಕೋರಿಕೆಯ ಮೇರೆಗೆ ಜಗದ್ಗುರು ಶ್ರೀಮಧ್ವಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ವೈಭವದಿಂದ ಆಚರಿಸಲು ಘನ ಕರ್ನಾಟಕ ಸಕರ್ಕರ ಆದೇಶ ನೀಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಯಂತಿ ಆಚರಣೆ ಪ್ರತಿ ವರ್ಷ ನಡೆಯಲಿದೆ ಎಂಬ ನಿರ್ಧಾರ ಸಮಸ್ತ ಮಾಧ್ವ ಸಮಾಜಕ್ಕೆ ಸಂತಸದ ವಿಷಯ.