ಬೆರಳ ತುದಿಗೆ ರೆಕಾರ್ಡ್‌ ರೂಮ್‌ ತಲುಪಿಸುವ ‘ಭೂ ಸುರಕ್ಷಾ’ ಯೋಜನೆಗೆ ಸಚಿವ ಕೃಷ್ಣ ಬೈರೇಗೌಡ ಚಾಲನೆ

| Published : Aug 06 2025, 01:45 AM IST

ಬೆರಳ ತುದಿಗೆ ರೆಕಾರ್ಡ್‌ ರೂಮ್‌ ತಲುಪಿಸುವ ‘ಭೂ ಸುರಕ್ಷಾ’ ಯೋಜನೆಗೆ ಸಚಿವ ಕೃಷ್ಣ ಬೈರೇಗೌಡ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ತಿ ದಾಖಲೆಗಳನ್ನು ಪಡೆಯಲು ನಾಗರಿಕರು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಾಗರಿಕರ ಬೆರಳ ತುದಿಗೆ ರೆಕಾರ್ಡ್ ರೂಮ್‌ ತಲುಪಿಸುವುದೇ ‘ಭೂ ಸುರಕ್ಷಾ’ ಅಭಿಯಾನದ ಮೂಲ ಧ್ಯೇಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ದಾಖಲೆಗಳನ್ನು ಪಡೆಯಲು ನಾಗರಿಕರು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ನಾಗರಿಕರ ಬೆರಳ ತುದಿಗೆ ರೆಕಾರ್ಡ್ ರೂಮ್‌ ತಲುಪಿಸುವುದೇ ‘ಭೂ ಸುರಕ್ಷಾ’ ಅಭಿಯಾನದ ಮೂಲ ಧ್ಯೇಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಮಂಗಳವಾರ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಡಳಿತ ಕಚೇರಿಯಲ್ಲಿರುವ ರೆಕಾರ್ಡ್ ರೂಮ್‌ ದಾಖಲೆಗಳನ್ನು ‘ಭೂ ಸುರಕ್ಷಾ’ ಯೋಜನೆ ಅಡಿಯಲ್ಲಿ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭೂ ಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಎಲ್ಲ ತಾಲೂಕು ಕಚೇರಿಗಳಲ್ಲಿರುವ ಪ್ರಮುಖ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಇದಾಗಿದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಲಭ್ಯವಿರುವ ಎಲ್ಲಾ ಹಳೆಯ ಭೂದಾಖಲೆಗಳನ್ನು ಈ ಮೂಲಕ ಡಿಜಿಟಲೀಕರಣ ಮಾಡಿ ರಕ್ಷಿಸಲಾಗುತ್ತದೆ. ಇದರಿಂದ ರೈತರಿಗೆ ಮಧ್ಯವರ್ತಿಗಳು, ಸರ್ಕಾರಿ ಕಚೇರಿ ಹಾಗೂ ಕೋರ್ಟ್‌ ಕೇಸುಗಳೆಂದು ಅಲೆಯುವುದು ತಪ್ಪಲಿದ್ದು, ಸಿಗಬೇಕಾದ ಸೌಲಭ್ಯ ಸರಳ ಸುಲಲಿತವಾಗಿ ಸಿಗಲಿದೆ ಎಂದರು.

ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಭೂ ದಾಖಲೆಗೆ ಸಂಬಂಧಿಸಿ 100 ಕೋಟಿಗೂ ಅಧಿಕ ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 35 ಕೋಟಿ ಪುಟಗಳು ಸ್ಕ್ಯಾನ್‌ ಮಾಡಲು ಬಾಕಿ ಇವೆ. ಈ ಕೆಲಸ ತಹಶೀಲ್ದಾರ್ ಕಚೇರಿಗಷ್ಟೇ ಸೀಮಿತವಾಗದೆ ಉಪ ವಿಭಾಗಾಧಿಕಾರಿಗಳು (ಎಸಿ), ಜಿಲ್ಲಾಧಿಕಾರಿಗಳ ಕಚೇರಿಯಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿದಿನ ಸರಾಸರಿಯಾಗಿ 10 ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಮತ್ತಷ್ಟು ವೇಗ ಪಡೆಯಲಿದ್ದು, ಮುಂದಿನ ಡಿಸೆಂಬರ್ ಒಳಗೆ ತಹಶೀಲ್ದಾರ್ ಕಚೇರಿಯ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವುದು. 2026 ಮಾರ್ಚ್ ವೇಳೆಗೆ ಎಸಿ (ಉಪ ವಿಭಾಗಾಧಿಕಾರಿ) ಕಚೇರಿ ರೆಕಾರ್ಡ್ ರೂಮ್‌ ಗಳಲ್ಲಿರುವ ದಾಖಲೆಗಳ ಸ್ಕ್ಯಾನಿಂಗ್ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಉಪಸ್ಥಿತರಿದ್ದರು.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಡಳಿತ ಕಚೇರಿಯಲ್ಲಿರುವ ರೆಕಾರ್ಡ್ ರೂಮ್‌ ದಾಖಲೆಗಳನ್ನು ‘ಭೂ ಸುರಕ್ಷಾ’ ಯೋಜನೆ ಅಡಿಯಲ್ಲಿ ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಿಸುವ ಅಭಿಯಾನಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು.