ಹಿನ್ನೆಲೆಯಲ್ಲಿ ಹಿಮಬೆಟ್ಟಗಳ ಸಾಲು. ಕೊಂಚ ಎತ್ತರವಾಗಿರುವ ದಿಬ್ಬದ ಮೇಲೆ ಪ್ಲಾಸ್ಟಿಕ್ ಟೇಬಲ್, ಸ್ಟೌ, ಹಳದಿ ರ್‍ಯಾಪರ್ ಸುತ್ತಿರುವ ಹತ್ತಾರು ಮ್ಯಾಗಿ ನ್ಯೂಡಲ್ಸ್ ಪ್ಯಾಕೇಟ್‌ಗಳು, ಬೆಟ್ಟದ ಚೆಲುವು ಕಾಣುವಂತೆ ಇಟ್ಟಿರುವ ನಾಲ್ಕೈದು ಸ್ಟೂಲ್. ನಡುವೆ ಕರಿಟೋಪಿ, ಬಿಳಿ ಏಪ್ರನ್ ಏರಿಸಿಕೊಂಡ ಹುಡುಗನೊಬ್ಬನ ನ್ಯೂಡಲ್ಸ್ ಮಾಡುವುದರಲ್ಲಿ ತಲ್ಲೀನ.
ಪ್ರಿಯಾ ಕೆರ್ವಾಶೆ
ಹಿನ್ನೆಲೆಯಲ್ಲಿ ಹಿಮಬೆಟ್ಟಗಳ ಸಾಲು. ಕೊಂಚ ಎತ್ತರವಾಗಿರುವ ದಿಬ್ಬದ ಮೇಲೆ ಪ್ಲಾಸ್ಟಿಕ್ ಟೇಬಲ್, ಸ್ಟೌ, ಹಳದಿ ರ್‍ಯಾಪರ್ ಸುತ್ತಿರುವ ಹತ್ತಾರು ಮ್ಯಾಗಿ ನ್ಯೂಡಲ್ಸ್ ಪ್ಯಾಕೇಟ್‌ಗಳು, ಬೆಟ್ಟದ ಚೆಲುವು ಕಾಣುವಂತೆ ಇಟ್ಟಿರುವ ನಾಲ್ಕೈದು ಸ್ಟೂಲ್. ನಡುವೆ ಕರಿಟೋಪಿ, ಬಿಳಿ ಏಪ್ರನ್ ಏರಿಸಿಕೊಂಡ ಹುಡುಗನೊಬ್ಬನ ನ್ಯೂಡಲ್ಸ್ ಮಾಡುವುದರಲ್ಲಿ ತಲ್ಲೀನ.
ಆ ಯುವಕನ ಹೆಸರು ದೇವಾನ್ಶ್ ತ್ಯಾಗಿ. ಡೆಲ್ಲಿ ಮೂಲದ ಕಂಟೆಂಟ್ ಕ್ರಿಯೇಟರ್. ತನ್ನ ಯೂಟ್ಯೂಬ್‌ಗಾಗಿ ಒಂದು ದಿನ ಹಿಮಾಲಯ ಬೆಟ್ಟದಲ್ಲಿ ಮ್ಯಾಗಿ ತಯಾರಿಸಿ ಮಾರುವುದು ಇವನ ಗುರಿ. ಈ ಪುಣ್ಯಾತ್ಮ ಕ್ರೇಜ್‌ಗಾಗಿ ಇಂಥಾದ್ದೊಂದು ಪ್ರಯೋಗ ಮಾಡಿದಾಗ, ಹುಡುಗ ಏನೋ ಹುಚ್ಚಾಟ ಮಾಡ್ತಿದ್ದಾನೆ ಅಂತ ಜನ ನಕ್ಕು ಸುಮ್ಮನಾಗಿದ್ದರು. ಆದರೆ ಈಗ ಇದು ದೊಡ್ಡ ಬಿಸಿನೆಸ್ ಐಡಿಯಾ ಆಗಿ ಹೊರಹೊಮ್ಮಿದೆ. ಅದು ಹೇಗೆ ಅನ್ನೋದನ್ನು ದೇವಾನ್ಶ್ 1 ನಿಮಿಷದ ರೀಲ್ಸ್‌ನಲ್ಲಿ ಮ್ಯಾಗಿ ಮಾಡಿದಷ್ಟೇ ಫಾಸ್ಟಾಗಿ ಹೇಳಿದ್ದಾನೆ;
‘ಒಂದಿನ ಪರ್ವತದ ನಡುವೆ ಮ್ಯಾಗಿ ಮಾಡಿ ಎಷ್ಟು ಸಂಪಾದನೆ ಮಾಡಬಹುದು ಅಂತ ನೋಡೋಣ ಬನ್ನಿ. ಬೆಳ್ಳಂಬೆಳಗ್ಗೆ ಈ ಹಿಮಾಲಯ ಬೆಟ್ಟದ ತಪ್ಪಲಲ್ಲಿ ಎಲ್ಲ ಸಾಮಗ್ರಿ ಜೋಡಿಸಿಟ್ಟಾಗ ಸಣ್ಣ ಮ್ಯಾಗಿ ಶಾಪ್ ರೆಡಿಯಾಯ್ತು. ಮ್ಯಾಗಿ ರೆಡಿ ಮಾಡಲೆಂದು ಪಕ್ಕದಲ್ಲೇ ಹರಿಯುತ್ತಿದ್ದ ಝರಿಯಿಂದ ನೀರು ತಂದು ಕುದಿಯಲು ಇಟ್ಟೆ, ತರಕಾರಿ ಹೆಚ್ಚಿ ಅದಕ್ಕೆ ಹಾಕಿದೆ. ಆಮೇಲೆ ನ್ಯೂಡಲ್ಸ್ ಸೇರಿಸಿ ಬೇಯಲು ಇಟ್ಟೆ. ಹೀಗೆ ಪಟಾಫಟ್ ತಯಾರಾದ ಸಿಂಪಲ್ ಮ್ಯಾಗಿ ಪ್ಲೇಟ್‌ಗೆ 100 ರೂಪಾಯಿ, ಬಟರ್ ಮ್ಯಾಗಿಗೆ 120 ರೂಪಾಯಿ. ಮೊದಲ ಗ್ರಾಹಕರನ್ನು ಸ್ವಾಗತಿಸಿ ಮ್ಯಾಗಿ ನೀಡಿದೆ.
ಆಮೇಲೆ ನೋಡ್ತೀನಿ, ಒಬ್ಬರಾದ ಮೇಲೆ ಒಬ್ಬರು ಬರುತ್ತಲೇ ಹೋದರು. ಮಧ್ಯಾಹ್ನದ ಹೊತ್ತಿಗೆ ನನ್ನ ಹಟ್‌ನ ಎದುರು ಜನರ ಸರತಿ ಸಾಲೇ ಇತ್ತು. ನನ್ನ ಅಡುಗೆಯ ವೇಗ ಹೆಚ್ಚಿಸಿದೆ. ಮೂರು ಗಂಟೆಯಲ್ಲಿ ಭರ್ತಿ 90 ಪ್ಲೇಟ್ ಮ್ಯಾಗಿ ಮಾಡಿ ಮಾರಿದೆ. ಗ್ರಾಹಕರೂ ಸಿಟ್ಟಾಗದೇ ಕೂಲಾಗಿ ತಮ್ಮ ಫೀಡ್‌ಬ್ಯಾಕ್ ನೀಡಿದರು. ಕೆಲವರು ನೀವ್ಯಾಕೆ ಉಪ್ಪು ಹಾಕಲು ಕಂಜೂಸ್ ಮಾಡ್ತೀರಿ ಅಂತ ಕ್ಲಾಸ್ ತಗೊಂಡರು.
ಸಂಜೆಯಾಗುತ್ತಿದ್ದಂತೆ ನಾನು ಮ್ಯಾಗಿ ತಯಾರಿಸುವ ರೋಬೋಟ್ ಆಗಿ ಬದಲಾದೆ. ನನ್ನ ಕೈಗಳು ಡಬಲ್ ಸ್ಪೀಡ್‌ನಲ್ಲಿ ಕೆಲಸ ಮಾಡುತ್ತಿದ್ದವು. ಜನ ಬರುತ್ತಲೇ ಇದ್ದರು. ಕಡೆಗೆ ನನ್ನ ಬಳಿ ಇದ್ದ ಎಲ್ಲ ಮ್ಯಾಗಿ ಪ್ಯಾಕೇಟ್‌ಗಳೂ ಖಾಲಿಯಾದವು. ಒಟ್ಟು
250 ಪ್ಲೇಟ್ ಮ್ಯಾಗಿ ಮಾರಿದ್ದೆ. ಇದರಿಂದ ನನಗೆ ಬಂದ ದುಡ್ಡು ಭರ್ತಿ 24 ಸಾವಿರ ರೂಪಾಯಿಗಳು!
ನಿಮ್ಮ ನಿರುದ್ಯೋಗಿ ಸ್ನೇಹಿತರಿಗೆ ಈ ಪ್ಲಾನ್ ಹೇಳಿ, ಅದ್ಹೇಗೆ ಉದ್ಯೋಗ ಸಿಗಲ್ವೋ ನಾವೂ ನೋಡಾಣ! ’
ಹೀಗೆ ರೀಲ್ಸ್ ಮಾಡಿದ ದೇವಾನ್ಶ್ ಬೆಳಗ್ಗಿಂದ ಸಂಜೆ ತನಕ ಮ್ಯಾಗಿ ಮಾರಿ 24 ಸಾವಿರ ಸಂಪಾದಿಸಿದ, ಇವನ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಸುಮಾರು 11 ಕೋಟಿ ಜನ ನೋಡಿದರು. ರಾತ್ರೋ ರಾತ್ರಿ ಈತ ವರ್ಲ್ಡ್ ಫೇಮಸ್ ಆದ. ಇದಕ್ಕೂ ಮೊದಲು ಬಾದಲ್ ಠಾಕೂರ್ ಎಂಬ ಕಾಂಟೆಂಟ್ ಕ್ರಿಯೇಟರ್ ಪರ್ವತದಲ್ಲಿ ಒಂದೇ ದಿನದಲ್ಲಿ ಮ್ಯಾಗಿ ಮಾರಿ 21,000 ಗಳಿಸಿದ್ದ. ಈ ಇಬ್ಬರು ಯುವಕರು ಬೆಟ್ಟದಲ್ಲಿ ಮ್ಯಾಗಿ ಮಾಡಿ ಮಾರೋದು ಎಷ್ಟು ಲಾಭದಾಯಕ ಅನ್ನೋದನ್ನು ಸಾಕ್ಷಾತ್ತಾಗಿ ತೋರಿಸಿದರು.
ಆದರೆ ಈಗ ನಮ್ಮೆದುರು ಪ್ರಶ್ನೆ ಬರಬಹುದು, ಯಾಕೆ ಮೌಂಟೇನ್ ಮ್ಯಾಗಿಗೆ ಆ ಲೆವೆಲ್ ಡಿಮ್ಯಾಂಡ್ ಇದೆ, ಅದೇ ಮ್ಯಾಗಿಯನ್ನು ಬೆಂಗಳೂರು ಸ್ಟ್ರೀಟ್‌ನಲ್ಲಿ ಮಾರಿದರೆ ಯಾಕೆ ಜನ ಆ ಕಡೆ ತಲೆನೂ ಹಾಕಲ್ಲ. ಮನೆಯಲ್ಲಿ ಮ್ಯಾಗಿ ಮಾಡಿ ತಿನ್ನೋದು ಬಿಟ್ಟು ಬೆಟ್ಟಕ್ಕೋಗಿ ಮ್ಯಾಗಿ ತಿನ್ನೋ ಕ್ರೇಜ್ ಯಾಕೆ ಬಂತು ಅಂತೆಲ್ಲ ಅನಿಸಬಹುದು. ಇದಕ್ಕುತ್ತರ ಹುಡುಕುತ್ತಾ ಹೋಗುವ ಜೊತೆಗೆ ಜನರ ಈ ಕ್ರೇಜ್ ಹಿಮಬೆಟ್ಟಗಳಿಗೆ ಯಾವೆಲ್ಲ ಬಗೆಯಲ್ಲಿ ಹಾನಿ ಮಾಡಿವೆ ಅನ್ನೋ ವಿವರವೂ ಇದೆ. ಸ್ಪೇಸ್‌ನಲ್ಲೇ ಕಸ ತುಂಬಿಸಿದ್ದೀವಂತೆ, ಇನ್ನು ಹಿಮಾಲಯ ಬಿಡ್ತೀವಾ..
ಬೆಟ್ಟದ ಮ್ಯಾಗಿಗೆ ಯಾಕೆ ಅಂತಾ ರುಚಿ?
ಸುತ್ತ ಹಿಮಹೊದ್ದ ಪರ್ವತಗಳ ನಡುವೆ ಕಣಿವೆ ಇರುವ ನಯನ ಮನೋಹರ ಪ್ರಕೃತಿ. ಆಗಾಗ ಪರ್ವತದ ಮೇಲಿಂದ ಬೀಸುವ ಹಿಮಗಾಳಿ, ಸ್ಟೌಮೇಲೆ ಮೇಲೆ ಬೇಯುವ ಮ್ಯಾಗಿಯ ಹಿತವಾದ ಪರಿಮಳ, ಹೊಟ್ಟೆ ಜೋರು ಚುರುಗುಡಲು ಶುರುವಾಗುವ ಮೊದಲೇ ಕೈ ಮೇಲೆ ಬರುವ ಬಿಸಿ ಬಿಸಿ ಮ್ಯಾಗಿ ನ್ಯೂಡಲ್ಸ್.
ಇದು ಪಹಾಡ್‌ನಲ್ಲಿ ನ್ಯೂಡಲ್ಸ್ ಮಾಡುವ ಮ್ಯಾಜಿಕ್!
ಸ್ವಿಜರ್‌ಲ್ಯಾಂಡ್‌ನಲ್ಲಿ ಈ 1880ರ ಸುಮಾರಿಗೆ ಬೆಟ್ಟಗಳ ಮೇಲೆ ನ್ಯೂಡಲ್ಸ್ ಎಂಬ ವಿಚಿತ್ರ , ವಿಶಿಷ್ಟ ಹವ್ಯಾಸ ತಲೆ ಎತ್ತಿತಂತೆ. ಜನ ಚಳಿಗೆ ಥರಗುಡುತ್ತಿದ್ದರೂ ಬೆಟ್ಟದಲ್ಲಿ ಬೆಂಕಿ ಮಾಡಿ ಅಲ್ಲಿನ ನೀರಲ್ಲಿ ನ್ಯೂಡಲ್ಸ್ ಮಾಡಿ ತಿಂದು ಒಂದಿಷ್ಟು ಹೊತ್ತು ಆ ಪರಿಸರವನ್ನು ಎನ್‌ಜಾಯ್ ಮಾಡಿ ವಾಪಾಸ್ ಬರುತ್ತಿದ್ದರಂತೆ.
ಎಂಥಾ ಸಂಯಮಿಗಳನ್ನು ಒಂದೆರೆ ಗಳಿಗೆ ಅಲ್ಲಾಡಿಸುವ ತಾಕತ್ತು ಈ ಬೆಟ್ಟದ ಮೇಲಿನ ಮ್ಯಾಗಿಗೆ ಇದೆಯಂತೆ. ಯಾಕೆ ಪಹಾಡ್‌ನ ಮ್ಯಾಗಿಗೆ ಅಷ್ಟೊಂದು ರುಚಿ ಅಂದರೆ ಇದರ ಹಿಂದೆ ವಿಜ್ಞಾನ ಇದೆ, ಜೈವಿಕ ಕಾರಣ ಇದೆ, ಹಾಗೇ ಹೀಗನಿಸಲು ಮನುಷ್ಯನ ಮಾನಸಿಕ ಸ್ಥಿತಿಯ ಕೊಡುಗೆಯೂ ಇದೆ.
ನಾವು ಸಮುದ್ರ ಮಟ್ಟಕ್ಕಿಂತ ಎತ್ತರ ಎತ್ತರಕ್ಕೆ ಹೋದಂತೆ ವಾತಾವರಣದ ಒತ್ತಡ ಕಡಿಮೆ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಬೆಟ್ಟದ ಮೇಲೆ ನೀರು 100 ಡಿಗ್ರಿ ಸೆಲ್ಶಿಯಸ್‌ಗಿಂತ ಮುಂಚೆಯೇ, ಅಂದರೆ ಸುಮಾರು 90 ರಿಂದ 95 ಡಿಗ್ರಿ ಸೆಲ್ಶಿಯಸ್‌ನಲ್ಲೇ ಕುದಿಯಲು ಆರಂಭಿಸುತ್ತದೆ. ನೀರು ಅತಿಹೆಚ್ಚು ಬಿಸಿಯಾಗದ ಕಾರಣ, ನೂಡಲ್ಸ್ ತುಂಬಾ ಸರಿಯಾದ ಹದದಲ್ಲಿ ಬೇಯುತ್ತದೆ. ಜೊತೆಗೆ ಮ್ಯಾಗಿ ಮಸಾಲಾದಲ್ಲಿರುವ ಘಮ ಹಾಗೂ ಮಸಾಲೆ ಅಂಶಗಳು ಅತಿಯಾದ ಉರಿಯಲ್ಲಿ ಆವಿಯಾಗಿ ಹೋಗದೆ, ಸೂಪ್‌ನಲ್ಲೇ ಉಳಿದುಕೊಳ್ಳುವುದರಿಂದ ರುಚಿ ದುಪ್ಪಟ್ಟಾಗುತ್ತದೆ.
ಜೈವಿಕ ಕಾರಣಕ್ಕೆ ಬಂದರೆ ಬೆಟ್ಟ ಪ್ರದೇಶದಲ್ಲಿ ಪ್ರಯಾಣ ಮಾಡುವಾಗ ಅಥವಾ ಟ್ರೆಕ್ಕಿಂಗ್ ಮಾಡುವಾಗ ದಣಿಯುವುದು ಬೇಗ. ಅಲ್ಲಿ ಆಮ್ಲಜನಕ ಕಡಿಮೆ ಇರುವುದರಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಕೆಲಸದ ಒತ್ತಡ ಹೆಚ್ಚು. ತಣ್ಣನೆಯ ಗಾಳಿಯಲ್ಲಿ ಮೈಯನ್ನು ಬೆಚ್ಚಗಿಡಬೇಕಾದ ಕಾರಣ ಕ್ಯಾಲೊರಿ ಬೇಗನೆ ಕರಗುತ್ತದೆ. ಆಮೇಲೆ ನೀವು ಮ್ಯಾಗಿ ಪಾಯಿಂಟ್ ತಲುಪುವಷ್ಟರಲ್ಲಿ ರಕ್ತದೊತ್ತಡವೂ ಕೊಂಚ ಕಡಿಮೆಯಾಗಿರುತ್ತದೆ. ಅಂತಹ ಸಮಯದಲ್ಲಿ ನಮ್ಮ ಮೆದುಳು ಕಾರ್ಬೋಹೈಡ್ರೇಟ್ಸ್ ಮತ್ತು ಉಪ್ಪಿನ ಅಂಶ ಇರುವ ಆಹಾರಕ್ಕಾಗಿ ಹಾತೊರೆಯುತ್ತಿರುತ್ತದೆ. ಮ್ಯಾಗಿಯಲ್ಲಿ ಇವೆರಡೂ ಭರಪೂರ ಇರುವುದರಿಂದ, ಮೊದಲ ತುತ್ತು ನಾಲಿಗೆಗೆ ತಾಕಿದ ತಕ್ಷಣ ಮೆದುಳಿಗೆ ಅದು ಅದ್ಭುತ ರುಚಿಯಾಗಿದೆ ಅಂತ ಅನಿಸುತ್ತದೆ.
ಬೆಟ್ಟದ ಮೇಲೆ ಮ್ಯಾಗಿ ಮಾಡಲು ಬಳಸುವುದು ಗ್ಲೇಶಿಯರ್‌ನಿಂದ ಹರಿದುಬರುವ ನೀರು. ಈ ನೈಸರ್ಗಿಕ ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂನಂತಹ ಖನಿಜಗಳು ಸಮೃದ್ಧವಾಗಿರುತ್ತವೆ. ಈ ಮಿನರಲ್ ವಾಟರ್ ಮ್ಯಾಗಿ ಮಸಾಲಾ ಜೊತೆ ಸೇರಿದಾಗ ಆ ರುಚಿಯೇ ಬೇರೆ.
ಬೆಟ್ಟದ ಮೇಲಿನ ಚಳಿಯಲ್ಲಿ ಕೈ-ಕಾಲು, ಮುಖವೆಲ್ಲ ತಣ್ಣಗಾಗಿರುತ್ತವೆ. ಅಂತಹ ಹೊತ್ತಿನಲ್ಲಿ ಆಗಷ್ಟೇ ಒಲೆಯಿಂದ ಇಳಿಸಿದ ಬಿಸಿಬಿಸಿಯಾದ, ಖಾರವಾದ ಮ್ಯಾಗಿಯನ್ನು ಬಾಯಿಗಿಟ್ಟಾಗ ಸಿಗುವ ಆಗುವ ಅನುಭವಕ್ಕೆ ಥರ್ಮಲ್ ಕಾಂಟ್ರಾಸ್ಟ್ ಅಂತಾರೆ. ಇದು ನಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಆ ಬಿಸಿಯಾದ ಅನುಭವವೇ ರುಚಿಯನ್ನು ಹತ್ತರಷ್ಟು ಹೆಚ್ಚಿಸುತ್ತದೆ.
ಇವೆಲ್ಲದರ ಜೊತೆಗೆ ಟೆನ್ಶನ್ ಇಲ್ಲದೆ ಪ್ರಕೃತಿಯ ನಡುವೆ ಕುಳಿತು ತಿನ್ನುವ ಸುಖವೇ ಬೇರೆ. ನಾವು ಸಂಪೂರ್ಣವಾಗಿ ಆ ಕ್ಷಣವನ್ನು ಆನಂದಿಸುತ್ತೇವೆ. ನಮ್ಮ ಮೆದುಳು ಪೂರ್ತಿಯಾಗಿ ಆ ಸ್ವಾದದ ಕಡೆಗೇ ಗಮನ ಕೊಡುವುದರಿಂದ ಮ್ಯಾಗಿ ಸಖತ್ ಟೇಸ್ಟಿ ಅನಿಸುತ್ತದೆ.
ಇಷ್ಟೆಲ್ಲ ಹೇಳಿದಮೇಲೆ ಒಂದು ವಿಚಾರ ಸ್ಪಷ್ಟ. ಬೆಟ್ಟದಲ್ಲಿ ಮ್ಯಾಜಿಕ್ ಮಾಡುವುದು ಮ್ಯಾಗಿ ಅಲ್ಲ. ಮ್ಯಾಜಿಕ್ ಇರುವುದು ಬೆಟ್ಟದ ಮೇಲಿನ ಆ ತಣ್ಣನೆಯ ವಾತಾವರಣ, ಅಲ್ಲಿನ ಶುದ್ಧ ನೀರು ಮತ್ತು ನಿಮ್ಮ ಹಸಿದ ಹೊಟ್ಟೆಯಲ್ಲಿ!
ಇಷ್ಟೆಲ್ಲ ಸಂಗತಿಗಳು ಬೆಟ್ಟ ಮತ್ತು ಮ್ಯಾಗಿಯ ನಡುವೆ ಇದೆ. ಆದರೆ ಈ ವಿಚಾರವೇ ಬೆಟ್ಟಕ್ಕೆ ದೊಡ್ಡ ಸಮಸ್ಯೆಯೂ ಆಗಿದೆ.
ಮೌಂಟೇನ್ ಆರ್ ಮ್ಯಾಗಿ ಮೂವ್‌ಮೆಂಟ್
ನಿಮಗೆ ಬೇಕಾದ್ದು ಮೌಂಟೇನ್ನಾ ಅಥವಾ ಮ್ಯಾಗಿಯಾ ಅನ್ನೋದು ದಶಕಗಳಿಂದ ನಡೆಯುತ್ತಿರುವ ಹೋರಾಟ. ಇದಕ್ಕೊಂದು ದೊಡ್ಡ ಕಾರಣ ಇದೆ. ಪರ್ವತದ ಮೇಲೆ ಮ್ಯಾಗಿ ತಿನ್ನೋದು ರುಚಿ ಅನ್ನುವ ಕಾರಣಕ್ಕೆ ಇತ್ತೀಚೆಗೆ ಮ್ಯಾಗಿ ತಿನ್ನಲೆಂದೇ ಪರ್ವತ ಪ್ರದೇಶಗಳಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಕಾಂಟೆಂಟ್ ಕ್ರಿಯೇಟರ್‌ಗಳೇನೋ ಈ ಸಂಗತಿಯನ್ನು ಜನಪ್ರಿಯಗೊಳಿಸಿ ದುಡ್ಡು ಮಾಡುವ ಉಪಾಯವನ್ನೂ ತಿಳಿಸಿಕೊಟ್ಟರು. ಆದರೆ ಜನರಲ್ಲಿ ಪರ್ವತ ಪ್ರದೇಶದಲ್ಲಿ ಸ್ವಚ್ಛತೆಯನ್ನು ಯಾವ ರೀತಿ ಕಾಪಾಡಬೇಕು ಅಂತ ಮನವರಿಕೆ ಮಾಡುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಪರಿಣಾಮ ಲಕ್ಷಾಂತರ ಜನರ ಮ್ಯಾಗಿ ಕ್ರೇಜ್‌ಗೆ ಬೆಟ್ಟ ಬಲಿಯಾಗುತ್ತಿದೆ.
ನಟಿ ರತ್ನಾಪಾಠಖ್ ಶಾ ಅವರ ಟಾಕ್ ಶೋ ಒಂದರಲ್ಲಿ ನಟಿಯೊಬ್ಬರು ‘ಮ್ಯಾಗಿ ಟೂರಿಸ್ಟ್’ ಬಗ್ಗೆ ಆತಂಕಕಾರಿ ವಿಚಾರ ಹೇಳಿದರು. ‘ಸಾಕಷ್ಟು ಜನ ಮದ್ಯ ಮತ್ತು ಮ್ಯಾಗಿ ತಗೊಂಡು ಹಿಮಾಚಲ, ಧರ್ಮಶಾಲಾ ಮೊದಲಾದೆಡೆ ಹೋಗ್ತಾರೆ. ಅವರೇ ಬೆಟ್ಟದ ನಡುವೆ ಜಾಗ ಹುಡುಕಿ ಮ್ಯಾಗಿ ತಯಾರಿಸುತ್ತಾರೆ. ಎಣ್ಣೆ ಹೊಡೆಯುತ್ತ ಮ್ಯಾಗಿ ತಿನ್ನುತ್ತಾರೆ. ಆಮೇಲೆ ಮ್ಯಾಗಿ ಪ್ಯಾಕೆಟ್ ಎಣ್ಣೆ ಬಾಟಲ್ ಅಲ್ಲೇ ಬಿಟ್ಟು ವಾಪಾಸ್ ಹೊರಡುತ್ತಾರೆ. ಇದಕ್ಕೆ ಮ್ಯಾಗಿ ಟೂರಿಸಂ ಅನ್ನೋ ಟ್ಯಾಗ್‌ಲೈನ್ ಹಾಕಿ ರೀಲ್ಸ್ ಮಾಡುತ್ತಾರೆ. ಹೀಗೇ ಮುಂದುವರಿದರೆ ಬೆಟ್ಟವೇ ಕಸದ ಪರ್ವತವಾಗಬಹುದು.’
ಇನ್ನೊಂದೆಡೆ ನಿತ್ಯ ಚಾರಣಿಗರನ್ನು ಹಿಮಾಲಯ ಟ್ರೆಕಿಂಗ್‌ಗೆ ಕರೆದೊಯ್ಯುವ ಕೆಲವು ಪರಿಸರ ಕಾಳಜಿಯುಳ್ಳ ಸಂಸ್ಥೆಗಳು ಜನ ಬೆಟ್ಟದಲ್ಲಿ ಬಿಸಾಕಿ ಹೋಗಿರುವ ಕಸವನ್ನು ಸಂಗ್ರಹಿಸುತ್ತಾರೆ. ಕಳೆದ ಹತ್ತು, ಹದಿನೈದು ವರ್ಷಗಳಲ್ಲಿ ಮ್ಯಾಗಿ ಪ್ಯಾಕೇಟ್, ಮದ್ಯದ ಬಾಟಲಿಗಳ ಪ್ರಮಾಣ ಅದೆಷ್ಟು ಏರಿಕೆಯಾಗಿದೆ ಅಂದರೆ ಅವರು ಕಸ ಸಂಗ್ರಹಿಸುವ ಹವ್ಯಾಸವನ್ನೇ ಕೈಬಿಡುವಂತಾಗಿದೆ.
‘ನಮ್ಮಲ್ಲಿ ಬರುವ ಚಾರಣಿಗರಿಗೆ ನಾವು ಮೊದಲೇ ಹೇಳುತ್ತೇವೆ. ನಿಮಗೆ ಮೌಂಟೇನ್ ಬೇಕೋ, ಮ್ಯಾಗಿ ಬೇಕೋ ಅಂತ ಮೊದಲೇ ನಿರ್ಧರಿಸಿಕೊಳ್ಳಿ. ಮೌಂಟೇನ್ ಬೇಕು ಅಂತಿದ್ದರೆ ಮಾತ್ರ ನಮ್ಮ ಜೊತೆಗೆ ಬನ್ನಿ ಅನ್ನುತ್ತೇವೆ’ ಎಂದು ಪರ್ವತಾರೋಹಣದ ಗೈಡ್ ಒಬ್ಬರು ಹೇಳುತ್ತಾರೆ.
ಇಷ್ಟೆಲ್ಲ ಆದಮೇಲೆ ಮೌಂಟೇನ್ ಮತ್ತು ಮ್ಯಾಗಿಯೋ, ಮೌಂಟೇನ್ ಅಥವಾ ಮ್ಯಾಗಿಯೋ, ಯಾವುದನ್ನು ಆರಿಸಿಕೊಳ್ಳಬೇಕು ನೀವೇ ನಿರ್ಧರಿಸಿ.
