ಸಾರಾಂಶ
ಸಂಪತ್ ತರೀಕೆರೆ
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉದ್ದೇಶಿತ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ (ಪೆರಿಫೆರಲ್ ರಿಂಗ್ ರಸ್ತೆ) ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿರುವ ಬಿಡಿಎ, ಕೆಲ ಗ್ರಾಮಗಳ ಭೂಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ಬಿಸಿನೆಸ್ ಕಾರಿಡಾರ್(ಬಿಬಿಸಿ) ಯೋಜನೆಗೆಂದು ಭೂಸ್ವಾಧೀನ ಪ್ರಕ್ರಿಯೆಗೆ ನೇಮಕ ಮಾಡಿರುವ ಒಂಬತ್ತು ಮಂದಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಪೈಕಿ ಬಿಬಿಸಿ 3, 6 ಮತ್ತು 7ನೇ ಅಧಿಕಾರಿಗಳು ಭೂಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಪ್ರಾಧಿಕಾರದ ನೋಟಿಸ್ ಪಡೆದ ಭೂ ಮಾಲೀಕರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಬಿಬಿಸಿ 3 ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಬೈಲಕೊನೇನಹಳ್ಳಿ, ಡೊಂಬರಹಳ್ಳಿ, ಗಂಗೊಂಡನಹಳ್ಳಿ, ಕೆ.ಜಿ.ಲಕ್ಕೇನಹಳ್ಳಿ, ಲಕ್ಷ್ಮೀಪುರ ಹಾಗೂ ಬಿಬಿಸಿ 6ರ ದಾಸನಪುರ ಹೋಬಳಿಯ ಮಾದವಾರ, ಬಿಡ್ಡರಹಳ್ಳಿ, ಕದಿರೇನಹಳ್ಳಿ, ಹಾರೋಕ್ಯಾತನಹಳ್ಳಿ, ಸಿದ್ದನಹೊಸಹಳ್ಳಿ, ಮಾದನಾಯಕನಹಳ್ಳಿ, ಬಿಬಿಸಿ 7 ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಗೊಲ್ಲಹಳ್ಳಿ, ಹುಲ್ಲಹಳ್ಳಿ, ಕನ್ನನಾಯಕನ ಅಗ್ರಹಾರ, ಲಕ್ಷ್ಮೀಪುರ, ಸಕಲವಾರ, ವಡೇರಹಳ್ಳಿಯ ಹಲವು ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್ ಪಡೆದ ಭೂ ಮಾಲೀಕರು ಮತ್ತು ನೋಟಿಸ್ ಬರದಿದ್ದರೂ ಅನೇಕರು ಆತಂಕದಿಂದಲೇ ಆಕ್ಷೇಪಣೆ ಸಲ್ಲಿಸಲು ಬಿಡಿಎ ಕೇಂದ್ರ ಕಚೇರಿಯ ಮುಂದೆ ಬೆಳಗ್ಗಿನಿಂದ ಸಂಜೆವರೆಗೆ ನಾಮುಂದು, ತಾಮುಂದು ಎಂದು ಆಗಮಿಸುತ್ತಿದ್ದಾರೆ. ಈವರೆಗೆ 7ರಿಂದ 8 ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನೂ ಮುಂದುವರೆದಿದೆ. ಒಟ್ಟಾರೆ 78 ಹಳ್ಳಿಗಳ ಪೈಕಿ ಕೇವಲ ಮೂವರು ವಿಶೇಷ ಭೂಸ್ವಾಧೀನಾಧಿಕಾರಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಮಾತ್ರ ನೋಟಿಸ್ ಜಾರಿ ಮಾಡಲಾಗಿದೆ. ಇನ್ನೂ ಆರು ಮಂದಿ ಭೂಸ್ವಾಧೀನ ಅಧಿಕಾರಿಗಳ ವ್ಯಾಪ್ತಿಯ ಗ್ರಾಮಗಳ ಭೂಮಾಲೀಕರಿಗೆ ನೋಟಿಸ್ ನೀಡಬೇಕಿದೆ ಎಂದು ಬಿಡಿಎ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಬಿಬಿಸಿ ಯೋಜನೆಗೆ 2,560 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಸಂಬಂಧ ಭೂಮಾಲೀಕರೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ನಿಗದಿಪಡಿಸಲಾಗುವುದು. ಬಳಿಕ ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. 100 ಮೀಟರ್ ಅಗಲದ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆಯೇ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಕಾರಿಡಾರ್‌ನ ಎರಡೂ ಬದಿಯ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ. 50 ಮೀಟರ್ ಅಗಲದಲ್ಲಿ ಆರು ಪಥಗಳ ರಸ್ತೆ ನಿರ್ಮಿಸಲಾಗುತ್ತದೆ. ಉಳಿದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಬಿಸಿನೆಸ್ ಕಾರಿಡಾರ್ ಮಾರ್ಗ:
ಸಂಚಾರ ದಟ್ಟಣೆ ತಗ್ಗಿಸಲು ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 100 ಮೀಟರ್ ಅಗಲದ, 73 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದು 77 ಗ್ರಾಮಗಳ ನಡುವೆ ಹಾದುಹೋಗಲಿದೆ. ತುಮಕೂರು ರಸ್ತೆಯ ಮಾದನಾಯಕಹಳ್ಳಿ ಬಳಿಯ ನೈಸ್ ಜಂಕ್ಷನ್‌ನಿಂದ ಆರಂಭವಾಗುವ ಕಾರಿಡಾರ್, ಹೆಸರುಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ಹಳೇ ಮದ್ರಾಸ್ ರಸ್ತೆ, ವೈಟ್‌ಫೀಲ್ಡ್, ಚನ್ನಸಂದ್ರ, ಸರ್ಜಾಪುರ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆ ತಲುಪಲಿದೆ. ಹೆಸರಘಟ್ಟ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ವೈಟ್‌ಫೀಲ್ಡ್, ಹೊಸೂರು ರಸ್ತೆಗಳನ್ನು ಇದು ಸಂಪರ್ಕಿಸಲಿದೆ.ಬಾಕ್ಸ್...
ಭೂ ಪರಿಹಾರಕ್ಕಾಗಿ ₹21 ಸಾವಿರ ಕೋಟಿ
ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ (ಬೆಂಗಳೂರು ಬಿಸಿನೆಸ್ ಕಾರಿಡಾರ್) ಸರ್ಕಾರಿ ಖಾತರಿ ಮೂಲಕ ಸಾಲ ಪಡೆಯಲಾಗಿದೆ. ₹27 ಸಾವಿರ ಕೋಟಿ ಸಾಲ ನೀಡಲು ಹುಡ್ಕೊ ಸಮ್ಮತಿಸಿದೆ. ಇದರಲ್ಲಿ ಭೂ ಪರಿಹಾರಕ್ಕೆ ₹21 ಸಾವಿರ ಕೋಟಿ ಹಾಗೂ ರಸ್ತೆ ನಿರ್ಮಾಣಕ್ಕೆ ₹6 ಸಾವಿರ ಕೋಟಿ ವೆಚ್ಚವಾಗಲಿದೆ. ಕೇವಲ ಟೋಲ್ ಸಂಗ್ರಹದಿಂದ ಸಾಲ ಮರುಪಾವತಿ ಕಷ್ಟ. ಹೀಗಾಗಿ ಕಾರಿಡಾರ್‌ನ ಎರಡೂ ಬದಿಯ ಜಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿಡಲು ಚಿಂತಿಸಲಾಗಿದೆ.
ಯೋಜನೆ ಪೂರ್ಣಕ್ಕೆ ಮೂರು ವರ್ಷ ಬೇಕಾಗಲಿದ್ದು ಬಿಡಿಎ ಪಡೆದ ಸಾಲದ ಬಡ್ಡಿಯನ್ನು ಸರ್ಕಾರವೇ ನಾಲ್ಕು ವರ್ಷ ಭರಿಸಲಿದೆ. ಆ ಅವಧಿಯೊಳಗೆ ಸಾಲ ಮರುಪಾವತಿಸಬೇಕು. ಇಲ್ಲವಾದಲ್ಲಿ ಸಾಲ ಮತ್ತು ಬಾಕಿ ಬಡ್ಡಿಯನ್ನು ಪ್ರಾಧಿಕಾರವೇ ಪಾವತಿಸಬೇಕಾಗುತ್ತದೆ. ಹೊಸ ಬಡಾವಣೆಗಳ ನಿರ್ಮಾಣ, ವಾಣಿಜ್ಯ ಉದ್ದೇಶಗಳಿಗೆ ಭೂಮಿ ಮೀಸಲಿಡುವ ಮೂಲಕ ಆದಾಯ ಮೂಲಗಳನ್ನು ಕಂಡುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.