ಸಾರಾಂಶ
ಪ್ರತಿ ಪರೀಕ್ಷೆಗೂ ಶೈಕ್ಷಣಿಕ ದಾಖಲೆ ಅಪ್‌ಲೋಡ್ ಮಾಡಬೇಕಾಗಿಲ್ಲ. ಕೆಪಿಎಸ್ಸಿ ಉದ್ಯೋಗ್ ತಂತ್ರಾಂಶದಿಂದ ಒಂದು ಬಾರಿ ನೋಂದಣಿ.
ಮಂಜುನಾಥ ನಾಗಲೀಕರ್ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಹುದ್ದೆಗಳಿಗೆ ಒಂದು ಬಾರಿ ನೋಂದಣಿ (ಒಟಿಆರ್) ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪ್ರತಿ ಸಲವೂ ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್ ಮಾಡುವುದಕ್ಕೆ ಮುಕ್ತಿ ನೀಡಲಾಗಿದೆ.‘ಸೆಂಟರ್ ಆಫ್ ಇ ಗವರ್ನೆನ್ಸ್’ ಮೂಲಕ ‘ಕೆಪಿಎಸ್‌ಸಿ ಉದ್ಯೋಗ್’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಅಭ್ಯರ್ಥಿಗಳು ಒಂದು ಬಾರಿ ನೋಂದಣಿಗಾಗಿ ಪ್ರೊಫೈಲ್ ಕ್ರಿಯೆಟ್ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಶೈಕ್ಷಣಿಕ, ಮತ್ತಿತರ ದಾಖಲೆಗಳು, ಅವುಗಳ ನಂಬರ್ ಅಪ್‌ಲೋಡ್ ಮಾಡಬೇಕು. ಮುಂದಿನ ಬಾರಿ ಮತ್ತೊಂದು ಹುದ್ದೆಗೆ ಅರ್ಜಿ ಸಲ್ಲಿಸುವಾಗ ಒಟಿಆರ್ ಸಂಖ್ಯೆ ನೀಡಿ ಲಾಗಿನ್ ಆಗಬೇಕು. ನಿರ್ದಿಷ್ಟ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಕೇಳುವ ದಾಖಲೆ ಸಂಖ್ಯೆಯನ್ನು ನೀಡಿದರೆ ಸಾಕು.‘ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಜಾತಿ ಪ್ರಮಾಣಪತ್ರ ಸೇರಿದಂತೆ ಪ್ರತಿಯೊಂದು ದಾಖಲೆಗೂ ನೋಂದಣಿ ಸಂಖ್ಯೆ ಇರುತ್ತದೆ. ಅದನ್ನು ಎಂಟ್ರಿ ಮಾಡಿದರೆ ಸಾಕು. ದಾಖಲೆ ಅಪ್‌ಲೋಡ್ ಮಾಡಬೇಕಿಲ್ಲ. ಅಭ್ಯರ್ಥಿಗಳ ಸಮಯ ಉಳಿತಾಯವಾಗುತ್ತದೆ. ಒಬಿಸಿ ಅಭ್ಯರ್ಥಿಗಳ ಜಾತಿ ಪ್ರಮಾಣಪತ್ರ ಸೇರಿದಂತೆ ಕೆಲವು ದಾಖಲೆಗಳಿಗೆ ಮಾತ್ರ ನಿರ್ದಿಷ್ಟ ಅವಧಿ ಇರುತ್ತದೆ. ಅಂತಹ ದಾಖಲೆಗಳ ಅವಧಿ ಮುಗಿದ ಬಳಿಕ ಹೊಸದಾಗಿ ಅಪ್‌ಲೋಡ್ ಮಾಡಬೇಕು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ತಿಳಿಸಿದರು.‘ಕಳೆದ ತಿಂಗಳಲ್ಲಿ ಅರ್ಜಿ ಸಲ್ಲಿಕೆ ಅವಧಿ ಮುಗಿದಿರುವ ವಾಣಿಜ್ಯ ತೆರಿಗೆ ಪರಿವೀಕ್ಷಕರು(ಸಿಟಿಒ), ಸಹಾಯಕ ಉದ್ಯೋಗಾಧಿಕಾರಿ ಹುದ್ದೆಗಳಿಗೆ ಒಟಿಆರ್ ಮೂಲಕ ಅರ್ಜಿ ಸ್ವೀಕರಿಸಲಾಗಿದೆ. ಸಿಟಿಒ ಹುದ್ದೆಗಳಿಗೆ 1.60 ಲಕ್ಷ ಅರ್ಜಿ ಬಂದಿವೆ. ಅರ್ಜಿ ಸಲ್ಲಿಸಿದವರು ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ’ ಎಂದು ಲತಾ ಕುಮಾರಿ ತಿಳಿಸಿದರು.
ಗ್ರಾಮಾಂತರ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲ:ಕೆಪಿಎಸ್‌ಸಿ ವರ್ಷಪೂರ್ತಿ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತದೆ. ಅಭ್ಯರ್ಥಿಗಳು ಪ್ರತಿ ಬಾರಿ ಅರ್ಜಿ ಸಲ್ಲಿಸುವಾಗಲೂ ಸಹಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಜಾತಿ ಪ್ರಮಾಣಪತ್ರ, ವಿಶೇಷ ಚೇತನ, ಕನ್ನಡ ಮಾಧ್ಯಮ ಸೇರಿದಂತೆ ಹಲವು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಿತ್ತು. ಈ ವ್ಯವಸ್ಥೆಯು ಗ್ರಾಮಾಂತರ ಪ್ರದೇಶಗಳ ಅಭ್ಯರ್ಥಿಗಳಿಗೆ ತಲೆ ನೋವುಂಟು ಮಾಡುತ್ತಿತ್ತು. ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗಳು ಸೈಬರ್ ಸೆಂಟರ್‌ಗಳನ್ನು ಅವಲಂಬಿಸಿದ್ದಾರೆ. ಇಂಟರ್ನೆಟ್ ಸಮಸ್ಯೆ, ಸರ್ವರ್ ಡೌನ್ ಸೇರಿದಂತೆ ಅನೇಕ ಕಾರಣಗಳಿಂದ ಅಭ್ಯರ್ಥಿಗಳಿಗೆ ಗಂಟೆ ಗಟ್ಟಲೇ, ಕೆಲವೊಮ್ಮೆ ದಿನವಿಡೀ ಕಾಯಬೇಕಾಗಿತ್ತು.ಕೋಟ್...ವ್ಯವಸ್ಥೆಯನ್ನು ಸರಳೀಕರಣ ಮಾಡಲು, ತ್ವರಿತಗೊಳಿಸಲು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೆಪಿಎಸ್‌ಸಿ ಉದ್ಯೋಗ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗಿದೆ. ಒಂದು ಬಾರಿ ನೋಂದಣಿ (ಒಟಿಆರ್) ಮಾಡಿ ದಾಖಲೆಗಳನ್ನು ಒಮ್ಮೆ ಅಪ್‌ಲೋಡ್ ಮಾಡಿದರೆ ಸಾಕು.- ಕೆ.ಎಸ್. ಲತಾ ಕುಮಾರಿ, ಕಾರ್ಯದರ್ಶಿ, ಕೆಪಿಎಸ್‌ಸಿ