ಪೋಸ್ಟಾಫೀಸಾ, ಬ್ಯಾಂಕಾ.. ? ದುಡ್ಡಿಡೋಕೆ ಲಾಭದಾಯಕ ಜಾಗ ಯಾವುದು : ಇಲ್ಲಿದೆ ಉತ್ತರ

| N/A | Published : Jul 08 2025, 12:39 PM IST

How to use silver coin and rice as money magnet
ಪೋಸ್ಟಾಫೀಸಾ, ಬ್ಯಾಂಕಾ.. ? ದುಡ್ಡಿಡೋಕೆ ಲಾಭದಾಯಕ ಜಾಗ ಯಾವುದು : ಇಲ್ಲಿದೆ ಉತ್ತರ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕಿನಲ್ಲಿ ಫಿಕ್ಸ್‌ಡ್‌ ಡೆಪಾಸಿಟ್‌ ಇಟ್ಟರೆ ಒಳ್ಳೆಯದಾ ಅಥವಾ ಪೋಸ್ಟ್‌ ಆಫೀಸ್‌ನಲ್ಲಿ ದುಡ್ಡಿಡುವುದು ಲಾಭದಾಯಕವಾ ಎಂಬ ಪ್ರಶ್ನೆಗೆ ಉತ್ತರ ಈ ಬರಹದಲ್ಲಿದೆ.

ಮಧ್ಯಮ ವರ್ಗದ ಹಲವರು ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಸುರಕ್ಷಿತ ಮತ್ತು ತಕ್ಕಮಟ್ಟಿನ ಉಳಿತಾಯವೂ ಆಗುತ್ತದೆ ಎಂಬ ಮನಸ್ಥಿತಿಯಿಂದ ಹೊರಬರುತ್ತಿದ್ದಾರೆ. ಇದಕ್ಕೆ ಕಾರಣ ಫಿಕ್ಸ್‌ಡ್‌ ಡೆಪಾಸಿಟ್‌ಗೆ ಇಳಿಯುತ್ತಿರುವ ಬಡ್ಡಿದರ. ಇದನ್ನು ಸರಿದೂಗಿಸಲು ಕೆಲವು ಸಣ್ಣ ಹೂಡಿಕೆದಾರರು, ಅದರಲ್ಲೂ ಹಿರಿಯ ನಾಗರಿಕರು ಪೋಸ್ಟ್‌ ಆಫೀಸಿಗೆ ಎಡತಾಕುತ್ತಿದ್ದಾರೆ. ಕಾರಣ ಪೋಸ್ಟ್‌ ಆಫೀಸ್‌ಗಳ ಕೆಲವು ಸ್ಕೀಮ್‌ಗಳ ಬಡ್ಡಿದರ. ವಿವಿಧ ಸ್ಕೀಮ್‌ಗಳಿಗಿಲ್ಲಿ ಶೇ. 8.2ರವರೆಗೂ ಬಡ್ಡಿದರ ಸಿಗುತ್ತಿದೆ. ಹೀಗೆ ಉತ್ತಮ ಬಡ್ಡಿದರ ಒದಗಿಸುವ ಕೆಲವು ಯೋಜನೆಗಳ ವಿವರ ಇಲ್ಲಿದೆ-

1. ಪೋಸ್ಟ್ ಆಫೀಸ್‌ ಟೈಮ್‌ ಡೆಪಾಸಿಟ್‌

5 ವರ್ಷಗಳ ಸ್ಕೀಮ್‌. ಎಲ್ಲಾ ವಯೋಮಾನದವರೂ ಹೂಡಿಕೆ ಮಾಡಬಹುದು. ಬಡ್ಡಿದರ ಶೇ.7.5. ಇದಕ್ಕೂ ಕಡಿಮೆ ಅವಧಿಯ ಕೆಲವು ಸ್ಕೀಮ್‌ಗಳೂ ಈ ವಿಭಾಗದಲ್ಲಿವೆ. 1 ವರ್ಷ, 2 ವರ್ಷ, 3 ವರ್ಷಗಳ ಅವಧಿಯ ಪ್ಲಾನ್‌ಗಳಿಗೆ ಅನುಕ್ರಮವಾಗಿ ಶೇ. 6.9, ಶೇ.7 ಹಾಗೂ ಶೇ.7.1 ರಷ್ಟು ಬಡ್ಡಿ ಇದೆ.

2. ನ್ಯಾಷನಲ್‌ ಸೇವಿಂಗ್ಸ್‌ ಸರ್ಟಿಫಿಕೆಟ್‌ (ಎನ್‌ಎಸ್‌ಸಿ)

ಸರ್ಕಾರ ಎನ್‌ಎಸ್‌ಸಿ ಬಡ್ಡಿದರವನ್ನು ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿಟ್ಟಿದೆ. ಇದರಲ್ಲಿ ನೀವು 5 ವರ್ಷಗಳ ಹೂಡಿಕೆ ಮಾಡಿದರೆ ಶೇ.7.7ರಷ್ಟು ಬಡ್ಡಿದರ ಪಡೆಯಬಹುದು.

3. ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌

ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ನಲ್ಲಿ ಆಕರ್ಷಕ ಶೇ.8.2ರಷ್ಟು ಬಡ್ಡಿದರವಿದೆ. ಆದರೆ ಇದು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಅನ್ವಯವಾಗುವಂಥದ್ದು.

ಬ್ಯಾಂಕ್‌ಗಳ ಎಫ್‌ಡಿ ಪ್ಲಾನ್‌ಗಳು

ಐದು ವರ್ಷಗಳ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಫ್‌ಡಿಯಲ್ಲಿ ಹೂಡಿಕೆ ಮಾಡಿದರೆ 6.3ರಷ್ಟು ಬಡ್ಡಿದರ ಪಡೆಯಬಹುದು. ಹಿರಿಯ ನಾಗರಿಕರಿಗೆ ಶೇ. 6.8ರಷ್ಟು ಬಡ್ಡಿ ದರ ಇರುತ್ತದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಎಫ್‌ಡಿ ಸ್ಕೀಮ್‌ ನೋಡಿದರೆ 5 ವರ್ಷಗಳ ಅವಧಿಯ ಹೂಡಿಕೆಗೆ ಹಿರಿಯ ನಾಗರಿಕರಿಗೆ ಶೇ.6.9ರಷ್ಟು ಬಡ್ಡಿದರವಿದ್ದರೆ, ಸಾಮಾನ್ಯರು 6.4ರಷ್ಟು ಬಡ್ಡಿ ಪಡೆಯಬಹುದು.

ಐಸಿಐಸಿಐ ಬ್ಯಾಂಕ್‌ನ ಬಡ್ಡಿದರ ಶೇ.6.6 ಇದೆ. ಇದು ಹಿರಿಯ ನಾಗರಿಕರಿಗೆ ಶೇ.7.1ರಷ್ಟಿದೆ.

ಆಸಕ್ತರು ಇವುಗಳನ್ನು ತುಲನೆ ಮಾಡಿ ನೋಡಬಹುದು. ಅಲ್ಲದೇ ಪೋಸ್ಟ್‌ ಆಫೀಸ್‌ ಸ್ಕೀಮ್‌ಗಳಿಗೆ ಭಾರತ ಸರ್ಕಾರದ ಅಧಿಕೃತ ಮಾನ್ಯತೆ ಇದೆ. ಹೀಗಾಗಿ ಇವನ್ನು ಸಂಪೂರ್ಣ ಸುರಕ್ಷಿತ ಎಂದು ಭಾವಿಸಬಹುದು. ಇದರಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಕಳೆದುಕೊಳ್ಳುವ ಭಯ ಇಲ್ಲ. ಅದೇ ಬ್ಯಾಂಕ್‌ಗಳ ಎಫ್‌ಡಿ ಖಾತೆಗಳೂ ಸುರಕ್ಷಿತವೇ. ಆದರೆ ಇದರಲ್ಲಿ ಕೆಲವು ಮಿತಿಗಳೂ ಇವೆ. ಹೆಚ್ಚಿನೆಲ್ಲ ಬ್ಯಾಂಕ್‌ಗಳು ಇನ್ಶೂರೆನ್ಸ್‌ಗಳಲ್ಲಿ ಹಾಗೂ ಕ್ರೆಡಿಟ್‌ ಗ್ಯಾರಂಟಿ ಕಾರ್ಪೋರೇಶನ್‌ಗಳಲ್ಲಿ ಠೇವಣಿ ಇಡುತ್ತವೆ. ಇದರಿಂದ ಪ್ರಯೋಜನ ಏನೆಂದರೆ ಅವಘಡಗಳಾದಾಗ ಈ ಪ್ಲಾನ್‌ನಲ್ಲಿ ಹಣ ಹೂಡಿದವರು 5 ಲಕ್ಷ ರು.ಗಳವರೆಗೆ ಪರಿಹಾರ ಪಡೆಯಬಹುದು.

Read more Articles on