ಇದು ಗ್ರೀಕ್ ದೇವತೆ ಹೆಸರು. ಇದೇ ಹೆಸರಿನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವಿಶ್ವಾದ್ಯಂತದ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತರಬೇತಿಯೊಂದು ನಡೆಯುತ್ತದೆ. ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತರಾದ ವಿದ್ಯಾರ್ಥಿಗಳು ಭಾಗಿಯಾಗುತ್ತಾರೆ. ಇದಕ್ಕೆ ಬಹಳ ಕಷ್ಟಕರವಾದ ಆನೇಕ ಹಂತಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಪ್ರಿಯಾ ಕೆರ್ವಾಶೆ
ಆಸ್‌ಕ್ಲೆಪಿಯೋಸ್:
ಇದು ಗ್ರೀಕ್ ದೇವತೆ ಹೆಸರು. ಇದೇ ಹೆಸರಿನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ವಿಶ್ವಾದ್ಯಂತದ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತರಬೇತಿಯೊಂದು ನಡೆಯುತ್ತದೆ. ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತರಾದ ವಿದ್ಯಾರ್ಥಿಗಳು ಭಾಗಿಯಾಗುತ್ತಾರೆ. ಇದಕ್ಕೆ ಬಹಳ ಕಷ್ಟಕರವಾದ ಆನೇಕ ಹಂತಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ. ಈ ಅಗ್ನಿದಿವ್ಯಗಳನ್ನೆಲ್ಲ ಹಾದು ಅಂತಿಮ ಹಂತ ತಲುಪುವುದು ಕೇವಲ 10 ಮಂದಿ ವಿದ್ಯಾರ್ಥಿಗಳು ಮಾತ್ರ. ಸ್ವಿಟ್ಜರ್ಲೆಂಡ್‌ನ ಅಲ್ಫ್ ಪರ್ವತ ಶ್ರೇಣಿಯಲ್ಲಿ ಇವರಿಗೆ ಸ್ಪೇಸ್ ಸ್ಟೇಶನ್‌ನಲ್ಲಿ ಇರುವಂಥದ್ದೇ ವಾತಾವರಣ ನಿರ್ಮಿಸಿ ಶಿಸ್ತುಬದ್ಧವಾದ ಕಠಿಣ ತರಬೇತಿ ನೀಡಲಾಗುತ್ತದೆ.
ಈ ತರಬೇತಿ ಶುರುವಾದ ಏಳೆಂಟು ವರ್ಷಗಳಲ್ಲಿ ಯಾರೊಬ್ಬ ಭಾರತೀಯರೂ ಇದಕ್ಕೆ ಆಯ್ಕೆ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಕನ್ನಡತಿ ಪ್ರೀತಾ ಜೈಪಾಲ್ ಆಯ್ಕೆಯಾಗಿದ್ದಾರೆ. ಈ ಮೂಲಕ ಆಸ್‌ಕ್ಲೆಪಿಯೋಸ್ ಪ್ರಾಜೆಕ್ಟ್‌ನ ಬಾಹ್ಯಾಕಾಶ ತರಬೇತಿಗೆ ಆಯ್ಕೆಯಾದ ಏಕೈಕ ಭಾರತೀಯ ಪ್ರಜೆಯಾಗಿ ಹೊರಹೊಮ್ಮಿದ್ದಾರೆ.
ಹಿನ್ನೆಲೆ ಏನು?:
23ರ ಹರೆಯದ ಪ್ರೀತಾ ಸದ್ಯ ಬೆಂಗಳೂರಿನ ಐಐಎಸ್ಸಿಯಲ್ಲಿ ಸಂಶೋಧಕಿಯಾಗಿದ್ದಾರೆ. ಮಹಿಳೆಯರಿಗೆ ಗರ್ಭಾವಸ್ಥೆ ಹಾಗೂ ಹೆರಿಗೆಯ ಬಳಿಕ ಬರುವ ಡಯಾಬಿಟಿಸನ್ನು ಮುಂಚಿತವಾಗಿಯೇ ಪತ್ತೆಹಚ್ಚುವ ಎಐ ಟೆಕ್ನಾಲಜಿ ಮೇಲೆ ಸಂಶೋಧನೆ ಮಾಡುತ್ತಿದ್ದಾರೆ. ಇವರು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ನಲ್ಲಿ ಬಿ.ಟೆಕ್ ಪದವಿ ಪಡೆಯುತ್ತಿರುವಾಗ ‘ಆಸ್‌ಕ್ಲೆಪಿಯೋಸ್’ ಪ್ರಾಜೆಕ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದು ವಿದ್ಯಾರ್ಥಿಗಳಿಗಷ್ಟೇ ಇರುವ ಯೋಜನೆ ಆಗಿರುವುದು ಇದಕ್ಕೆ ಕಾರಣ.
ಪ್ರೀತಾ ಮಣಿಪಾಲ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿನಿ ಆಗಿದ್ದಾಗ ‘ಮಾರ್ಸ್ ರೋವರ್ ಮಣಿಪಾಲ್’ ತಂಡದಲ್ಲಿ ಸಕ್ರಿಯರಾಗಿದ್ದರು. ಮಂಗಳ ಗ್ರಹದಲ್ಲಿ ಜೀವಿಗಳಿವೆಯೇ ಎಂದು ಸ್ವಯಂಚಾಲಿತವಾಗಿ ಪತ್ತೆ ಹಚ್ಚುವ ಉಪಕರಣಗಳನ್ನು ವಿನ್ಯಾಸಗೊಳಿಸಿದ್ದರು. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಬಂದಿತ್ತು. ಮೊದಲ ಸಲ ಆಸ್‌ಕ್ಲೆಪಿಯೋಸ್ ಎಂಬ ಬಾಹ್ಯಾಕಾಶ ತರಬೇತಿಯ ಬಗೆಗೆ ತಿಳಿದದ್ದು ಇಲ್ಲೇ. ಆ ತಂಡದವರಿಗೆ ಅಲ್ಲಿ ಮೊದಲ ಬಹುಮಾನ ಬಂದಿತ್ತು. ಆಗಲೇ ಈ ಪ್ರಾಜೆಕ್ಟ್‌ನಲ್ಲಿ ತಾನು ತರಬೇತಿ ಪಡೆಯಬೇಕು ಎಂಬ ಕನಸು ಪ್ರೀತಾರಲ್ಲಿ ಮೊಳಕೆಯೊಡೆಯಿತು. ಸ್ಪರ್ಧೆ ಮುಗಿಸಿ ಬಂದಮೇಲೆ ಅವರು ಮಾಡಿದ ಮೊದಲ ಕೆಲಸ ಈ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಮತ್ತು ಅದಕ್ಕೆ ಅರ್ಜಿ ಸಲ್ಲಿಸಿದ್ದು.
ಆಸ್‌ಕ್ಲೆಪಿಯೋಸ್ ಪ್ರಾಜೆಕ್ಟ್ ಸಂಪೂರ್ಣ ಉಚಿತ:
ಜಗತ್ತಿನಲ್ಲಿ ಬಾಹ್ಯಾಕಾಶ ತರಬೇತಿ ನೀಡುವ ಕೆಲವೊಂದು ಸಂಸ್ಥೆಗಳು ಇವೆ. ಆದರೆ ಅವು ಬಹಳ ದುಬಾರಿ. ಅಮೆರಿಕದ ‘ಮಾರ್ಸ್ ಡೆಸರ್ಟ್ ರಿಸರ್ಚ್ ಸ್ಟೇಷನ್’ ಅಥವಾ ಪೋಲೆಂಡ್‌ನ ‘ಅನಲಾಗ್ ಆಸ್ಟ್ರೋನಾಟ್ ಟ್ರೇನಿಂಗ್ ಸೆಂಟರ್’ಗಳಲ್ಲಿ ತರಬೇತಿ ಪಡೆಯಬೇಕೆಂದರೆ ಸಾಕಷ್ಟು ಶುಲ್ಕ ತೆರಬೇಕಾಗುತ್ತದೆ.
ಸ್ವಿಟ್ಜರ್ಲೆಂಡ್‌ನ ಈ ‘ಆಸ್‌ಕ್ಲೆಪಿಯೋಸ್’ ಪ್ರಾಜೆಕ್ಟ್ ಸಂಪೂರ್ಣವಾಗಿ ಉಚಿತ. ಅಂತಿಮ ಹಂತಕ್ಕೆ ಬಂದರೆ ಸ್ವಿಟ್ಜರ್‌ಲ್ಯಾಂಡ್‌ಗೆ ಓಡಾಡುವ ಖರ್ಚನ್ನು ವಿದ್ಯಾರ್ಥಿಗಳು ಭರಿಸಬೇಕು, ಅಷ್ಟೇ. ಅದಕ್ಕೂ ಕಷ್ಟವಾದರೆ ಸ್ಪಾನ್ಸರ್‌ಶಿಪ್ ಮೂಲಕ ಈ ವೆಚ್ಚವನ್ನು ಸರಿದೂಗಿಸಬಹುದು. ಪ್ರೀತಾ ವಿದ್ಯಾರ್ಥಿನಿ ಆಗಿದ್ದಾಗಲೇ ಉದ್ಯೋಗವನ್ನೂ ಮಾಡಿ ಕೂಡಿಟ್ಟ ಹಣದಲ್ಲಿ ಈ ವೆಚ್ಚ ಸರಿದೂಗಿಸಿದ್ದರು. ಈ ತರಬೇತಿಯನ್ನು ಪಡೆಯಲು ಕಠಿಣ ಪರೀಕ್ಷೆಗಳನ್ನು ಪಾಸಾಗಲೇಬೇಕು. ಹೀಗಾಗಿ ಈ ಪ್ರಾಜೆಕ್ಟ್‌ಗೆ ಮಾನ್ಯತೆ ಹೆಚ್ಚು. ಪ್ರಪಂಚದಾದ್ಯಂತದಿಂದ ಅರ್ಜಿ ಸಲ್ಲಿಸಿದ್ದ ನೂರಾರು ಅಭ್ಯರ್ಥಿಗಳನ್ನು ಹಿಂದಿಕ್ಕಿ, ಪ್ರೀತಾ ತನ್ನ ಪ್ರತಿಭೆ, ಜಾಣ್ಮೆ, ಅಪಾರ ಜ್ಞಾನದ ಮೂಲಕ ಈ ಪ್ರಾಜೆಕ್ಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವುದೇ ಹೆಚ್ಚುಗಾರಿಕೆ.
ಕಠಿಣ ಆಯ್ಕೆ ಪ್ರಕ್ರಿಯೆ:
ಈ ಸ್ಥಾನವನ್ನು ಪಡೆಯಲು ಪ್ರೀತಾ 6 ತಿಂಗಳ ಕಾಲ ಅನೇಕ ಪರೀಕ್ಷೆಗಳನ್ನು ಎದುರಿಸಿದ್ದಾರೆ.
ಆರಂಭಿಕ ಹಂತದಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆ, ಆಸಕ್ತಿಯ ಕ್ಷೇತ್ರ, ಕಠಿಣ ದೈಹಿಕ ಫಿಟ್‌ನೆಸ್ ಪ್ರಮಾಣಪತ್ರಗಳ ಪರಿಶೀಲನೆ ನಡೆಯುತ್ತದೆ. ಎರಡನೇ ಹಂತದಲ್ಲಿ ಹೊಂದಾಣಿಕೆಯ ಗುಣ, ಸ್ಪಷ್ಟ ಸಂವಹನ ಮತ್ತು ಜಗತ್ತಿನ ಬೇರೆ ಬೇರೆ ಪ್ರದೇಶಗಳಿಂದ ಬಂದ ಜನರ ಜೊತೆ ಕೆಲಸ ಮಾಡುವ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ. ಇದನ್ನು ನುರಿತ ಸೈಕಾಲಜಿಸ್ಟ್‌ಗಳು ಮಾಡುತ್ತಾರೆ.
ಮೂರನೇ ಹಂತದಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಪರೀಕ್ಷೆಗಳ ಮಾದರಿಯಲ್ಲೇ ಆನ್‌ಲೈನ್ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ವಸ್ತು ವಿಚಾರಗಳನ್ನು ತಾರ್ಕಿಕವಾಗಿ ಗ್ರಹಿಸುವ ಬಗೆ, ನೆನಪಿನ ಶಕ್ತಿಯನ್ನು ಟೆಸ್ಟ್ ಮಾಡುತ್ತಾರೆ. ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಕೆಲಸ ಕೊಟ್ಟು ಬಹಳ ಒತ್ತಡದಲ್ಲಿ ಕೆಲಸ ಮಾಡುವ ವಾತಾವರಣ ಸೃಷ್ಟಿಸುತ್ತಾರೆ. ಇದನ್ನು ವಿದ್ಯಾರ್ಥಿಗಳು ಹೇಗೆ ನಿಭಾಯಿಸುತ್ತಾರೆ ಎಂದು ಪರಿಶೀಲಿಸುತ್ತಾರೆ.
ಇವಿಷ್ಟೂ ಆನ್‌ಲೈನ್‌ನಲ್ಲಿ ನಡೆದರೆ ನಾಲ್ಕನೇ ಹಂತದ ಪರೀಕ್ಷೆಯನ್ನು ನೇರಾನೇರ ನಡೆಸುತ್ತಾರೆ. ‘ನಮಗೆ ತೀವ್ರ ಆಯಾಸವಾಗುವಂಥಾ ಟಾಸ್ಕ್‌ಗಳಿರುತ್ತಿದ್ದವು. ಅವರು ಕೊಡುವ ಚಾಲೆಂಜ್‌ಗಳಿಗೆ ಎದುರಾಗಿ ನಾವು ತಂಡದಲ್ಲಿ ಹೇಗೆ ಕೆಲಸ ಮಾಡುತ್ತೇವೆ ಎಂಬುದನ್ನು ನೇರವಾಗಿ ಪರೀಕ್ಷೆ ಮಾಡುತ್ತಿದ್ದರು’ ಅಂತಾರೆ ಪ್ರೀತಾ.
ಈ ಬಗ್ಗೆ ವಿವರಿಸುವ ಅವರು, ‘ಈ ಆಯ್ಕೆ ಪ್ರಕ್ರಿಯೆಯಲ್ಲೇ ಅತ್ಯಂತ ಕಷ್ಟದ ಭಾಗ ಮೆಂಟಲ್ ಸ್ಟ್ರೆಸ್ ಬಗೆಗಿನ ಪರೀಕ್ಷೆ. ದೀರ್ಘಕಾಲದ ಏಕಾಂತವನ್ನು ತಡೆಯುವ ಸಾಮರ್ಥ್ಯ ನಮಗಿದೆಯಾ ಎಂದು ನೋಡಲು, ಸೈಕಾಲಜಿಸ್ಟ್‌ಗಳು ಬಹಳ ಕಷ್ಟದ ಟಾಸ್ಕ್ ಕೊಡುತ್ತಿದ್ದರು. ಅವರು ಕೊಟ್ಟ ಕೆಲಸ ಮಾಡುತ್ತಿರುವಾಗ ಪದೇ ಪದೇ ಬದಲಾವಣೆ ಹೇಳುತ್ತಿದ್ದರು. ಯಾವುದೇ ಮಾಹಿತಿ ಕೈಗೆ ಸಿಗದಂತೆ ಮಾಡುತ್ತಿದ್ದರು. ಹೀಗೆ ಗೊಂದಲ ಸೃಷ್ಟಿಸಿದಾಗ ವಿದ್ಯಾರ್ಥಿಗಳು ಭಯಪಡದೆ, ತಾಳ್ಮೆಯಿಂದ ಹೇಗೆ ಕೆಲಸ ಮಾಡುತ್ತಾರೆ ಎಂದು ಪರೀಕ್ಷಿಸುವುದು ಇದರ ಉದ್ದೇಶವಾಗಿತ್ತು. ಕೋಪವನ್ನು ಹದ್ದುಬಸ್ತಿನಲ್ಲಿಡುವುದು, ಆತಂಕ ಪಡದಿರುವುದು, ಟೀಂ ಒಳಗಿನ ಜಗಳಗಳನ್ನು ಸರಿಪಡಿಸುವುದು... ಹೀಗೆ ಏಕಕಾಲದಲ್ಲಿ ಹೀರೋ ಮತ್ತು ಸೈನಿಕ ಇಬ್ಬರ ಪಾತ್ರವನ್ನೂ ಸುಲಭವಾಗಿ ನಿಭಾಯಿಸುವ ತಾಕತ್ತು ಇದೆಯಾ ಅಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ತಂಡದ ಜೊತೆಗೆ ಬೆರೆಯುವ ಗುಣ ನನಗೆ ಮೊದಲಿನಿಂದಲೂ ಇತ್ತು. ಹೀಗಾಗಿ ನಿಭಾಯಿಸಿದೆ’ ಎನ್ನುತ್ತಾರೆ.
ಒಂದು ವರ್ಷದ ಕಠಿಣ ತರಬೇತಿ:
ಸಾಮಾನ್ಯವಾಗಿ ಬಾಹ್ಯಾಕಾಶ ತರಬೇತಿಯ ಅನಲಾಗ್ ತರಬೇತಿಗಳು 2 ವಾರಗಳಲ್ಲಿ ಮುಗಿದುಹೋಗುತ್ತವೆ. ಆದರೆ ಆಸ್‌ಕ್ಲೆಪಿಯೋಸ್ ಕಾರ್ಯಕ್ರಮ 1 ವರ್ಷದ ಅವಧಿಯದ್ದು. ಪ್ರೀತಾ ಒಂದು ಕಡೆ ಐಐಎಸ್ಸಿಯಲ್ಲಿ ಸಂಶೋಧನೆ ಮಾಡುತ್ತಲೇ ಈ ತರಬೇತಿಯನ್ನೂ ಪಡೆಯಬೇಕಿತ್ತು. ವರ್ಷದ ಕಠಿಣ ತರಬೇತಿಯ ಕೊನೆಯಲ್ಲಿ, ಸ್ವಿಟ್ಜರ್ಲೆಂಡ್‌ನ ಆಲ್ಪ್ಸ್ ಪರ್ವತ ಶ್ರೇಣಿಯ ಕಲ್ಲಿನ ಕೋಟೆಯೊಳಗಿನ ‘ಸಾಸೊ ಸ್ಯಾನ್ ಗೊಟ್ಟಾರ್ಡೊ’ ಮಿಲಿಟರಿ ಬಂಕರ್‌ನಲ್ಲಿ ಏಕಾಂತದ ಪರೀಕ್ಷೆ ಅಂದರೆ ಐಸೋಲೇಶನ್ ಟೆಸ್ಟ್ ನಡೆಯಿತು.
ಚಂದ್ರನ ಮೇಲಿರುವಂತೆಯೇ ಇರುವ ಶೀತಲ ವಾತಾವರಣ, ಎಲ್ಲೆಲ್ಲೂ ಕತ್ತಲೆ, ಉಸಿರುಗಟ್ಟಿಸುವ ವಾತಾವರಣ. ಇದು ಯುರೋಪಿಯನ್ ಯೂನಿವರ್ಸಿಟಿಗಳ ಪ್ರಯೋಗವೂ ಹೌದು. ಅಂದರೆ ಈ ಯೂನಿವರ್ಸಿಟಿಯವರು, ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಪ್ರಯೋಗಕ್ಕೆ ಒಳಪಡಿಸಿ ಬಾಹ್ಯಾಕಾಶದಲ್ಲಿ ಮನುಷ್ಯ ವರ್ತನೆ ಕುರಿತಾಗಿ ಸಂಶೋಧನೆ ನಡೆಸುತ್ತಾರೆ.
ಕಟ್ಟಿಕೊಂಡ ಟಾಯ್ಲೆಟ್:
‘ಅದು ಸಂಪೂರ್ಣ ಸ್ಪೇಸ್ ಸ್ಟೇಶನ್ ಥರದ್ದೇ ವ್ಯವಸ್ಥೆ. ಅಲ್ಲಿ ಯಾವೆಲ್ಲ ರೀತಿಯ ಸಮಸ್ಯೆ ಬರುತ್ತದೋ ಅದೆಲ್ಲ ಇಲ್ಲೂ ಬರುತ್ತಿತ್ತು. ಸ್ವಿಟ್ಜರ್‌ಲ್ಯಾಂಡ್‌ನ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಸುರಂಗ ಕೊರೆದು ನೆಲದೊಳಗೆ ನೂರಾರು ಅಡಿ ಒಳಗೆ ಈ ವಾತಾವರಣ ನಿರ್ಮಿಸಲಾಗಿತ್ತು. ಮಿಲಿಟರಿ ಬಂಕರ್‌ನಂಥಾ ವ್ಯವಸ್ಥೆಯದು. ಹೊರಜಗತ್ತಿನ ಸಣ್ಣ ಸುಳಿವೂ ಸಿಗುತ್ತಿರಲಿಲ್ಲ. ಆ ವಾತಾವರಣದಿಂದ ಆಚೆ ಬರಬೇಕಿದ್ದರೆ ಭಾರವಾದ ಸ್ಪೇಸ್‌ನಲ್ಲಿ ತೊಡುವಂಥಾ ಜಾಕೆಟ್ ತೊಟ್ಟು ಬರಬೇಕಿತ್ತು. ನಾವು ಹತ್ತೂ ಜನರಿಗೆ ಇದ್ದದ್ದು ಒಂದೇ ಒಂದು ಟಾಯ್ಲೆಟ್. ಅದಕ್ಕೆ ಬಾಗಿಲಿರಲಿಲ್ಲ. ಒಂದು ಪರದೆಯಷ್ಟೇ. ಸ್ನಾನ ಇಲ್ಲ, ಸ್ಪಾಂಜ್ ಬಾತ್ ರೀತಿ ಮಾಡಬಹುದಿತ್ತು. ಈ ನಡುವೆ ಒಮ್ಮೆ ನಮ್ಮ ಟಾಯ್ಲೆಟ್ ಕಟ್ಟಿಕೊಂಡು ಬಿಟ್ಟಿತ್ತು. ಅಲ್ಲಿ ಪ್ಲಂಬರ್‌ಗಳನ್ನು ಎಲ್ಲಿ ಹುಡುಕೋದು, ವಿಧಿಯಿಲ್ಲದೇ ನಾವೇ ಸೇರಿ ಅದನ್ನು ಸರಿ ಮಾಡಿದ್ದೆವು. ಬಾಹ್ಯಾಕಾಶದಲ್ಲೂ ಹೀಗಾಗುತ್ತದೆ. ಉಳಿದಂತೆ ನೀರಿನ ಬಳಕೆ ಅತ್ಯಲ್ಪ. ಒಣ ಆಹಾರಗಳನ್ನಷ್ಟೇ ಕೊಡುತ್ತಿದ್ದರು’ ಎಂದು ಪ್ರೀತಾ ವಿವರಿಸುತ್ತಾರೆ.
ಆಕಾಶದಲ್ಲಿ ಕಂಡ ಮಿಲ್ಕಿವೇ:
‘ನಮ್ಮ ತರಬೇತಿ ನಡೆಯುತ್ತಿದ್ದದ್ದು ಆಲ್ಫ್ ಪರ್ವತ ಶ್ರೇಣಿಯಲ್ಲಿ. ಅತ್ಯಂತ ಸ್ವಚ್ಛ ಜಾಗವದು. ಒಮ್ಮೆ ರಾತ್ರಿ ಹೊತ್ತು ನಾವಿದ್ದ ಬಂಕರ್‌ನಿಂದ ಹೊರಬಂದು ಅಲ್ಲಿ ಆಕಾಶ ನೋಡುತ್ತಿದ್ದೆ. ಆಕಾಶ ಕಾಯಗಳು ಸಮೀಪದಿಂದ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಅದೆಷ್ಟು ನಿಚ್ಚಳವಾಗಿತ್ತು ಎಂದರೆ ನಾನು ಜೀವನದಲ್ಲೇ ಮೊತ್ತ ಮೊದಲ ಬಾರಿಗೆ ಸುಸ್ಪಷ್ಟವಾಗಿ ಮಿಲ್ಕಿವೇ (ಹಾಲುಹಾದಿ) ಗೆಲಾಕ್ಸಿಯನ್ನು ನೋಡಿದೆ. ನೋಡುತ್ತ ನೋಡುತ್ತಾ ಬಹಳ ಹೊತ್ತು ಅದರಲ್ಲೇ ಕಳೆದುಹೋಗಿದ್ದೆ’ ಎಂದು ನೆನಪಿಸಿಕೊಂಡ ಪ್ರೀತಾ, ‘ಬೆಂಗಳೂರಿನ ಕಲುಷಿತ ವಾತಾವರಣದಲ್ಲಿ ಇದನ್ನೆಲ್ಲ ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎನ್ನುತ್ತಾರೆ.
ಇಷ್ಟೆಲ್ಲ ಸಾಧನೆ ಮಾಡಿರುವ ಪ್ರೀತಾಗೆ ಒಂದನೇ ಕ್ಲಾಸ್‌ನಲ್ಲಿ ಟೀಚರ್ ಆಕಾಶ ಕಾಯಗಳ ಬಗ್ಗೆ ಹೇಳಿದಾಗ ಮೊಟ್ಟ ಮೊದಲ ಬಾರಿ ಈ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಯಿತು. ಇವರ ಪೋಷಕರಾದ ಡಾ। ಕಲ್ಪನಾ ಹಾಗೂ ಜೈಪಾಲ್ ಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದರು. ಮುಂದೆ ಇವರು ಉನ್ನತ ವ್ಯಾಸಂಗ ಮಾಡಿದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಇವರ ಆಸಕ್ತಿಗೆ ನೀರೆರೆಯಿತು.
ಕನಸಿನ ಹಾದಿಯಲ್ಲೇ ಮುನ್ನಡೆದ ಪ್ರೀತಾಗೆ ಗಗನಯಾನಿ ಆಗಬೇಕು ಅನ್ನುವ ಕನಸಿದೆ. ಇಸ್ರೋ ಭವಿಷ್ಯದಲ್ಲಿ ಆಯೋಜಿಸಲಿರುವ ಗಗನಯಾನದಲ್ಲಿ ಭಾಗವಹಿಸಬೇಕು ಅನ್ನುವುದು ಇವರ ಆಕಾಂಕ್ಷೆ. ಇಷ್ಟನ್ನು ಸಾಧ್ಯವಾಗಿಸಿಕೊಂಡ ತನಗೆ ಅದೂ ಸಾಧ್ಯವಾಗುತ್ತದೆ ಎಂಬುದು ಪ್ರೀತಾರ ಆತ್ಮವಿಶ್ವಾಸ.

