ಬಗರ್ ಹುಕುಂ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಿ
KannadaprabhaNewsNetwork | Published : Oct 10 2023, 01:00 AM IST
ಬಗರ್ ಹುಕುಂ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಿ
ಸಾರಾಂಶ
ಬಗರ್ ಹುಕುಂ ಯೋಜನೆಗೆ ಸಂಬಂಧಿಸಿದಂತೆ ಗುಬ್ಬಿ, ತುರುವೇಕೆರೆ ಹಾಗೂ ಮಧುಗಿರಿ ತಾಲೂಕುಗಳಿಂದ ಮಾತ್ರ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ ತಾಲೂಕುಗಳು ಆದಷ್ಟು ಬೇಗ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು ಬಗರ್ ಹುಕುಂ ಯೋಜನೆಗೆ ಸಂಬಂಧಿಸಿದಂತೆ ಗುಬ್ಬಿ, ತುರುವೇಕೆರೆ ಹಾಗೂ ಮಧುಗಿರಿ ತಾಲೂಕುಗಳಿಂದ ಮಾತ್ರ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ ತಾಲೂಕುಗಳು ಆದಷ್ಟು ಬೇಗ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಗುಬ್ಬಿ, ಕುಣಿಗಲ್, ಕೊರಟಗೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳ ಕಂದಾಯ ನಿರೀಕ್ಷಕರು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯಾನವನ ನಿರ್ಮಿಸಲು ಸ್ಥಳ ಗುರುತಿಸಿ ಪ್ರಸ್ತಾವನೆಯನ್ನು ತಹಶೀಲ್ದಾರರಿಗೆ ಸಲ್ಲಿಸಬೇಕೆಂದು ಹೇಳಿದರು. ಸಂಧ್ಯಾ ಸುರಕ್ಷಾ ಯೋಜನೆಯಡಿ ಸ್ವೀಕೃತಿಯಾಗಿರುವ ಅರ್ಜಿಗಳನ್ನು ತಮ್ಮಲ್ಲಿ ಉಳಿಸಿಕೊಳ್ಳದೆ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು. ಎನ್‌ಪಿಸಿಐ ಅಡಿ ಎಲ್ಲಾ ಪಿಂಚಣಿದಾರರನ್ನು ನೋಂದಾಯಿಸಬೇಕು. ಇಲ್ಲವಾದರೆ ಮುಂದಿನ ತಿಂಗಳಿನಿಂದ ಅವರ ಖಾತೆಗೆ ಪಿಂಚಣಿ ಹಣ ಜಮೆಯಾಗುವುದಿಲ್ಲ. ಆದ್ದರಿಂದ ಎಲ್ಲ ಪಿಂಚಣಿದಾರರ ನೋಂದಣಿಗೆ ಕ್ರಮಕೈಗೊಳ್ಳಬೇಕೆಂದು ಉಪ ತಹಸೀಲ್ದಾರರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ 2023 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಮಾಡುವಲ್ಲಿ ತುರುವೇಕೆರೆ ತಾಲೂಕು ಶೇ.65, ತಿಪಟೂರು ಶೇ.68, ಚಿಕ್ಕನಾಯಕನಹಳ್ಳಿ ಶೇ.78 ಹಾಗೂ ತುಮಕೂರು ತಾಲೂಕು ಶೇ.80 ರಷ್ಟು ಪ್ರಗತಿ ಸಾಧಿಸಿದೆ. ಉಳಿದ ತಾಲೂಕುಗಳು ಶೇ. 95 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿವೆ. ಇನ್ನೊಂದು ದಿನದೊಳಗಾಗಿ ಶೇ. ನೂರರಷ್ಟು ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲ ತಹಸೀಲ್ದಾರರು ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತಗಳನ್ನು ಸ್ವೀಕೃತಿ ಮಾಡಿಕೊಳ್ಳಬೇಕು. ಅಧಿಕಾರಿಗಳು ಕ್ರಮವಹಿಸಬೇಕು. ಯಾವುದೇ ಕಡತಗಳನ್ನು ಭೌತಿಕವಾಗಿ ವಿಲೇವಾರಿ ಮಾಡಬಾರದು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ಆರಾಧನಾ, ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಬೇಕಾದ ದೇವಾಲಯಗಳ ಪ್ರಸ್ತಾವನೆಯನ್ನು ಸಲ್ಲಿಸಿದರೆ ಕ್ರಿಯಾ ಯೋಜನೆಗೆ ಸೇರಿಸಲಾಗುವುದು. ಆದ್ದರಿಂದ ಎಲ್ಲಾ ತಹಸೀಲ್ದಾರರು ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದರು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾಗಿರುವ ಅರ್ಜಿಗಳನ್ನು ಹೆಚ್ಚಿನ ಆದ್ಯತೆ ಮೇರೆಗೆ ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಸೂಚಿಸಿದರು. 2022-23ನೇ ಸಾಲಿನಲ್ಲಿ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ಈವರೆಗೂ ಪ್ರಾರಂಭಿಸದ ಫಲಾನುಭವಿಗಳು ಕೂಡಲೇ ಪ್ರಾರಂಭಿಸುವಂತೆ ಎಲ್ಲಾ ಇ.ಒ.ಗಳು ಕ್ರಮವಹಿಸಬೇಕೆಂದು ಹೇಳಿದರು. ತಹಶೀಲ್ದಾರ್ ಹಂತದಲ್ಲಿರುವ 90 ದಿನಗಳ ಒಳಗಿರುವ ಕೋರ್ಟ್ ಪೆಂಡೆನ್ಸಿ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್ ಉಪಸ್ಥಿತರಿದ್ದರು. ---- ಫೋಟೊ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್.