ಸಾರಾಂಶ
ಬಸವಣ್ಣ, ಪೈಗಂಬರರು ಮಹಾನ್ ಮಾನವತಾ ವಾದಿಗಳು । ಇಬ್ಬರ ನಡುವೆ ಹಲವು ಸಂಗತಿಗಳಲ್ಲಿ ಇದೆ ಸಾಮತ್ಯೆ
ಪೈಗಂಬರರು ಸಾವಿಗಿಂತ ಮೊದಲು ಸಾವಿನ ತಯಾರಿ ಮಾಡಿಕೊ ಎನ್ನುವ ಸಂದೇಶವನ್ನು ಕೊಡುತ್ತಾರೆ. ಸಾವಿನ ಮೊದಲು ಸಾವಿನ ತಯಾರಿ? ಇದು ಕೋವಿಡ್ ಬಂದಾಗ ಎಲ್ಲರೂ ಜೀವಕ್ಕೆ ಹೆದರಿ ಜೀವ ಉಳಿಸಿಕೊಳ್ಳಲು ಎಲ್ಲ ತರಹದ ಮುನ್ನೆಚ್ಚರಿಕೆಗಳನ್ನು ಮಾಡಿಕೊಂಡಿದ್ದೆವು. ಅದೇ ತರಹ ನಮ್ಮ ಹಾಗೂ ಜಗತ್ತಿನ ಅಂತ್ಯದ ಬಗ್ಗೆ ಚರ್ಚಿಸಿದ್ದೆವು.
-ಡಾ॥ ಮೊಹಮ್ಮದ ಅಶ್ರಫ್ ದ ಸಮುದ್ರಿ, ಪ್ರಾಧ್ಯಾಪಕರು,
ಡಿಜಿಎಮ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಗದಗ.
ಮಹಮ್ಮದ ಪೈಗಂಬರರು ಹಾಗೂ ಬಸವಣ್ಣನವರು ಜಗತ್ತು ಕಂಡ ಮಹಾನ್ ಮಾನವತಾವಾದಿಗಳು. ಇವರು ಸಮಾಜದಲ್ಲಿ ಇರುವ ಅಸಮಾನತೆ ಹಾಗೂ ಅನ್ಯಾಯಗಳನ್ನು ವಿರೋಧಿಸಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ವಿಶ್ವಮಾನವರಾಗಿ ಜನರ ಹೃದಯದಲ್ಲಿ ಶಾಶ್ವತವಾಗಿ ವಿರಾಜಮಾನರಾಗಿದ್ದಾರೆ. ಇವರು ಕೇವಲ ಬೋಧನೆಗೆ ಸೀಮಿತರಾಗದೆ ತಮ್ಮ ತತ್ವಸಿದ್ಧಾಂತಗಳನ್ನು ಆಚರಣೆಗೆ ತಂದು ಅವುಗಳ ವಾಸ್ತವಿಕತೆಯನ್ನು ಸಾರಿ ಹೇಳಿದ್ದಾರೆ. ಇವರಿಬ್ಬರ ಉಪದೇಶ ಹಾಗೂ ಉದ್ದೇಶಗಳು ಒಂದೇ ಎಂದು ತಿಳಿದುಬರುತ್ತದೆ. ಮಹಮ್ಮದ ಪೈಗಂಬರರ (ಸ್ವ.ಅ.ಸ್ವ ) ಜನ್ಮದಿನಾಚರಣೆಯ ನಿಮಿತ್ತ ಪರಧರ್ಮ ಸಹಿಷ್ಣುತೆ ಎತ್ತಿಹಿಡಿಯಲು ಒಂದು ಸಣ್ಣ ಪ್ರಯತ್ನ ಇದಾಗಿದೆ.
ಸ್ವಾರ್ಥ, ಶೇಖರಣೆ:
ಭೋಗದ ಅನುಭವದಲ್ಲಿ ತೇಲಾಡುತ್ತಾ, ನಾಳೆಯನ್ನು ಹಾಗೂ ಮುಂದೆ ಘಟಿಸುವ ಘಟನೆಗಳನ್ನು ಊಹಿಸದೆ, ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ. ಅದನ್ನೇ ಶರಣರು ‘ಹಬ್ಬಕ್ಕೆ ತಂದ ಹರಕೆಯ ಕುರಿ, ತೋರಣಕ್ಕೆ ತಂದ ತಳಿರು ಮೇದಿತ್ತು ಕೊಂದಾರೆಂಬುದನ್ನು ಅರಿಯದೇ ಬೆಂದೊಡಲ ಹೊರೆಯಿತ್ತು ಕೊಂದವರು ಉಳಿದರೆ? ಕೂಡಲಸಂಗಮದೇವಾ’.
ಹರಕೆಯ ಕುರಿಯನ್ನು ಯಾರಾದರೂ ಬಿಡುತ್ತಾರೆಯೆ? ಅದಕ್ಕೆ ಕೊಲ್ಲುತ್ತಾರೆ ಎನ್ನುವ ಕಲ್ಪನೆಯೇ ಇರುವುದಿಲ್ಲ. ಆಹಾರವಾದರೇನು, ತಳಿರಾದರೇನು? ಇಲ್ಲಿ ಮನುಷ್ಯ ನಿರಾತಂಕವಾಗಿ ತನ್ನ ಸಾವಿನ ಪರಿವೆ ಇಲ್ಲದೆ ಸಾಗಿರುವುದು ಬಹಳ ದುಃಖಕರ ಹಾಗೂ ಶೋಚನೀಯ.
ಪೈಗಂಬರರು ಸಾವಿಗಿಂತ ಮೊದಲು ಸಾವಿನ ತಯಾರಿ ಮಾಡಿಕೊ ಎನ್ನುವ ಸಂದೇಶವನ್ನು ಕೊಡುತ್ತಾರೆ. ಸಾವಿನ ಮೊದಲು ಸಾವಿನ ತಯಾರಿ? ಇದು ಕೋವಿಡ್ ಬಂದಾಗ ಎಲ್ಲರೂ ಜೀವಕ್ಕೆ ಹೆದರಿ ಜೀವ ಉಳಿಸಿಕೊಳ್ಳಲು ಎಲ್ಲ ತರಹದ ಮುನ್ನೆಚ್ಚರಿಕೆಗಳನ್ನು ಮಾಡಿಕೊಂಡಿದ್ದೆವು. ಅದೇ ತರಹ ನಮ್ಮ ಹಾಗೂ ಜಗತ್ತಿನ ಅಂತ್ಯದ ಬಗ್ಗೆ ಚರ್ಚಿಸಿದ್ದೆವು. ಅನ್ಯರೊಂದಿಗೆ ಸೋದರತ್ವ ಸಂಬಂಧಗಳನ್ನು ಗಟ್ಟಿ ಮಾಡಿಕೊಂಡಿದ್ದೆವು. ಆದರೆ ಈಗ? ಇಂತಹ ಘಟನೆ ನಮ್ಮ ಜೀವನದಲ್ಲಿ ನಡೆದೇ ಇಲ್ಲ ಎನ್ನುವ ತರಹ ಮತ್ತೆ ನಮ್ಮ ಗತ್ತನ್ನು ಹಿಡಿದಿದ್ದೇವೆ.
ಶಾಂತಿ, ನೆಮ್ಮದಿ, ಸಹಿಷ್ಣುತೆ:
ಇಸ್ಲಾಂ ಒಂದು ಧರ್ಮ ಸಂದೇಶ ಪುಸ್ತಕದಲ್ಲಿ ಆಚಾರ್ಯ ವಿನೋಭಾ ಭಾವೆಯವರು ಹೀಗೆ ಬರೆಯುತ್ತಾರೆ. ಇಸ್ಲಾಂ ಎಂದರೆ ಶಾಂತಿ, ಪೈಗಂಬರ್ ಎಂದರೆ ಶಾಂತಿದೂತ ಅನ್ನುವುದನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
ಮನಸ್ಸಿನ ಹಿಡಿತವಿಲ್ಲದೆ ಮನಸ್ಸಿನ ಬೇಕು ಬೇಡಗಳನ್ನು ಪೂರೈಸಲು ಮಾಡಬಾರದ ಕೆಲಸಗಳನ್ನು ಮಾಡಿ, ಸಮಾಜದ ಎಲ್ಲರ ಶಾಂತಿಯನ್ನು ಕದಡಿ ಇವತ್ತಿನ ಈ ಪರಸ್ಥಿತಿಗೆ ಬಂದಿದ್ದೇವೆ. ಇನ್ನೊಬ್ಬರ ಬಗ್ಗೆ ವ್ಯತಿರಿಕ್ತವಾಗಿ (ನೆಗೆಟಿವ್) ಮಾತನಾಡಿ, ಮೊದಲು ನಮ್ಮ ಶಾಂತಿ ಹಾಗೂ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಪೈಗಂಬರರು ಕೆಲವಂದಿಷ್ಟು ಜನರ ಪ್ರಾರ್ಥನೆ ಸ್ವೀಕೃತಿ ಆಗುವುದಿಲ್ಲ ಎಂದಿದ್ದಾರೆ. ಅವರಲ್ಲಿ ಇನ್ನೊಬ್ಬರ ಕುರಿತು ಚಾಡಿ ಮಾತನಾಡುವವರು ಅಗ್ರರು. ಇವರು ಎಲ್ಲರ ನೆಮ್ಮದಿಯನ್ನು ಹಾಳು ಮಾಡುತ್ತಾರೆ. ಶಾಂತಿಯ ಇನ್ನೊಂದು ಅರ್ಥ ಸಹಿಷ್ಣುತೆ. ಇಸ್ಲಾಂ ಧರ್ಮದಲ್ಲಿ ಪರಧರ್ಮ ಸಹಿಷ್ಣುತೆಗೆ ಬಹಳಷ್ಟು ಮಹತ್ವವಿದೆ. ಅನ್ಯ ಧರ್ಮದವರನ್ನು ಪ್ರೀತಿಯಿಂದ ಹಾಗೂ ಅಂತ:ಕರಣದಿಂದ ಕಾಣಬೇಕು. ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಬೇಕು.
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನಬಣ್ಣಿಸಬೇಡ ಇದಿರು ಹಳಿಯಲೂಬೇಡ,
ಇದೇ ಅಂತರಂಗ ಶುದ್ಧಿ,ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರ ನೊಲಿಸುವ ಪರಿ.
ಹೀಗೆ ಬಸವಣ್ಣನವರ ವಚನಗಳಲ್ಲಿ ನಮಗೆ ಶಾಂತಿ, ನೆಮ್ಮದಿ, ಸಹಿಷ್ಣುತೆ ಕಂಡುಬರುತ್ತದೆ. ಇದೇ ನಿಜವಾದ ಮನಸ್ಸು ಹಾಗೂ ದೇಹಗಳ ಶುದ್ಧಿ ಎಂದು ಅವರು ಸಾರಿ ಸಾರಿ ಹೇಳುತ್ತಾರೆ.
ಶಿಕ್ಷಣ, ಸಂಸ್ಕಾರ:
ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶಿಕ್ಷಣವಿಲ್ಲದೆ ಸಂಸ್ಕಾರವಿಲ್ಲ, ಸಂಸ್ಕಾರ ಇರದ ಶಿಕ್ಷಣ ಶಿಕ್ಷಣವಲ್ಲ. ಶಿಕ್ಷಣ ಕೇವಲ ಪಠ್ಯಕ್ರಮವಾಗದೆ ಧಾರ್ಮಿಕ, ಸಾಮಾಜಿಕ ಹಾಗೂ ನೈತಿಕ ಶಿಕ್ಷಣದೊಂದಿಗೆ ಅನ್ಯ ಧರ್ಮಗಳ ತಿಳುವಳಿಕೆ ಅಷ್ಟೇ ಮಹತ್ವದ್ದು, ಯಾವಾಗ ಈ ತಿಳುವಳಿಕೆಗಳು ಎಲ್ಲರಲ್ಲಿ ಮೂಡುತ್ತವೆಯೋ ಅವಾಗ ಸಾಮರಸ್ಯ ತಾನಾಗಿಯೇ ಬರುತ್ತದೆ.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಮುಖ ಆದ್ಯತೆಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿಸುವಲ್ಲಿ ಪೈಗಂಬರರು ಅಗ್ರರು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ಕೊಟ್ಟು ಅವರನ್ನು ಶಕ್ತಿಯುತ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟಲು ಮನುಕುಲವನ್ನು ಸಧೃಢರನ್ನಾಗಿ ಮಾಡುವಲ್ಲಿ ಪೈಗಂಬರರ ಪಾತ್ರ ಪ್ರಶಂಸನೀಯ.
ಪರಿಶ್ರಮ, ಪ್ರಾಮಾಣಿಕತೆ:
ಕೈಕೆಸರಾದರೆ ಬಾಯಿ ಮೊಸರು, ಕಾಯಕವೇ ಕೈಲಾಸ. ಶ್ರಮ ಇಲ್ಲದ ಜೀವನ ಜೀವನವೇ? ಅದಕ್ಕೆ ಯಾವುದೇ ಅರ್ಥವಿಲ್ಲ. ಅರ್ಥಪೂರ್ಣ ಬದುಕಿಗೆ, ಉಂಡ ಆಹಾರ ಪಚನವಾಗಲು ಹೇಗೆ ಶ್ರಮ (ಕೆಲಸ) ಮುಖ್ಯವೋ ಅದೇ ರೀತಿ ಅರ್ಥಪೂರ್ಣ ಜೀವನಕ್ಕೆ ಪರಿಶ್ರಮವೂ ಮುಖ್ಯ. ನಮ್ಮ ಜೀವನದ ಪ್ರತಿಯೊಂದು ಗಳಿಕೆ (ಸಂಪಾದನೆ) ನಮ್ಮ ಪ್ರಾಮಾಣಿಕ ಕೆಲಸ ಹಾಗೂ ಧರ್ಮಮಾರ್ಗದಲ್ಲಿ ಇರಬೇಕು. ಇನ್ನೊಬ್ಬರ ಮನಸ್ಸು ನೋಯಿಸಿ ಮೋಸದಿಂದ ಸಂಪಾದಿಸಬಾರದು ಅದನ್ನೆ ಹಲಾಲ್ ಸಂಪಾದನೆ ಎನ್ನುವರು. ಪ್ರತಿ ಪ್ರಾರ್ಥನೆಯಲ್ಲಿ ಹಾಗೂ ಕೆಲಸದಲ್ಲಿ ಪೈಗಂಬರರು ತಮ್ಮನ್ನು ತಾವು ಧರ್ಮ ಮಾರ್ಗದ ಸಂಪಾದನೆಗೆ ಸೀಮಿತಗೊಳಿಸುತ್ತಿದ್ದರು.
ನಾವು ಶ್ರಮ ಜೀವಿಗಳು, ಪ್ರಾಮಾಣಿಕರು ಆಗುವುದರೊಂದಿಗೆ ಇನ್ನೊಬ್ಬರ ಪರಿಶ್ರಮಕ್ಕೂ ಬೆಲೆಯನ್ನು ಗೌರವವನ್ನು ಕೊಡುವ ಗುಣಗಳನ್ನು ಅಳವಡಿಸಿಕೊಳ್ಳಬೇಕು (ಬೆಳೆಸಿಕೊಳ್ಳಬೇಕು). ಒಬ್ಬ ಕಾರ್ಮಿಕನಿಂದ ಕೆಲಸ ಮಾಡಿಸಿಕೊಂಡು ಅವನ ಬೆವರಹನಿ ಆರುವ ಮೊದಲೇ ಅವನಿಗೆ ಸಂದುವ ಸಂಭಾವನೆಯನ್ನು ತಲುಪಿಸಬೇಕು ಅನ್ನುವುದು ಪೈಗಂಬರರ ಪ್ರತಿಪಾದನೆ. ಹೀಗೆ ಅವರು ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ಹಾಗೂ ಅವರ ಕೆಲಸಕ್ಕೆ ಗೌರವವನ್ನು ಕೊಡುತ್ತಿದ್ದರು.
ಈ ರೀತಿ ಶ್ರಮವಹಿಸುವ ಬಡ ಕಾರ್ಮಿಕರ ಅನಿವಾರ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಶ್ರೀಮಂತರು, ಜಮೀನ್ದಾರರು ಇಂತಹ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಿಸಿಕೊಂಡು ಶೋಷಣೆ ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು. ಹಜರತ ಬಿಲಾಲ (ರ.ತಾ.) ಎಂಬ ಗುಲಾಮರನ್ನು ಖರೀದಿಸಿ ತಮ್ಮೊಂದಿಗೆ ಪೈಗಂಬರರು ಕರೆದೊಯ್ಯುತ್ತಾರೆ. ಬಿಲಾಲರಿಗೆ ಒಂದು ಗುಲಾಮಗಿರಿಯಿಂದ ಇನ್ನೊಂದು ಗುಲಾಮಗಿರಿ ಅನ್ನೋಹಾಗೆ ಇಂತಹ ಜೀವನ ರೂಢಿಯಾಗಿರುತ್ತದೆ. ಜೀವನ ಹೀಗೆ ಅಂತ ತಿಳಿದು ಅವರು ಪೈಗಂಬರರ ಸೇವೆಯಲ್ಲಿ ನಿರತರಾಗಿರುತ್ತಾರೆ. ಆದರೆ ಪೈಗಂಬರರು ಬಿಲಾಲರಿಗೆ ಇವತ್ತಿನಿಂದ ನೀನು ಯಾರ ಗುಲಾಮನೂ ಅಲ್ಲ, ಮುಕ್ತ ಜೀವನ ನಡೆಸು ಎಂದು ಹೇಳಿ ಗುಲಾಮಗಿರಿಗೆ ಹಾಗೂ ವರ್ಣಾಶ್ರಮಕ್ಕೆ ಮುಕ್ತಿಯನ್ನು ಹೇಳುತ್ತಾರೆ.
ದಾನ, ತ್ಯಾಗ:
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ,
ಕೊಟ್ಟಿದ್ದು ಕೆಟ್ಟಿತೆನಬೇಡ
ಮುಂದೆ ಕಟ್ಟಿಹುದು ಬುತ್ತಿ ಸರ್ವಜ್ಞ ॥
ಮಾಡಿಮಾಡಿ ಕೆಟ್ಟರು ಮನವಿಲ್ಲದೆ,
ನೀಡಿನೀಡಿ ಕೆಟ್ಟರು ನೀಜವಿಲ್ಲದೆ,
ಮಾಡುವ, ನೀಡುವ ನಿಜಗುಣವುಳ್ಳಡೆ,
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
ಪ್ರತಿಯೊಬ್ಬರೂ ತಮ್ಮದೇ ಆದ ಉದ್ಯೋಗ, ನೌಕರಿ ಹಾಗೂ ಆದಾಯ ಹೊಂದಿರುತ್ತಾರೆ. ಬಂದ ಆದಾಯದಲ್ಲಿ ತಮ್ಮ ಹಾಗೂ ತಮಗೆ ಅವಲಂಬಿತರಾದವರ ಬೇಕು-ಬೇಡಗಳನ್ನು ಪೂರೈಸಿ ಉಳಿದ ಹಣದಲ್ಲಿ ಅದು ನಗದು ಹಾಗೂ ಒಬ್ಬ ವ್ಯಕ್ತಿಗೆ 7 1/2 ತ್ವಲೆಗಿಂತಲೂ ಹೆಚ್ಚುವರಿ ಅಥವಾ ಬಳಸದೇ ಇರುವ ಬಂಗಾರ, ಶೇಕಡಾ 2 1/2 ಅಂದರೆ ನೂರು ರೂಪಾಯಿಗೆ 2.5 ಪೈಸೆಯಷ್ಟು ದುಡ್ಡನ್ನು ಬಡವರಿಗೆ ದೀನ ದಲಿತರಿಗೆ ಅಥವಾ ಹಣದ ಅವಶ್ಯಕತೆ ಇರುವವರಿಗೆ ಇಲ್ಲವೆ ಧರ್ಮಮಾರ್ಗದಲ್ಲಿ ದಾನವನ್ನು ಮಾಡಬೇಕು. ಇದಕ್ಕೆ ಝಕಾತ ಅಂತ ಕರೆಯುವರು.
ಪೈಗಂಬರರು ಜಗತ್ತಿಗೆ ಬೆಳಕನ್ನು ತೋರಿಸಿದ ಪ್ರವಾದಿ. ಅವರು ಆಗರ್ಭ ಶ್ರೀಮಂತ ಮಹಿಳೆಯನ್ನು ಮದುವೆಯಾಗಿ ತಮ್ಮ ಹಾಗೂ ಹೆಂಡತಿಯ ಸಿರಿ ಸಂಪತ್ತನ್ನು ಧರ್ಮದ ಮಾರ್ಗದಲ್ಲಿ ಹಂಚಿ ತ್ಯಾಗಮಾಡಿ ಕೃತಾರ್ಥರಾದವರು. ಜಗತ್ತಿಗೆ ಬೆಳಕು ತೋರಿಸಿದ ಪ್ರವಾದಿಯ ಮನೆಯಲ್ಲಿ ಮನೆ ದೀಪ ಬೆಳಗಲು ಎಣ್ಣೆ ಸಹ ಇರಲಿಲ್ಲ ಅಂದರೆ, ಸರ್ವಸ್ವವನ್ನು ಧರ್ಮಮಾರ್ಗದಲ್ಲಿ ತ್ಯಾಗ ಮಾಡಿ (ಖರ್ಚು ಮಾಡಿ) ತಾವು ಮಾಡಿದ ಸತ್ಕಾರ್ಯ ದೇವರನ್ನು ಒಲಿಸಲು ಸಂಪಾದಿಸಿದ ಪುಣ್ಯ, ಧರ್ಮ ಮಾತ್ರ ತಮ್ಮ ಜೊತೆಗೆ ಕರೆದುಕೊಂಡು ಹೋದ ಜಗಜ್ಯೋತಿಯೇ ಮಹಮ್ಮದ ಪೈಗಂಬರರು.