ಸಾರಾಂಶ
ಬೆಂಗಳೂರು : ಖಗ್ರಾಸ ಚಂದ್ರಗ್ರಹಣ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೋಮವಾರ ನಗರದ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ, ದಾನ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು.
ಗ್ರಹಣದ ಸ್ಪರ್ಶದ ದೋಷ ನಿವಾರಿಸಲು ಎಲ್ಲ ದೇವಸ್ಥಾನಗಳಲ್ಲಿ ನಸುಕಿನಿಂದ ಶುದ್ಧಿ ಮಾಡಲಾಯಿತು. ಸಂಪೂರ್ಣ ದೇವಸ್ಥಾನದ ಆವರಣ, ಗರ್ಭಗುಡಿ, ದೇವರನ್ನು ತೊಳೆದು ಶುದ್ಧೀಕರಣ ಮಾಡಲಾಯಿತು. ಬಳಿಕ ವಿಶೇಷ ಪೂಜೆ ಕೈಗೊಂಡು ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ, ನವಗ್ರಹ ಶಾಂತಿ ಹೋಮ, ರುದ್ರಾಭಿಷೇಕ ನಡೆಸಿದರು. ಶತಭಿಷ ನಕ್ಷತ್ರದವರು ರುದ್ರ ಪಾರಾಯಣ ನಡೆಸಿದರು. ಚಂದ್ರನ ವಿಶೇಷವಾಗಿ ಪ್ರಾರ್ಥಿಸಿ ಸಂಕಲ್ಪ ಮಾಡಲಾಯಿತು ಎಂದು ಅರ್ಚಕರು ತಿಳಿಸಿದರು. ಅದರಂತೆ ಬನಶಂಕರಿ ದೇವಸ್ಥಾನದಲ್ಲಿ ದೇವಾಲಯ ಶುದ್ಧಿ ಮಾಡಿ, ಪುಣ್ಯಾಹವಾಚನ ಪ್ರೋಕ್ಷಣೆ ಮೂಲಕ ಗ್ರಹಣ ದೋಷ ನಿವಾರಣೆ ಕೈಂಕರ್ಯ ನಡೆಯಿತು. ಅಮ್ಮನವರಿಗೆ ನಿತ್ಯಕೈಂಕರ್ಯ ಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಮಾಡಲಾಯಿತು.
ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಲ್ಲಿ ಬೆಣ್ಣೆ ಅಲಂಕಾರ ಮಾಡಲಾಗಿತ್ತು, ಗವಿಗಂಗಾಧರೇಶ್ವರ ದೇವಸ್ಥಾನ, ಗಾಳಿ ಆಂಜನೇಯ ದೇವಸ್ಥಾನ, ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನ ಸೇರಿ ಎಲ್ಲ ದೇವಸ್ಥಾನಗಳಲ್ಲಿ ಪೂಜೆಗಳು ನಡೆದವು.