ಸಾರಾಂಶ
ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರದೇಶ, ಯಾವ ಪಾಲಿಕೆ ವ್ಯಾಪ್ತಿಗೆ ಬರಲಿದೆ, ಯಾವ ಅಧಿಕಾರಿ ಹಾಗೂ ಎಂಜಿನಿಯರ್ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವಿವರಗಳ ಕುರಿತು ಘಲಕ ಹಾಗೂ ರಸ್ತೆಗಳ ಫಲಕಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುವುದು
ಬೆಂಗಳೂರು : ಹೊಸದಾಗಿ ರಚನೆಯಾಗಿರುವ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರದೇಶ, ಯಾವ ಪಾಲಿಕೆ ವ್ಯಾಪ್ತಿಗೆ ಬರಲಿದೆ, ಯಾವ ಅಧಿಕಾರಿ ಹಾಗೂ ಎಂಜಿನಿಯರ್ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ವಿವರಗಳ ಕುರಿತು ಘಲಕ ಹಾಗೂ ರಸ್ತೆಗಳ ಫಲಕಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪ್ರದೇಶ ಯಾವ ನಗರ ಪಾಲಿಕೆ ವ್ಯಾಪ್ತಿಗೆ ಬರಲಿದೆ ಎಂಬ ಬಗ್ಗೆ ಪ್ರಚಾರ ಮಾಡುವ ಕಾರ್ಯ ಆರಂಭಿಸಲಾಗಿದೆ. ಹೆಚ್ಚಿನ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ರಸ್ತೆಗಳ ಫಲಕದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುವುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಆ ಪ್ರದೇಶ ಯಾವ ನಗರ ಪಾಲಿಕೆ ವ್ಯಾಪ್ತಿಗೆ ಬರಲಿದೆ. ಸಂಬಂಧಪಟ್ಟ ಎಂಜಿನಿಯರ್, ಅಧಿಕಾರಿಗಳ ಹೆಸರು ಸೇರಿದಂತೆ ಮೊದಲಾದ ಮಾಹಿತಿ ದೊರೆಯುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರತಿ ನಗರ ಪಾಲಿಕೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾರ್ಯವಾಗಿದೆ. ಆ ಕಾರ್ಯವನ್ನು ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸಮಿತಿ ಕೈಗೊಳ್ಳುವ ತೀರ್ಮಾನವನ್ನು ಐದು ಪಾಲಿಕೆಯಲ್ಲಿ ಜಾರಿಗೊಳಿಸುವ ಕಾರ್ಯವನ್ನು ಜಿಬಿಎ ಮುಖ್ಯ ಆಯುಕ್ತರು ಮಾಡಲಿದ್ದಾರೆ ಎಂದು ತಿಳಿಸಿದರು.
ಬಿಬಿಎಂಪಿಯ ಬ್ಯಾಂಕ್ ಖಾತೆ ಸ್ಥಗಿತವಾಗಿದ್ದು, ಈಗಾಗಲೇ ಜಿಬಿಎ ಬ್ಯಾಂಕ್ ಖಾತೆ ಆರಂಭಿಸಲಾಗಿದೆ. ಇದೀಗ ಐದು ನಗರ ಪಾಲಿಕೆಯ ಆಯುಕ್ತರ ನೇಮಕ ಮಾಡಲಾಗಿದೆ. ಅವರು ಆಯಾ ನಗರ ಪಾಲಿಕೆ ಹೆಸರಿನಲ್ಲಿ ಬ್ಯಾಂಕ್ ಖಾತೆ ಆರಂಭಿಸಿದ ಬಳಿಕ ಹಣ ಬಿಡುಗಡೆ, ವರ್ಗಾವಣೆ ಕಾರ್ಯ ನಡೆಸಲಾಗುವುದು. ಒಂದೆರಡು ದಿನ ಸಮಸ್ಯೆ ಆಗಲಿದೆ. ಆ ಬಳಿಕ ಸರಿಯಾಗಲಿದೆ ಎಂದು ಮಾಹಿತಿ ನೀಡಿದರು.
ವಾರ್ಡ್ ಪುನರ್ ವಿಂಗಡಣೆ ಶುರು:
ರಾಜ್ಯ ಸರ್ಕಾರವು ಜಿಬಿಎ ಮುಖ್ಯ ಆಯುಕ್ತರಿಗೆ ಐದು ನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡಣೆ ಜವಾಬ್ದಾರಿ ನೀಡಿದ್ದು, ಗುರುವಾರದಿಂದ ಆ ಕಾರ್ಯ ಆರಂಭಿಸಲಾಗುವುದು. ಬಳಿಕ ಚುನಾವಣೆಗೆ ಬೇಕಾದ ಸಿದ್ಧತೆ ಮಾಡಬೇಕಾಗಲಿದೆ. ಜತೆಗೆ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಸೂಚಿಸಿದರೆ ಆ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಐದು ನಗರ ಪಾಲಿಕೆಗಳಿಗೆ ಆದಾಯ, ಆ ಪಾಲಿಕೆಗೆ ನೀಡಲಾಗುವುದು. ಒಂದು ಪಾಲಿಕೆಯ ಆದಾಯ ಇನ್ನೊಂದು ಪಾಲಿಕೆಗೆ ನೀಡುವುದಕ್ಕೆ ಅವಕಾಶವಿಲ್ಲ. ಕಾಯ್ದೆಯಲ್ಲಿ ಅವಕಾಶವಿದ್ದರೆ, ನಗರ ಪಾಲಿಕೆ ಆಯುಕ್ತರು ಪೂರಕ ಬಜೆಟ್ ಮಂಡನೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಇನ್ನೂ 500 ಕಿ.ಮೀ ವೈಟ್ ಟಾಪಿಂಗ್:
ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಬೆಂಗಳೂರು ಜಲಮಂಡಳಿ, ಇಂಧನ ಇಲಾಖೆಯ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ, ರಸ್ತೆ ಗುಂಡಿ ಸಮಸ್ಯೆ ಆಗುತ್ತಿದೆ. 500 ಕಿ.ಮೀ ವೈಟ್ ಟಾಪಿಂಗ್ ಮಾಡುವ ಮೂಲಕ ಶಾಶ್ವತ ಕಾಮಗಾರಿ ನಡೆಸಲಾಗಿದೆ. ಇನ್ನೂ 500 ಕಿ.ಮೀ ವೈಟ್ ಟಾಪಿಂಗ್ ಮಾಡಲು ನಿರ್ಧರಿಸಲಾಗಿದೆ ಎಂದು ಮಹೇಶ್ವರ್ ರಾವ್ ಹೇಳಿದರು.