ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಇನ್ನೂ ಒಂದು ವಾರ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನ ಒಂಬತ್ತು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನೂ ಒಂದು ವಾರ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ಶನಿವಾರ, ಭಾನುವಾರ ಹಾಗೂ ಸೋಮವಾರ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲೂ ವಾರವಿಡೀ ಮಳೆ ಮುಂದುವರೆಯಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ ಪ್ರಕಾರ, ಚಿಕ್ಕಮಗಳೂರಿನ ಎನ್‌ಆರ್‌ಪುರದಲ್ಲಿ ಅತಿ ಹೆಚ್ಚು 9 ಸೆಂ.ಮೀ ಮಳೆಯಾಗಿದೆ. ರಾಯಚೂರಿನ ಚಿತ್ತಾಪುರ 7, ಕೊಪ್ಪ, ಚಿತ್ರದುರ್ಗ, ಶೃಂಗೇರಿಯಲ್ಲಿ ತಲಾ 6, ಭದ್ರಾವತಿ 5, ಹುಮನಾಬಾದ್, ಬಂಡೀಪುರ, ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣ, ತೊಂಡೇಬಾವಿಯಲ್ಲಿ ತಲಾ 4, ಜಯಪುರ, ತಿಪಟೂರು, ಭಾಗಮಂಡಲ, ಹಿಡಕಲ್ ಅಣೆಕಟ್ಟು, ಅಡಕಿ, ಗುಂಡ್ಲುಪೇಟೆಯಲ್ಲಿ ತಲಾ 3, ಹಾವೇರಿ, ಶಿಗ್ಗಾಂವಿ, ಮಹಾಲಿಂಗಪುರ, ಸೇಡಂ, ಇಂಡಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಗಳೂರು ಸೇರಿ ವಿವಿಧೆಡೆ ಮಳೆಯಾದ ವರದಿಯಾಗಿದೆ.