ಸಿದ್ಧಲಿಂಗೇಶ್ವರರು ಸಮಾಜದಲ್ಲಿನ ಅಜ್ಞಾನ ತೊಲಗಿಸಿ ಧಾರ್ಮಿಕ ಜಾಗೃತಿ : ಸುತ್ತೂರು ಶ್ರೀ

| Published : Jan 06 2025, 02:03 AM IST / Updated: Jan 06 2025, 04:35 AM IST

ಸಾರಾಂಶ

ಸಿದ್ಧಲಿಂಗೇಶ್ವರರು ಸಮಾಜದಲ್ಲಿನ ಅಜ್ಞಾನ ತೊಲಗಿಸಿ ಜ್ಞಾನದ ದೀಪ ಹಚ್ಚಿದರು. ಬಸವಣ್ಣವರ ನಂತರ ಸಿದ್ದಲಿಂಗೇಶ್ವರರು ವಚನಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದರು ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನುಡಿದರು.

 ಬೆಂಗಳೂರು :  ಸಿದ್ಧಲಿಂಗೇಶ್ವರರು ಸಮಾಜದಲ್ಲಿನ ಅಜ್ಞಾನ ತೊಲಗಿಸಿ ಜ್ಞಾನದ ದೀಪ ಹಚ್ಚಿದರು. ಬಸವಣ್ಣವರ ನಂತರ ಸಿದ್ದಲಿಂಗೇಶ್ವರರು ವಚನಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದರು ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನುಡಿದರು.

ಶ್ರೀ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಸಮಿತಿ, ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿದ್ದ ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಮತ್ತು ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಆರಂಭದಲ್ಲಿ ಬಸವಣ್ಣನವರು ಧಾರ್ಮಿಕ ಜಾಗೃತಿ ಮೂಡಿಸಿದರು. 500 ವರ್ಷಗಳ ಬಳಿಕ ಸಿದ್ಧಲಿಂಗೇಶ್ವರರು ಧಾರ್ಮಿಕ ಜಾಗೃತಿ ಕೈಗೊಂಡರು. ಸಮಾಜದಲ್ಲಿನ ಅಜ್ಞಾನ ತೊಲಗಿಸಿ ಜ್ಞಾನದ ದೀಪ ಹಚ್ಚಿದರು ಎಂದು ಸ್ಮರಿಸಿದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ ಅವರು ಮಾತನಾಡಿ, ಸಿದ್ಧಲಿಂಗೇಶ್ವರರನ್ನು ದ್ವಿತೀಯ ಅಲ್ಲಮ ಎಂದು ಭಕ್ತರು ಕರೆಯುತ್ತಿದ್ದರು. ಅವರ ಹಾದಿಯಲ್ಲಿ ನಾವು ನಡೆಯಬೇಕು. ಭಕ್ತ ಮತ್ತು ಜಂಗಮರ ಸಂಬಂಧ ಏನು ಎಂದು ತಿಳಿಯಬೇಕು ಎಂದರು.

ತುಮಕೂರಿನ ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಈ ಜಗತ್ತಿನಲ್ಲಿ ಎರಡು ಋಣ ಇಟ್ಟುಕೊಂಡು ಜನಿಸುತ್ತೇವೆ. ಒಂದು ತಾಯಿ ಋಣ, ಇನ್ನೊಂದು ಭೂಮಿಯ ಋಣ. ಆದರೆ ಇವೆರಡೂ ಋಣವನ್ನೂ ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಋಣಭಾರ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನಕಪುರದ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರಿಗೆ ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಬದುಕಲು ಹೊರಟವರ ಭಗವದ್ಗೀತೆ’ ಕೃತಿ ಲೋಕಾರ್ಪಣೆಗೊಳಿಸಲಾಯಿತು.

ಗದ್ದುಗೆ ಮಠದ ಮಹಾಂತ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಸಿ.ಸೋಮಶೇಖರ್, ವೀರಶೈವ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಪರಮಶಿವಯ್ಯ, ಮಾಜಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಉಪಮಹಾಪೌರ ಬಿ.ಎಸ್.ಪುಟ್ಟರಾಜು, ಮುಖಂಡರಾದ ಶೈಲಜಾ ವಿ.ಸೋಮಣ್ಣ, ಡಾ.ಅರುಣ್ ಸೋಮಣ್ಣ, ಕನ್ನಡಪರ ಹೋರಾಟಗಾರ ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ವಿಜಯನಗರದ ಮಾರುತಿ ಮಂದಿರದಿಂದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದವರಗೆ ಶ್ರೀ ಸಿದ್ಧಲಿಂಗದೇವರನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಶಿಕ್ಷಣ, ಉದ್ಯೋಗದಲ್ಲಿ ಸೂಕ್ತ ಮೀಸಲಾತಿ ಅಗತ್ಯ: ಎಂಬಿಪಾ

ವೀರಶೈವ ಲಿಂಗಾಯತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸೂಕ್ತ ಮೀಸಲಾತಿ ಸಿಗಬೇಕಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ವಿರಕ್ತ ಮಠಗಳ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಸಿದ್ಧಲಿಂಗೇಶ್ವರ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಈ ಮಠಗಳಿಂದಾಗಿ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರವರ ಹಕ್ಕುಗಳ ಅರಿವು ಮೂಡಿದೆ. ಪ್ರಸಕ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೂಕ್ತ ಮೀಸಲಾತಿ ಸಿಗಬೇಕಾಗಿದೆ ಎಂದು ತಿಳಿಸಿದರು.

12ನೇ ಶತಮಾನದಲ್ಲಿ ಆಡುನುಡಿಯಲ್ಲಿ ಸೃಷ್ಟಿಯಾದ ವಚನ ಸಾಹಿತ್ಯದಲ್ಲಿ ನಕಲಿ ವಚನಗಳೂ ಸೇರಿಕೊಂಡಿವೆ. ಇವುಗಳನ್ನು ಇಟ್ಟುಕೊಂಡು ಕೆಲವರು ವೀರಶೈವ ಲಿಂಗಾಯತ ಸಮುದಾಯದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ನೈಜ ವಚನಗಳ ಶೋಧ ಮತ್ತು ವರ್ಗೀಕರಣ ನಡೆಯುತ್ತಿದೆ ಎಂದು ವಿವರಿಸಿದರು.