ಒಂದೇ ಮತದಿಂದ ತಾನೇ ವಾಜಪೇಯಿ ಅಧಿಕಾರ ಹೋಗಿದ್ದು : ಸರ್ಕಾರ ಬೀಳಿಸಿದ್ದು ಯಾರು?

| N/A | Published : Sep 22 2025, 10:26 AM IST

Reporters Diary
ಒಂದೇ ಮತದಿಂದ ತಾನೇ ವಾಜಪೇಯಿ ಅಧಿಕಾರ ಹೋಗಿದ್ದು : ಸರ್ಕಾರ ಬೀಳಿಸಿದ್ದು ಯಾರು?
Share this Article
  • FB
  • TW
  • Linkdin
  • Email

ಸಾರಾಂಶ

ಸಂಜೆಯಾಗುತ್ತಿದ್ದಂತೆ ಜೋಯಿಡಾದಲ್ಲಿ ಕಾರಿನಲ್ಲಿ ಹೋಗುತ್ತಿರುವವರಿಗೆ ಹುಲಿ ಎದುರುಗಡೆ ಕಾಣಿಸಿದೆ ಎಂಬ ಮೆಸೇಜ್ ಜೊತೆಗೆ ಹುಲಿಯ ಫೋಟೋ. ಅಚ್ಚರಿ ಎಂದರೆ ಮೂರೂ ಮೆಸೇಜಿನಲ್ಲಿ ಇದ್ದ ಹುಲಿ ಮಾತ್ರ ಒಂದೇ ಆಗಿತ್ತು.

ವಾಜಪೇಯಿ ಸರ್ಕಾರ ಬೀಳಿಸಿದ್ದು ಯಾರು?

ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ (ಜಾತಿಗಣತಿ) ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರು ಭಾಷಣ ಮಾಡುತ್ತಾ, ಜಾತಿಗಣತಿ ಮಾಡಲು ಮುಂದಾಗಿರುವ ತಮ್ಮದೇ ಪಕ್ಷದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಹಿಗ್ಗಾಮುಗ್ಗಾ ತೆಗಳಿದರು.

ಬಳಿಕ ಅವರ ಮಾತು ಹೊಂದಾಣಿಕೆ ರಾಜಕಾರಣದತ್ತ ತಿರುಗಿತು. ಸಿದ್ದರಾಮಯ್ಯ ಹಾಗೂ ಬೊಮ್ಮಾಯಿ ಇಬ್ಬರು ಹೊಂದಾಣಿಕೆ ರಾಜಕಾರಣ ಮಾಡ್ತಾರೆ. ಈ ಕಾರಣದಿಂದ 15 ವರ್ಷದಿಂದ ನನ್ನ ಬೆಳವಣಿಗೆಯೇ ಆಗಿಲ್ಲ. ಇಲ್ಲಾಂದ್ರೆ ನಾನು ಮುಖ್ಯಮಂತ್ರಿ ಆಗುತ್ತಿದ್ದೆ. ಅವರ ಹೊಂದಾಣಿಕೆ ರಾಜಕಾರಣದಿಂದ ಪಂಚಮಸಾಲಿಯಾದ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರವಿಡಲಾಗಿದೆ. ಈ ಮಾತು ಆಡಿದ್ದಕ್ಕೆ ಇಬ್ಬರೂ ನನ್ನ ಮೇಲೆ ಕೇಸ್‌ ದಾಖಲಿಸಲಿ ಎಂದೆಲ್ಲ ಆವಾಜ್‌ ಹಾಕಿದರು.

ಈ ಮಾತು ಕೇಳುತ್ತ ಹಿಂದೆ ಕೂತಿದ್ದ ಪ್ರೇಕ್ಷಕನೊಬ್ಬ, ಹೌದು ಸಾರ್‌... ಹೊಂದಾಣಿಕೆ ರಾಜಕಾರಣ ಭಾಳ ಆಗೈತಿ. 1998ರಲ್ಲೂ ವಾಜಪೇಯಿ ಅವರ ಅಧಿಕಾರ ಹೋಗಿದ್ದೂ ಒಂದೇ ಮತದಿಂದ, ಇದೇ ಹೊಂದಾಣಿಕೆ ರಾಜಕಾರಣದಿಂದ ಅಲ್ವಾ ಸರ್‌... ಎಂದು ಜೋರಾಗಿ ಕೂಗಿದಾಗ ಸಭೆಯಲ್ಲಿ ನಗೆಬುಗ್ಗೆ.

ಭಾಷಣ ಮಾಡುತ್ತಿದ್ದ ಕುನ್ನೂರ ಅವರಿಗೆ ಆ ಮಾತು ಕೇಳಲಿಲ್ಲವೋ ಅಥವಾ ಕೇಳಿಯೂ ಕೇಳದಂತಾದರೋ ಏನೋ? ಏನೂ ಕೇಳಿಸಿಲ್ಲ ಎನ್ನುವಂತೆ ತಮ್ಮ ಮಾತು ಮುಗಿಸಿದರು.

----------------------

ಹುಲಿ ಬಂತು ಹುಲಿ

ತಿಂಗಳಿಗೊಮ್ಮೆಯಾದರೂ ಹುಲಿಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡದೇ ಇರದು. ಈಚೆಗಂತು ಒಂದು ಹುಲಿಯ ಹಾವಳಿ ಮಿತಿ ಮೀರಿತ್ತು. ಬೆಳಗ್ಗೆ ದಾಂಡೇಲಿಯಲ್ಲಿ ಬೈಕ್ ಸವಾರರಿಗೆ ಹುಲಿ ಕಾಣಿಸಿದೆ ಎಂಬ ವಾಟ್ಸ್‌ಆ್ಯಪ್‌ ಮೆಸೇಜ್ ಬಂದರೆ, ಮಧ್ಯಾಹ್ನ ಯಲ್ಲಾಪುರದಲ್ಲಿ ಹುಲಿ ಕಂಡಿದೆ ಎಂಬ ಮಾಹಿತಿ ಬಂತು.

ಸಂಜೆಯಾಗುತ್ತಿದ್ದಂತೆ ಜೋಯಿಡಾದಲ್ಲಿ ಕಾರಿನಲ್ಲಿ ಹೋಗುತ್ತಿರುವವರಿಗೆ ಹುಲಿ ಎದುರುಗಡೆ ಕಾಣಿಸಿದೆ ಎಂಬ ಮೆಸೇಜ್ ಜೊತೆಗೆ ಹುಲಿಯ ಫೋಟೋ. ಅಚ್ಚರಿ ಎಂದರೆ ಮೂರೂ ಮೆಸೇಜಿನಲ್ಲಿ ಇದ್ದ ಹುಲಿ ಮಾತ್ರ ಒಂದೇ ಆಗಿತ್ತು. ಪತ್ರಕರ್ತರು ಮಾತ್ರ ಹುಲಿಯ ಫೋಟೋ ಬಂದಾಗಲೆಲ್ಲ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದರೆ ಅವರು ಗೋಣು ಅಲ್ಲಾಡಿಸಿ, ಅಲ್ಲಾಡಿಸಿ ಸುಸ್ತು ಹೊಡೆಯುತ್ತಿದ್ದರು.

ಅಸಲಿಗೆ ಇದು ಮೊಬೈಲ್‌ನ ‘ಫಾರ್ವರ್ಡ್‌ ಹುಲಿ’ಯಾಗಿತ್ತು. ಒಬ್ಬೊಬ್ಬರು ಇದನ್ನು ಫಾರ್ವರ್ಡ್‌ ಮಾಡುವಾಗ ತಮ್ಮ ಊರಿನ ಹೆಸರನ್ನು ಹಾಕಿ ಮುಂದೂಡುತ್ತಿದ್ದರು. ಇನ್ನು ಹುಲಿ ಎಲ್ಲಿ ಕಾಣಿಸಿದೆ ಎಂದು ಸ್ಥಳವನ್ನು ಸ್ಪಷ್ಟವಾಗಿ ನಮೂದಿಸುವಂತಿಲ್ಲ. ಒಮ್ಮೆ ಅದು ಬೇಟೆಗಾರರಿಗೆ ಬಲಿಯಾದರೆ ಪತ್ರಕರ್ತರೇ ಪ್ರಕರಣ ಎದುರಿಸಬೇಕು. ಆದರೆ ಮೊಬೈಲ್ ಹುಲಿಯನ್ನು ಕಾಡಿನಲ್ಲಿ ಹುಡುಕುವುದರೊಳಗೆ ಪತ್ರಕರ್ತರು ಸುಸ್ತೋ ಸುಸ್ತು.

-ಶಿವಾನಂದ ಗೊಂಬಿ

-ವಸಂತಕುಮಾರ್ ಕತಗಾಲ

Read more Articles on