ರೇವಾ ವಿವಿ ಸಂಸ್ಥಾಪಕರ ದಿನ : ಪ್ಯಾರಾ ಅಥ್ಲೀಟ್‌ ಮಾಲತಿ ಹೊಳ್ಳಗೆ ರೇವಾ ಜೀವಮಾನ ಸಾಧನೆ ಪ್ರಶಸ್ತಿ

| Published : Jan 07 2025, 01:32 AM IST / Updated: Jan 07 2025, 04:53 AM IST

ಸಾರಾಂಶ

ಅಂಗವಿಕಲ ಮಕ್ಕಳು ಶಾಪವಲ್ಲ, ಅವರಲ್ಲಿ ವಿಶೇಷ ಪಾಂಡಿತ್ಯ ಇರುತ್ತದೆ. ಅಂಗವಿಕಲತೆ ಹಾಗೂ ವಯಸ್ಸು ಎನ್ನುವುದು ದೇಹಕ್ಕೆ ಮಾತ್ರವೇ ಹೊರತು ಸಾಧನೆ ಮಾಡಬೇಕೆಂಬ ನಮ್ಮ ಕನಸು, ಗುರಿ, ಛಲ, ಮನಸ್ಸು, ಮೆದುಳು ಇವ್ಯಾವುದಕ್ಕೂ ಅಲ್ಲ - ಪದ್ಮಶ್ರೀ ಮಾಲತಿ ಹೊಳ್ಳ 

 ಬೆಂಗಳೂರು : ಅಂಗವಿಕಲ ಮಕ್ಕಳು ಶಾಪವಲ್ಲ, ಅವರಲ್ಲಿ ವಿಶೇಷ ಪಾಂಡಿತ್ಯ ಇರುತ್ತದೆ. ಅಂಗವಿಕಲತೆ ಹಾಗೂ ವಯಸ್ಸು ಎನ್ನುವುದು ದೇಹಕ್ಕೆ ಮಾತ್ರವೇ ಹೊರತು ಸಾಧನೆ ಮಾಡಬೇಕೆಂಬ ನಮ್ಮ ಕನಸು, ಗುರಿ, ಛಲ, ಮನಸ್ಸು, ಮೆದುಳು ಇವ್ಯಾವುದಕ್ಕೂ ಅಲ್ಲ. ಅಂತಹ ಮಕ್ಕಳನ್ನು ಪ್ರೋತ್ಸಾಹಿಸುವುದು ಇಡೀ ಸಮಾಜದ ಜವಾಬ್ದಾರಿ ಎಂದು ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್‌ ಪದ್ಮಶ್ರೀ ಮಾಲತಿ ಹೊಳ್ಳ ತಿಳಿಸಿದರು.

ಯಲಹಂಕದ ಕಟ್ಟಿಗೇನಹಳ್ಳಿಯ ರೇವಾ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನ 2025’ ಕಾರ್ಯಕ್ರಮದಲ್ಲಿ ‘ರೇವಾ ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ತಾವು 14ನೇ ತಿಂಗಳ ಮಗುವಾಗಿದ್ದಾಗ ಪೋಲಿಯೋ ತಗುಲಿತು. ತನ್ನ ತಾಯಿ ನನ್ನನ್ನು ಎರಡು ವರ್ಷಗಳ ಕಾಲ ಪ್ರತಿದಿನವೂ ಆಸ್ಪತ್ರೆಗೆ ಹೊತ್ತೊಯ್ದು ಎಲೆಟ್ರಿಕ್‌ ಶಾಕ್‌ ಕೊಡಿಸಿದ ಪರಿಣಾಮ ದೇಹದ ಅರ್ಧಭಾಗ ಚೈತನ್ಯ ಮೂಡಿತು. ತನ್ನ ಇವತ್ತಿನ ಎಲ್ಲ ಸಾಧನೆಗೆ ತಾಯಿಯ ನಂಬಿಕೆ, ಆತ್ಮವಿಶ್ವಾಸದ ಅಂದಿನ ಪ್ರಯತ್ನವೇ ಕಾರಣ. ಅಂಗವಿಕಲ ಮಕ್ಕಳನ್ನು ಪೋಷಕರಾಗಲಿ, ಸಮಾಜವಾಗಲಿ ನಿರ್ಲಕ್ಷಿಸಬಾರದು ಎಂದರು.

ನಮಗೆ ಎಲ್ಲವನ್ನೂ ನೀಡಿದ ಸಮಾಜಕ್ಕೆ ನಮ್ಮ ಸೇವೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಮಾತೃ ಫೌಂಡೇಷನ್‌ ಮೂಲಕ 53 ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣ, ಸೌಲಭ್ಯಗಳನ್ನು ನೀಡುತ್ತಿದ್ದೇನೆ. ತಾವು ಕಳೆದುಕೊಂಡ ಬಾಲ್ಯ, ತಾಯಿತನವನ್ನು ಅವರಿಂದ ಅನುಭವಿಸುತ್ತಿದ್ದೇನೆ. 53 ಮಕ್ಕಳ ತಾಯಿ ಎಂದು ಹೇಳಿಕೊಳ್ಳಲು ಗರ್ವವಾಗುತ್ತದೆ ಎಂದರು.

ರೇವಾ ಎಕ್ಸಲೆನ್ಸ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇತಿಹಾಸಕಾರ ಡಾ.ವಿಕ್ರಮ್‌ ಸಂಪತ್‌ ಮಾತನಾಡಿ, ಭಾರತ ಭವಿಷ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ವಿಶ್ವಗುರುವಾಗಲು ಶಿಕ್ಷಣ ಸಂಸ್ಥೆಗಳು ಕ್ರಿಯಾತ್ಮಕ, ಸೃಜನಶೀಲ ಯುವನಾಯಕರನ್ನು ತಯಾರಿಸಬೇಕು. ಜ್ಞಾನ ಉತ್ಪಾದನೆಯೇ ಭಾರತ ಮೂಲ ಸಂಸ್ಕೃತಿ. ಯಾರ ಮೇಲೂ ಯುದ್ಧ ಸಾರುವ, ಯಾರನ್ನೂ ಪ್ರಚೋದಿಸುವ ಸಂಸ್ಕೃತಿ ನಮ್ಮದಲ್ಲ. ಹಿಂದೆ ಪ್ರಾಚೀನ ವಿಶ್ವವಿದ್ಯಾಲಯಗಳಾದ ನಳಂದ, ತಕ್ಷಶಿಲಾ, ವಿಕ್ರಮಶಿಲಾ ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ವಿದೇಶಗಳಿಂದ ಜನ ಕಲಿಕೆಗೆ ಬರುತ್ತಿದ್ದರು. ಈಗ ಮತ್ತೆ ಆ ಇತಿಹಾಸ ಮರುಕಲಿಸುವ ಕಾಲ ಬರುತ್ತಿದೆ ಎಂದರು.

ಇದೇ ವೇಳೆ ನಾರಾಯಣ ಹೃದಯಾಲಯದ ಮುಖ್ಯಸ್ಥ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿಪ್ರಸಾದ್‌ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ಅವರಿಗೆ ರೇವಾ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು, ಸಹ ಕುಲಾಧಿಪತಿ ಉಮೇಶ್‌ ಎಸ್‌. ರಾಜು, ಕುಲಪತಿ ಡಾ.ಸಂಜಯ್‌ ಆರ್‌.ಚಿಟ್ನಿಸ್‌, ರಿಯಾಕ್ಟರ್‌ ಡಾ.ಆರ್‌.ಅಲೆಗ್ಸಾಂಡರ್‌ ಜೇಸುದಾಸ್‌ ಉಪಸ್ಥಿತರಿದ್ದರು.

ರೇವಾ ಜಾಗತಿಕ ಅತ್ಯುನ್ನತವಿವಿ ನನ್ನ ಗುರಿ: ಶ್ಯಾಮರಾಜು

ಬರುವ ದಶಕಗಳಲ್ಲಿ ರೇವಾ ವಿಶ್ವವಿದ್ಯಾಲಯವನ್ನು ಜಾಗತಿಕವಾಗಿ ಅತ್ಯುನ್ನತ ವಿಶ್ವವಿದ್ಯಾಲಯವನ್ನಾಗಿ ಬೆಳೆಸುವುದು ತನ್ನ ಗುರಿ ಎಂದು ಕುಲಾಧಿಪತಿ ಡಾ। ಪಿ.ಶ್ಯಾಮ ರಾಜು ಹೇಳಿದರು.

ನಮಗೆ ಎಲ್ಲವನ್ನೂ ನೀಡಿರುವ ಸಮಾಜಕ್ಕೆ ಕೊಡುಗೆ ನೀಡಲು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬೇಕೆಂಬುದು ನನ್ನ ಪತ್ನಿ ರುಕ್ಮಿಣಿ ಅವರ ಕನಸಾಗಿತ್ತು. ಆದರೆ, ಈ ಕನಸು ಕಂಡ ಕೆಲ ತಿಂಗಳಲ್ಲೇ ಅವರು ನಿಧನರಾದರು. ಆದರೂ ಅವರ ಕನಸು ನನಸು ಸಾಕಾರಗೊಳಿಸಲು ಹುಟ್ಟುಹಾಕಿದ್ದೇ ‘ರುಕ್ಮಿಣಿ ಎಜುಕೇಷನ್‌ ವಿಷನರಿ ಅಕಾಡೆಮಿ’ (ರೇವಾ). ಆರಂಭದಲ್ಲಿ ಕೇವಲ 50 ಚದರ ಅಡಿ ವಿಸ್ತೀರ್ಣದ ಕಟ್ಟಡ ಕೇವಲ 240 ವಿದ್ಯಾರ್ಥಿಗಳು, 25 ಅಧ್ಯಾಪಕರಿಂದ ಆರಂಭವಾದ ವಿಶ್ವವಿದ್ಯಾಲಯ ಇಂದು 2 ಮಿಲಿಯನ್‌ ಚದರ ಅಡಿ ವಿಸ್ತೀರ್ಣದಲ್ಲಿ 16000 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರು.